ಬುಲ್ಡೋಜರ್‌ ಕೊಪ್ಪ!

ಸೋಮವಾರ, ಜೂನ್ 17, 2019
25 °C

ಬುಲ್ಡೋಜರ್‌ ಕೊಪ್ಪ!

Published:
Updated:
ಬುಲ್ಡೋಜರ್‌ ಕೊಪ್ಪ!

ಹಳೇ ಕಾಲದ ಯಂತ್ರೋಪಕರಣಗಳನ್ನು ಸಾಲು ಪ್ರದರ್ಶನಕ್ಕಿಟ್ಟಂತಹ ನೋಟ. ಊರು ಪ್ರವೇಶದಿಂದ ಮರೆಯಾಗುವವರೆಗೂ ಇಂಥದ್ದೊಂದು ಮ್ಯೂಸಿಯಂ ಕಂ ಗ್ಯಾರೇಜ್‌. ಎಲ್ಲ ಮನೆಗಳ ಮುಂದೊಂದು ಬುಲ್ಡೋಜರ್‌ (ಕನ್ನಡದಲ್ಲಿ ಇದಕ್ಕೆ ಹೆಗ್ಗುಂಟೆ ಯಂತ್ರ ಎಂಬ ಸೊಗಸಾದ ಹೆಸರಿದೆ!) ಯಂತ್ರ.

– ಇದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕು ಬನ್ನಿಕೊಪ್ಪ ಗ್ರಾಮದಲ್ಲಿ ಕಂಡುಬರುವ ದೃಶ್ಯ. ಅಬ್ಬಬ್ಬಾ ಎಂದರೆ ಈ ಗ್ರಾಮದ ಜನಸಂಖ್ಯೆ ಐದು ಸಾವಿರ. ಹೇಳಿಕೊಳ್ಳಲು ಇವರು ರೈತಾಪಿ ಮಂದಿ. ಆದರೆ, ಇಡೀ ಗ್ರಾಮದ ಅರ್ಥವ್ಯವಸ್ಥೆ ನಿಂತಿರುವುದು ಬುಲ್ಡೋಜರ್‌ ವ್ಯವಹಾರದ ಮೇಲೆ. ಅಂದಹಾಗೆ ಈ ಪುಟ್ಟ ಗ್ರಾಮದಲ್ಲಿ 250 ಬುಲ್ಡೋಜರ್‌ಗಳು, 75 ಹಿಟಾಚಿ ಯಂತ್ರಗಳು ಇವೆ!

ರಸ್ತೆ ಕಾಮಗಾರಿ ಗುತ್ತಿಗೆದಾರರು, ರೈಲ್ವೆ, ಬೃಹತ್‌ ನಿರ್ಮಾಣ ಸಂಸ್ಥೆಯವರಿಗೆ, ರೈಲ್ವೆ ಕಾಮಗಾರಿಗೆ ಬುಲ್ಡೋಜರ್‌ಗಳು ಪೂರೈಕೆ ಆಗುವುದು ಇಲ್ಲಿಂದಲೇ. ರಾಜ್ಯ ಮಾತ್ರವಲ್ಲದೇ ಪಕ್ಕದ ಆಂಧ್ರ ಪ್ರದೇಶದಲ್ಲಿಯೂ ಇಲ್ಲಿನ ಬುಲ್ಡೋಜರ್‌ಗಳಿಗೆ ಬೇಡಿಕೆ ಇದೆ.

ಎಲ್ಲಿಂದ ತರುತ್ತಾರೆ?: ಸರ್ಕಾರಿ ಇಲಾಖೆಗಳಲ್ಲಿ ಹಳೆಯದಾಗಿ ಗುಜರಿಗೆ ಹಾಕಿದ ಯಂತ್ರಗಳನ್ನು ಹರಾಜಿನಲ್ಲಿ ಕೊಳ್ಳುತ್ತಾರೆ. ಅದಕ್ಕೂ ಏಜೆಂಟರು ಇದ್ದಾರೆ. ಕೋಲ್ಕತ್ತ, ಕೊಲ್ಲಾಪುರದಲ್ಲಿ ಇದರ ಮಾರುಕಟ್ಟೆಗಳಿವೆ. ಭಾರತೀಯ ಸೇನೆಯಲ್ಲಿಯೂ ಹಳೆಯದಾದ ಯಂತ್ರಗಳನ್ನು ಗುಜರಿಗೆ ಮಾರುತ್ತಾರೆ. ಅಲ್ಲಿನ ಏಜೆಂಟರ ಮೂಲಕ ತೀರಾ ಚೌಕಾಸಿ ಬೆಲೆಗೆ ಈ ಯಂತ್ರಗಳನ್ನು ಖರೀದಿಸಿ ಲಾರಿಯಲ್ಲಿ ಹೇರಿಕೊಂಡು ಇಲ್ಲಿಗೆ ಬರುತ್ತಾರೆ.

ಬನ್ನಿಕೊಪ್ಪದಲ್ಲಿ ಇಂಥ ಯಂತ್ರಗಳಿಗೆ ಮರುಜೀವ ಕೊಡುವ ಹತ್ತು ಗ್ಯಾರೇಜ್‌ಗಳಿವೆ. ಅಲ್ಲಿ ಈ ಯಂತ್ರಗಳು ಮರುಜೀವ ಪಡೆಯುತ್ತವೆ. ಅಂದಹಾಗೆ ಇವಕ್ಕೆ ಬಿಡಿ ಭಾಗಗಳು ಸಾಮಾನ್ಯ ಆಟೊಮೊಬೈಲ್‌ ಅಂಗಡಿಗಳಲ್ಲಿ ಸಿಗುವುದಿಲ್ಲ. ಅದಕ್ಕೆ ಮತ್ತೆ ಗುಜರಿ ಅಂಗಡಿಯೇ ಬೇಕು. ಕೊಲ್ಲಾಪುರದ ಗುಜರಿ ಅಂಗಡಿಗಳಿಂದ ಈ ಯಂತ್ರಗಳ ಬಿಡಿ ಭಾಗಗಳನ್ನು ತರಿಸುತ್ತಾರೆ. ವಾಟ್ಸ್‌ಆ್ಯಪ್‌ ಸೌಲಭ್ಯದಿಂದ ಸಂವಹನ ತ್ವರಿತವಾಗಿ ಆಗುತ್ತದೆ. ಕನಿಷ್ಠ ಬೆಲೆಗೆ ಒಳ್ಳೆಯ ಬಿಡಿಭಾಗಗಳು ಸಿಗುತ್ತವೆ. ಅದನ್ನು ನಮಗೆ ಬೇಕಾದ ರೀತಿಯಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ಈ ವ್ಯವಹಾರದ ಗುಟ್ಟು ತೆರೆದಿಟ್ಟರು ಗ್ಯಾರೇಜ್‌ ಮಾಲೀಕ ಬಸವರಾಜ್‌.

ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ ಸಂಸ್ಥೆ ಮಾತ್ರ ಈ ಬುಲ್ಡೋಜರ್‌ಗಳನ್ನು ತಯಾರಿಸುತ್ತಿದೆ. ‘ಕ್ಯಾಟರ್‌ಪಿಲ್ಲರ್‌ ವಿದೇಶಿ ಕಂಪೆನಿ. ಅದರ ಯಂತ್ರಗಳು ದೇಶದಲ್ಲಿ ಲಭ್ಯ ಇಲ್ಲ. ಹೀಗಾಗಿ ನಾವು ಹಳೆಯ ಯಂತ್ರಗಳನ್ನು ಮರು ಬಳಸುವುದು ಅನಿವಾರ್ಯ’ ಎಂದರು ಇದೇ ಗ್ಯಾರೇಜ್‌ನ ಮಂಜುನಾಥ.

ಗುಜರಿ ಯಂತ್ರಗಳನ್ನು ₹ 10 ಲಕ್ಷದ ಒಳಗೆ ಖರೀದಿಸುತ್ತೇವೆ. ₹ 2ರಿಂದ 3 ಲಕ್ಷ ವೆಚ್ಚ ಮಾಡಿ ದುರಸ್ತಿ ಮಾಡುತ್ತೇವೆ. ಗ್ರಾಹಕರು ಬಂದರೆ ಕೊಡುತ್ತೇವೆ. ಇಲ್ಲವಾದರೆ ನಾವೇ ನಡೆಸುತ್ತೇವೆ ಎಂದರು ಅವರು.

ಈ ವಹಿವಾಟಿಗೆ ಬ್ಯಾಂಕ್‌ ಸಾಲ ಸಿಗುವುದಿಲ್ಲ. ಏಕೆಂದರೆ ಯಂತ್ರಗಳಿಗೆ ಮಾರಾಟ ತೆರಿಗೆ ಬಿಟ್ಟರೆ ಬೇರೇನನ್ನೂ ಪಾವತಿಸಲು ಅಸಾಧ್ಯ. ಗುಜರಿ ಯಂತ್ರಗಳಿಗೆ ದಾಖಲೆಯೂ ಇರುವುದಿಲ್ಲ. ಹಾಗಾಗಿ ಬ್ಯಾಂಕ್‌ನಂಥ ಸಂಸ್ಥೆಗಳು ಸಹಜವಾಗಿ ಸಾಲ ಕೊಡುವುದಿಲ್ಲ. ಕೃಷಿ ಭೂಮಿಯನ್ನು ಒತ್ತೆ ಇಟ್ಟೋ, ಕೈಸಾಲ ಮಾಡಿಯೋ ಯಂತ್ರ ಖರೀದಿಸುತ್ತಾರೆ. ಅದರಲ್ಲೇ ದುಡಿದು ಅಥವಾ ಕೃಷಿ ಮಾಡಿ ಸಾಲ ತೀರಿಸುತ್ತಾರೆ ಎಂದರು ಬಸವರಾಜ್‌.

ಈ ಕ್ಷೇತ್ರದಲ್ಲಿ ಅನುಭವವೇ ಪದವಿ. ಕೆಲಸ ಗೊತ್ತಿಲ್ಲದವರು ಇದರಲ್ಲಿ ದುಡಿಯಲು ಸಾಧ್ಯವೇ ಇಲ್ಲ. ಈ ಗ್ರಾಮದಲ್ಲಿ ಬಹುತೇಕರು ಈ ಯಂತ್ರಗಳನ್ನು ಚಲಾಯಿಸಬಲ್ಲರು. ಸುತ್ತಲಿನ ಹಳ್ಳಿಗಳ ಸುಮಾರು 600 ಜನರಿಗೆ ನೇರ ಹಾಗೂ ಪರೋಕ್ಷ ಉದ್ಯೋಗವನ್ನು ಬುಲ್ಡೋಜರ್‌ಗಳು ಕೊಟ್ಟಿವೆ. 10 ಗ್ಯಾರೇಜ್‌ಗಳು ಸುಮಾರು 40 ಜನರಿಗೆ ನೇರ ಉದ್ಯೋಗವನ್ನು ಕೊಟ್ಟಿವೆ. ಬೆಂಗಳೂರಿನಲ್ಲಿ ಬೆಮೆಲ್‌ ಘಟಕ ಹೊರತುಪಡಿಸಿದರೆ ದುರಸ್ತಿ ಘಟಕಗಳು ಇರುವುದು ಬನ್ನಿಕೊಪ್ಪ ಮತ್ತು ಗದಗದಲ್ಲಿ ಮಾತ್ರ. ಹೀಗಾಗಿ ನಿರ್ಮಾಣ ಕಂಪೆನಿಗಳು ಇಲ್ಲಿನ ಯಂತ್ರಗಳಿಗೆ ಬೇಡಿಕೆ ಇಡುತ್ತಲೇ ಬಂದಿವೆ.

ಬುಲ್ಡೋಜರ್‌ ಯಂತ್ರಗಳಲ್ಲಿ ಸಹಾಯಕ, ಕ್ಲೀನರ್‌ಗಳಾಗಿ ಸೇರಿದವರೇ ಇಂದು ಚಾಲಕ, ಮೆಕ್ಯಾನಿಕ್‌ಗಳಾಗಿ ಹಲವರು ಮಾಲೀಕರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಬೆರಳೆಣಿಕೆಯ ಮಂದಿ ಐಟಿಐ ಓದಿದ್ದು ಬಿಟ್ಟರೆ ಉಳಿದವರೆಲ್ಲರದ್ದು ಪ್ರಾಯೋಗಿಕ ವಿದ್ಯೆಯೇ. ಸುಶಿಕ್ಷಿತ ಎಂಜಿನಿಯರ್‌ಗಳು ಇತ್ತ ಸುಳಿಯುವುದೂ ಇಲ್ಲ ಎಂದರು ಬಸವರಾಜ್.

ಡಿ– 6ಬಿ, ಡಿ– 50, ಎ–15... ಹೀಗೆ ಯಂತ್ರಗಳ ಮಾದರಿ, ಅವುಗಳ ಸಾಮರ್ಥ್ಯ ಇವರಿಗೆ ಕಂಠಪಾಠವಾಗಿದೆ. ‘ನಾವು ಉದ್ಯೋಗ ಹುಡುಕಿಕೊಂಡು ಹೋಗಿದ್ದರೆ ಹತ್ತಿಪ್ಪತ್ತು ಸಾವಿರಕ್ಕೆ ಎಲ್ಲೋ ನೌಕರಿ ಮಾಡಿಕೊಂಡಿರುತ್ತಿದ್ದೆವು. ಆದರೆ, ಈ ಯಂತ್ರಗಳು ನಮಗೆ ಇದ್ದ ಊರಲ್ಲೇ ಬದುಕು ಕಟ್ಟಿಕೊಟ್ಟಿವೆ’ ಎಂದರು ಅವರು.

ಬನ್ನಿಕೊಪ್ಪ ಬಳಿ ಹೊಸಪೇಟೆ–ತಿನೈಘಾಟ್‌ ರೈಲು ಮಾರ್ಗದ ದ್ವಿಪಥ ಕಾಮಗಾರಿ ನಡೆಯುತ್ತಿದೆ. ಅಲ್ಲಿನ ಕಾಮಗಾರಿಗೆ ಪ್ರತಿದಿನ ಇವರ ನೆರವು ಬೇಕು. ರೈಲು ಹಳಿ ಮೇಲೆ ಓಡಾಡುವ ಟಿಪ್ಪರ್‌ಗೂ ಈ ಗ್ಯಾರೇಜ್‌ಗಳೇ ರೈಲಿನ ಗಾಲಿ ಅಳವಡಿಸಿಕೊಟ್ಟಿವೆ. ಹಳಿಗಳ ಮೇಲೆ ಈ ಟಿಪ್ಪರ್‌ ಓಡುವುದೇ ಒಂದು ಅದ್ಭುತ. ಇದರ ಹಿಂದೆ ರೈಲ್ವೆ ಎಂಜಿನಿಯರ್‌ಗಳ ಯೋಚನೆ ಕೆಲಸ ಮಾಡಿದೆ.

ಹೊಸಪೇಟೆ–ಭಾನಾಪುರ ನಿಲ್ದಾಣದವರೆಗೆ ಚತುಷ್ಪಥ ಕಾಮಗಾರಿ ಮುಂದುವರಿದಿದೆ. ಇಲ್ಲಿಯೂ ಯಂತ್ರಗಳ ಮಾಲೀಕರಿಗೆ ಬೇಡಿಕೆ ಇದೆ. ಇಲ್ಲಿನವರಿಗೆ ಕಾಯಕವೇ ವಿಶ್ರಾಂತಿ. ಪ್ರತಿ ಮನೆಯಲ್ಲಿ ಒಂದೋ ಎರಡೋ ಯಂತ್ರಗಳು ಇವೆ. ಸರಿಯಾಗಿ ದುಡಿದರೆ ತಿಂಗಳಿಗೆ ₹ 1.5 ಲಕ್ಷ ಗಳಿಸಬಹುದು ಎಂದರು ಬಸವರಾಜ ಮತ್ತು ಮಂಜುನಾಥ.

ಎಲ್ಲ ಕಡೆ ಹುಡುಗನ ನೌಕರಿ, ಶಿಕ್ಷಣ, ಜಮೀನು ನೋಡಿ ಹೆಣ್ಣು ಕೊಡ್ತಾರೆ. ನಮ್ಮೂರಲ್ಲಿ ಮಾತ್ರ ಮನೆ ಮುಂದೆ ಎಷ್ಟು ಯಂತ್ರಗಳಿವೆ ಎಂಬುದನ್ನು ನೋಡಿ ಹೆಣ್ಣು ಕೊಡುತ್ತಾರೆ. ಈ ರೀತಿಯೇ ಸಂಬಂಧಗಳು ಕುದುರುತ್ತವೆ ನೋಡಿ ಎಂದು ಸ್ವಾರಸ್ಯ ತೆರೆದಿಟ್ಟರು ಮಹೇಶ. ಇದು ಹೈರಿಸ್ಕ್‌ ವಹಿವಾಟು. ಪರಿಶ್ರಮ, ಸ್ವಲ್ಪಮಟ್ಟಿಗೆ ಅದೃಷ್ಟ ಬೇಕು ನೋಡಿ ಎಂದು ಹೇಳಲು ಮರೆಯಲಿಲ್ಲ.

ಬುಲ್ಡೋಜರ್‌ ಯಂತ್ರಗಳಷ್ಟೇ ಅಲ್ಲ. ಹಿಟಾಚಿ, ಜೆಸಿಬಿ ಯಂತ್ರಗಳನ್ನು ಕನಿಷ್ಠ ಬೆಲೆಗೆ ಖರೀದಿಸಿ ಇಲ್ಲಿ ದುರಸ್ತಿ ಮಾಡಿ ಬಾಡಿಗೆಗೆ ಕೊಟ್ಟು ಬದುಕು ಸಾಗಿಸುವವರೂ ಸಾಕಷ್ಟು ಜನ ಇದ್ದಾರೆ. ಖಾಲಿ ಜಮೀನುಗಳಲ್ಲಿ ಕೆಲಸ ಮಾಡುವುದರಿಂದ ಅಪಘಾತದ ಸಾಧ್ಯತೆಗಳು ತೀರಾ ಕಡಿಮೆ ಎಂಬ ವಿಶ್ವಾಸ ಬಸವರಾಜ ಮತ್ತು ಮಹೇಶ ಅವರದ್ದು.

ಕೆಲವನ್ನು ದಿನ/ ಗಂಟೆಗಳ ಆಧಾರದಲ್ಲಿ ಬಾಡಿಗೆಗೆ ಕೊಡುತ್ತೇವೆ. ಗುತ್ತಿಗೆದಾರರಿಗೆ ತಿಂಗಳ ಬಾಡಿಗೆ ಆಧಾರದ ಮೇಲೆ ಗುತ್ತಿಗೆಗೆ ಕೊಡುತ್ತೇವೆ. ಡೀಸೆಲ್‌, ನಿರ್ವಹಣಾ ವೆಚ್ಚ ಕೊಟ್ಟು ಅವರು ₹ 1 ಲಕ್ಷ ಬಾಡಿಗೆ ಕೊಡಬೇಕು. ಇದರಲ್ಲಿ ಚಾಲಕನಿಗೆ ₹ 15 ಸಾವಿರ ವೇತನ ಕೊಡುತ್ತೇವೆ. ಸಣ್ಣ ಪುಟ್ಟ ಖರ್ಚು ಕಳೆದರೂ ₹ 50 ಸಾವಿರ ಗಳಿಕೆಗೇನೂ ಕಡಿಮೆ ಇಲ್ಲ ಎಂದರು ಮಂಜುನಾಥ.

ಸದ್ಯ ಸ್ವಾವಲಂಬಿ ಬದುಕು ಕಟ್ಟಿಕೊಂಡ ಗ್ರಾಮಸ್ಥರಲ್ಲಿ ಹೆಚ್ಚಿನ ನಿರೀಕ್ಷೆಗಳೇನೂ ಇದ್ದಂತಿಲ್ಲ. ಕೈಗಾರಿಕಾ ಪ್ರದೇಶದ ಮಾದರಿ ಯಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ದುರಸ್ತಿ ಕಾರ್ಯಾಗಾರಗಳು ಒಂದೇ ಸೂರಿನಡಿ ಸ್ಥಾಪನೆಯಾಗಬೇಕು. ಸಮೀಪದ ತಳಕಲ್‌ನಲ್ಲಿ ನಿರ್ಮಾಣ ಆಗುತ್ತಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ರಾಜ್ಯದ ಮೊದಲ ರಾಷ್ಟ್ರೀಯ ಕೌಶಲ ಕೇಂದ್ರ ಸ್ಥಾಪನೆಗೆ ಸಿದ್ಧತೆ ನಡೆದಿದೆ. ಈ ಕೇಂದ್ರದಲ್ಲಿ ಬುಲ್ಡೋಜರ್‌, ಜೆಸಿಬಿ ಯಂತ್ರೋಪಕರಣ ದುರಸ್ತಿ, ಮರು ನಿರ್ಮಾಣದ ಕೌಶಲ ತರಬೇತಿಯನ್ನು ಇಲ್ಲಿನ ಕಾರ್ಮಿಕರಿಗೆ ಕೊಡಿಸಬೇಕು. ಈ ಬಗ್ಗೆ ಸಚಿವರಿಗೂ ಶೀಘ್ರ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು ಮಹೇಶ.

***

ಗ್ರಾಮದ ಬುಲ್ಡೋಜರ್‌ ಇತಿಹಾಸ...

ಇದೊಂದೇ ಊರಿನಲ್ಲಿ ಬುಲ್ಡೋಜರ್‌ಗಳು ಏಕೆ ನೆಲೆನಿಂತವು ಎಂಬ ಪ್ರಶ್ನೆಗೆ ಮಂಜುನಾಥ, ಬಸವರಾಜ ಸುಮಾರು 50 ವರ್ಷಗಳ ಹಿಂದಕ್ಕೆ ಸರಿದರು. ನೆನಪಿನ ಬುತ್ತಿ ಬಿಚ್ಚಿದರು.

ಅಂದು ಇಲ್ಲಿ ಶಿವಪ್ಪಗೌಡರು ಎಂಬುವವರು ತಮ್ಮ ಹೊಲದ ಕೆಲಸಕ್ಕಾಗಿ ವಿದೇಶದಿಂದ ಕ್ಯಾಟರ್‌ಪಿಲ್ಲರ್‌ ಕಂಪೆನಿಯ ಬುಲ್ಡೋಜರ್‌ ಯಂತ್ರ ತಂದರು. ಅಂದಿನ ಪ್ರಗತಿಪರ ರೈತರು ಅವರು. ಯಂತ್ರದ ಮೂಲಕ ಜಮೀನು ಸಮತಟ್ಟು ಮಾಡುವುದು, ಹೊಸ ಹೊಲ ನಿರ್ಮಿಸುವುದು ಆ ಕಾಲಕ್ಕೆ ಅದ್ಭುತವೇ ಆಗಿತ್ತು. ಅವರು ಮತ್ತೆ 20 ಯಂತ್ರ ಖರೀದಿಸಿದರು. ಅವರ ಯಂತ್ರಗಳಲ್ಲಿ ಗ್ರಾಮಸ್ಥರು ಚಾಲಕರು, ಸಹಾಯಕರಾಗಿ ದುಡಿದರು. ಆಗ ದುರಸ್ತಿಗೂ ವ್ಯವಸ್ಥೆ ಬೇಕಾಯಿತು. ಅವರು ಪುಟ್ಟ ಗ್ಯಾರೇಜನ್ನೂ ಹಾಕಿದರು. ಅದು ಒಂದು ತರಬೇತಿ ಕೇಂದ್ರವಾಗಿಯೇಬಿಟ್ಟಿತು. ಹೀಗೆ ಅವರ ಕೈಕೆಳಗೆ ಕೆಲಸ ಮಾಡುತ್ತಾ ಹಲವರು ಈ ಯಂತ್ರಗಳನ್ನು ಖರೀದಿಸಿ ಮಾಲೀಕರಾದರು.

ಮಾರುಕಟ್ಟೆಯಲ್ಲಿ ಏರುಪೇರಾಗುತ್ತಿರುವುದನ್ನು ಕಂಡ ಶಿವಪ್ಪ ಗೌಡರು, ತಮ್ಮ ವಹಿವಾಟನ್ನು ಗದಗಕ್ಕೆ ಸ್ಥಳಾಂತರಿಸಿದರು. ಮಾತ್ರವಲ್ಲ ಬೇರೆ ವಹಿವಾಟಿನಲ್ಲಿ ತೊಡಗಿದರು. ಆದರೆ, ಆಗಲೇ ಭದ್ರವಾದ ಬುಲ್ಡೋಜರ್‌ ಪರಂಪರೆ ಗ್ರಾಮದಲ್ಲಿ ಬೇರೂರಿಬಿಟ್ಟಿತ್ತು. ಇವರದೇ ಸಾಲಿನಲ್ಲಿ ಚನ್ನಪ್ಪ ಗೊಂಡಬಾಳ ಎಂಬುವವರೂ ನಾಲ್ಕು ಗಾಡಿ ಮಾಡಿ 50 ಎಕರೆ ಹೊಲ ಖರೀದಿಸಿದ್ದೂ ದಾಖಲೆ. ಹುಸೇನ್‌ ಸಾಬ್‌, ವಿರೂಪಣ್ಣ ಗೊಂದಿ, ಹೇಮಣ್ಣ ಗುಡಿಕಟ್ಟಿ, ಯಂಕಣ್ಣ ಯರಾಶಿ ಇವರೆಲ್ಲಾ ಬುಲ್ಡೋಜರ್‌ ಉದ್ದಿಮೆಯ ಘಟಾನುಘಟಿಗಳು ಎಂದು ಸ್ಮರಿಸಿದರು ಅವರು.

ಸಹಕಾರವೇ ಜೀವಾಳ: ಯಂತ್ರದ ಮಾಲೀಕರು ಒಬ್ಬರಿಗೊಬ್ಬರು ನೆರವಾಗುವ ಮೂಲಕ ಬೃಹತ್‌ ಉದ್ದಿಮೆ ವ್ಯವಸ್ಥೆಯೊಂದನ್ನು ಕಟ್ಟಿಕೊಂಡಿದ್ದಾರೆ. ಒಬ್ಬನ ಯಂತ್ರಕ್ಕೆ ಇನ್ನೊಬ್ಬ ಚಾಲಕನಾಗಿ ಹೋಗುವುದು, ಪರಸ್ಪರ ಹಣಕಾಸಿನ ನೆರವು ನೀಡುವುದು, ದುರಸ್ತಿಗೆ ನೆರವಾಗುವ ಮೂಲಕ ಬುಲ್ಡೋಜರ್‌ಗಳ ಬೀಡು ಬಲವಾಗಿ ನೆಲೆ ನಿಂತಿದೆ.

ಬಸವರಾಜರ ಗ್ಯಾರೇಜ್‌ನಲ್ಲಿ ಸ್ಪ್ಯಾನರ್‌ ಹಿಡಿದು ಕೆಲಸ ಮಾಡುತ್ತಿದ್ದ ಹುಡುಗ ತಾನೂ ಮುಂದೆ ಬುಲ್ಡೋಜರ್‌ ಮಾಲೀಕನಾಗುವ ಕನಸು ಹಂಚಿಕೊಂಡ.

‘ಮೂರು ವರ್ಷ ಜಿಲ್ಲೆಯಲ್ಲಿ ತೀವ್ರ ಬರಗಾಲ ಇತ್ತು. ಆದರೆ, ನಾವು ಧೃತಿಗೆಡಲಿಲ್ಲ. ನಮಗೆ ಈ ಬುಲ್ಡೋಜರ್‌ ಯಂತ್ರಗಳು ಬದುಕು ಕೊಟ್ಟವು. ನಮ್ಮ ಬೆಳೆಗಳು ಕೈಕೊಟ್ಟಿದ್ದವು. ಆದರೆ, ಯಂತ್ರಗಳು ಮೂರು ವರ್ಷ ಅರ್ಥ ವ್ಯವಸ್ಥೆಯನ್ನು ನಿಭಾಯಿಸಿದವು’ ಎಂದು ನಿಟ್ಟುಸಿರುಬಿಟ್ಟರು ಬುಲ್ಡೋಜರ್‌ ಮಾಲೀಕ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ.

***

ಸಹಕಾರವೇ ಜೀವಾಳ

ಯಂತ್ರದ ಮಾಲೀಕರು ಒಬ್ಬರಿಗೊಬ್ಬರು ನೆರವಾಗುವ ಮೂಲಕ ಬೃಹತ್‌ ಉದ್ದಿಮೆ ವ್ಯವಸ್ಥೆಯೊಂದನ್ನು ಕಟ್ಟಿಕೊಂಡಿದ್ದಾರೆ. ಒಬ್ಬನ ಯಂತ್ರಕ್ಕೆ ಇನ್ನೊಬ್ಬ ಚಾಲಕನಾಗಿ ಹೋಗುವುದು, ಪರಸ್ಪರ ಹಣಕಾಸಿನ ನೆರವು ನೀಡುವುದು, ದುರಸ್ತಿಗೆ ನೆರವಾಗುವ ಮೂಲಕ ಬುಲ್ಡೋಜರ್‌ಗಳ ಬೀಡು ಬಲವಾಗಿ ನೆಲೆ ನಿಂತಿದೆ.

ಬಸವರಾಜರ ಗ್ಯಾರೇಜ್‌ನಲ್ಲಿ ಸ್ಪ್ಯಾನರ್‌ ಹಿಡಿದು ಕೆಲಸ ಮಾಡುತ್ತಿದ್ದ ಹುಡುಗ ತಾನೂ ಮುಂದೆ ಬುಲ್ಡೋಜರ್‌ ಮಾಲೀಕನಾಗುವ ಕನಸು ಹಂಚಿಕೊಂಡ.

‘ಮೂರು ವರ್ಷ ಜಿಲ್ಲೆಯಲ್ಲಿ ತೀವ್ರ ಬರಗಾಲ ಇತ್ತು. ಆದರೆ, ನಾವು ದೃತಿಗೆಡಲಿಲ್ಲ. ನಮಗೆ ಈ ಬುಲ್ಡೋಜರ್‌ ಯಂತ್ರಗಳು ಬದುಕು ಕೊಟ್ಟವು. ನಮ್ಮ ಬೆಳೆಗಳು ಕೈಕೊಟ್ಟಿದ್ದವು. ಆದರೆ, ಯಂತ್ರಗಳು ಮೂರು ವರ್ಷ ಅರ್ಥ ವ್ಯವಸ್ಥೆಯನ್ನು ನಿಭಾಯಿಸಿದವು’ ಎಂದು ನಿಟ್ಟುಸಿರುಬಿಟ್ಟರು ಬುಲ್ಡೋಜರ್‌ ಮಾಲೀಕ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry