ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊತ್ತಂಬರಿ, ನುಗ್ಗೆಕಾಯಿ ದುಬಾರಿ

Last Updated 30 ಅಕ್ಟೋಬರ್ 2017, 8:49 IST
ಅಕ್ಷರ ಗಾತ್ರ

ರಾಯಚೂರು: ನಗರದ ತರಕಾರಿ ಮಾರುಕಟ್ಟೆಯಲ್ಲಿ ಎಲ್ಲ ತರಕಾರಿ ಬೆಲೆಗಳನ್ನು ಹಿಂದಕ್ಕೆ ಹಾಕಿರುವ ಕೊತ್ತಂಬರಿ ಹಾಗೂ ನುಗ್ಗೆಕಾಯಿ ಹಿಂದಿನ ದಾಖಲೆ ಮುರಿದು ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ! ಒಂದು ನುಗ್ಗೆಕಾಯಿ ದರ ₹25. ಹಿಡಿಯಷ್ಟು ದಪ್ಪದ ಒಂದು ಕಟ್ಟು ಕೊತ್ತಂಬರಿ ದರ ₹80. ಮಾರುಕಟ್ಟೆಯಲ್ಲಿ ಪ್ರತಿ ದಿನವೂ ಮಧ್ಯಾಹ್ನದ ನಂತರ ಕೊತ್ತಂಬರಿ ಮತ್ತು ನುಗ್ಗೆಕಾಯಿ ಅಭಾವ ಎದ್ದು ಕಾಣುತ್ತದೆ. ಇದರಿಂದ ಬೆಳಿಗ್ಗೆ ಸಿಗುವ ದರವು ಸಂಜೆ ಆಗುತ್ತಿದ್ದಂತೆ ಇನ್ನೂ ಹೆಚ್ಚುತ್ತಾ ಹೋಗುತ್ತದೆ.

ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಖರೀದಿಸುವ ದರಕ್ಕಿಂತಲೂ ಶೇ 25 ರಷ್ಟು ಹೆಚ್ಚಿನ ದರದಲ್ಲಿ ತಳ್ಳುವ ಗಾಡಿಯವರು, ಕಿರಾಣಿ ಅಂಗಡಿಗಳಲ್ಲಿ ಕೊತ್ತಂಬರಿ ಮಾರಾಟ ಮಾಡುತ್ತಾರೆ. ಸಾಮಾನ್ಯವಾಗಿ ಕೊತ್ತಂಬರಿ ಬೇಡಿಕೆಯಲ್ಲಿ ಏರಿಳಿತ ಇರುವುದಿಲ್ಲ. ಆದರೆ ಕೊತ್ತಂಬರಿ ದುಬಾರಿ ಆಗಿರುವುದರಿಂದ ಜನರು ಅವುಗಳ ಉಪಯೋಗವನ್ನು ಕಡಿಮೆ ಮಾಡಿಕೊಳ್ಳುವಂತಾಗಿದೆ.

ಅಡುಗೆ ಸ್ವಾದ ಕಾಯ್ದುಕೊಳ್ಳಲು ಕೊತ್ತಂಬರಿಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಮಾಂಸಾಹಾರ ತಯಾರಿಗೆ ಕೊತ್ತಂಬರಿ ಕಡ್ಡಾಯ ಬಳಕೆ ಆಗುತ್ತದೆ. ಮಾರುಕಟ್ಟೆಯಲ್ಲಿ ₹80 ಕ್ಕೆ ಖರೀದಿಸಿದ ಕೊತ್ತಂಬರಿ ಕಟ್ಟನ್ನು ಬಿಡಿಸಿ, ಅದರಲ್ಲೆ ಹತ್ತಾರು ಭಾಗಗಳನ್ನಾಗಿ ಮಾಡಿ ಚಿಲ್ಲರೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಗರಿಷ್ಠ ಮೂರು ಎಸಳಿನ ಒಂದು ಕೊತ್ತಂಬರಿ ಕಟ್ಟಿನ ದರ ₹10.

ಬೇಕಿದ್ದರೆ ತೆಗೆದುಕೊಳ್ಳಿ; ಬೇಡವಾದರೆ ಇಟ್ಟು ಹೋಗಿ ಎಂಬ ನೇರ ಮಾತುಗಳು ತರಕಾರಿ ಮಾರಾಟಗಾರರು ಗ್ರಾಹಕರಿಗೆ ಹೇಳುತ್ತಾರೆ. ದುಬಾರಿ ಆಗಿದ್ದರೂ ಪರವಾಗಿಲ್ಲ ಕನಿಷ್ಠವಾದರೂ ಕೊತ್ತಂಬರಿ ಬಳಸಲೇಬೇಕು ಎನ್ನುವ ಅನಿವಾರ್ಯತೆ ಜನರದ್ದು. ಹೀಗಾಗಿ ನುಗ್ಗೆಕಾಯಿ ಮತ್ತು ಕೊತ್ತಂಬರಿ ದರಗಳು ಸೆಪ್ಟೆಂಬರ್‌ ಆರಂಭದಿಂದ ಇಲ್ಲಿಯವರೆಗೂ ದುಬಾರಿ ಆಗಿದ್ದರೂ ಬೇಡಿಕೆ ಮಾತ್ರ ಕಡಿಮೆ ಆಗುತ್ತಿಲ್ಲ.

ಕೊತ್ತಂಬರಿ ಸೊಪ್ಪು ಹಾಗೂ ನುಗ್ಗೆಕಾಯಿ ಮಾತ್ರ ದುಬಾರಿ ಆಗುವುದಕ್ಕೆ ಪ್ರಮುಖ ಕಾರಣ; ಈ ವರ್ಷ ಸುರಿದ ಅತಿಮಳೆ. ರಾಯಚೂರು ತಾಲ್ಲೂಕಿನ ಕಡಗಂದೊಡ್ಡಿ, ಚಂದ್ರಬಂಡಾ, ಆಶಾಪುರ, ರಾಂಪುರ, ದಿನ್ನಿ ಸೇರಿದಂತೆ ತಗ್ಗು ಪ್ರದೇಶದ ಭೂಮಿ ಇರುವ ಕಡೆಯಿಂದ ತರಕಾರಿಯು ಈಗ ಮಾರುಕಟ್ಟೆಗೆ ಬರುತ್ತಿಲ್ಲ. ಜಮೀನುಗಳಲ್ಲಿ ನೀರು ನಿಂತುಕೊಂಡಿದೆ.

ಕೊತ್ತಂಬರಿಯು ಮಣ್ಣಿನ ಮೇಲ್ಭಾಗದಲ್ಲಿ ಬೆಳೆಯುವುದರಿಂದ ಮಳೆ ರಭಸಕ್ಕೆ ಕೊಚ್ಚಿ ಹೋಗಿದೆ. ನುಗ್ಗೆಕಾಯಿ ಗಿಡಗಳ ಟೊಂಗೆಗಳು ಮುರಿದು ಬಿದ್ದಿವೆ. ಹೀಗಾಗಿ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಗಡಿ ಜಿಲ್ಲೆಗಳಿಂದ ರಾಯಚೂರಿಗೆ ತರಕಾರಿ ಪೂರೈಕೆ ಆಗುತ್ತಿದೆ. ಪ್ರಮುಖವಾಗಿ ಪೆನುಕೊಂಡ, ಕರ್ನೂಲ್‌ ಹಾಗೂ ಎಮ್ಮಿಗನೂರು ಭಾಗದಿಂದ ತರಕಾರಿ ಬರುತ್ತಿದೆ. ಸಾಗಣೆ ವೆಚ್ಚ ಹಾಗೂ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದ ಕಾರಣ ಇವೆರಡೂ ದುಬಾರಿ ದರದಲ್ಲಿ ಮಾರಾಟ ಆಗುತ್ತಿವೆ.

‘ರಾಯಚೂರಿನಲ್ಲೆ ಕೃಷಿ ವಿಶ್ವವಿದ್ಯಾಲಯ ಇದ್ದರೂ ನಮ್ಮ ಜಿಲ್ಲೆಯ ರೈತರು ಅಲ್ಲಿಗೆ ಹೋಗಿ ಸಲಹೆ ಪಡೆಯುವುದಿಲ್ಲ. ಯಾವ ಸಮಯದಲ್ಲಿ ಎಂತಹ ತರಕಾರಿ ಬೆಳೆಯಬೇಕು ಎನ್ನುವ ಮಾಹಿತಿ ಕೇಳುವುದಿಲ್ಲ. ನೆರೆ ರಾಜ್ಯಗಳ ರೈತರು ಈಗ ಲಾಭ ಮಾಡಿಕೊಳ್ಳುತ್ತಿದ್ದಾರೆ. ಒಂದೇ ಎಕರೆ ಭೂಮಿಯಲ್ಲಿ ಹತ್ತಾರು ತರಕಾರಿ ಬೆಳೆದಿರುವ ರೈತರು ನಷ್ಟ ಮಾಡಿಕೊಂಡಿಲ್ಲ. ಕ್ರಮೇಣ ನುಗ್ಗೆಕಾಯಿ ಮತ್ತು ಕೊತ್ತಂಬರಿ ದರಗಳು ಮತ್ತೆ ಅಗ್ಗ ಆಗುತ್ತವೆ’ ಎಂದು ತರಕಾರಿ ವ್ಯಾಪಾರಿ ಎನ್‌.ಮಹಾವೀರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನುಗ್ಗೆಕಾಯಿ ಎಷ್ಟೆ ದುಬಾರಿ ಆದರೂ ಸಾಂಬಾರು ಮಾಡಿಕೊಳ್ಳಲು ನಾವೂ ಉಪಯೋಗಿಸುತ್ತೇವೆ. ಅದರಲ್ಲಿ ಕೆಲವು ಔಷಧಿ ಗುಣಗಳು ಇರುವುದರಿಂದ ವಯಸ್ಸಾದ ಜನರಿಗೆ ಅದು ಬೇಕಾಗುತ್ತದೆ. ಕೊತ್ತಂಬರಿ ದರ ಹೆಚ್ಚಾಗಿರುವುದರಿಂದ ಹೋಟೆಲ್‌ಗಳಲ್ಲಿ ಕೊಡುವ ಯಾವ ಪದಾರ್ಥದಲ್ಲಿಯೂ ಅದನ್ನು ಹಾಕುತ್ತಿಲ್ಲ. ಸ್ವಲ್ಪ ಗಮನಿಸಿದರೆ ಗೊತ್ತಾಗುತ್ತದೆ’ ಎಂದು ಜವಾಹರ ನಗರ ನಿವಾಸಿ ಮಹೇಶಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT