ಸೋಮವಾರ, ಸೆಪ್ಟೆಂಬರ್ 16, 2019
29 °C
ಚಿನ್ನ ಗೆದ್ದ ಮಾಳಪ್ಪ; ನವೀನ್‌ಗೆ ಮತ್ತೊಂದು ಪದಕ

ಸಮಗ್ರ ಪ್ರಶಸ್ತಿಯತ್ತ ಕರ್ನಾಟಕ

Published:
Updated:
ಸಮಗ್ರ ಪ್ರಶಸ್ತಿಯತ್ತ ಕರ್ನಾಟಕ

ಜಮಖಂಡಿ: ಮೂರನೇ ದಿನದ ಸ್ಪರ್ಧೆಗಳಲ್ಲಿ ಪಾರಮ್ಯ ಮೆರೆದ ಕರ್ನಾಟಕದ ನವೀನ್‌ ಜಾನ್‌ ಹಾಗೂ ಮಾಳಪ್ಪ ಮೂರ್ತೆನ್ನವರ ಇಲ್ಲಿ ನಡೆಯುತ್ತಿರುವ 22ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಚಿನ್ನದ ಪದಕ ಗೆದ್ದರು.

ರಾಷ್ಟ್ರೀಯ ಸೈಕ್ಲಿಂಗ್ ಫೆಡರೇಷನ್‌ ಮತ್ತು ರಾಜ್ಯ ಸೈಕ್ಲಿಂಗ್‌ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ಎಲೀಟ್‌ ವಿಭಾಗದ 150 ಕಿ.ಮೀ ಮಾಸ್‌ಸ್ಟಾರ್ಟ್ ವಿಭಾಗದಲ್ಲಿ ಬೆಂಗಳೂರಿನ ನವೀನ್‌ ಹಾಗೂ ಪುರುಷರ 23 ವರ್ಷದೊಳಗಿನ 120 ಕಿ.ಮೀ ಮಾಸ್‌ಸ್ಟಾರ್ಟ್‌ನಲ್ಲಿ ಬಾಗಲಕೋಟೆ ತಾಲ್ಲೂಕು ತುಳಸಿಗಿರಿಯ ಮಾಳಪ್ಪ ಪ್ರಥಮ ಸ್ಥಾನ ಪಡೆದರು.

ಮಹಿಳೆಯರ ಎಲೀಟ್‌ ವಿಭಾಗದಲ್ಲಿ ರೈಲ್ವೇಸ್‌ನ ಮನೋರಮಾದೇವಿ ಚಿನ್ನ ಮುಡಿಗೇರಿಸಿಕೊಂಡರೆ, ಒಂದೇ ದಿನ ಎರಡು ಚಿನ್ನದ ಪದಕ ಗೆದ್ದು ಕೂಟದಲ್ಲಿ ದಾಖಲೆ ಮಾಡಿದ ಬಿಲಾಲ್‌ ಅಹಮದ್ ಅವರು ಕಣಿವೆ ರಾಜ್ಯದ ಚಿನ್ನದ ಕನಸು ನನಸು ಮಾಡಿದರು.

ಅಗ್ರಸ್ಥಾನ ಅಬಾಧಿತ

ಮೂರನೇ ದಿನವೂ ರಾಜ್ಯದ ಸೈಕ್ಲಿಸ್ಟ್‌ಗಳ ಪದಕದ ಬೇಟೆ ಮುಂದುವರೆಯಿತು. ಎರಡು ಚಿನ್ನ, ಮೂರು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಗೆದ್ದರು. ಆತಿಥೇಯರು ಇದುವರೆಗೆ ಒಟ್ಟು ಏಳು ಚಿನ್ನ, ಆರು ಬೆಳ್ಳಿ ಹಾಗೂ ಏಳು ಕಂಚು ಜಯಿಸಿದ್ದಾರೆ.

ಮೂರನೇ ದಿನದ ಫಲಿತಾಂಶ: ಮಾಸ್‌ ಸ್ಟಾರ್ಟ್ ವಿಭಾಗ: ಪುರುಷರು –150 ಕಿ.ಮೀ: ನವೀನ್‌ಜಾನ್ (ಕರ್ನಾಟಕ, 3ಗಂಟೆ, 36 ನಿಮಿಷ 40.185 ಸೆ.)–1, ಬಿ.ಮುರುಗೇಶ (ತೆಲಂಗಾಣ)–2, ಮನೋಹರಲಾಲ್‌ ಪಂಜಾಬ್–3; ಪುರುಷರ 23 ವರ್ಷದೊಳಗಿನ–120 ಕಿ.ಮೀ: ಮಾಳಪ್ಪ ಮೂರ್ತೆನ್ನವರ (ಕರ್ನಾಟಕ–3ಗ.00,6.797 ಸೆ.)–1, ಮೊಹಮ್ಮದ್ ಆದಿಲ್ ಟೈಲಿ (ಜಮ್ಮು–ಕಾಶ್ಮೀರ)–2, ಸಂತೋಷ ಕುರಣಿ (ಕರ್ನಾಟಕ)–3; ಸಬ್‌ಜೂನಿಯರ್ ಬಾಲಕಿಯರ 15 ಕಿ.ಮೀ: ಛಾಯಾನಿಕಾ ಗೊಗೊಯ್‌ (ಅಸ್ಸಾಂ– 25ನಿ:38.728 ಸೆ)–1, ಸೌಮ್ಯಾ ಅಂತಾಪುರ (ಕರ್ನಾಟಕ)–2, ದಾನಮ್ಮ ಚಿಚಖಂಡಿ (ಕರ್ನಾಟಕ)–3; ಬಾಲಕರ ಸಬ್‌ಜೂನಿಯರ್–20 ಕಿ.ಮೀ: ಬಿಲಾಲ್ ಅಹಮದ್ (ಜಮ್ಮು–ಕಾಶ್ಮೀರ–31 ನಿ, 18.180 ಸೆ)–1, ವೆಂಕಪ್ಪ ಕೆಂಗಲಗುತ್ತಿ (ಕರ್ನಾಟಕ)–2, ಸಚಿನ್ ರಂಜಣಗಿ (ಕರ್ನಾಟಕ)–3; ಜೂನಿಯರ್ ಮಹಿಳೆಯರ 40 ಕಿ.ಮೀ: ಮಧುರಾ ವಾಯ್ಕರ (ಮಹಾರಾಷ್ಟ್ರ–1ಗಂಟೆ, 20.362 ಸೆಕೆಂಡ್), ಮೇಘಾ ಗೂಗಾಡ (ಕರ್ನಾಟಕ)–2, ರಾಜೇಶ್ವರಿ ಡುಳ್ಳಿ (ಕರ್ನಾಟಕ)–3; ಮಹಿಳೆಯರ ಎಲೈಟ್‌–70 ಕಿ.ಮೀ: ಡಮನೋರಮಾದೇವಿ (ರೈಲ್ವೇಸ್–1ಗ, 56ನಿ, 41.852 ಸೆ.)–1, ಸೋನಾಲಿ ಚಾನು (ಮಣಿಪುರ)–2, ಅಮೃತಾ ರಘುನಾಥ್ (ಕೇರಳ)–3; ಪುರುಷರ ಜೂನಿಯರ್–80 ಕಿ.ಮೀ: ಬಿಲಾಲ್ ಅಹಮದ್‌ (ಜಮ್ಮು ಮತ್ತು ಕಾಶ್ಮೀರ, 1ಗ, 58, 47.250 ಸೆ.), ವಿಪಿನ್ ಸೈನಿ (ಹರಿಯಾಣ)–2, ಅನಿಲ್ ಮಂಗ್ಲಾವ್ (ಹರಿಯಾಣ)–3.

ಪುರುಷರ 120 ಕಿ.ಮೀ ಮಾಸ್‌ ಸ್ಟಾರ್ಟ್ ಸ್ಪರ್ಧೆಯ ನೋಟ

ಗದ್ದೆಯಲ್ಲಿ ಉರುಳಿಬಿದ್ದ ಸೈಕ್ಲಿಸ್ಟ್‌

ಪುರುಷರ ಎಲೀಟ್‌ 150 ಕಿ.ಮೀ ಮಾಸ್‌ಸ್ಟಾರ್ಟ್ ವಿಭಾಗದಲ್ಲಿ 80 ಕಿ.ಮೀ ನಂತರ ಮುನ್ನಡೆ ಕಾಯ್ದುಕೊಂಡ ನವೀನ್‌, ಅಂತಿಮ ಗೆರೆ ದಾಟಲು ಇನ್ನೊಂದು ಕಿ.ಮೀ ದೂರ ಇದ್ದಾಗ ತಲೆ ಸುತ್ತು ಬಂದು ರಸ್ತೆಯಿಂದ ಪಕ್ಕದ ಕಬ್ಬಿನ ಗದ್ದೆಗೆ ಉರುಳಿಬಿದ್ದರು. ಕೈ ಕಾಲು–ತರಚಿ ರಕ್ತಮಯವಾಗಿದ್ದರೂ ತಕ್ಷಣ ಚೇತರಿಸಿಕೊಂಡು ಸೈಕಲ್ ಏರಿದ ಅವರು ಗುರಿಯತ್ತ ಮುನ್ನುಗ್ಗಿದರು. ಈ ವೇಳೆ ತೆಲಂಗಾಣದ ಸ್ಪರ್ಧಿ ಬಿ.ಮುರಗೇಶ ಎರಡು ಕಿ.ಮೀ ಹಿಂದೆ ಇದ್ದರು. ಹಾಗಾಗಿ ಅವರಿಗೆ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಕೆಲಹೊತ್ತು ಅತಿಥೇಯರ ಪಾಳೆಯದಲ್ಲಿ ಮನೆಮಾಡಿದ್ದ ಆತಂಕ ನಂತರ ಸಂಭ್ರಮವಾಗಿ ಬದಲಾಯಿತು.

‘ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಆಸೆ’

ವೈಯಕ್ತಿಕ ವಿಭಾಗದಲ್ಲಿ ಎರಡು ಚಿನ್ನ ಗೆದ್ದ ಶ್ರೇಯಕ್ಕೆ ನವೀನ್‌ಜಾನ್ ಪಾತ್ರರಾದರು.

‘ಒಲಿಂಪಿಕ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಆಸೆ ಇದೆ. ಆದಕ್ಕೆ ತರಬೇತಿ ಪಡೆಯಲು ರಾಜ್ಯ ಸರ್ಕಾರ ಇಲ್ಲವೇ ಭಾರತೀಯ ಸೈಕ್ಲಿಂಗ್‌ ಫೆಡರೇಶನ್‌ ನೆರವಾದಲ್ಲಿ ಅನುಕೂಲವಾಗುತ್ತದೆ’ ಎಂದುನವೀನ್‌ ಹೇಳಿದರು.

‘ನನಗೆ ಅಪ್ಪ ಇಲ್ಲ. ಅಮ್ಮ ಕೂಲಿ ಕೆಲಸ ಮಾಡುತ್ತಾರೆ. ಸರ್ಕಾರಿ ನೌಕರಿ ಹಿಡಿಯುವ ಆಸೆ ಇತ್ತು. ಈ ಚಿನ್ನದ ಪದಕ ಆ ಕನಸನ್ನು ನನಸಾಗಿಸಿಕೊಳ್ಳಲು ನೆರವಾಗಬಹುದು’ ಎಂದು ಮಾಳಪ್ಪ ಮೂರ್ತಣ್ಣವರ ಸಂಭ್ರಮ ಹಂಚಿಕೊಂಡರು.

Post Comments (+)