ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನ ಹಕ್ಕಿಗಳಿಗೆ ಕುಂಚ ಸ್ಪರ್ಶ

Last Updated 30 ಅಕ್ಟೋಬರ್ 2017, 9:02 IST
ಅಕ್ಷರ ಗಾತ್ರ

ರಾಮನಗರ: ‘ದೇಶವಿದೇಶಗಳ ಪಕ್ಷಿಗಳನ್ನೆಲ್ಲಾ ಒಂದೇ ಕೋಣೆಯಲ್ಲಿ ನೋಡಲು ಸಾಧ್ಯವೇ? ಹೌದು; ಬಂದು ನಮ್ಮ ಮನೆಯಲ್ಲಿ ನೋಡಿ’ ಎನ್ನುತ್ತಾರೆ ನಗರದ ಐಜೂರು ನಿವಾಸಿ ನಾರಾಯಣ ಭಂಡಾರಿ.

ಕಾಡಿನಲ್ಲಿರುವ ವಿವಿಧ ಪ್ರಭೇದಗಳ ಹಕ್ಕಿಗಳ ದಂಡೇ ಇಲ್ಲಿದೆ. ಹಕ್ಕಿಗಳು ಏಕೆ ಇಲ್ಲಿವೆ ಎಂದು ನಿಬ್ಬೆರಗಾಗಿ ನೋಡುತ್ತಿದ್ದರೂ, ಅವು ಹಾರಿ ಹೋಗುವುದಿಲ್ಲ. ಬಿಳಿಗೋಡೆಗೆ ಅಂಟಿಕೊಂಡು ಪಿಳಿಪಿಳಿ ಕಣ್ಣು ಬಿಡುತ್ತವೆ. ಆ ನೋಟದಲ್ಲಿ ಪರಿಸರದ ಗೀತೆಯೊಂದು ಮೌನವಾಗಿ ಹರಿಯುತ್ತಿರುತ್ತದೆ. ಪಕ್ಷಿಗಳ ಪುಕ್ಕದ ಬಣ್ಣಗಳಲ್ಲಿ ನಿಸರ್ಗದ ನಿಯಮಗಳು ಹೊಳೆಯುತ್ತವೆ.

ಭಂಡಾರಿಯವರ ಕುಂಚದ ಕೂದಲುಗಳಿಗೆ ಅದ್ಭುತ ಸಂವೇದನೆಗಳ ಸ್ಪರ್ಶವಿರುವುದರಿಂದಲೇ ಇದು ಸಾಧ್ಯವಾಗಿದೆ. ಹಾಳೆಗೆ ಅಂಟಿಕೊಂಡ ಈ ಪಕ್ಷಿಗಳು ಹಾರುವುದಿಲ್ಲ ಎಂಬುದನ್ನು ಬಿಟ್ಟರೆ, ಇವೆಲ್ಲ ಜೀವಂತ ಸೃಷ್ಟಿಗಳೇ. ಇವು ಪಕ್ಷಿ ಸಂಕುಲದ ವಿನಾಶದ ಕತೆಯನ್ನು ಹಾಡಾಗಿಸಿ ಉಲಿಯುತ್ತವೆ.

ಮನುಷ್ಯನ ದುರಾಸೆಯಿಂದ ಪರಿಸರದಲ್ಲಿ ಮಾಂಸದ ಮುದ್ದೆಯಾಗಿ ಬೀಳುತ್ತಿರುವ ಪಕ್ಷಿಗಳಿಗೆ ರಕ್ಷಣೆ ಒದಗಿಸಬೇಕು ಎಂದು ಮಾತನಾಡುವವರು ಬಹುತೇಕ ಮಂದಿ ಇದ್ದಾರೆ. ಆದರೆ ಕಾಳಜಿಯನ್ನು ತೋರಿ ರಚನಾತ್ಮಕ ಕೆಲಸದಲ್ಲಿ ತೊಡಗಿಸಿಕೊಳ್ಳುವವರು ಕೆಲವು ಮಂದಿ ಮಾತ್ರ.

ವಿನಾಶದ ಅಂಚಿನಲ್ಲಿರುವ ಹಕ್ಕಿಗಳನ್ನು ಕುಂಚದಲ್ಲಿ, ಪುನರ್ ಸೃಷ್ಟಿಸುವ ಕೆಲಸವನ್ನು ಭಂಡಾರಿ ಅವರು ಶ್ರದ್ಧೆಯಿಂದಲೇ ಬೆಳೆಸಿಕೊಂಡಿದ್ದಾರೆ. ಕೇವಲ ಚಿತ್ರ ರಚಿಸುವುದಷ್ಟೇ  ಇವರ ಗುರಿಯಲ್ಲ. ಆ ಪಕ್ಷಿಯ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ದಾಖಲಿಸಿದ್ದಾರೆ. ಹಕ್ಕಿಯ ಜೀವನ ಕ್ರಮ, ಚಲನವಲನ, ಆಹಾರ ವಿಧಾನ ಮುಂತಾದ ಮಾಹಿತಿಯನ್ನೆಲ್ಲ ಅತ್ಯಂತ ವೈಜ್ಞಾನಿಕವಾಗಿ ಕಲೆ ಹಾಕಿ, ಪ್ರದರ್ಶನದ ವೇಳೆ ತಿಳಿಸುತ್ತಾರೆ.

ಈಗಾಗಲೇ ಕಾಲಗರ್ಭದಲ್ಲಿ ನಾಶವಾಗಿರುವ ಹಕ್ಕಿಗಳು, ದೇಶವಿದೇಶಗಳ ಚಿತ್ರವಿಚಿತ್ರ ಪಕ್ಷಿಗಳು, ಅತಿದೊಡ್ಡ, ಅತಿಚಿಕ್ಕ ಹಕ್ಕಿ ಪ್ರಭೇದಗಳು, ಸಸ್ಯಾಹಾರಿ, ಮಾಂಸಾಹಾರಿ, ಮೋಹಕವಾಗಿ ಹಾರುವ, ಗತ್ತಿನಿಂದ ನಡೆದಾಡುವ ಪಕ್ಷಿಗಳನ್ನು ಕುಂಚದ ಮೂಲಕ ಚಿತ್ರಿಸಿದ್ದಾರೆ. ಹಲವು ಹಕ್ಕಿಗಳ ಕೊಕ್ಕು, ಕಾಲು, ಗರಿ ಇತ್ಯಾದಿ ಅಂಗಗಳನ್ನು ಪ್ರತ್ಯೇಕವಾಗಿ ಚಿತ್ರಿಸಿ ಅವುಗಳ ವೈಶಿಷ್ಟ್ಯವನ್ನು ದಾಖಲಿಸುವ ಅಪರೂಪದ ಪ್ರಯತ್ನ ಮಾಡಿದ್ದಾರೆ.

ನಾರಾಯಣ ಭಂಡಾರಿ ಅವರು ಪಕ್ಷಿಗಳ ವರ್ಣ ಚಿತ್ರಗಳಿಗೆ ಕೈ ಹಚ್ಚುವುದಕ್ಕೆ ಮೊದಲು ಜಲವರ್ಣ ಚಿತ್ರ ರಚನೆಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಮೂಲತಃ ಮಂಗಳೂರಿನ ಕಟೀಲು ಗ್ರಾಮದವರಾದ ಇವರು ಇಲ್ಲಿನ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಇವರಿಗೆ ಮೈಕ್ರೋ ಆರ್ಟ್‌ನಲ್ಲೂ ಪರಿಣತಿ ಇದೆ. ಅಕ್ಕಿಕಾಳು, ಬೇಳೆ, ಸಾಸಿವೆ, ಗಸಗಸೆಗಳಲ್ಲಿ ಸೂಕ್ಷ್ಮ ಚಿತ್ರಗಳನ್ನು ರಚಿಸಿದ್ದಾರೆ. ಸೂಕ್ಷ್ಮ ಕಲೆ ಹಾಗೂ ನವ್ಯ ಕಲೆಗಳಲ್ಲಿ ಪರಿಣತಿ ಹೊಂದಿರುವ ಇವರು ಪ್ರಪಂಚದ ಅಪರೂಪದ ಪಕ್ಷಿ ಸಂಕುಲಕ್ಕೆ ಸೇರಿರುವ 800 ಪಕ್ಷಿಗಳ ಚಿತ್ರವನ್ನು ಜಲವರ್ಣದಲ್ಲಿ ಚಿತ್ರಿಸಿದ್ದಾರೆ.

‘ರಾಜ್ಯದ ಹಲೆವೆಡೆ ಪಕ್ಷಿಗಳ ಪ್ರದರ್ಶವನ್ನು ಏರ್ಪಡಿಸಿದ್ದೇನೆ. ಎಲ್ಲಾ ಕಡೆಯೂ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿಯೂ ಪ್ರದರ್ಶನಕ್ಕೆ ಯಾರಾದರೂ ಆಗಲಿ ಕರೆದರೆ ಹೋಗಿ ಪ್ರದರ್ಶನ ಏರ್ಪಡಿಸುತ್ತೇನೆ’ ಎನ್ನುತ್ತಾರೆ 69 ವರ್ಷ ವಯಸ್ಸಿನ ನಾರಾಯಣ ಭಂಡಾರಿ.

ಪಕ್ಷಿ ನೋಟ ಅವಶ್ಯ: ‘ಅವರು ಚಿತ್ರಿಸಿರುವ ಪಕ್ಷಿಗಳ ಪ್ರದರ್ಶನವನ್ನು ಪ್ರತಿ ಶಾಲಾಕಾಲೇಜುಗಳಲ್ಲಿ ಹಮ್ಮಿಕೊಳ್ಳಬೇಕು. ಪಕ್ಷಿಯ ಚಿತ್ರದ ಜತೆಗೆ ಮಾಹಿತಿಯು ಸಿಗುವುದರಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮವನ್ನು ಬೆಳೆಸಬಹುದು. ಇಂತಹ ಪ್ರದರ್ಶನ ಕೆಲಸಗಳಿಗೆ ಸಂಘಸಂಸ್ಥೆಗಳು ಅವಕಾಶ ಮಾಡಿಕೊಡಬೇಕು’ ಎನ್ನುತ್ತಾರೆ ಪರಿಸರವಾದಿ ತ್ಯಾಗರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT