ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸ ಸಾಹಿತ್ಯ ಒಂದೇ ಜಾತಿಗೆ ಸೀಮಿತವಲ್ಲ: ಸ್ವಾಮಿರಾವ

Last Updated 30 ಅಕ್ಟೋಬರ್ 2017, 6:51 IST
ಅಕ್ಷರ ಗಾತ್ರ

ಕಲಬುರ್ಗಿ: ‘ದಾಸ ಸಾಹಿತ್ಯವು ಒಂದು ಜಾತಿಗೆ ಮಾತ್ರ ಸೀಮಿತವಲ್ಲ. ಅದು ಎಲ್ಲರನ್ನೂ ಒಳಗೊಂಡಿದೆ. ದಾಸ ಸಾಹಿತ್ಯವನ್ನು ಪ್ರಚುರಪಡಿಸುವ ಕೆಲಸವನ್ನು ಮಾಡಬೇಕು’ ಎಂದು ಸಮ್ಮೇಳನದ ಅಧ್ಯಕ್ಷ ಡಾ. ಸ್ವಾಮಿರಾವ ಕುಲಕರ್ಣಿ ಅಭಿಪ್ರಾಯಪಟ್ಟರು.

ಇಲ್ಲಿನ ಸಂಗಮೇಶ್ವರ ಸಭಾಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ದಾಸರು ಭಕ್ತಿ ಮಾರ್ಗವನ್ನು ಒಪ್ಪಿ, ಅಪ್ಪಿಕೊಂಡಿದ್ದರು. ಭಕ್ತಿ ಮಾರ್ಗದ ಸರಳತೆ, ಸಾರ್ವತ್ರಿಕತೆ, ಸಾರ್ವಕಾಲಿಕತೆಯ ಕಾರಣಕ್ಕಾಗಿ ದಾಸ ಸಾಹಿತ್ಯವನ್ನು ಪ್ರಚುರಪಡಿಸಿದರು. ವ್ಯಕ್ತಿತ್ವ ನಿರ್ಮಾಣ, ಸಾಮಾಜಿಕ ವಿಕಾಸ, ಸಮಾಜದ ಬದಲಾವಣೆಯಲ್ಲಿ ದಾಸ ಸಾಹಿತ್ಯದ ಪಾತ್ರ ಪ್ರಮುಖವಾಗಿದೆ. ಚಾರಿತ್ರ್ಯ ಮತ್ತು ನೈತಿಕ ಮೌಲ್ಯಗಳ ಪ್ರತಿಪಾದನೆಯ ಸಾಹಿತ್ಯವು ಇಂದು ಹೆಚ್ಚು ಪ್ರಸ್ತುತವಾಗಿದೆ. ದಾಸರ ಕೀರ್ತನೆ, ಉಗಾಭೋಗಗಳಲ್ಲಿ ಅನ್ಯಾಯ, ಅಂಧಶ್ರದ್ಧೆ, ಶೋಷಣೆ ವಿರುದ್ಧದ ಸಾತ್ವಿಕ ಪ್ರತಿಭಟನೆಯನ್ನು ಕಾಣಬಹುದಾಗಿದೆ’ ಎಂದು ತಿಳಿಸಿದರು.

‘ನರಹರಿ ತೀರ್ಥರಿಂದ ಆರಂಭಗೊಂಡ ದಾಸ ಸಾಹಿತ್ಯದ ಝರಿಯು ಶ್ರೀಪಾದರಾಜರಿಂದ ತೊರೆಯಾಗಿ, ವ್ಯಾಸರಾಜರಿಂದ ದಾಸಕೂಟ ಸಂಘಟನೆಯಾಗಿ ಪುರಂದರದಾಸ, ಕನಕದಾಸರಿಂದ ದಾಸ ಸಾಗರವಾಗಿ ಸಾಗಿ ಬಂದಿತು. ನಂತರ ಜಗನ್ನಾಥದಾಸರು, ವಿಜಯದಾಸರು, ಗೋಪಾಲದಾಸರು, ಪ್ರಾಣೇಶದಾಸರು, ಮೋಹನದಾಸರು, ಗೋವಿಂದದಾಸರು, ಶ್ಯಾಮಸುಂದರದಾಸರು, ಸುರಪುರದ ಆನಂದದಾಸರು, ವರದೇಶವಿಠಲರು, ಹರಪನಹಳ್ಳಿ ಭೀಮವ್ವ, ಗಲಗಲಿ ಅವ್ವ, ಹೆಳವನಕಟ್ಟೆ ಗಿರಿಯಮ್ಮರಿಂದ ಸಮೃದ್ಧಿಗೊಂಡಿತು. ದಾಸ ಸಾಹಿತ್ಯದ ಸಂರಕ್ಷಣೆಯಲ್ಲಿ ಲಿಂಗಸುಗೂರಿನ ಗೋರೆಬಾಳ ಹಣಮಂತರಾಯರ ಕಾರ್ಯ ಸ್ಮರಣೀಯ’ ಎಂದು ಸ್ಮರಿಸಿದರು.

‘ವಿಜಯನಗರ ಸಾಮ್ರಾಜ್ಯ ಪತನಗೊಂಡ ಬಳಿಕ ಅಲ್ಲಿದ್ದ ದಾಸರು ಆನೆಗುಂದಿಯತ್ತ ಬಂದರು. ಆ ಬಳಿಕ ರಾಯಚೂರು ಜಿಲ್ಲೆಯಲ್ಲಿ ನೆಲೆಸಿದರು. ಈ ಕಾರಣಕ್ಕಾಗಿಯೇ ರಾಯಚೂರು ಜಿಲ್ಲೆಯನ್ನು ದಾಸ ಸಾಹಿತ್ಯದ ತೊಟ್ಟಿಲು ಎಂದು ಕರೆಯಲಾಗುತ್ತದೆ. ಕೋಟೆ, ಸಾಮ್ರಾಜ್ಯಕ್ಕೆ ಅಳಿವಿದೆ ಎಂಬುದನ್ನು ಅರಿತ ದಾಸರು ಕೋಟೆ ಕಟ್ಟುವ ಬದಲು ಮನಸ್ಸುಗಳನ್ನು ಕಟ್ಟಲು ಮುಂದಾದರು. ಮಾನವೀಯ ಅಂತಃಕರಣ ಎಂಬುದು ದಾಸರ ಸಾಹಿತ್ಯ ಮಾತ್ರವಲ್ಲ, ಅವರ ಬದುಕಿನಲ್ಲಿಯೂ ಇತ್ತು. ಹೀಗಾಗಿ ದಾಸ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು’ ಎಂದು ಆಶಿಸಿದರು.

‘ದಾಸ ದರ್ಪಣ’ ಸ್ಮರಣ ಸಂಚಿಕೆ, ಡಾ. ಸ್ವಾಮಿರಾವ ಕುಲಕರ್ಣಿ ಸಂಗ್ರಹಿಸಿರುವ ‘ಹರಿದಾಸರ ನುಡಿ ಹಣತೆ’, ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಮತ್ತು ಭೀಮಸೇನ ಬಡಿಗೇರ ಸಂಪಾದಿಸಿರುವ ‘ದಾಸ ಸಾಹಿತ್ಯ ಸಂರಕ್ಷಕ ಶ್ರೀ ಗೋರೆಬಾಳ ಹನುಮಂತರಾಯರ ಮುನ್ನುಡಿ ಮತ್ತು ಪ್ರಸ್ತಾವನೆಗಳು’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ, ಕನ್ನಡ ಸಾಹಿತ್ಯ ಪರಿಷತ್ ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಪ್ಪಾರಾವ ಕುಲಕರ್ಣಿ, ಪಾಲಿಕೆ ಸದಸ್ಯೆ ಆರತಿ ತಿವಾರಿ, ಪರಿಷತ್‌ನ ಪದಾಧಿಕಾರಿಗಳಾದ ವೇದಕುಮಾರ ಪ್ರಜಾಪತಿ, ಮಡಿವಾಳಪ್ಪ ನಾಗರಹಳ್ಳಿ, ದೌಲತರಾವ ಮಾಲಿಪಾಟೀಲ, ರಂಗನಾಥ ಕುಲಕರ್ಣಿ, ಆನಂದ ನಂದೂರಕರ, ಪ್ರಶಾಂತ ಕೊರಳ್ಳಿ, ನರೇಂದ್ರ ಮಂದರವಾಡಕರ್, ಸಂತೋಷ ಕೋಬಾಳ, ನಾಗಾರೆಡ್ಡಿ, ಬಾಬುರಾವ ಕುಲಕರ್ಣಿ, ಶಿವಲಿಂಗಪ್ಪ ಮೋಟಗಿ, ಸೂರ್ಯಕಾಂತ ನಂದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT