ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಹುಟ್ಟಿಸುವುದಿಲ್ಲ; ಕುತೂಹಲಕ್ಕೇನೂ ಕೊರತೆಯಿಲ್ಲ

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಕತೆ ಗೊತ್ತಿಲ್ಯಾ? ಸುಭದ್ರಾ ಕಲ್ಯಾಣ ಆಟ ಮುಗಿಸ್ಕಂಡು ಹನಿ ಎಣ್ಣೆ ಹಾಯ್ಕಂಡು ಹೋಗ್ತಿದ್ನಾ ಇಲ್ಯ.. ಅತ್ಲಬದೀಗೆ ಮನ್ಸ್‌ ಎಳ್ದಂಗಾತು. ಹೋಗ್‌ ಅತ್ಲಾಗೋಗ್‌ ನಿಂತೆ ನಾನು. ನಿತ್ತದ್ದೇ ನಿತ್ತದ್ದ... ಎಂಥದ ಏನ.. ಹೀಂಗೆ ಹೀಂಗೆ ಹೀಂಗೆ ಹೀಂಗೆ ಹೀಂಗ್‌ ಬಂದ್‌ ಹೀಂಗೆ ಹೋಗ್ತು. ಆಶ್ಚರ್ಯ ಆಗೋತು ನಂಗೆ. ಮತ್ತೂ ಹೀಂಗ್ ಮಾಡಿ ನಿತ್ಕಂಡು ನೋಡ್ದೆ. ಅಷ್ಟಾದ್ದೇ ಆಗಿದ್ದು. ಡಣ್‌ ಅಂತು ನೋಡು... ಗಂಟೆ ಸೌಂಡು.. ಅದು ಕೇಳಿದ್ದೇ ಕೇಳಿದ್ದು.. ನಾ ಹೆದ್ರಿ ಕಂಗಾಲಾಗಿ ಹೋದೆ..’

ಹೀಗೆ ಚೌಕಿಮನೆಯಲ್ಲಿ ಆ ಕಲಾವಿದ ತನ್ನ ಸಹಕಲಾವಿದನಿಗೆ ತಾನು ದೆವ್ವ ಕಂಡ ಅನುಭವವನ್ನು ಹೇಳುತ್ತಿದ್ದರೆ ಎದುರಿಗೆ ಕೂತಿದ್ದವನ ಎದೆಯಲ್ಲಿಯೂ ಭಯದ ಗಂಟೆ ಡಣ್‌ ಎಂದು ಹೊಡೆದುಕೊಳ್ಳುತ್ತದೆ. ಅದು ಅವನ ಕಣ್ಣುಗಳಲ್ಲಿ ಎದ್ದು ಕಾಣುತ್ತದೆ.

ಇದು ಒಂದು ಘಟನೆಯಷ್ಟೇ. ಇಂಥದ್ದೇ ಹಲವು ದೆವ್ವದ ಅನುಭವಗಳನ್ನು ಇಟ್ಟುಕೊಂಡು 27 ನಿಮಿಷದ ‘ಕೆಟ್ಟಭ್ಯಾಸ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದಾರೆ ಗಿರಿದಾಸ್‌ ಭಟ್‌.

ಅವರು ಇದನ್ನು ಹಾರರ್‌ ಪ್ರಕಾರಕ್ಕೆ ಸೇರಿಸಿದರೂ ಭಯಬೀಳಿಸುವಂಥ ವಿಶೇಷ ಅಂಶಗಳು ಈ ಕಿರುಚಿತ್ರದಲ್ಲೇನೂ ಇಲ್ಲ. ಅನುರಾಗ್‌ ಎಂಬ ಹುಡುಗನಿಗೆ ಅತೀಂದ್ರಿಯ ಶಕ್ತಿಗಳು ಮತ್ತು ಸಾವಿನ ನಂತರದ ಬದುಕಿನ ಬಗ್ಗೆ ವಿಪರೀತ ಕುತೂಹಲ. ತನಗೆ ಗೊತ್ತಿದ್ದವರು, ಎದುರಿಗೆ ಸಿಕ್ಕವರನ್ನೆಲ್ಲ ಅವನು ದೆವ್ವದ ಕಥೆಗಳನ್ನು ಹೇಳುವಂತೆ ಪೀಡಿಸುತ್ತಾನೆ. ಅದು ಅವನಿಗೊಂದು ಚಟವಾಗಿ ಹೋಗಿದೆ.

ಈ ಚಿತ್ರದಲ್ಲಿ ಬರುವ ಹಲವು ದೆವ್ವದ ಕಥೆಗಳನ್ನು ಪೋಣಿಸಲು ಅನುರಾಗನ ಪಾತ್ರವನ್ನು ಸೂತ್ರದಂತೆ ಬಳಸಿಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಿನ ಯಾವ ಔಚಿತ್ಯವೂ ಆ ಪಾತ್ರಕ್ಕಿಲ್ಲ. ಆ ಒಂದು ಉದ್ದೇಶವನ್ನು ಮೀರಿ ಇಡೀ ಚಿತ್ರದ ಯಾವ ಪಾತ್ರಗಳೂ ಬೆಳೆಯುವುದೂ ಇಲ್ಲ. ಚಿತ್ರದ ಆರಂಭದಲ್ಲಿ ಹೇಳಿದ ಒಂದು ದೆವ್ವದ ಕಥೆಗೆ ಕೊನೆಯಲ್ಲೊಂದು ತಾರ್ಕಿಕ ಕಾರಣ ನೀಡಿ ಚಿತ್ರ ಮುಗಿಸಿದ್ದಾರೆ. ಮಧ್ಯದಲ್ಲಿ ಬರುವ ಹಲವು ಪಾತ್ರಗಳು, ಅವರು ಹೇಳುವ ಘಟನೆಗಳಲ್ಲಿ ಒಂದಿಷ್ಟು ಕತ್ತರಿಸಿದ್ದರೂ ಅಥವಾ ಇನ್ನೊಂದಿಷ್ಟು ಸೇರಿಸಿದ್ದರೂ ಒಟ್ಟಾರೆ ಚಿತ್ರದ ಮೇಲೆ ಯಾವ ಪರಿಣಾಮವನ್ನೂ ಬೀರುತ್ತಿರಲಿಲ್ಲ. ಹಾಗೆಯೇ ಈ ಕಿರುಚಿತ್ರಕ್ಕೆ ‘ಕೆಟ್ಟಭ್ಯಾಸ’ ಎಂದು ಹೆಸರಿಟ್ಟಿದ್ದಕ್ಕೂ ಅಂಥ ಸಮರ್ಥನೆ ಸಿಗುವುದಿಲ್ಲ.

ಕಥೆಯ ದೃಷ್ಟಿಯಿಂದ ಅಂಥ ವಿಶೇಷತೆಯೇನೂ ಇಲ್ಲದ ಈ ಕಿರುಚಿತ್ರ ಗಮನಸೆಳೆಯುವುದು ತಾಂತ್ರಿಕ ಕಾರಣಗಳಿಗಾಗಿ. ವೃತ್ತಿಪರವಾದ ಛಾಯಾಗ್ರಹಣ ಮತ್ತು ಸಮರ್ಥ ಹಿನ್ನೆಲೆ ಸಂಗೀತ ಈ ಚಿತ್ರದ ನಿಜವಾದ ಆಸ್ತಿ. ಸನ್ನಿವೇಶಗಳಲ್ಲಿ ಇಲ್ಲದ ಭಯವನ್ನು ಸಂಗೀತ ಮತ್ತು ಛಾಯಾಗ್ರಹಣದ ಮೂಲಕ ಹುಟ್ಟಿಸುವ ತಂತ್ರ ಇಲ್ಲಿ ಫಲಿಸಿದೆ.

ರಾತ್ರಿ ತಿಂಗಳ ಬೆಳಕಲ್ಲಿ ನೆಲದಿಂದ ಏಳುವ ತರಗೆಲೆಗಳು, ಕಿವಿಯಲ್ಲಿ ಗುಂಯ್ಗುಟ್ಟು ಎದೆಯಲ್ಲಿ ಭಯದ ಬೀಜ ಬಿತ್ತುವ ಜೀರುಂಡೆಗಳ ಶಬ್ದ. ಅತ್ತಿತ್ತ ಹೋಯ್ದಾಡುತ್ತಲೇ ಚಿತ್ತ ಚಂಚಲ ಮಾಡುವ ಛಾಯಾಗ್ರಹ, ಬೆಳಕನ್ನು ಪೂರಕವಾಗಿ ಬಳಸಿಕೊಂಡಿರುವ ರೀತಿ, ವೃತ್ತಿಪರ ಧ್ವನಿವಿನ್ಯಾಸ ಎಲ್ಲವೂ ಈ ಚಿತ್ರಕ್ಕೆ ಪ್ರೇಕ್ಷಕನನ್ನು ಹಿಡಿದಿಡುವ ಶಕ್ತಿಯನ್ನು ಕಲ್ಪಿಸಿದೆ. ಕಲಾವಿದರ ಅಭಿನಯವೂ ಸಹಜವಾಗಿಯೇ ಮೂಡಿಬಂದಿದೆ. ಕನ್ನಡದ ಬೇರೆ ಬೇರೆ ಪ್ರಾದೇಶಿಕ ರೂಪಗಳನ್ನು ಬಳಸಿಕೊಂಡಿರುವ ರೀತಿಯೂ ಈ ಚಿತ್ರಕ್ಕೊಂದು ಗಟ್ಟಿ ಚೌಕಟ್ಟು ಒದಗಿಸಿದೆ.

ಒಟ್ಟಾರೆ ಸಿನಿಮಾ ಮಾಧ್ಯಮವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮತ್ತು ಅದಕ್ಕೆ ಸಾಕಷ್ಟು ಸಿದ್ಧತೆಯನ್ನೂ ಮಾಡಿಕೊಂಡಿರುವವರು ಮಾಡಿರುವ ಕಿರುಚಿತ್ರವಿದು ಎಂಬುದಕ್ಕಂತೂ ‘ಕೆಟ್ಟಭ್ಯಾಸ’ದಲ್ಲಿ ಹೇರಳ ಸೂಚನೆಗಳು ಸಿಗುತ್ತವೆ. ಮುಂದಿನ ಪ್ರಯತ್ನಗಳಲ್ಲಿ ತಾಂತ್ರಿಕತೆಯಷ್ಟೇ ಕಥೆ– ಚಿತ್ರಕಥೆಯ ಮೇಲೂ ಗಮನ ಹರಿಸಬೇಕಾದ ಅವಶ್ಯಕತೆಯನ್ನೂ ಈ ಕಿರುಚಿತ್ರ ಹೇಳುವಂತಿದೆ. ಅವೇನೇ ಇದ್ದರೂ ಗಿರಿದಾಸ ಭಟ್‌ ಅವರ ಮುಂದಿನ ಪ್ರಯತ್ನದ ಬಗ್ಗೆ ಕುತೂಹಲ ಹುಟ್ಟಿಸುವಲ್ಲಿಯಂತೂ ‘ಕೆಟ್ಟಭ್ಯಾಸ’ ಯಶಸ್ವಿಯಾಗುತ್ತದೆ.

ಕಿರುಚಿತ್ರವನ್ನು ಯುಟ್ಯೂಬ್‌ನಲ್ಲಿ ಈವರೆಗೆ 10,900 ಜನರು ವೀಕ್ಷಿಸಿದ್ದಾರೆ.

***

ಹೆಸರು: ಕೆಟ್ಟಭ್ಯಾಸ
ನಿರ್ದೇಶನ: ಗಿರಿದಾಸ ಭಟ್‌
ಛಾಯಾಗ್ರಹಣ: ಗಿರಿದಾಸ್‌ ಭಟ್‌, ಗುರುಪ್ರಸಾದ್‌ ಸ್ವಾಮಿ
ಸಂಕಲನ/ ಧ್ವನಿ ತಂತ್ರಜ್ಞ: ಶರತ್‌ ವಶಿಷ್ಠ್
ಹಿನ್ನೆಲೆ ಸಂಗೀತ: ಉದಿತ್‌ ಹರಿತಸ್‌
ತಾರಾಗಣ: ಅನುರಾಗ್‌, ಚಂದನ್‌ ಆಚಾರ್‌, ರಜತ್‌ ನಾಗಲಾಪುರ, ಹರ್ಷ ಹಳೇಮನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT