ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರುವುದು ಬಿಟ್ಟು ಹಾಡಿದ ಬೆಹ್ರಂ

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನಾನು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಶಾಲಾ ದಿನಗಳಲ್ಲಿ ಕಾಯರ್‌ಗಳಲ್ಲಿ ಹಾಡುತ್ತಿದ್ದೆ. ಬೆಳೆದಂತೆ ಶಾಲೆ–ಕಾಲೇಜುಗಳಲ್ಲೂ ಹಾಡಿಗೆ ದನಿಯಾಗುತ್ತಿದ್ದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ಕಟ್ಟಿಕೊಂಡಿದ್ದ ಬ್ಯಾಂಡ್‌ನಲ್ಲಿ ನಾನೂ ಇದ್ದೆ. ಬಾಸ್‌ ಗಿಟಾರ್‌ ಹಿಡಿದು ನುಡಿಸುವುದು ನನಗೊಂದು ಗೀಳಾಗಿತ್ತು. ಆದರೆ ಸಂಗೀತ ಯಾವತ್ತೂ ನನ್ನ ವೃತ್ತಿಯ ಆಯ್ಕೆ ಆಗಿರಲಿಲ್ಲ. ಖುಷಿಗಾಗಿ ಹಾಡುತ್ತಿದ್ದೆ, ಇಂಪಿನ ಲೋಕದಲ್ಲಿ ಒಂದಾಗುತ್ತಿದ್ದೆ.

ನನ್ನ ಪುಟ್ಟ ಕಂಗಳು ಆಕಾಶದಲ್ಲಿ ಹಾರುವ ವಿಮಾನವನ್ನು ಎಂದೂ ಮಿಸ್‌ ಮಾಡಿಕೊಳ್ಳುತ್ತಿರಲಿಲ್ಲ. ಶಬ್ದ ಕೇಳಿದಾಗಲೆಲ್ಲಾ ಕಿಟಕಿಯಾಚೆಗಿನ ನಭದತ್ತ ಮುಖ ಮಾಡುತ್ತಿದ್ದೆ. ಹೀಗೆ ಹಾರುವ ಹಕ್ಕಿಯ ಮೋಹಕ್ಕೆ ಬಿದ್ದ ನನ್ನ ಮನಸ್ಸಿನಲ್ಲಿ ಚಿಕ್ಕಂದಿನಿಂದಲೇ ಪೈಲಟ್ ಕನಸು ಮೊಳೆಯಿತು. ಹಾರಬೇಕು, ದೇಶ ಸುತ್ತಬೇಕು, ಪೈಲಟ್‌ ಆಗಬೇಕು ಎಂಬುದೇ ಮನದಾಳದ ಗುರಿಯಾಗಿಬಿಟ್ಟಿತು. ಹೀಗಾಗಿ ಕಾಲೇಜು ಮುಗಿಯುತ್ತಿದ್ದಂತೆ ನಾನು ಅಮೆರಿಕಕ್ಕೆ ಹಾರಿದೆ. ಅಲ್ಲಿಯೇ ಪೈಲಟ್‌ ತರಬೇತಿ ಪಡೆದೆ. ಬಹಳ ನಿಷ್ಠೆಯಿಂದ ಪಾಠಗಳನ್ನು ಅರಗಿಸಿಕೊಳ್ಳುತ್ತಾ ಹೋದೆ. ಒಂದು ದಿನ ಹಾರುವ ವಿಮಾನಕ್ಕೆ ಸೂತ್ರಧಾರನಾಗುವ ಅವಕಾಶ ಸಿಕ್ಕೇಬಿಟ್ಟಿತು.

ಅಂದುಕೊಂಡಿದ್ದನ್ನು ಸಾಧಿಸಿದ ಖುಷಿ. ಬಾನಂಗಳದ ಮೋಡ ಸೀಳುತ್ತಾ ಬೇರೆ ಬೇರೆ ದೇಶ ಸುತ್ತಿದೆ. ಖುಷಿಯಾಗಿಯೇ ಇದ್ದೆ. ಒಮ್ಮೆ ಹೀಗೆ ಬೆಂಗಳೂರಿಗೆ ಬಂದಿದ್ದೆ. ಸಂಗೀತ ಪ್ರಿಯ ಮನಸ್ಸಿನ ಕೆಲವರ ಪರಿಚಯವಾಯಿತು. ಅಲ್ಲಿಗೆ ನಾನು ಮಾಡಬೇಕಿರುವುದು ಬೇರೆ ಕೆಲಸ, ಪೈಲಟ್‌ ಆಗಿ ದೇಶ ದೇಶ ಸುತ್ತುವುದು ನನ್ನ ಜೀವನದ ಉದ್ದೇಶವಲ್ಲ ಎನಿಸಿತು.

ಬೆಂಗಳೂರಿನ ‘ಬೆಸ್ಟ್‌ ಕೆಪ್ಟ್‌ ಸೀಕ್ರೆಟ್‌’ ಎನ್ನುವ ಬ್ಯಾಂಡ್‌ ಸದಸ್ಯನಾದೆ. ನನ್ನ ಹಾಡು, ಬ್ಯಾಂಡ್‌ ನಿಧಾನವಾಗಿ ಜನಪ್ರಿಯತೆ ಗಳಿಸಲಾರಂಭಿಸಿತು. ಅಂದೇ ನಿರ್ಧರಿಸಿ ಪೈಲಟ್‌ ಕೆಲಸಕ್ಕೆ ರಾಜೀನಾಮೆ ನೀಡಿ ಹಾಡುವುದನ್ನೇ ವೃತ್ತಿಯಾಗಿಸಿಕೊಂಡೆ. ಅಲ್ಲಿಂದ ಶುರುವಾದ ನನ್ನ ಸಂಗೀತ ಪಯಣ ಎಗ್ಗಿಲ್ಲದೆ ಯಶಸ್ಸಿನ ದಾರಿಯಲ್ಲಿ ಸಾಗುತ್ತಿದೆ.

ಶಾಲೆ, ವಿವಿಧ ಬಗೆಯ ಕಾರ್ಯಕ್ರಮ, ಫ್ಯಾಷನ್‌ ಲೋಕದ ವಿವಿಧ ಕಾರ್ಯಕ್ರಮಗಳು ಹೀಗೆ ನಮ್ಮ ಬ್ಯಾಂಡ್‌ ನಿರಂತರವಾಗಿ ಕಾರ್ಯಕ್ರಮ ನೀಡುತ್ತಲೇ ಇದೆ. ದೇಶದ 30 ನಗರಗಳಲ್ಲಿ ಇದುವರೆಗೆ ಸಂಗೀತ ಕಾರ್ಯಕ್ರಮ ನೀಡಿದ್ದೇವೆ.

ಹಾಡುವುದು ಹಾಗೂ ಗಿಟಾರ್‌ ನುಡಿಸುವ ಮನಸ್ಸಾದಾಗ ನನಗೆ 14 ವರ್ಷವಿರಬಹುದು. ಸ್ವಪ್ರಯತ್ನದಿಂದಲೇ ಈ ಎರಡೂ ವಿದ್ಯೆಯನ್ನು ನಾನು ನನ್ನದಾಗಿಸಿಕೊಂಡೆ. ಹವ್ಯಾಸ ಎಂದುಕೊಂಡು ಪ್ರಾರಂಭಿಸಿದೆ. ತುಂಬಾ ನಿಧಾನ ಕಲಿಕೆಯದು. ಕೊನೆಗೂ ಪ್ರಯತ್ನದ ಬೆನ್ನು ಹತ್ತಿ ಕಲಿತೆ. ಈ ಮಟ್ಟಕ್ಕೆ ತಲುಪಿದ್ದೇನೆ.

ಹಿಂದೂಸ್ತಾನಿ ಅಥವಾ ಕರ್ನಾಟಕ ಸಂಗೀತವಾದರೆ ಗುರುವಿನ ಅವಶ್ಯಕತೆ ಇದ್ದೇ ಇದೆ. ಆದರೆ ನಾನು ಕಲಿತದ್ದು ಪಾಶ್ಚಾತ್ಯ ಸಂಗೀತ. ಈ ಶೈಲಿ ಗುರು ಇಲ್ಲದೆಯೂ ಕಲಿಯಬಹುದು. ನನ್ನ ಸುತ್ತಮುತ್ತಲಿನ ವಾತಾವರಣ, ಮನೆಯಲ್ಲಿ ಕೇಳುತ್ತಿದ್ದುದು ಪಾಶ್ಚಾತ್ಯ ಸಂಗೀತವನ್ನೇ. ಇಂಗ್ಲಿಷ್‌ ಸಂಗೀತ ಹಾಗೂ 1980 ಹಾಗೂ 1990ಯ ರಾಕ್‌ ಶೈಲಿಯ ಹಾಡುಗಳು ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ್ದವು. ಹೀಗಾಗಿ ನಾನೂ ಅದನ್ನೇ ಆರಾಧಿಸಿದೆ. ನನ್ನ ಸಂಗೀತ ಪಯಣಕ್ಕೆ ಅನೇಕ ಸಂಗೀತಗಾರರು ಸ್ಫೂರ್ತಿ. ಮುಖ್ಯವಾಗಿ ಮೈಕೆಲ್‌ ಜಾಕ್ಸನ್‌ ನಾನು ಆರಾಧಿಸುವ ಹಾಡುಗಾರ. ಫೆರಿ ಮರ್ಕ್ಯುರಿ, ಕೋಲ್ಡ್‌ಪ್ಲೇ ಬ್ಯಾಂಡ್‌ ಕೂಡ ನನಗೆ ಇಷ್ಟ.

ಅಪ್ಪ–ಅಮ್ಮ ಎಂದಿಗೂ ನನ್ನ ಕನಸಿಗೆ ಇಲ್ಲ ಎಂದೇ ಇಲ್ಲ. ಪೈಲಟ್‌ ಆಗುತ್ತೇನೆ ಎಂದಾಗಲೂ ಅವರು ಖುಷಿಯಿಂದಲೇ ಒಪ್ಪಿಕೊಂಡರು. ಆದರೆ ಆ ಕೆಲಸ ಬಿಟ್ಟು ಹಾಡುತ್ತೇನೆ ಎಂದಾಗ ಅವರಿಗೂ ಶಾಕ್‌ ಆಯಿತು. ‘ಬಾಲ್ಯದ ಕನಸು, ಈಡೇರಿದ ಕನಸು ಬಿಟ್ಟು ಇನ್ಯಾವುದೋ ಮಾಡುತ್ತಾನಲ್ಲ’ ಎಂದು ಅವರು ಮೊದಲು ಚಕಿತರಾದರು. ಆದರೆ ನನ್ನ ಮನಸ್ಸು ಬೇಡುವುದು ಇದನ್ನೇ ಎಂದು ಅರಿತಾಗ ಒಪ್ಪಿದರು. ನಾನೇನೇ ಮಾಡಿದರೂ ಅತ್ಯುತ್ತಮವಾಗಿ ಮಾಡಬೇಕು ಎನ್ನುವುದಷ್ಟೇ ಅವರ ಆಸೆ.

ಯಾವುದೇ ಕೆಲಸವಾಗಲಿ ಪ್ರಾರಂಭದಲ್ಲಿ ಕಷ್ಟವಿದೆ. ಆದರೆ ಅದರಲ್ಲಿ ನಾವು ಪ್ರಾವೀಣ್ಯ ಗಳಿಸುತ್ತಿದ್ದಂತೆ ಹೆಸರು, ಹಣ ಎಲ್ಲವೂ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಸಂಗೀತ ಕ್ಷೇತ್ರದಲ್ಲಿ ಒಮ್ಮೆ ಗುರುತಿಸಿಕೊಂಡರೆ ಪೈಲಟ್‌ ಗಳಿಸುವುದಕ್ಕಿಂತಲೂ ಹೆಚ್ಚಿನ ಹಣ ಗಳಿಸಬಹುದು. ಹಣವನ್ನೇ ಮುಖ್ಯವಾಗಿರಿಸಿಕೊಂಡರೆ ವಿಭಿನ್ನ ದಾರಿಯ ಅನುಭವವನ್ನೇ ಕಳೆದುಕೊಂಡು ಬಿಡುತ್ತೇವೆ.

ಬದುಕಿನ ಎಲ್ಲವೂ ಆಗಿರುವ ಸಂಗೀತ ಕ್ಷೇತ್ರದಲ್ಲಿ ನಾನು ಮಹತ್ತರವಾದುದನ್ನು ಏನಾದರೂ ಸಾಧಿಸಬೇಕು. ಭಾರತೀಯ ರಾಕ್‌ ಸಂಗೀತವನ್ನು ದೇಶ–ವಿದೇಶಗಳಲ್ಲಿ ಜನಪ್ರಿಯಗೊಳಿಸಬೇಕು. ನಾನು ಮಾಡುವ ಸಂಗೀತ ಪ್ರಪಂಚದಾದ್ಯಂತ ಮನ್ನಣೆ ಗಳಿಸಬೇಕು. ಇದೇ ಪ್ರಯತ್ನದಲ್ಲಿ ನಮ್ಮ ಬ್ಯಾಂಡ್‌ ಮೂಲಕ ಎರಡು ವಿಡಿಯೊ ಹಾಡುಗಳನ್ನು ಕೂಡ ಮಾಡಿದ್ದೇವೆ. ಒಳ್ಳೆಯ ಪ್ರತಿಕ್ರಿಯೆಯೂ ಇದೆ. ಮೊದಲ ವಿಡಿಯೊ ‘ಕಾಂಟ್‌ ಲೆಟ್‌ ಯು ಗೊ’, ಎರಡನೆಯದ್ದು ‘ಮೂವಿಂಗ್‌ ಆನ್‌’ ಇತ್ತೀಚೆಗೆ ಬಿಡುಗಡೆಗೊಂಡಿದೆ. ಟೀವಿಯಲ್ಲೂ ಈ ಹಾಡು ಪ್ರಸಾರವಾಗುತ್ತಿದ್ದು ಜನಮನ್ನಣೆ ಗಳಿಸುತ್ತಿದೆ. ನಮ್ಮ ವಿಡಿಯೊಗಳನ್ನು ಸಾಹಿತ್‌ ಆನಂದ್‌ ನಿರ್ದೇಶನ ಮಾಡಿದ್ದಾರೆ. ವಿಡಿಯೊ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿರಬೇಕು ಎಂದು ವಿಶೇಷ ಮುತುವರ್ಜಿ ವಹಿಸಿ ನಿರ್ವಹಿಸಿದ್ದೇವೆ. ಎರಡೂ ದುಬಾರಿ ವೆಚ್ಚದ ವಿಡಿಯೊಗಳು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT