ಆ ಬೆಟ್ಟದಲ್ಲಿ... ಬೆಳದಿಂಗಳಲ್ಲಿ...

ಸೋಮವಾರ, ಜೂನ್ 17, 2019
27 °C

ಆ ಬೆಟ್ಟದಲ್ಲಿ... ಬೆಳದಿಂಗಳಲ್ಲಿ...

Published:
Updated:
ಆ ಬೆಟ್ಟದಲ್ಲಿ... ಬೆಳದಿಂಗಳಲ್ಲಿ...

ಕಣ್ಣು ಹಾಯಿಸಿದಷ್ಟು ದೂರ ಹಚ್ಚ ಹಸಿರಿನ ಪೈರು, ಅಲ್ಲಲ್ಲಿ ಕಾಣುವ ಗುಬ್ಬಚ್ಚಿ, ಮಧ್ಯಾಹ್ನದ ಹೊತ್ತಿಗೆ ಬುತ್ತಿಗಂಟಿನಲ್ಲಿ ಮುದ್ದೆಯೋ, ಜೋಳದ ರೊಟ್ಟಿಯೋ ನೆಂಚಿಕೊಳ್ಳಲು ಕೆಂಡದಲ್ಲಿ ಸುಟ್ಟ ಹಸಿಮೆಣಸಿನಕಾಯಿ, ಜೊತೆಗೆ ಗಟ್ಟಿಯಾದ ಕೆನೆ ಮೊಸರು, ಸಂಜೆಯಾಗುತ್ತಲೇ ದನಕರುಗಳ ಕೊರಳಗೆಜ್ಜೆಯ ಕಲರವದೊಂದಿಗೆ ಮನೆಗೆ ವಾಪಸ್‌ ಹೋಗುವ ಸಂಭ್ರಮ, ರಾತ್ರಿ ಕುಟುಂಬದೊಂದಿಗೆ ಬೆಳದಿಂಗಳೂಟದ ಸಂತಸ...

ಇದೆಲ್ಲಾ ನಗರವಾಸಿಗಳಿಗೆ ಕನಸೇ ಸರಿ. ಆದರೆ, ಇಂಥದ್ದೊಂದು ಕನಸನ್ನು ನನಸು ಮಾಡಲು ಹೊರಟಿದೆ ಜಯನಗರ ಮೂರನೇ ಬ್ಲಾಕ್‌ನ ‘ಮಣ್ಮಯಿ’ ಸುಸ್ಥಿರ ಕೃಷಿ ಬಳಗ. ಚಾಮರಾಜನಗರ ಜಿಲ್ಲೆಯ ಬಿಳಿರಂಗನ ಬೆಟ್ಟದ ತಪ್ಪಲಲ್ಲಿರುವ ಅಮೃತಭೂಮಿಯಲ್ಲಿ ‘ಬೆಟ್ಟದ ತಪ್ಪಲಲ್ಲಿ ಒಂದು ದಿನ’ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

‘ಬೆಂಗಳೂರಿನಂಥ ಮಹಾನಗರಗಳಲ್ಲಿ ಬದುಕುತ್ತಿರುವ ಬಹುಪಾಲು ಜನರು ಹಳ್ಳಿಯ ಮೂಲದವರಾಗಿದ್ದರೂ, ಕೆಲಸದ ಜಂಜಾಟದಲ್ಲಿ ಮೂಲ ಬೇರುಗಳನ್ನೇ ಮರೆಯುವಂತಾಗಿದೆ. ‘ಬೆಟ್ಟದ ತಪ್ಪಲಲ್ಲಿ ಒಂದು ದಿನ’ ನಗರದಲ್ಲಿರುವವರಿಗೆ ಮರಳಿ ಮಣ್ಣಿನ ಸಂವೇದನೆಯನ್ನು ಬೆಸೆಯುವ ಕಾರ್ಯಕ್ರಮ'  ಎನ್ನುತ್ತಾರೆ ಮಣ್ಮಯಿ ಕಾರ್ಯಕರ್ತ ನಾರಾಯಣ್.

80 ಎಕರೆ ವಿಸ್ತೀರ್ಣದ ಅಮೃತಭೂಮಿಯಲ್ಲಿ ನ.4ರ ಬೆಳಿಗ್ಗೆ ಆರಂಭವಾಗುವ ಕಾರ್ಯಕ್ರಮ ಸಂಜೆ 5ರವರೆಗೆ ನಡೆಯಲಿದೆ. ಬೆಳೆದು ನಿಂತಿರುವ ಸಿರಿಧಾನ್ಯಗಳು, ಹಣ್ಣು ಮತ್ತು ತರಕಾರಿಗಳನ್ನು ನೋಡುತ್ತಾ, ಕೆಸರುಗದ್ದೆಯಲ್ಲಿ ಆಟವಾಡಿ, ಬೆಳದಿಂಗಳಲ್ಲಿ ಹಬ್ಬದ ಊಟವನ್ನು ಸವಿಯಲು ಇದು ವೇದಿಕೆಯಾಗಲಿದೆ. ಇದಲ್ಲದೆ, ಟೆಂಟ್‍ಸಿನೆಮಾ, ಜಾನಪದ ಹಾಡು ಮತ್ತು ಕುಣಿತ, ಮಕ್ಕಳಿಗೆ ಅಜ್ಜಿ ಕತೆಗಳು, ಪಕ್ಷಿ ವೀಕ್ಷಣೆ, ದೇಸಿ ಹೈನುಗಾರಿಕೆ ಪ್ರಾತ್ಯಕ್ಷಿಕೆ, ಕೃಷಿ-ಆಹಾರ-ಪರಿಸರ ಸಂವಾದ, ತಮ್ಮ ಪ್ರೀತಿಪಾತ್ರರ ನೆನಪಿನಲ್ಲಿ ಅಥವಾ ಯಾವುದಾದರೂ ನೆಪದಲ್ಲಿ ಒಂದು ಗಿಡ ನೆಡುವ ಅಭಿಯಾನವನ್ನೂ ಕಾರ್ಯಕ್ರಮ ಒಳಗೊಂಡಿರುವುದು ವಿಶೇಷ ಎನಿಸಿದೆ.

ಮಣ್ಮಯಿ ಸುಸ್ಥಿರ ಕೃಷಿ ಬಳಗ ಎನ್ನುವುದು ಕೃಷಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಿರುವ ಯುವಜನರ ಗುಂಪು. ರಾಜ್ಯದ ವಿವಿಧ ಜಿಲ್ಲೆಗಳ ಯುವಕೃಷಿಕರು ಇದರ ಭಾಗ. ಕೃಷಿಯನ್ನು ಬೆಂಬಲಿಸುವ ಕೃಷಿಯೇತರ ಸಮುದಾಯದವರೂ, ಅರೆಕೃಷಿಕರೂ ಕೂಡ ಇದರ ಒಡನಾಡಿಗಳು.

ಮಾಹಿತಿಗೆ ಮೊ- 96111 05029, 97437 31223

***

ಮಗಳಿಗೆ ಕೃಷಿ ಪರಿಚಯಿಸುವ ಆಸೆ

ಕಳೆದ ಬಾರಿ ರಾಮನಗರದಲ್ಲಿ ನಡೆದಿದ್ದ ಮಾವಿನ ಮೇಳಕ್ಕೆ ಮಗಳನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿ ಮೊದಲ ಬಾರಿಗೆ ನನ್ನ ಮಗಳು ಶ್ರೀಯಾ, ರಾಗಿಗಂಜಿ ಕುಡಿದಳು. ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು, ಮಾವಿನಹಣ್ಣು ಕಿತ್ತು ತಿಂದಳು. ಅಂದು ಅವಳ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ. ಈ ಬಾರಿ 'ಬೆಟ್ಟದ ತಪ್ಪಲಲ್ಲಿ ಒಂದು ದಿನ' ಕಾರ್ಯಕ್ರಮಕ್ಕೆ ಮಗಳು ಮತ್ತು ಪತ್ನಿ ಪದ್ಮಮಾಲಿನಿಯೊಂದಿಗೆ ಹೋಗುತ್ತಿದ್ದೇನೆ. ಮಗಳಿಗೆ ಕೃಷಿ ಬಗ್ಗೆಯೂ ಪರಿಚಯ ಮಾಡಿಕೊಡುವ ಆಸೆ ನನ್ನದು.

–ಬದರಿನಾಥ್ ಅಸೋಡು ಕೃಷ್ಣರಾಜ್, ಕಾರ್ಯನಿರ್ವಾಹಕ ನಿರ್ದೇಶಕ, ಅಜುಗ ಕಂಪೆನಿ, ಯಮಲೂರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry