ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಕಳ್ಳತನ ಪ್ರಕರಣಗಳಲ್ಲಿ 413% ಹೆಚ್ಚಳ, ಪ್ರತಿ ದಿನ ದಾಖಲಾಗುತ್ತವೆ ಕನಿಷ್ಠ 20–30 ಪ್ರಕರಣ

Last Updated 30 ಅಕ್ಟೋಬರ್ 2017, 16:15 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಕಳ್ಳತನ ಪ್ರಕರಣಗಳ ಪ್ರಮಾಣ ಸರಿಸುಮಾರು 413% ನಷ್ಟು ಹೆಚ್ಚಳವಾಗಿದೆ ಎಂಬುದು ಪೊಲೀಸ್‌ ದಾಖಲೆಗಳಿಂದ ತಿಳಿದುಬಂದಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಪೊಲೀಸರ ಬಳಿ ಇರುವ ದಾಖಲೆಗಳ ಪ್ರಕಾರ 2013 ರಿಂದ 17ರ ಅಕ್ಟೋಬರ್‌ವರೆಗೆ ಇಲ್ಲಿ ಬರೋಬ್ಬರಿ 37,557 ಪ್ರಕರಣಗಳು ಬೆಳಕಿಗೆ ಬಂದಿವೆ. 2008–13ರ ಅವಧಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಹೋಲಿಸಿದರೆ ಇದರ ಪ್ರಮಾಣ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. 2008–13ರಲ್ಲಿ ಒಟ್ಟು 7,309 ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದ್ದು, ಕಳ್ಳರ ಬಂಧನಕ್ಕಾಗಿ ಬಲೆ ಬೀಸಲಾಗಿದೆ.

ದೆಹಲಿಯ ಪೊಲೀಸ್‌ ಮಾಜಿ ಆಯುಕ್ತರಾಗಿದ್ದ ಬಿ.ಎಸ್‌ ಬಾಸ್ಸಿ ಅವರು, ಸಣ್ಣ ವಸ್ತುವಿನ ಕಳ್ಳತನವಾದರೂ ಎಫ್‌ಐಆರ್‌ ದಾಖಲಿಸಬೇಕು. ಕಳ್ಳತನ ನಿಯಂತ್ರಣಕ್ಕಾಗಿ ಎಂಸಿಒಸಿಎ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ತರಹದ ಕಠಿಣ ಕ್ರಮಗಳನ್ನು ಕೈಗೊಳ್ಳಿ ಎಂದು ಎಲ್ಲಾ ಪೊಲೀಸ್‌ ಠಾಣೆಗಳಿಗೂ ಸೂಚನೆ ನೀಡಿದ್ದರು.

ಅಂಕಿ–ಅಂಶಗಳ ಪ್ರಕಾರ ಪ್ರತಿ ನಿತ್ಯ ಕನಿಷ್ಠ 20–30 ಪ್ರಕರಣಗಳು ದಾಖಲಾಗುತ್ತಿವೆ. ಹೆಚ್ಚಿನವು ಮಹಿಳೆಯರನ್ನೇ ಗುರಿಯಾಗಿರಿಸಿ ನಡೆಸುತ್ತಿರುವವು ಎನ್ನಲಾಗಿದೆ. ಚಲಿಸುತ್ತಿರುವ ಆಟೋರಿಕ್ಷಾಗಳನ್ನು ಗುರಿಯಾಗಿರಿಸಿದ ಕಳವು ಪ್ರಕರಣಗಳೂ ಹೆಚ್ಚಾಗಿ ದಾಖಲಾಗುತ್ತಿವೆ ಎಂಬುದು ಆತಂಕದ ಸಂಗತಿ.

2016 ಡಿಸೆಂಬರ್‌ 26ರಂದು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಡಾರ್ಜಿಲಿಂಗ್‌ ಮೂಲದ ಮಹಿಳೆಯನ್ನು ಗುರಿಯಾಗಿರಿಸಿ ಕಳವು ಯತ್ನ ಮಾಡಲಾಗಿತ್ತು. ಈ ವೇಳೆ ಕಳ್ಳರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ 39ರ ಮಹಿಳೆ ಆಟೋದಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆ ಇಲ್ಲಿನ ಲಜ್‌ಪತ್‌ ನಗರದಲ್ಲಿ ನಡೆದಿತ್ತು.

ಅದೇ ಸ್ಥಳದಲ್ಲಿ ಅದೇ ಮಾದರಿಯ ಮತ್ತೊಂದು ಪ್ರಕರಣ 2017ರ ಜುಲೈನಲ್ಲಿ ವರದಿಯಾಗಿತ್ತು.

ಪೊಲೀಸರಿಗೆ ನೀಡಲಾಗಿರುವ ಮೂರನೇ ಒಂದರಷ್ಟು ದೂರುಗಳನ್ನು ಮಾತ್ರವೇ ಭೇದಿಸಲಾಗಿದೆ. ಉಳಿದ ಪ್ರಕರಣಗಳು ವಿಚಾರಣೆಯ ಹಂತದಲ್ಲೇ ಇವೆ. 2016ರಲ್ಲಿ ದಾಖಲಾಗಿದ್ದ ಒಟ್ಟು 9,571 ಪ್ರಕರಣಗಳಲ್ಲಿ ಕೇವಲ 3,364 ಪ್ರಕರಣಗಳು ಮಾತ್ರವೇ ಇತ್ಯರ್ಥವಾಗಿವೆ ಎಂಬುದು ದಾಖಲೆಗಳಿಂದ ತಿಳಿದು ಬಂದಿವೆ.

ದೆಹಲಿ ಪೊಲೀಸ್‌ ವಕ್ತಾರ ಮಧುರ್‌ ವರ್ಮಾ ಅವರು, ಇಂತಹ ಪ್ರಕರಣಗಳಲ್ಲಿ ಕಿರಿಯರು ಅಥವಾ ಮೊದಲ ಬಾರಿಯ ಕಳ್ಳರು ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ. ಇದು ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಇವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ಒತ್ತು ನೀಡಲಾಗುತ್ತದೆ ಎಂದು ಇತ್ತೀಚೆಗೆ ನಡೆದ ಅಪರಾಧ ವಿಮರ್ಶೆ ಸಭೆಯಲ್ಲಿ ಹೇಳಿದ್ದರು.

ಸಾರ್ವಜನಿಕರ ಬೇಜವಾಬ್ದಾರಿ ಆಕ್ರಮಣಕಾರರಿಗೆ ನಿರ್ಭಯದಿಂದ ಪ್ರಕರಣಗಳಲ್ಲಿ ತೊಡಗಲು ಅವಕಾಶ ನೀಡುತ್ತದೆ. ಪೋಲಿಸ್ ಗಸ್ತು ತಿರುಗುವುದರಿಂದ ಮಾತ್ರ ಇವುಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದೂ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT