ಒಂದು ವಿವೇಕಹೀನ ಮಸೂದೆಯ ಸುತ್ತ...

ಮಂಗಳವಾರ, ಜೂನ್ 18, 2019
24 °C
ರಾಜಸ್ಥಾನದಲ್ಲಿ ಆಗಿರುವ ಈ ಬೆಳವಣಿಗೆಯ ಮೂಲ ಇರುವುದು ಕರ್ನಾಟಕದಲ್ಲಿ

ಒಂದು ವಿವೇಕಹೀನ ಮಸೂದೆಯ ಸುತ್ತ...

Published:
Updated:
ಒಂದು ವಿವೇಕಹೀನ ಮಸೂದೆಯ ಸುತ್ತ...

ಆತ ನಿರಪರಾಧಿ ಎಂದು ಘೋಷಣೆ ಆದ ನಂತರವೂ, ಕೋರ್ಟ್‌ನ ಮುಂದೆ ಇದ್ದ ದಾಖಲೆಗಳನ್ನೇ ಇಟ್ಟುಕೊಂಡು ‘ಈ ಸಾರ್ವಜನಿಕ ಸೇವಕ ಅಪರಾಧ ಎಸಗಿದ್ದಾನೆ ’ ಎಂದು ಬಹಿರಂಗವಾಗಿ ಹೇಳುವ ಅಧಿಕಾರ ಮಾಧ್ಯಮಗಳಿಗೆ ಹಾಗೂ ಸಾರ್ವಜನಿಕರಿಗೆ ಇದೆ.

ರಾಜಸ್ಥಾನದ ವಿಧಾನಸಭೆಯಲ್ಲಿ ವಸುಂಧರಾ ರಾಜೇ ನೇತೃತ್ವದ ಸರ್ಕಾರ ಕಳೆದ ವಾರ ಒಂದು ಮಸೂದೆಯನ್ನು ಮಂಡಿಸಿತು. ನನ್ನ ಪ್ರಕಾರ, ಇದು, ಕೊಳೆಯುತ್ತಿರುವ ಆಡಳಿತ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಲು ಮಂಡಿಸಿದ ಮಸೂದೆಯಲ್ಲದೆ ಬೇರೇನೂ ಅಲ್ಲ. ಜನಾಕ್ರೋಶದ ಕಾರಣದಿಂದಾಗಿ ಈ ಮಸೂದೆ ಶಾಸನಸಭೆಯ ಅನುಮೋದನೆ ಪಡೆಯಲಿಲ್ಲ ಎಂಬುದು ಒಳ್ಳೆಯ ಸಂಗತಿ.

ಈ ಮಸೂದೆಯ ಕರಡು ಸಿದ್ಧಪಡಿಸಿದ ವಕೀಲನಿಗೆ ಕಾನೂನು, ಅಪರಾಧ ದಂಡ ಪ್ರಕ್ರಿಯೆ ಹಾಗೂ ಸಂವಿಧಾನದ ಬಗ್ಗೆ ಯಾವ ತಿಳಿವಳಿಕೆಯೂ ಇಲ್ಲ. ಸಾರ್ವಜನಿಕ ಸೇವೆಯಲ್ಲಿ ಇರುವ ಭ್ರಷ್ಟರನ್ನು ರಕ್ಷಿಸುವುದನ್ನು ಹೊರತುಪಡಿಸಿದರೆ ಈ ಮಸೂದೆಗೆ ಇನ್ಯಾವ ಉದ್ದೇಶವೂ ಇಲ್ಲ. ಅಂದಹಾಗೆ, ರಾಜಸ್ಥಾನದಲ್ಲಿ ಆಗಿರುವ ಈ ಎಲ್ಲ ಬೆಳವಣಿಗೆಗಳಿಗೆ ಮೂಲ ಇರುವುದು 2012ರಲ್ಲಿ, ಕರ್ನಾಟಕದಲ್ಲಿ. ಏನು ಅದು?

