ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಿನ್ನಾಕ ಕೂಳಿಲ್ಲ, ನಿದ್ದಿ ಬಂಗಾರಾಗೈತಿ’

Last Updated 30 ಅಕ್ಟೋಬರ್ 2017, 10:15 IST
ಅಕ್ಷರ ಗಾತ್ರ

–ಕಲಾವತಿ ಬೈಚಬಾಳ

ನನ್ನ ಹೆಸರು ಯಂಕಮ್ಮ ರೀ. ಸಾಲಿ ಹಿಂದೂ ಹಾದಿಲ್ಲ, ಮುಂದೂ ಹಾದಿಲ್ಲ. ಹುಟ್ಟಿ, ಬೆಳೆದಿದ್ದೆಲ್ಲಾ ಕಲಬುರ್ಗಿ ಜಿಲ್ಲೆಯ ಸುರಪುರ ತಾಲೂಕಿನ ಅಮ್ಮಾಪುರ. 25 ವರ್ಷಗಳಿಂದ ಕಲ್ಲು ಮಣ್ಣು ಹೊತ್ತು ಗಾರೆ ಕೆಲಸಾ ಮಾಡ್ತಾ ಹ್ಯಾಂಗೋ ಕಷ್ಟಾನೊ ಸುಖಾನೋ, ದೇವರ ಇಟ್ಟಂಗೆ ಜೀವನ ನಡ್‌ಸಕೊಂಡ್‌ ಬಂದೀನಿ.

ವಯಸ್ಸು ಎಷ್ಟಾಗ್ಯಾವೆನೋ ನೆನಪಿಲ್ಲರಿ. ನಲವತ್ತೈದೋ ಐವತ್ತಿರ್ಬಹುದು. ಬಡತನ ತುಂಬಿದ ಮನೆ. ಹೊತ್ತು ಕೂಳಿಗೂ ಪರದಾಡುವಂಗ ಇತ್ತು ಪರಿಸ್ಥಿತಿ. ಅಪ್ಪ, ಅವ್ವ ಹಗಲ–ರಾತ್ರಿ ಅನಲಾರ್ದೆ ಬೆನ್ನ ಬಗ್ಗಿಸಿ, ಬೆವರಿಸಿಳಿ ದುಡದಾಗ ನಮ್ಮ ಹೊಟ್ಟಿಗಿ ಹಿಟ್ಟು. ಕಷ್ಟಪಟ್ಟು ನಮ್ಮನ್ನು ಸಲಹಿದರು. ಆಡೋ ವಯಸ್ಸಿನ್ಯಾಗ ಎಳೆ ಜೀವಕ ಕಲ್ಲು ಮಣ್ಣು ಭಾರ ಆದ್ರೂ, ಹೊತ್ತೆ. ಎಷ್ಟೋ ದಿನ ಗಂಜಿ ಕುಡದು ಬಾಳೆ ಮಾಡಿವ್ರೀ.

ಸಣ್ಣಂದಿರ್‌ತಾನೇ ಲಗ್ನ ಆತು. ಗಂಡಾನೂ ಗಾರೆ ಕೆಲ್ಸ್‌ ಮಾಡ್ತಾರ. ಅವರ ಜೋಡಿನೇ ನಾನೂ ಕೆಲಸಕ್ಕೆ ಹೋಗ್ತಿದ್ದೆ. ಮದ್ವಿ ಆಗಿ ಐದು ವರ್ಷದಾಗೆ ನಾಲ್ಕು ಗಂಡು ಮಕ್ಕಳಾದ್ವು. ಹಳ್ಳಿಯೊಳಗ ದಿನ ಎಲ್ಲಿ ಗಾರೆ ಕೆಲಸಾ ಸಿಗ್‌ಬೇಕ್ರೀ. ಹೊಟ್ಟಿಗೆ ಹಿಟ್ಟು ಕಾಣ್ಸೋದೊ ಚಿಂತಿ ಆಯ್ತು. ಬಾಜು ಮನೆಯವರಿಂದ ಸಾಮಾನು ಕಡ ತಂದೂ ತಂದೂ ಸಾಕಾತು. ಹಂಗೆ ಸಾಲಾನೂ ಏರ್‌ತಾ ಹೋಯ್ತು. ಗಾರೆ ಕೆಲಸ ಸಿಕ್ಕಾಗ ಖುಷಿಯಿಂದ ದುಡೀತಿದ್ವಿ. ಇಲ್ಲದಾಗ, ಹೊಲ ಮನಿ ಕೆಲಸ ಮಾಡ್ತಿದ್ವಿ, ಮಳೆ ಬಂದ್ರ ಜೀವಕ್ಕ, ಜೀವನಕ್ಕ ಕಳೆ. ಇಲ್ಲಂದ್ರ ಎಲ್ಲಾ ಕೊಳೆ ಆಗ್ತಿತ್ತು. ಕೆಲಸಕ್ಕಂತ ನಾವು ಅಲ್ದಾಡದಿರೋ ಊರಿಲ್ಲ.

ಬ್ಯಾಡೆಬ್ಯಾಡಾ ಈ ಗೋಳಾಟ ಅಂತ ಹೇಳಿ, 20 ವರ್ಷದ ಹಿಂದೆ ಬೆಂಗಳೂರಿಗೆ ಬಂದ್ವಿ. ಟಿನ್‌ ಫ್ಯಾಕ್ಟ್ರೀ ಹತ್ರ, ಬೆನ್ನಿಗಾನಹಳ್ಯಾಗ ಜೋಪಡಿ ಹಾಕೊಂಡು ಇಲ್ಲೇ ಠಿಕಾಣಿ ಹೂಡಿವ್ರೀ. ಮಳೆ ಗಾಳಿಗೆ ಮನೆ ಮನಸ್ಸು ನಡಗತಿತ್ತರೀ. ಮಕ್ಕಳು ದೊಡ್ಡು ಆದುವು. ನಾವೂ ಸಾಲಿ ಕಲಿಲಿಲ್ಲ, ಅವ್ಕು ಸಾಲಿ ಕಲಿಸೋಕ್ಕಾಗಲಿಲ್ಲ. ‘ತಿನ್ನಾಕ ಕೂಳಿಲ್ಲ, ನಿದ್ದಿ ಬಂಗಾರಾಗೈತಿ’.. ಮನೆಲೀ ಮಕ್ಕಳ ನೋಡ್‌ಕೋಳ್ಳೋರಿರ್‌ಲಿಲ್ಲ. ಕೆಲಸ ಮಾಡಕೋತ ಅವರನ್ನು ನೋಡಕೋಬೇಕಾಗತಿತ್ತು. ಸಣ್ಣ ಮಗನ್ನ ಬೆನ್ನಿಗೆ ಕಟಕೊಂಡು ಕಲ್ಲು ಮಣ್ಣು ಹೊರ್ತಿದ್ದೆ. ಕೂಸ ಹಸದ್ರ ಹಾಲ ಕುಡಸಾಕೂ ಪುರಸೋತ್ತು ಇರುತ್ತಿರಲಿಲ್ಲ. ಎಷ್ಟೋ ದಿನಾ ಹಸಿದ ಹೊಟ್ಟೆಲೇ ಮಲಗಿದ ನೆನಪು ಇನ್ನೂ ಹಸಿಯಾಗೆ ಐತಿ. ಒಂದಿನಕ್ಕ ₹70 ಕೊಡ್‌ತಿದ್ರು. ಅಷ್ಟರಾಗ ಆರು ಮಂದಿ ಜೀವನ ನಡೆಸಬೇಕಿತ್ತು. ಕಷ್ಟ ಅನ್ನಿಸಿದ್ದರೂ ಮಕ್ಕಳ ಮುಖಾ ನೋಡ್‌ತಿದ್ದಂಗೆ ಕಷ್ಟ ಎಲ್ಲ ಕಣ್ಮರೆ ಆಗ್ತಿತ್ತು. ದಿನ ಕಳದಂಗ ಹುಡುಗುರು ದೊಡ್ಡು ಆದ್ವು. ಬಿಸಿಲಾಗ ಬೇವರಿಳಿಸದೆ ಬದುಕಿಲ್ಲ ಅಂತ ಮಕ್ಕಳೂ ಕಲ್ಲು ಮಣ್ಣು ಹೊರೋಂಗಾತು.

ನಮ್ದು 15 ಮಂದಿ ಗುಂಪು ಅದ. ಎಲ್ಲಾರೂ ಮುಂಜಾನೆ 6ಕ್ಕೆ ಬಂದ್ರ ಮಧ್ಯಾಹ್ನ 12ಕ್ಕ ಕೆಲಸ ಮುಗಿಸ್ತೀವಿ. ಒಂದು ದಿನ ದುಡಿದ್ರ ದಿನಕ್ಕ ₹300 ಕೊಡ್ತಾರ. ಇಲ್ಲಿ ಕೆಲಸಾ ಇಲ್ಲದಾಗ ಊರು ಕಡೆ ಹೋಗ್ತೀವಿ. ಮತ್ತ ಹೊಲ ಮನಿಲೇ ದುಡಿತೀವಿ. ಮಳೆ ಇಲ್ಲಾರ್ದೆ ಬೆಳೆ ಕಮ್ಮಿ ಆಯ್ತು. ಸರ್ಕಾರ ಕೊಡೊ ರೊಕ್ಕ ನಡಬರ್ಕಿನ ಅಧಿಕಾರಿಗಳೆ ನುಂಗಿ ನೀರು ಕುಡಿತಾರು. ನಮ್ಮ ಕೈಗೆ ಬರೋ ಅಷ್ಟಿಷ್ಟ ರೊಕ್ಕ ಎದಕ ಸಾಲ್‌ಬೇಕ್ರೀ?....

ನಿಮಗ ಆ ಸಹಾಯ ಮಾಡ್ತೀವಿ, ಇದನ್ನ ಮಾಡ್ತೀವಿ ಅಂತ ಅಧಿಕಾರಿಗಳು ಬರ್ತಾರ್‌, ಹೇಳಿ ಹೋಗ್ತಾರ್. ಇನ್ನೂ ಯಾವುದನ್ನೂ ಕಂಡಿಲ್ಲ. ಇರಾಕ ಸ್ವಂತ ಮನಿ ಇಲ್ಲ. ವಾಸಿಸೋ ಜೋಪಡಿ ಈಗೋ ಆಗೋ ನೆಲಕ್ಕ ಬೀಳಂಗದ. ನಮಗೂ ವಯಸ್ಸಾತು. ಮಕ್ಕಳಿಗರೆ ಸರ್ಕಾರ ಅನೂಕೂಲ ಮಾಡಿ ಕೊಡ್ಲಿ. ನನ್ನಂಗ ಇನ್ನೂ ಭಾಳ ಜನರ ಜೀವನ ಒದ್ದಾಟ, ಬಡದಾಟದಾಗ ಐತಿ. ಈಗ ಜೀವನ ನೀಡಿದ ನೋವಿನ ಮುಂದ ಕಲ್ಲು ಮಣ್ಣಿನಿಂದಾದ ನೋವು ನಾಟಲಾರದ ಮಟ್ಟಿಗೆ ಮನಸ್ಸು ಗಟ್ಟಿ ಆಗೇತ್ರೀ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT