ಸೋಮವಾರ, ಸೆಪ್ಟೆಂಬರ್ 16, 2019
22 °C

ಬಡಾವಣೆ ನಿರ್ಮಾಣಕ್ಕೆ ಆರ್ಥಿಕ ಸಮಸ್ಯೆ

Published:
Updated:

ಯಾದಗಿರಿ: ವಸತಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಸರ್ಕಾರಿ ದರದಲ್ಲಿ ನಿವೇಶನ ಒದಗಿಸಿಕೊಡುವ ಸಂಸ್ಥೆಯೊಂದು ಇದೆ ಎಂಬುದೇ ನಗರದ ನಾಗರಿಕರಿಗೆ ಗೊತ್ತಿಲ್ಲ. 2015ರ ಫೆಬ್ರುವರಿಯಲ್ಲಿ ನಗರದಲ್ಲಿ ಅಸ್ತಿತ್ವ ಕಂಡಿರುವ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ (ಯುಡಾ) ಜನರಿಗೆ ತಿಳಿಯುವಂತಹ ಯಾವುದೇ ಯೋಜನೆಯನ್ನು ಕಾರ್ಯಗತ ಮಾಡದ ಕಾರಣ ನಗರದ ನಾಗರಿಕರಿಂದ ದೂರ ಉಳಿದಿದೆ.

2031ರ ವೇಳೆಗೆ ಯಾದಗಿರಿ ನಗರವನ್ನು ಸ್ಮಾರ್ಟ್ ಸಿಟಿಯಂತೆ ಅಭಿವೃದ್ಧಿ ಗೊಳ್ಳಬೇಕು ಎಂಬ ಆಕಾಂಕ್ಷೆಯೊಂದಿಗೆ ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ ‘ಯಾದಗಿರಿ ನಗರದ ಮಾಸ್ಟರ್ ಪ್ಲಾನ್’ ತಯಾರಿಸಿದೆ. ನಗರದಲ್ಲಿ ಒಳಚರಂಡಿ ವ್ಯವಸ್ಥೆ, ಉತ್ತಮ ರಸ್ತೆಗಳು, ಉದ್ಯಾನಗಳು... ಹೀಗೆ ಭೀಮಾ ನದಿದಂಡೆಯಿಂದ ಹಿಡಿದು ದೊಡ್ಡಕೆರೆಯವರೆಗೆ ನಗರ ಅಭಿವೃದ್ಧಿಗೊಳ್ಳಲಿರುವ ಕುರಿತು ಮಾಸ್ಟರ್ ಪ್ಲಾನ್‌ನಲ್ಲಿ ವಿವರಿಸಲಾಗಿದೆ.

ಆದರೆ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವ ಕಂಡಂದಿನಿಂದ ಒಂದೂ ವಸತಿ ಬಡಾವಣೆ ನಿರ್ಮಾಣಕ್ಕೆ ಕೈಹಾಕಿಲ್ಲ. ಭೂಸ್ವಾಧೀನಕ್ಕೆ ಮುಂದಾಗಿಲ್ಲ. ಹಾಗಾಗಿ, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆಯವ್ಯಯ ಅಂದಾಜುಪಟ್ಟಿ ಸಿದ್ಧಪಡಿಸುವ ಪ್ರಮೇಯವೇ ಬಂದಿಲ್ಲ. ಇದರಿಂದ ಅನುಮೋದಿತ ಅಂದಾಜು ಪಟ್ಟಿಯನ್ನು ಅನುಷ್ಠಾನಗೊಳಿಸುವುದು, ಲೆಕ್ಕಪತ್ರ ನಿರ್ವಹಿಸುವ ಆರ್ಥಿಕ ವಿಭಾಗದ ಹೊಣೆ ಕೂಡ ಇಲ್ಲ. ಕಟ್ಟಡ ಸಂಕೀರ್ಣಗಳಿಗೆ ಮತ್ತು ಖಾಸಗಿ ವಸತಿ ಬಡಾವಣೆಗಳಿಗೆ ಪರವಾನಗಿ ನೀಡುವುದಕ್ಕಷ್ಟೇ ಲೆಕ್ಕಪತ್ರ ಸೀಮಿತಿಗೊಳಿಸಿಕೊಂಡಿದೆ.

ಇದರಿಂದ ಸಮರ್ಪಕ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಸರ್ಕಾರಿ ದರದಲ್ಲಿ ನಿವೇಶನ ಖರೀದಿಸುವ ನಗರದ ನಾಗರಿಕರ ಕನಸು ಮಾತ್ರ ಈಡೇರಿಲ್ಲ. ಒಂದು ರೀತಿಯಲ್ಲಿ ‘ಯುಡಾ’ ನಗರದ ನಾಗರಿಕರ ಪಾಲಿಗೆ ಬಿಳಿ ಆನೆಯಂತಾಗಿದೆ.

1 ಎಕರೆ ದರ ₹50 ಲಕ್ಷ: ‘ಪ್ರಾಧಿಕಾರಕ್ಕೆ ಸರ್ಕಾರದ ಅನುದಾನ ನೀಡುವುದಿಲ್ಲ. ರೈತರ ಭೂಮಿ ಖರೀದಿಸಿ ಅದನ್ನು ಅಭಿವೃದ್ಧಿಪಡಿಸಿ ನಂತರ ನಿವೇಶನಗಳನ್ನು ಮಾರಾಟ ಮಾಡಿ ಅದರಿಂದ ಬರುವ ಲಾಭಾಂಶದಲ್ಲಿ ವಾರ್ಷಿಕ ಖರ್ಚು– ವೆಚ್ಚ ಭರಿಸಬೇಕು. ಭೂಮಿ ಖರೀದಿಗೆ ಬ್ಯಾಂಕುಗಳನ್ನು ಆಶ್ರಯಿಸಬೇಕು.

ನಗರದ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ವಸತಿ ಬಡಾವಣೆ ಅಭಿವೃದ್ಧಿಪಡಿಸಬೇಕು ಎಂಬ ನಿಯಮ ಕೂಡ ಇದೆ. ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಂದು ಎಕರೆಗೆ ₹50ರಿಂದ ₹60 ಲಕ್ಷ ದರ ಇದೆ. ಸರ್ಕಾರದ ಮಿತಿ ಇರುವುದು ಒಂದು ಎಕರೆಗೆ ₹30ರಿಂದ 33 ಲಕ್ಷ. ಹೀಗೆ ವ್ಯತ್ಯಾಸ ಅಜಗಜಾಂತರ ಇರುವುದರಿಂದ ವಸತಿ ಬಡಾವಣೆ ನಿರ್ಮಾಣ ಕೈಗೆತ್ತಿಕೊಂಡಿಲ್ಲ ಎನ್ನುತ್ತಾರೆ‘ ‘ಯುಡಾ’ ಆಯುಕ್ತ ಚಂದ್ರಶೇಖರ ಬಂಕಲಗಿ.

‘ಈ ಹಿಂದೆ ರೈತರಿಂದ ಬಲವಂತವಾಗಿ ಭೂಸ್ವಾಧೀನ ಮಾಡಿಕೊಂಡು ಸರ್ಕಾರಿ ಲೆಕ್ಕದಲ್ಲಿ ಪರಿಹಾರ ನೀಡಲಾಗುತ್ತಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಬಲವಂತದ ಭೂಸ್ವಾಧೀನ ನಡೆಸದಂತೆ ಕಾಯ್ದೆ ಜಾರಿಗೊಳಿಸಿದೆ. ರೈತ ಮನವೊಲಿಸಿ ಭೂಸ್ವಾಧೀನ ಮಾಡಿ ಬಡಾವಣೆ ನಿರ್ಮಾಣ ಮಾಡುವಂತೆ ಕಾಯ್ದೆ ನಿರ್ದೇಶಿಸಿದೆ. ರಾಜ್ಯದ ಬಹುತೇಕ ನಗರಾಭಿವೃದ್ಧಿ ಪ್ರಾಧಿಕಾರಗಳ ಸ್ಥಿತಿಯೂ ಇದೇ ಆಗಿದೆ’ ಎಂದು ಆಯುಕ್ತರು ಹೇಳುತ್ತಾರೆ.

Post Comments (+)