ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಯತ್ತತೆ ಬಯಸುವುದು ದೇಶದ್ರೋಹ ಎಂದಾದರೆ ನನ್ನನ್ನು ದೇಶದ್ರೋಹಿ ಎಂದು ಕರೆಯಿರಿ

Last Updated 30 ಅಕ್ಟೋಬರ್ 2017, 16:16 IST
ಅಕ್ಷರ ಗಾತ್ರ

ಶ್ರೀನಗರ:  ಜಮ್ಮು ಕಾಶ್ಮೀರದ ಸ್ವಾಯತ್ತತೆ ಬಗ್ಗೆ ಕಾಂಗ್ರೆಸ್ ನೇತಾರ ಪಿ.ಚಿದಂಬರಂ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಕೇಂದ್ರ ಸಚಿವರು ಅವರ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ದೇಶದೊಳಗೆ ಇದ್ದುಕೊಂಡು ಸ್ವಾಯತ್ತತೆ ಬಗ್ಗೆ ಮಾತನಾಡಿದರೆ ಅದು ದೇಶದ್ರೋಹ ಎನ್ನುತ್ತಿದ್ದಾರೆ ಕೇಂದ್ರ ಸಚಿವರು. ಭಾರತದ ಸಂವಿಧಾನದಲ್ಲಿ ಸ್ವಾಯತ್ತತೆಯನ್ನು ಬಯಸುವುದೇ ದೇಶದ್ರೋಹ ಎಂದಾದರೆ ನಮ್ಮನ್ನು ದೇಶದ್ರೋಹಿಗಳು ಎಂದು ಕರೆಯಿರಿ ಎಂದಿದ್ದಾರೆ ಜಮ್ಮ ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್‌ನ ಕಾರ್ಯಾಧ್ಯಕ್ಷ ಓಮರ್ ಅಬ್ದುಲ್ಲಾ.

‘ಕಾಶ್ಮೀರ ಕಣಿವೆಯ ಜನತೆ ಹೆಚ್ಚಿನ ಸ್ವಾಯತ್ತತೆ ಬಯಸುತ್ತಿದ್ದಾರೆ. ನಾನು ನಡೆಸಿದ ಸಂವಾದಗಳಲ್ಲೂ ಈ ಪ್ರಸ್ತಾವ ಕೇಳಿ ಬಂದಿದೆ. ಎಲ್ಲರೂ ಪ್ರತ್ಯೇಕತೆ ಪರವಾಗಿ ಇಲ್ಲ. ಆದರೆ, ಹೆಚ್ಚಿನ ಸವಲತ್ತುಗಳನ್ನು ಒದಗಿಸಬೇಕು’ ಎಂದು ಪಿ.ಚಿದಂಬರಂ ಹೇಳಿದ್ದರು. ಚಿದಂಬರಂ ಅವರ ಈ ಹೇಳಿಕೆಗೆ ಕೇಂದ್ರ ಸಚಿವರಿಂದ ಭಾರಿ ಟೀಕೆಗಳು ಕೇಳಿ ಬಂದ ಬೆನ್ನಲ್ಲೇ ಓಮರ್ ಅಬ್ದುಲ್ಲಾ ಈ ರೀತಿ ಗುಡುಗಿದ್ದಾರೆ.

ಶನಿವಾರ ನ್ಯಾಷನಲ್ ಕಾನ್ಫರೆನ್ಸ್‌ನ ಪ್ರತಿನಿಧಿಗಳ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಓಮರ್ ಪಾಕಿಸ್ತಾನದಿಂದಲೋ ರಷ್ಯಾದಿಂದಲೋ ಅಥವಾ ಬ್ರಿಟನ್‍ನಿಂದಲೋ ಸ್ವಾಯತ್ತತೆ ಬೇಕು ಎಂದು ನಾವು ಬಯಸುತ್ತಿಲ್ಲ. ಭಾರತದ ಸಂವಿಧಾನಬದ್ಧವಾದ ಸ್ವಾಯತ್ತತೆಯನ್ನು ನಾವು ಬಯಸುತ್ತಿದ್ದೇವೆ ಎಂದಿದ್ದಾರೆ.

ಜಮ್ಮುಕಾಶ್ಮೀರದ ವಿಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಸ್ವಾಯತ್ತತೆ ಬಯಸಿ ಮಸೂದೆಯೊಂದನ್ನು ಮಂಡಿಸಿದ್ದು, ಕಾಶ್ಮೀರಕ್ಕೆ ಸಂಪೂರ್ಣ ಸ್ವಾಯ­ತ್ತತೆ ನೀಡಬೇಕು ಮತ್ತು ಸಂವಿಧಾನದ 370ನೇ ವಿಧಿಯನ್ನು ಈ ಹಿಂದಿನಂತೆ ಪೂರ್ವ ಸ್ಥಿತಿಗೆ ತರಬೇಕು ಎಂದು ಒತ್ತಾಯಿಸಿದೆ. ಏತನ್ಮಧ್ಯೆ, ರಾಜಕೀಯ ಮಾತುಕತೆಗಳ ಬದಲಿಗೆ ಸೇನೆಯನ್ನು ಬಳಸಿ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಡೆ ಅಪಾಯಕಾರಿ. ಇದು ಜನರಲ್ಲಿ ಬಿಕ್ಕಟ್ಟನ್ನು ಉಂಟುಮಾಡುತ್ತದೆ ಎಂದು ಮಸೂದೆಯಲ್ಲಿ  ಹೇಳಲಾಗಿದೆ.

370ನೇ ವಿಧಿಯಲ್ಲಿ ಏನಿದೆ?

ಈ ವಿಧಿಯ ಪ್ರಕಾರ ರಕ್ಷಣೆ, ವಿದೇಶಾಂಗ ವ್ಯವಹಾರ, ಹಣಕಾಸು ಹಾಗೂ ಸಂವಹನದ ಹೊರತಾಗಿ ಇತರೆಲ್ಲ ಕಾಯ್ದೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ತರಬೇಕಾದರೆ ರಾಜ್ಯದ ಅನುಮತಿ ಅಗತ್ಯ.
ಪೌರತ್ವ, ಆಸ್ತಿಯ ಮೇಲಿನ ಹಕ್ಕು ಹಾಗೂ ಮೂಲಭೂತ ಹಕ್ಕುಗಳು ಸೇರಿದಂತೆ  ಇಲ್ಲಿನ ನಿವಾಸಿಗಳಿಗೆ ಪ್ರತ್ಯೇಕ ಕಾಯ್ದೆಗಳೇ ಅನ್ವಯ­ವಾಗುತ್ತವೆ.  ಹಾಗಾಗಿ ಭಾರತದ ಇತರ ರಾಜ್ಯಗಳ ನಿವಾಸಿಗಳು ಇಲ್ಲಿ ಭೂಮಿ ಅಥವಾ ಇತರ ಆಸ್ತಿ ಖರೀದಿಸುವಂತಿಲ್ಲ.  ಹಾಗೆಯೇ, ಕೇಂದ್ರ ಸರ್ಕಾರವು ಸಂವಿಧಾನದ 360ನೇ ವಿಧಿಯಂತೆ ಇಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸುವಂತಿಲ್ಲ. ಆಂತರಿಕ ಗಲಭೆ­ಗಳಾದಾಗಲೂ ತುರ್ತುಸ್ಥಿತಿ ಘೋಷಿಸು­ವಂತಿಲ್ಲ. ಯುದ್ಧ ಅಥವಾ ವಿದೇಶಿ ಆಕ್ರಮಣದ ಸಂದರ್ಭ­ದಲ್ಲಿ ಮಾತ್ರ ತುರ್ತುಪರಿಸ್ಥಿತಿ ಘೋಷಿಸ­ಬಹುದಾಗಿದೆ.

ಈ ಹಿಂದೆ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ ಆಧಿಕಾರದಲ್ಲಿದ್ದಾಗ ಫರೂಖ್ ಅಬ್ದುಲ್ಲಾ ಅವರು ಸ್ವಾಯತ್ತತೆಯ ಮಸೂದೆ ಮಂಡಿಸಲಾಗಿದ್ದರೂ ಕೇಂದ್ರದಲ್ಲಿದ್ದ ಎನ್‍ಡಿಎ ಸರ್ಕಾರ ಅದನ್ನು ತಿರಸ್ಕರಿಸಿತ್ತು. ನಮಗೆ ನಮ್ಮದೇ ಆದ ವ್ಯಕ್ತಿತ್ವವಿದೆ. ನಮಗೆ ನಮ್ಮದೇ ಆದ ಸಂವಿಧಾನವೂ ಧ್ವಜವೂ ಇದೆ ಎಂದು ಪಕ್ಷದ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಓಮರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT