ಮದುವೆಗೆ ಮೇಕ್‌ಓವರ್

ಶುಕ್ರವಾರ, ಮೇ 24, 2019
22 °C

ಮದುವೆಗೆ ಮೇಕ್‌ಓವರ್

Published:
Updated:
ಮದುವೆಗೆ ಮೇಕ್‌ಓವರ್

ಮದುವೆಯ ದಿನ ತೊಡುವ ಬಟ್ಟೆ, ಅಲಂಕಾರ, ಒಡವೆ ಹಾಗೇ ಹನಿಮೂನ್ ಪ್ಯಾಕೇಜ್‌ಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತೇವೆ. ಆದರೆ ಈಗ ಇದಕ್ಕೆಲ್ಲಾ ಮದುಮಕ್ಕಳು ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಮದುವೆ ಹುಡುಗ ಹುಡುಗಿಯನ್ನು ತಯಾರು ಮಾಡುವ ‘ಮೇಕ್‌ಓವರ್ ಆರ್ಟಿಸ್ಟ್‌’ಗಳು ಸಿಗುತ್ತಾರೆ. ಇವರು ಕೇವಲ ಮೇಕಪ್ ಮಾಡಿ, ಸೀರೆ ಉಡಿಸುವ ಬ್ಯೂಟೀಷಿಯನ್‌ಗಳಲ್ಲ. ಮೇಕ್‌ಓವರ್ ಆರ್ಟಿಸ್ಟ್‌ಗಳ ಸಿದ್ಧತೆ ಮದುವೆಗೆ ಆರು ತಿಂಗಳಿರುವಾಗಲೇ ಶುರುವಾಗುತ್ತದೆ.

ಚರ್ಮಕ್ಕೆ ನಾನಾ ಬಗೆಯ ಥೆರೆಪಿ

‘ಮದುವೆಗೆ ಮೂರು ದಿನ ಮೊದಲು ಪಾರ್ಲರ್‌ಗಳಿಗೆ ಹೋಗಿ ಫೇಶಿಯಲ್ ಮಾಡಿಸಿಕೊಂಡರೆ ತ್ವಚೆ ಕಾಂತಿಯಾಗುವುದಿಲ್ಲ. ಯಾವ ಬಗೆಯ ಚರ್ಮ ನಿಮ್ಮದು ಎಂಬ ಪರೀಕ್ಷೆ ಮಾಡಿ ಅದಕ್ಕೆ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ’ ಎನ್ನುತ್ತಾರೆ ಚರ್ಮರೋಗ ತಜ್ಞ ನಿಶ್ಚಲ್. ಚಿಕಿತ್ಸೆ ಆರಂಭಿಸುವ ಮೊದಲು ಚರ್ಮವನ್ನು ಪರೀಕ್ಷಿಸುತ್ತಾರೆ. ಮುಖದ ಮೇಲೆ ಮೊಡವೆ, ಕಲೆ, ಬಿಸಿಲಿನಿಂದ ಕಪ್ಪಾಗಿದೆಯೇ ನೋಡಿ ಕ್ರೀಂ, ಮಾತ್ರೆಗಳನ್ನು ನೀಡುತ್ತಾರೆ. ಇದರೊಂದಿಗೆ ಕೆಮಿಕಲ್‌ ಪೀಲಿಂಗ್‌ ಚಿಕಿತ್ಸೆ ಕೂಡ ಮಾಡುತ್ತಾರೆ. ಇದರಿಂದ ಹಾನಿಯಾದ ಚರ್ಮದ ಪದರ ಹೋಗಿ, ಹೊಸ ಹೊಳಪಿನ ಚರ್ಮ ಬೆಳೆಯುತ್ತದೆ.

ಚರ್ಮ ಕಾಂತಿಯುತವಾಗಲು ಲೇಸರ್ ಚಿಕಿತ್ಸೆಯನ್ನೂ ಪಡೆದುಕೊಳ್ಳಬಹುದು. ಇದು ಮುಖದಲ್ಲಿನ ನೆರಿಗೆ, ಕಪ್ಪು ವರ್ತುಲ, ಬಂಗು ಅಥವಾ ಯಾವುದೇ ರೀತಿಯ ಪಿಗ್ಮೆಂಟೇಶನ್ ಸಮಸ್ಯೆ ಇದ್ದರೆ ಕಡಿಮೆಯಾಗುತ್ತದೆ.

ಮೊಡವೆ, ಸಿಡುಬು ಗಾಯದಿಂದ ಮುಖದಲ್ಲಿ ಗುಳಿ ಬಿದ್ದಂತೆ ಆಗಿದ್ದರೆ ಅದಕ್ಕೂ ಲೇಸರ್‌ ಚಿಕಿತ್ಸೆ ಇದೆ. ಮುಖದಲ್ಲಿ ಹೆಚ್ಚು ರೋಮಗಳಿದ್ದರೂ ಲೇಸರ್‌ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚು ಖರ್ಚು ಮಾಡುವವರು ನೀವಾಗಿದ್ದರೆ ತುಟಿ, ಮೂಗು, ಗಲ್ಲ ಹಾಗೂ ಕೆನ್ನಯ ಆಕಾರ ತಿದ್ದುವ ಪುಟ್ಟ ಸರ್ಜರಿಗಳನ್ನೂ ಮಾಡಿಸಿಕೊಳ್ಳಬಹುದು.

ಕೂದಲಿನ ಆರೈಕೆ

ಚೆಲುವಾಗುವುದು ಎಂದರೆ ಕೂದಲನ್ನು ಕತ್ತರಿಸಿಕೊಳ್ಳುವುದು, ಬಣ್ಣ ಹಚ್ಚಿಕೊಳ್ಳುವುದು ಎಂದೇ ಅನೇಕರ ನಂಬಿಕೆ. ಆದರೆ ಮೇಕ್‌ಓವರ್‌ನಲ್ಲಿ ಕೂದಲಿನ ಆರೈಕೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಪ್ರತಿ ಹೈದಿನೈದು ದಿನಗಳಿಗೊಮ್ಮೆ ಕೂದಲಿಗೆ ಪ್ರೋಟಿನ್ ಪ್ಯಾಕ್, ಕೂದಲ ಹೊಳಪಿಗೆ ಮಾಸ್ಕ್‌, ಹೊಟ್ಟು, ಸೀಳು ಕೂದಲು ನಿವಾರಣೆಗೆ ಚಿಕಿತ್ಸೆ ನೀಡುತ್ತಾರೆ. ಬೊಕ್ಕ ತಲೆ ಸಮಸ್ಯೆಗೂ ಚಿಕಿತ್ಸೆ ಮಾಡಿಸುತ್ತಾರೆ.

ಮದುವೆಗೆ ವಾರವಿರುವಂತೆ ಕೂದಲು ಕತ್ತರಿಸುವುದು, ಕಲರಿಂಗ್, ಕೆಮಿಕಲ್ ಸ್ಟ್ರೈಟ್‌ನಿಂಗ್ ಮಾಡುತ್ತಾರೆ. ಮದುವೆಗೆ ಉದ್ದ ಜಡೆ ಇರಬೇಕು. ಹಾಗಾಗಿ ಅದನ್ನೂ ಗಮನದಲ್ಲಿ ಇರಿಸಿಕೊಂಡು ಗಿಡ್ಡ ಕೂದಲಿರುವವರಿಗೆ ಕೃತಕ ಕೂದಲಿನ ಅಟ್ಯಾಚ್‌ಮೆಂಟ್‌ಗಳನ್ನು ಹಾಕಿಕೊಡುತ್ತಾರೆ.

ಈ ಮೇಕ್‌ಓವರ್‌ನಲ್ಲಿ ಮದುಮಕ್ಕಳಿಗೆ ಹಲ್ಲಿನ ಚಿಕಿತ್ಸೆ, ಜಿಮ್, ಯೋಗ, ಏರೊಬಿಕ್ಸ್‌, ಅಡುಗೆ ತರಬೇತಿಯೂ ಇರುತ್ತದೆ. ಅವಶ್ಯ ಇದ್ದಲ್ಲಿ ಹುಡುಗ ಹುಡುಗಿ ಕುಟುಂಬದವರನ್ನು ಕೂರಿಸಿ ಆಪ್ತ ಸಮಾಲೋಚನೆ ತರಗತಿಯನ್ನೂ ಮಾಡುತ್ತಾರೆ.

ದಿರಿಸು ಸಂಯೋಜನೆ

ಮದುವೆಗೆ ರೇಷ್ಮೆ ಸೀರೆ ಖರೀದಿಸುವುದು ವಾಡಿಕೆ. ಈಗ ವಸ್ತ್ರ ವಿನ್ಯಾಸಕರು ಬೇಕಾದ ರೀತಿಯಲ್ಲಿ ದಿರಿಸನ್ನು ತಯಾರಿಸಿಕೊಡುತ್ತಾರೆ. ‘ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಿದೆ. ನಮಗೆ ಹೊಸದಾಗಿ ಏನನ್ನೂ ವಿನ್ಯಾಸ ಮಾಡಲು ಕೊಡುವುದಿಲ್ಲ, ಅವರೇ ಹೊಸ ಬಗೆ ರವಿಕೆ ವಿನ್ಯಾಸ, ಲೆಹೆಂಗಾ ವಿನ್ಯಾಸಗಳ ಚಿತ್ರವನ್ನು ತೆಗೆದುಕೊಂಡು ಬಂದಿರುತ್ತಾರೆ. ಅದನ್ನು ತೋರಿಸಿ ಇಂಥದ್ದೇ ಬೇಕು ಎನ್ನುತ್ತಾರೆ. ಇದರಿಂದ ನಮ್ಮ ಕ್ರಿಯಾಶೀಲತೆಗೂ ಪೆಟ್ಟುಬೀಳುತ್ತದೆ. ಆದರೆ ಕೆಲವರು ನಿಜಕ್ಕೂ ಅದ್ಭುತ ವಿನ್ಯಾಸಗಳನ್ನು ತಂದಿರುತ್ತಾರೆ. ಒಟ್ಟಾರೆ ಮದುಮಕ್ಕಳು ಖುಷಿಯಾದರೆ ಸಾಕು’ ಎನ್ನುತ್ತಾರೆ ಮೇಕ್‌ಓವರ್ ಆರ್ಟಿಸ್ಟ್‌ ಸೌಮ್ಯ ರವಿಚಂದ್ರ.

ಹುಡುಗ ಹುಡುಗಿ ಇಬ್ಬರ ದಿರಿಸು ಹೊಂದಿಕೊಳ್ಳುವಂತೆ, ಬೀಗರು, ಭಾವ, ಅತ್ತಿಗೆ... ಹೀಗೆ ಮನೆಯವರೂ ವಿಶೇಷವಾಗಿ ವಸ್ತ್ರವಿನ್ಯಾಸ ಮಾಡಿಸಿಕೊಳ್ಳಬೇಕು. ಆದರೆ ಮದುಮಕ್ಕಳ ಬಿಟ್ಟು ಬೇರೆಯವರಿಗೂ ವಸ್ತ್ರ ವಿನ್ಯಾಸ ಮಾಡಬೇಕು ಎಂದರೆ ಅದಕ್ಕೆ ಬೇರೆ ಹಣ ಕಟ್ಟಬೇಕು.

ಫೋಟೊಗ್ರಫಿ ಮತ್ತು ವಿಡಿಯೊಗ್ರಫಿ

ಮದುವೆಗೆ ಮೊದಲು ಫೋಟೊಶೂಟ್ ಮಾಡಿಸುವುದು, ಸಣ್ಣ ವಿಡಿಯೊ ಮಾಡಿಸುವುದು ಈಗ ಟ್ರೆಂಡ್‌ನಲ್ಲಿ ಇದೆ. ಇದರಲ್ಲಿ ವಿಭಿನ್ನ ಥೀಮ್‌ನಲ್ಲಿ ಫೋಟೊಗ್ರಫಿ ಮಾಡುತ್ತಾರೆ. ಈಗ ನೀರಿನೊಳಗೆ ಫೋಟೊಶೂಟ್‌ ಮಾಡಿಸುವುದು ಜನಪ್ರಿಯವಾಗಿದೆ. ಹಾಗೇ ಮದುವೆ ದಿನದ ಧಾರೆ, ಆರತಕ್ಷತೆ, ಬಳೆ ಶಾಸ್ತ್ರ ಹೀಗೆ ಎಲ್ಲಾ ಕಾರ್ಯಕ್ರಮಕ್ಕೂ ಪೂರಕವಾಗಿ ಛಾಯಾಗ್ರಾಹಕರನ್ನು ವ್ಯವಸ್ಥೆ ಮಾಡಲಾಗುತ್ತದೆ.

ಅರಿಶಿಣ ಶಾಸ್ತ್ರದ ದಿನ ಸಂಗೀತ ಕಾರ್ಯಕ್ರಮ, ಕುಟುಂಬದವರೊಂದಿಗೆ ಮನರಂಜನೆಗಾಗಿ ಡಿಜೆ ಕರೆಸಿ ಪಾರ್ಟಿ ಆಯೋಜಿಸುವುದು, ಬ್ಯಾಚುಲರ್ ಪಾರ್ಟಿ, ಹಾಗೇ ಮದುವೆ ದಿನ ಬೇಕಾದ ಮೇಕಪ್, ಕೇಶ ವಿನ್ಯಾಸ, ಸೀರೆ ಉಡಿಸುವುದು ಎಲ್ಲವೂ ಮೇಕ್‌ಓವರ್ ಪ್ಯಾಕೇಜ್‌ನಲ್ಲಿ ಬರುತ್ತದೆ.

ಮೇಕ್‌ಓವರ್‌ ಆರ್ಟಿಸ್ಟ್‌ ಸೌಮ್ಯ ರವಿಚಂದ್ರ ಸಂಪರ್ಕ ಸಂಖ್ಯೆ 8970477668

ಫೇಸ್‌ಬುಕ್ ಕೊಂಡಿ: bit.ly/2gG5TBf

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry