ಶುಕ್ರವಾರ, ಸೆಪ್ಟೆಂಬರ್ 20, 2019
22 °C

ರಿಂಗ್‌ನಲ್ಲಿ ಶ್ವಾನಗಳ ಬಿಂಕದ ನಡಿಗೆ...

Published:
Updated:
ರಿಂಗ್‌ನಲ್ಲಿ ಶ್ವಾನಗಳ ಬಿಂಕದ ನಡಿಗೆ...

ಮೈಸೂರು: ಅಲ್ಲಿ ಶ್ವಾನಗಳ ದಂಡೇ ಇತ್ತು. ಪ್ರತಿಯೊಂದು ಶ್ವಾನಗಳೂ ಒಂದಕ್ಕಿಂತ ಸೊಗಸಾಗಿ, ಗಂಭೀರವಾಗಿ ಹೆಜ್ಜೆ ಇಡುತ್ತಿದ್ದವು. ಸೆಟೆದು ನಿಲ್ಲುವಂತೆ ತೀರ್ಪುಗಾರರು ಅವುಗಳ ಮೈ ತೀಡಿದಾಗ ಅವುಗಳೂ ಸ್ಪಂದಿಸುತ್ತಿದ್ದವು. ತನ್ನೊಡೆಯನ ಜತೆಗೆ ಹೆಜ್ಜೆ ಹಾಕಿ ತೀರ್ಪುಗಾರರ ಮನಗೆಲ್ಲಲು ಪ್ರಯತ್ನಿಸುತ್ತಿದ್ದವು. ಮೊದಲ ರಿಂಗ್‌ನಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಶ್ವಾನಗಳು ಎರಡನೇ ರಿಂಗ್‌ನಲ್ಲೂ ಗತ್ತು ಪ್ರದರ್ಶಿಸಿದವು...

ಕೆನೈಲ್‌ ಕ್ಲಬ್‌ ಆಫ್‌ ಮೈಸೂರು ನಗರದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಚಾಂಪಿಯನ್‌ ಷಿಪ್ ಶ್ವಾನ ಪ್ರದರ್ಶನದಲ್ಲಿ ಕಂಡ ದೃಶ್ಯಗಳಿವು. ಚಾಂಪಿಯನ್‌ ಷಿಪ್‌ನಲ್ಲಿ 30 ತಳಿಯ 220 ನಾಯಿಗಳು ಭಾಗವಹಿಸಿದ್ದವು. 10 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.

ದೇಸಿ ತಳಿಯ ಮುಧೋಳ ಹೌಂಡ್‌, ರಾಜಪಾಳ್ಯಂ, ಕಾರವಾನ ಹೌಂಡ್‌, ವಿದೇಶಿ ತಳಿಗಳಾದ ವಿಪೆಟ್‌, ಷಿಟ್ಜು, ಪಗ್‌, ಲ್ಯಾಬ್ರಡಾರ್‌, ಗೋಲ್ಡನ್‌ ರಿಟ್ರೀವರ್‌, ಡಾಬರ್‌ಮನ್‌, ಗ್ರೇಟ್‌ ಡೇನ್‌, ಅಕಿಟಾ, ರಾಟ್‌ವೇಲರ್‌, ಸೇಂಟ್‌ ಬರ್ನಾರ್ಡ್‌, ಚೌಚೌ, ಪಮೋರಿಯನ್, ಸೈಬೀರಿಯನ್‌ ಹಸ್ಕಿ, ಸೈಬೀರಿಯನ್‌ ಹಸ್ಕಿ, ಸೆಂಟ್‌ಹೌಂಡ್ಸ್‌ ತಳಿಯ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

3 ಕೆ.ಜಿ. ತೂಕದ ಚೌಚೌ, 130 ಕೆ.ಜಿ.ಯ ಸೇಂಟ್‌ ಬರ್ನಾರ್ಡ್‌ ಶ್ವಾನಗಳು ವಿಶೇಷ ಆಕರ್ಷಣೆಯಾಗಿದ್ದವು. ನವದೆಹಲಿ, ಕೊಲ್ಕತ್ತ, ಪುಣೆ, ಹೈದರಾಬಾದ್‌, ಕೇರಳ, ಚೆನ್ನೈ, ಊಟಿ, ಸೇಲಂನಿಂದಲೂ ಶ್ವಾನಗಳು ಬಂದಿದ್ದವು. ಬೆಂಗಳೂರಿನ ಟಿ.ಜೆ.ಪ್ರೀತಂ, ನವದೆಹಲಿಯ ಶ್ಯಾಮ್‌ ಮೆಹ್ತಾ ತೀರ್ಪುಗಾರರಾಗಿದ್ದರು.

ನಡಿಗೆ, ಅವುಗಳ ಸ್ವಭಾವ, ಹಲ್ಲು, ಸ್ವಚ್ಛತೆ, ಉಗುರುಗಳ ಆಧಾರದಲ್ಲಿ ತೀರ್ಪು ನೀಡಲಾಗುತ್ತದೆ. ದೇಹದಾರ್ಡ್ಯತೆ, ಮಾಂಸಖಂಡಗಳ ಬೆಳವಣಿಗೆ, ಕಡಿಮೆ ಕೊಬ್ಬು, ಆರೋಗ್ಯವೂ ಮಾನದಂಡವಾಗಿರುತ್ತದೆ ಎಂದು ಕಾರ್ಯದರ್ಶಿ ಡಾ.ಸಂಜೀವ್‌ ಮೂರ್ತಿ ತಿಳಿಸಿದರು. ಈ ಬಾರಿ ವಿಶೇಷವಾಗಿ ಬೆಸ್ಟ್‌ ಆಫ್‌ ಬ್ರೀಡ್‌, ಬೆಸ್ಟ್‌ ಪಪ್ಪಿ ಇನ್‌ ಷೋ, ಗ್ರೂಪ್‌ ವಿನ್ನರ್‌, ಬೆಸ್ಟ್‌ ಇನ್‌ ಷೋ ಪ್ರಶಸ್ತಿ ನೀಡಲಾಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪಸಿಂಹ, ಶಾಸಕ ವಾಸು, ಬಿಜೆಪಿ ಮುಖಂಡರಾದ ತೋಂಟದಾರ್ಯ, ತೇಜಸ್ವಿನಿ ರಮೇಶ್‌, ಪಾಲಿಕೆ ಸದಸ್ಯ ಸಂದೇಶ್‌ ಸ್ವಾಮಿ, ಮೈಸೂರು ಕೆನೈಲ್‌ ಕ್ಲಬ್‌ ಅಧ್ಯಕ್ಷ ಬಿ.ಪಿ.ಮಂಜುನಾಥ್‌, ಉಪಾಧ್ಯಕ್ಷರಾದ ಡಾ.ಎಸ್‌.ಸಿ.ಸುರೇಶ್‌, ಲಕ್ಷ್ಮಿಕಾಂತರಾಜೇ ಅರಸ್‌ ಇದ್ದರು.

Post Comments (+)