ಆಗ ಕರ್ನಾಟಕದ ಲೋಕಾಯುಕ್ತ ಸಂಸ್ಥೆಯು ತುಸು ಬಲಿಷ್ಠವಾಗಿತ್ತು. ಲೋಕಾಯುಕ್ತ ಪೊಲೀಸರು ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಸಕ್ರಿಯವಾಗಿದ್ದರು. ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯೊಬ್ಬ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ, ಆ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಬಹುದಿತ್ತು. ದೂರು ಹಾಗೂ ಅದರ ಜೊತೆ ಸಲ್ಲಿಸಿರುವ ದಾಖಲೆಗಳು, ಸಾರ್ವಜನಿಕ ಸೇವಕ ಭ್ರಷ್ಟಾಚಾರ ನಡೆಸಿರುವುದಾಗಿ ಹೇಳುತ್ತಿದ್ದರೆ, ‍ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿಕೊಂಡು, ತನಿಖೆ ಆರಂಭಿಸಬೇಕು.

ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಲು ನಿರಾಕರಿಸಿದರೆ, ಅವರಿಗೆ ಎಫ್‌ಐಆರ್‌ ದಾಖಲಿಸುವಂತೆ ನಿರ್ದೇಶನ ನೀಡಬೇಕು ಎಂದು ಮ್ಯಾಜಿಸ್ಟ್ರೇಟ್‌ (ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು) ಮುಂದೆ ಮನವಿ ಮಾಡಲು ಅವಕಾಶವಿತ್ತು. ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಲವು ಮನವಿಗಳು ಬರುತ್ತಿದ್ದವು. ಸೂಕ್ತ ಪ್ರಕರಣಗಳಲ್ಲಿ ನ್ಯಾಯಾಧೀಶರು, ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸುವಂತೆ ಪೊಲೀಸರಿಗೆ ಸೂಚನೆ ನೀಡುತ್ತಿದ್ದರು.

‘ತನಿಖೆ ನಡೆಸಿ’ ಎಂಬ ಆದೇಶವನ್ನು ಪ್ರಶ್ನಿಸಿ ಆರೋಪಿ ಸ್ಥಾನದಲ್ಲಿದ್ದ ಕೆಲವು ಸಾರ್ವಜನಿಕ ಸೇವಕರು ಹೈಕೋರ್ಟ್‌ ಮೆಟ್ಟಿಲೇರಿದರು. ತನಿಖೆಗೆ ಸರ್ಕಾರ ಅನುಮತಿ ನೀಡುವವರೆಗೂ, ಮ್ಯಾಜಿಸ್ಟ್ರೇಟರು ಇಂಥದ್ದೊಂದು ಆದೇಶವನ್ನು ಲೋಕಾಯುಕ್ತ ಪೊಲೀಸರಿಗೆ ನೀಡುವಂತೆ ಇಲ್ಲ ಎಂದು ಅವರ ವಕೀಲರು ಹೈಕೋರ್ಟ್‌ನಲ್ಲಿ ವಾದಿಸಿದರು.

ಸರ್ಕಾರದ ಅನುಮತಿ ಇಲ್ಲದಿದ್ದರೆ, ಪೊಲೀಸ್‌ ತನಿಖೆಗೆ ಮ್ಯಾಜಿಸ್ಟ್ರೇಟರು ಆದೇಶಿಸುವಂತೆ ಇಲ್ಲ ಎಂದು ಹೈಕೋರ್ಟ್‌ನ ಕೆಲವು ನ್ಯಾಯಮೂರ್ತಿಗಳು ಹೇಳಿದರು. ಇದನ್ನು ಆಧಾರವಾಗಿ ಇಟ್ಟುಕೊಂಡು, ತನಿಖೆ ನಡೆಸಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ನೀಡಿದ್ದ ಕೆಲವು ಆದೇಶಗಳನ್ನು ಹೈಕೋರ್ಟ್‌ ರದ್ದು ಮಾಡಿತು.

ನಮ್ಮ ದೇಶದಲ್ಲಿ ಅಪರಾಧ ದಂಡ ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಹೇಳುತ್ತೇನೆ. ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳ ವಿಚಾರದಲ್ಲಿ ಕೋರ್ಟ್ ಅಥವಾ ಸರ್ಕಾರದ ಅನುಮತಿಗೆ ಕಾಯದೆಯೇ, ತಾವಾಗಿಯೇ ಮುಂದಡಿ ಇಡಲು ಪೊಲೀಸರಿಗೆ ಅವಕಾಶ ಇದೆ. ಇಂತಹ ಗಂಭೀರ ಅಪರಾಧಗಳನ್ನು ‘ವಿಚಾರಣೆಗೆ ಎತ್ತಿಕೊಳ್ಳಲು ಸೂಕ್ತವಾದ ಅಪರಾಧಗಳು’ (Cognizable Offence) ಎನ್ನುತ್ತಾರೆ. ಇಂಥದ್ದೊಂದು ಅಪರಾಧ ಎಸಗಲಾಗಿದೆ ಅಥವಾ ಎಸಗಲಾಗುತ್ತಿದೆ ಎಂಬ ಮಾಹಿತಿ ದೊರೆತಾಗ ಪೊಲೀಸರು ಎಫ್‌ಐಆರ್‌ ದಾಖಲಿಸುತ್ತಾರೆ.

ಪೊಲೀಸರಿಗೆ ಪ್ರಕರಣದ ತನಿಖೆಯ ಅಧಿಕಾರ ಅಥವಾ ಶಕ್ತಿ ದೊರೆಯುವುದು ಈ ಹಂತದ ನಂತರ. ತನಿಖೆ ನಡೆಸುವ ಶಕ್ತಿಯೇ ದುರ್ಬಲವಾದರೆ, ಅಂತಹ ಶಕ್ತಿಯಿಂದ ಯಾವುದಾದರೂ ಪ್ರಯೋಜನ ಇದೆಯೇ? ತನಿಖೆ ನಡೆಸಲು ಪೊಲೀಸರಿಗೆ ದೊಡ್ಡ ಮಟ್ಟದ ಶಕ್ತಿ ಬೇಕು. ಕಾನೂನು ರೂಪಿಸಿದವರು, ಅಪರಾಧದ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ದೊಡ್ಡ ಮಟ್ಟದ ಅಧಿಕಾರ ನೀಡಿದ್ದಾರೆ.

ಪ್ರಕರಣವೊಂದರಲ್ಲಿ ಪೊಲೀಸರು ಕೆಲವರನ್ನು ಬಂಧಿಸಿ, ಸಾಕ್ಷ್ಯಗಳ ಹೇಳಿಕೆ ಪಡೆದು, ದಾಖಲೆಗಳನ್ನು ವಶಕ್ಕೆ ಪಡೆದು, ಕೆಲವು ವ್ಯಕ್ತಿಗಳು ನಿರ್ದಿಷ್ಟ ಅಪರಾಧ ಎಸಗಿದ್ದಾರೆ ಎಂಬ ತೀರ್ಮಾನಕ್ಕೆ ಬರುತ್ತಾರೆ ಎಂದು ಭಾವಿಸೋಣ. ಅವರು ಅದನ್ನು ದೋಷಾರೋಪ ಪಟ್ಟಿ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ.

ಪೊಲೀಸರು ಹೇಳುತ್ತಿರುವುದು ನ್ಯಾಯಾಧೀಶರಿಗೆ ಪ್ರಾಥಮಿಕ ಮಟ್ಟದಲ್ಲಿ ಒಪ್ಪಿತವಾದರೆ, ಈ ಅಪರಾಧಗಳು ವಿಚಾರಣೆಗೆ ಯೋಗ್ಯ ಎಂದು ಅವರು ತಮ್ಮ ಆದೇಶದಲ್ಲಿ ಬರೆಯುತ್ತಾರೆ. ನಂತರ, ಆರೋಪಿಗಳು ತಮ್ಮೆದುರು ಬಂದು ವಿಚಾರಣೆ ಎದುರಿಸಬೇಕು ಎಂದು ಹೇಳುತ್ತಾರೆ.

ಹಾಗೆಯೇ, ಪ್ರಕರಣವೊಂದರಲ್ಲಿ ಎಫ್‌ಐಆರ್‌ ದಾಖಲಿಸಲು ಪೊಲೀಸರು ನಿರಾಕರಿಸಿದರೆ ಏನು ಮಾಡುವುದು? ಇದಕ್ಕೆ ಕಾನೂನು ಎರಡು ಪರಿಹಾರಗಳನ್ನು ಸೂಚಿಸುತ್ತದೆ. ಮೊದಲನೆಯದು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಆ ದೂರನ್ನು ನೀಡಬಹುದು. ಎರಡನೆಯದು, ಮ್ಯಾಜಿಸ್ಟ್ರೇಟರ ಮೊರೆ ಹೋಗಿ, ಪೊಲೀಸರಿಗೆ ತನಿಖೆ ನಡೆಸಲು ಆದೇಶಿಸುವಂತೆ ಕೋರಬಹುದು.

ಮ್ಯಾಜಿಸ್ಟ್ರೇಟರಿಗೆ ತನಿಖೆ ನಡೆಸುವ ಅಧಿಕಾರ ಇರುವುದಿಲ್ಲ. ದೂರಿನಲ್ಲಿ ಹುರುಳಿದೆ ಎಂದು ಮ್ಯಾಜಿಸ್ಟ್ರೇಟರಿಗೆ ಅನಿಸಿದರೆ, ಕಾನೂನಿಗೆ ಅನುಗುಣವಾಗಿ ತನಿಖೆ ನಡೆಸುವಂತೆ ಅವರು ಪೊಲೀಸರಿಗೆ ಆದೇಶ ನೀಡುತ್ತಾರೆ. ಈ ಪ್ರಕ್ರಿಯೆಯ ಬಗ್ಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯಲ್ಲಿ (ಸಿಆರ್‌ಪಿಸಿ) ವಿವರ ಇದೆ.

ಸಾರ್ವಜನಿಕ ಸೇವಕರ ಭ್ರಷ್ಟಾಚಾರಗಳ ಬಗ್ಗೆ ಮತ್ತೆ ಮಾತನಾಡೋಣ. ಜನಸಾಮಾನ್ಯರಿಗೆ ಇಲ್ಲದ ಸಣ್ಣ ಮಟ್ಟದ ರಕ್ಷಣೆ ಸಾರ್ವಜನಿಕ ಸೇವಕರಿಗೆ ಇದೆ. ಇದನ್ನು ‘ಅನುಮತಿ’ ಎನ್ನಲಾಗುತ್ತದೆ. ಸಕ್ಷಮ ಪ್ರಾಧಿಕಾರವು ‘ಅನುಮತಿ’ ನೀಡಿದ್ದರೆ ಮಾತ್ರ, ಸಾರ್ವಜನಿಕ ಸೇವಕರ ವಿರುದ್ಧದ ಕೆಲವು ಬಗೆಯ ಆರೋಪಗಳನ್ನು ನ್ಯಾಯಾಲಯವು ವಿಚಾರಣೆಗೆ ಯೋಗ್ಯ ಎಂದು ಪರಿಗಣಿಸಬಹುದು ಎಂದು ಕಾನೂನು ಹೇಳುತ್ತದೆ.

ಸರ್ಕಾರವು ಪ್ರಾಮಾಣಿಕ ಅಧಿಕಾರಿಗಳ ಹಿತ ಕಾಯಬೇಕು ಎಂಬುದು ಈ ರೀತಿಯ ರಕ್ಷಣೆಯ ಹಿಂದಿರುವ ತರ್ಕ. ಸಾರ್ವಜನಿಕ ಸೇವಕನ ವಿರುದ್ಧ ಕ್ರಮ ಜರುಗಿಸಲು ಅನುಮತಿ ಅಗತ್ಯ ಇರುವ ಪ್ರಕರಣಗಳಲ್ಲಿ ಪೊಲೀಸರು ಮೊದಲು ತನಿಖೆ ನಡೆಸಿ, ವರದಿ ಸಿದ್ಧಪಡಿಸಿ, ‘ವಿಚಾರಣೆಗೆ ಒಪ್ಪಿಸಲು ಅನುಮತಿ ಕೊಡಿ’ ಎಂಬ ಕೋರಿಕೆಯೊಂದಿಗೆ ಅದನ್ನು ಸಕ್ಷಮ ಪ್ರಾಧಿಕಾರಕ್ಕೆ ರವಾನಿಸುತ್ತಾರೆ.

ಸಕ್ಷಮ ಪ್ರಾಧಿಕಾರವು ಅನುಮತಿ ನೀಡಬಹುದು ಅಥವಾ ಮನವಿಯನ್ನು ತಿರಸ್ಕರಿಸಬಹುದು. ಅನುಮತಿ ಸಿಕ್ಕರೂ, ಸಿಗದೇ ಇದ್ದರೂ ಪೊಲೀಸರು ಅದನ್ನು ಮ್ಯಾಜಿಸ್ಟ್ರೇಟರ ಮುಂದಿಡುತ್ತಾರೆ. ಅದನ್ನು ಪರಿಶೀಲಿಸುವ ಮ್ಯಾಜಿಸ್ಟ್ರೇಟರು, ಅನುಮತಿ ಇಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಿಲ್ಲ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾರ್ವಜನಿಕ ಸೇವಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲು ಪೊಲೀಸರಿಗೆ ಮ್ಯಾಜಿಸ್ಟ್ರೇಟರು ಆದೇಶಿಸಿದ ಪ್ರಕರಣಗಳಲ್ಲಿ, ‘ಅನುಮತಿಯ ಪ್ರಶ್ನೆ ಬರುವುದು ತನಿಖೆ ಪೂರ್ಣಗೊಂಡ ನಂತರವೇ ವಿನಾ, ತನಿಖೆಗೂ ಮೊದಲೇ ಅನುಮತಿ ಕೊಡುವುದು ಅರ್ಥಹೀನ’ ಎಂದು ಹೈಕೋರ್ಟ್‌ಗಳು ಹಾಗೂ ಸುಪ್ರೀಂ ಕೋರ್ಟ್‌ ಕಳೆದ ಕೆಲವು ದಶಕಗಳಲ್ಲಿ ಮತ್ತೆ ಮತ್ತೆ ಹೇಳಿವೆ.

ಹೀಗಿದ್ದರೂ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಲು ಮ್ಯಾಜಿಸ್ಟ್ರೇಟರು ಪೊಲೀಸರಿಗೆ ಆದೇಶಿಸುವ ಮೊದಲು ಸಕ್ಷಮ ಪ್ರಾಧಿಕಾರದ ಅನುಮತಿ ಇರಬೇಕು ಎಂದು 2012ರಲ್ಲಿ ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿತ್ತು! ಆ ಸಂದರ್ಭದಲ್ಲಿ ಖಾಸಗಿ ದೂರು ನೀಡುವವರು ಮನೆಗೆ ವಾಪಸ್ ತೆರಳಿದರು, ಭ್ರಷ್ಟರು ಸಂಭ್ರಮಿಸಿದರು ಎಂಬುದು ವಾಸ್ತವ.

ಕರ್ನಾಟಕ ಹೈಕೋರ್ಟ್‌ ನೀಡಿದ ಇಂತಹ ಆದೇಶಗಳನ್ನು 2012ರ ನಂತರ ನಾನು ಸಾರ್ವಜನಿಕ ವೇದಿಕೆಗಳಲ್ಲಿ ಮತ್ತೆ ಮತ್ತೆ ಟೀಕಿಸಿದ್ದೇನೆ. ನನ್ನ ಮಾತನ್ನು ಆಗ ಯಾರೂ ಕೇಳಿಸಿಕೊಳ್ಳಲಿಲ್ಲ ಎಂಬುದು ನಿಜ. ಇದಾದ ಒಂದು ವರ್ಷದ ನಂತರ, ಅನಿಲ್ ಕುಮಾರ್ ಮತ್ತು ಎಂ.ಕೆ. ಅಯ್ಯಪ್ಪ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಬಂದ ನಂತರ ಕೆಲವರು ನನ್ನನ್ನು ನೋಡಿ ನಕ್ಕರು. ಆದರೆ, ನಾನು ಪ್ರತಿರೋಧವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಸುಪ್ರೀಂ ಕೋರ್ಟ್‌ನ ತೀರ್ಪನ್ನು ಕೆಲವು ನಿವೃತ್ತ ನ್ಯಾಯಮೂರ್ತಿಗಳೂ ಟೀಕಿಸಿದರು. ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಲು ಮ್ಯಾಜಿಸ್ಟ್ರೇಟರಿಗೆ ಸಕ್ಷಮ ಪ್ರಾಧಿಕಾರದ ಅನುಮತಿಯ ಅಗತ್ಯ ಇಲ್ಲ ಎಂದು ಕೆಲವು ಹೈಕೋರ್ಟ್‌ಗಳು ಹೇಳಿದವು.

2012ರಲ್ಲಿ ಹೇಳಿದ್ದು ತಪ್ಪು ಎಂದು ನಂತರದ ದಿನಗಳಲ್ಲಿ ಹೇಳಿದ ಕರ್ನಾಟಕ ಹೈಕೋರ್ಟ್‌ ಇಡೀ ವಿವಾದಕ್ಕೆ ಅಂತ್ಯ ಹಾಡಿತು. ಹಾಗಾಗಿ, ಈ ಹಂತದಲ್ಲಿ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟರು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದಿದ್ದರೂ ಪೊಲೀಸರಿಗೆ ಆದೇಶ ನೀಡಬಹುದು.

ಹೀಗಿದ್ದರೂ, ರಾಜಸ್ಥಾನ ಸರ್ಕಾರವು ‘ಪೂರ್ವಾನುಮತಿ ಇಲ್ಲದಿದ್ದರೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಮ್ಯಾಜಿಸ್ಟ್ರೇಟರು ಪೊಲೀಸರಿಗೆ ಆದೇಶಿಸುವಂತೆ ಇಲ್ಲ’ ಎನ್ನುವ ಮಸೂದೆ ರೂಪಿಸಿದೆ. ದೂರಿನ ತನಿಖೆ ನಡೆಸಲು ಅನುಮತಿ ನೀಡಬಹುದೇ ಎಂಬುದನ್ನು ಆರು ತಿಂಗಳಲ್ಲಿ ತೀರ್ಮಾನಿಸಬೇಕು, ಈ ಅವಧಿಯಲ್ಲಿ ಮಾಧ್ಯಮಗಳು ಆ ದೂರಿನಲ್ಲಿರುವ ಅಂಶಗಳನ್ನು ಪ್ರಕಟಿಸುವಂತೆ ಇಲ್ಲ. ಇದನ್ನು ಉಲ್ಲಂಘಿಸುವ ಪತ್ರಕರ್ತರನ್ನು ಎರಡು ವರ್ಷಗಳವರೆಗೆ ಜೈಲಿಗೆ ತಳ್ಳಬಹುದು ಎಂದು ಮಸೂದೆ ಹೇಳುತ್ತದೆ.

ಸಾರ್ವಜನಿಕ ಸೇವಕರ ದುರ್ನಡತೆ ಅಥವಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಆರೋಪಗಳನ್ನು ವರದಿ ಮಾಡಿದ್ದಕ್ಕೆ ಯಾವುದೇ ಮಾಧ್ಯಮ ಅಥವಾ ಪ್ರಜೆಯ ಬಾಯಿ ಮುಚ್ಚಿಸಲು ಸಂವಿಧಾನ ಅವಕಾಶ ಮಾಡಿಕೊಡುವುದಿಲ್ಲ. ಈ ಕಾರಣದಿಂದಾಗಿ ರಾಜಸ್ಥಾನದ ಮಸೂದೆಯು ಅಸಾಂವಿಧಾನಿಕ.

ಸಾರ್ವಜನಿಕ ಸೇವಕನ ವಿರುದ್ಧ ತನಿಖೆ ನಡೆದು, ದೋಷಾರೋಪ ಪಟ್ಟಿ ಸಲ್ಲಿಕೆಯಾಗಿ, ಕೋರ್ಟ್‌ನಲ್ಲಿ ವಿಚಾರಣೆ ನಡೆದು, ಆತ ನಿರಪರಾಧಿ ಎಂದು ಘೋಷಣೆ ಆದ ನಂತರವೂ, ಕೋರ್ಟ್‌ನ ಮುಂದೆ ಇದ್ದ ದಾಖಲೆಗಳನ್ನೇ ಇಟ್ಟುಕೊಂಡು ‘ಈ ಸಾರ್ವಜನಿಕ ಸೇವಕ ಅಪರಾಧ ಎಸಗಿದ್ದಾನೆ’ ಎಂದು ಬಹಿರಂಗವಾಗಿ ಹೇಳುವ ಅಧಿಕಾರ ಮಾಧ್ಯಮಗಳಿಗೆ ಹಾಗೂ ಸಾರ್ವಜನಿಕರಿಗೆ ಇದೆ. ಸಾರ್ವಜನಿಕ ಸೇವಕರ ವಿರುದ್ಧದ ಆರೋಪಗಳನ್ನು ಬರೆದವರಿಗೆ ಶಿಕ್ಷೆ ವಿಧಿಸುವ ಆಲೋಚನೆಯೇ ವಿವೇಕಹೀನ.

*-ಲೇಖಕ ಸುಪ್ರೀಂ ಕೋರ್ಟ್‌ನಲ್ಲಿ ವಕೀಲ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry