ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೋತ್ಸಾಹವಿಲ್ಲದೆ ಸೊರಗುತ್ತಿರುವ ಕುಲಕಸುಬು

Last Updated 30 ಅಕ್ಟೋಬರ್ 2017, 9:22 IST
ಅಕ್ಷರ ಗಾತ್ರ

ಆಧುನೀಕತೆಯ ಭರಾಟೆಯ ನಡುವೆ ಗ್ರಾಮೀಣ ಕುಲಕಸುಬುಗಳು ನೇಪ ಥ್ಯಕ್ಕೆ ಸರಿಯುತ್ತಿವೆ. ಆದಾಯ ಕಡಿಮೆ ಇರುವ, ದೀರ್ಘ ಕಾಲ ಸೂಕ್ಷ್ಮತೆ ಬೇಡುವ ಗ್ರಾಮೀಣ ಕುಲಕಸುಬು ಗಳತ್ತ ಈಗಿನ ಯುವಜನತೆ ಆಕರ್ಷಿತ ರಾಗುವುದೂ ಕಡಿಮೆ. ಆದರೆ, ಗೋಳಿ ಯಂಗಡಿ ಕೊರಗ ಕಾಲೋನಿಯ ಸುಧೀರ ಎಂಬುವರು ಕೂಲಿ ಕೆಲಸ ದೊಂದಿಗೆ ಬುಟ್ಟಿ ನೇಯುವ ಕಾಯಕ ನಿರ್ವಹಿಸುತ್ತಿರುವುದು ವಿಶೇಷ.

ರಬ್ಬರ್ ಅಥವಾ ಪ್ಲಾಸ್ಟಿಕ್‌ನಿಂದ ತಯಾರಾದ ಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಾಗ ಬೆತ್ತ ಅಥವಾ ಕುಸುಬ ಬೀಳಿನಿಂದ ತಯಾರಿಸಿದ ಬುಟ್ಟಿಗಳ ಮಾರಾಟದ ಮೇಲೆ ದೊಡ್ಡ ಹೊಡೆತ ಬಿದ್ದಿತು. ವಿವಿಧ ಬಣ್ಣಗಳು ಹಾಗೂ ಗಾತ್ರಗಳಲ್ಲಿ ದೊರಕುವ ಪ್ಲಾಸ್ಟಿಕ್‌ ಬುಟ್ಟಿಗಳ ಮುಂದೆ ಬೀಳಲಿನ ಬುಟ್ಟಿ ಗಳು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾದವು.

ರಬ್ಬರ್, ಪ್ಲಾಸ್ಟಿಕ್ ಬುಟ್ಟಿಗಳಿಗೆ ಬೇಡಿಕೆ ಹೆಚ್ಚಿದಾಗ ಬುಟ್ಟಿ ನೇಯುವುದನ್ನೇ ಕುಲಕಸುಬಾಗಿ ಮಾಡಿಕೊಂಡವರು ಜೀವನ ನಿರ್ವಹಣೆಗಾಗಿ ಅನಿವಾರ್ಯವಾಗಿ ಆ ಕೆಲಸ
ದಿಂದ ವಿಮುಖರಾಗಿ ಕೂಲಿ ಕೆಲಸಕ್ಕೆ ಆತುಕೊಂಡರು ಪ್ಲಾಸ್ಟಿಕ್ ಉತ್ಪಾದನೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತಿರುವ ಪರಿಣಾಮ ಇಂದು ಬೆತ್ತ, ಬೀಳಿನ ಬುಟ್ಟಿಗಳು ದೊರಕುವುದೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಕೊರಗ ಸಮುದಾಯದ ಯುವಕ ಸುಧೀರ ಆವರ್ಸೆ ಗ್ರಾಮ ಪಂಚಾಯಿತಿಯ ಗೋಳಿಯಂಗಡಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದಾರೆ. ಕಾಡಿನಲ್ಲಿ ದೊರಕುವ ಕುಸುಬ ಬೀಳು ಕಿತ್ತು ತಂದು ಅದನ್ನು ತುಂಬಾ ನಾಜೂಕಿನಿಂದ ಸಣ್ಣಗೆ ಸೀಳಿ ಬುಟ್ಟಿ ನೇಯುತ್ತಾರೆ. ‘ಓದಿದ್ದು ಮೂರನೇ ತರಗತಿ ವರೆಗೆ ಮಾತ್ರ.

ಗಾರೆ, ಕೂಲಿ ಕೆಲಸ ದೊಂದಿಗೆ ತಂದೆಯಿಂದ ಬಳುವಳಿಯಾಗಿ ಬಂದಿರುವ ಬುಟ್ಟಿ ನೇಯುವುದನ್ನೆ ಉಪಕಸುಬಾಗಿ ರೂಢಿಸಿಕೊಂಡಿದ್ದೇನೆ. ನಾನು ಬುಟ್ಟಿ ಹೆಣೆಯಲು ಕಲಿತಿದ್ದು 15ನೇ ವಯಸ್ಸಿನಲ್ಲಿ. ದಿನವೊಂದಕ್ಕೆ ಎರಡು ಬುಟ್ಟಿ ತಯಾರಿಸುತ್ತೇನೆ’ ಎನ್ನುತ್ತಾರೆ ಸುಧೀರ್. ‘ಹಣ್ಣುಗಳು ಹಾಗೂ ಒಣಮೀನು ಸಾಗಿಸಲು ಬೀಳಿನ ಬುಟ್ಟಿಗಳು ಹೆಚ್ಚು ಬಳಕೆಯಾಗುತ್ತವೆ. ಗ್ರಾಮೀಣ ಕುಲಕಸುಬುಗಳಿಗೆ ಸರ್ಕಾರದಿಂದ ಪ್ರೋತ್ಸಾಹವಿಲ್ಲ. ಈ ಕಾರಣಕ್ಕಾಗಿ ಅವುಗಳು ಸೊರಗುತ್ತಿವೆ.

‘ನಾವು ಒಂದು ಬುಟ್ಟಿ ತಯಾರಿಸಲು ಹಾಕುವ ಶ್ರಮಕ್ಕೆ ತಕ್ಕ ಬೆಲೆ ಸಿಗುವುದಿಲ್ಲ. ದಿನವೆಲ್ಲ ಕಷ್ಟಪಟ್ಟರೂ ಎರಡರಿಂದ ಮೂರು ಬುಟ್ಟಿ ತಯಾರಿಸಬಹುದು ಅಷ್ಟೇ. ಕುಲಕಸುಬು ಎಂದು ಒಂದನ್ನೇ ನೆಚ್ಚಿಕೊಂಡರೆ ಜೀವನ ನಿರ್ವಹಣೆ ಕಷ್ಟ. ಅದಕ್ಕಾಗಿ ಗಾರೆ ಕೆಲಸ, ಕೂಲಿ ಕೆಲಸ ಮಾಡುತ್ತೇನೆ’ ಎನ್ನುವ ಸುಧೀರ್‌ ಅವರು ತಯಾರಿಸಿದ ಬುಟ್ಟಿಯನ್ನು ಮನೆಯ ಸಮೀಪದಲ್ಲೇ ಇರುವ ಮಧ್ಯವರ್ತಿಗೆ ₹80ಕ್ಕೆ ಮಾರುತ್ತಾರಂತೆ.

ಪ್ಲಾಸ್ಟಿಕ್ ಬುಟ್ಟಿಗಳಿಗಿಂತ ಹೆಚ್ಚು ಉತ್ತಮವಾಗಿರುವ ಬೀಳು ಅಥವಾ ಬೆತ್ತದ ಬುಟ್ಟಿ ತಯಾರಿಸುವುದು ಸುಲಭದ ಮಾತಲ್ಲ. ಕಾಡಿಗೆ ಹೋಗಿ ಕುಸುಬ ಬೀಳು ಹುಡುಕಿ ಕಿತ್ತು ತರಬೇಕು. ಬಹುತೇಕ ಸಂದರ್ಭದಲ್ಲಿ ಅವು ಎತ್ತರಕ್ಕೆ ಬೆಳೆಯುವುದರಿಂದ ಮರ ಹತ್ತಿ ಕೊಯ್ಯಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ಕಲಿತ ವಿದ್ಯೆ ಮರೆಯಬಾರದು ಎನ್ನುವ ಕಾರಣಕ್ಕೆ ಸುಧೀರರಂತೆ ಅನೇಕರು ಬುಟ್ಟಿ ನೇಯುವುದನ್ನು ಉಪಕಸುಬಾಗಿ ರೂಢಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT