ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯ ಮಾಧ್ಯಮಗಳ ಹೊಣೆಗಾರಿಕೆ

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಯಾರಾದರೂ ರಾಜಕಾರಣಿಗಳೋ ಮಠಾಧೀಶರೋ ಲೈಂಗಿಕ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡರೆ ನಮ್ಮ ಟಿ.ವಿ. ಸುದ್ದಿ ವಾಹಿನಿಗಳಿಗೆ ಹಬ್ಬವೋ ಹಬ್ಬ. ಒಂದು ವಾರಕ್ಕಾಗಿ ಬಿಸಿಬಿಸಿ ಸುದ್ದಿಗಳ ಭೂರಿಭೋಜನ ದೊರಕಿತಲ್ಲ ಎಂಬ ಸಂಭ್ರಮ. ಆದರೆ ಇಂಥ ಸುದ್ದಿಗಳ ‘ಮಿಡ್ ನೈಟ್ ಮಸಾಲ’ ಶೈಲಿಯ ಪ್ರಸಾರವನ್ನು ನೋಡಲು ನಮ್ಮಂಥ ವಯಸ್ಕರಿಗೂ ಮುಜುಗರವಾಗುತ್ತದೆ ಎಂಬ ಸೂಕ್ಷ್ಮ ಗೊತ್ತೂ ಆಗದಷ್ಟು ಜಡ್ಡುಗಟ್ಟಿವೆ ನಮ್ಮ ದೃಶ್ಯವಾಹಿನಿಗಳು.

ಟಿ.ವಿ. ಚಾನೆಲ್‌ಗಳು ಯಾವ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು, ಯಾವ ದೃಶ್ಯವನ್ನು ಹೇಗೆ ಪ್ರಸಾರ ಮಾಡಬೇಕು ಎಂಬುದರ ಕುರಿತು ಅನೇಕ ವೃತ್ತಿ-ಸ್ವಯಂಪ್ರೇರಿತ ನೀತಿ ಸಂಹಿತೆಗಳು ಮತ್ತು ಕಾನೂನಿನ ನಿಬಂಧನೆಗಳು ಇವೆ. ಆದರೆ ಲೈಂಗಿಕತೆ, ಅತ್ಯಾಚಾರ, ‘ಅನೈತಿಕ’ ಸಂಬಂಧ, ಕೊಲೆ ಇತ್ಯಾದಿ ಅಮಾನವೀಯ ಪ್ರಕರಣಗಳನ್ನು ತಾವೇ ಮೊದಲು ತೋರಿಸುವ ಅನಾರೋಗ್ಯಕರ ಸ್ಪರ್ಧೆಯಲ್ಲಿ ಸುದ್ದಿ ಸಂಪಾದಕರಿಗೆ ಇದೆಲ್ಲವೂ ಮರೆತು ಹೋಗುತ್ತೋ, ಉದ್ದೇಶಪೂರ್ವಕ ಮಾಡುತ್ತಾರೋ ಗೊತ್ತಾಗುವುದಿಲ್ಲ.

ಉದಾಹರಣೆಗೆ, ಹೋದವಾರ ಪ್ರಸಾರವಾದ ಸ್ವಾಮಿಯೊಬ್ಬರ ಒಬ್ಬ ನಟಿಯೊಂದಿಗೆ ನಡೆಯಿತು ಎನ್ನಲಾದ ಲೈಂಗಿಕ ಕ್ರಿಯೆಯ ಕುರಿತಾದ ಸುದ್ದಿಯ ಪ್ರಸಾರವನ್ನು ತೆಗೆದುಕೊಳ್ಳಿ. ಇಂಥ ಪ್ರಕರಣಗಳು ಕೇವಲ ವೈಯಕ್ತಿಕ ಸಂಬಂಧ ಆಗಿರದೇ ಸಾರ್ವಜನಿಕ ಮಹತ್ವ ಉಳ್ಳದ್ದು, ಹಲವರಿಗೆ ಗಣನೀಯ ಹಾನಿಯಾಗಿದೆ ಎಂದಿದ್ದರೆ ಮಾತ್ರ ಅದು ಸುದ್ದಿಯಾಗುತ್ತದೆ. ಸರಿ. ಹೀಗೆ ಹೀಗೆ ಆಯಿತು ಎಂದು ವಾರ್ತಾ ವಾಚಕರು ಹೇಳಿದರೆ ಸಾಲುವುದಿಲ್ಲವೇ? ‘ನಮ್ಮ ಹತ್ತಿರ ಅದರ ಕುರಿತ ಒಂದು ವಿಡಿಯೊ ಇದೆ’ ಎಂದರೆ ಜನ ಇದೆ ಎಂದು ನಂಬುವುದಿಲ್ಲವೇ? ಅದನ್ನು ಸವಿವರವಾಗಿ ತೋರಿಸಿಯೇ ಟಿ.ವಿ. ಚಾನೆಲ್‌ಗಳು ತಮ್ಮ ಶೌರ್ಯವನ್ನು ಮೆರೆಯಬೇಕೇ?

ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಬಲಿಪಶುವಾದ ಸ್ತ್ರೀಯ ಗುರುತನ್ನು ಬಹಿರಂಗಪಡಿಸುವುದು ಐ.ಪಿ.ಸಿ. ಸೆಕ್ಷನ್ 228ಎ ಪ್ರಕಾರ ಶಿಕ್ಷಾರ್ಹ ಅಪರಾಧ. ಆದರೂ ಈ ‘ಸೋಕಾಲ್ಡ್ ಎಕ್ಸ್‌ಕ್ಲೂಸಿವ್ ವಿಡಿಯೊ’ವನ್ನು ತೋರಿಸಿದ ರೀತಿಯೂ ಮಾಧ್ಯಮ ಜಗತ್ತು ನಾಚಿಕೆ ಪಟ್ಟುಕೊಳ್ಳುವಷ್ಟು ಅಸಹ್ಯ. ಒಳಗೊಂಡ ಮಹಿಳೆಯ ಮುಖವನ್ನು (ಮಾತ್ರ) ಬ್ಲರ್ ಮಾಡಿ ಗುರುತನ್ನು ಮರೆಮಾಡುವ ಸೋಗು ಬೇರೆ. ಈ ವರ್ತನೆ ಕಾನೂನು ನಿಬಂಧನೆಗಳಿಗೆ ಒಂದು ದುರ್ಬಲ ಉತ್ತರವೇ ವಿನಾ ನೈತಿಕತೆ ದೃಷ್ಟಿಯಿಂದ ಇದು ಅಪರಾಧವೇ ಆಗುತ್ತದೆ.

ಸಂವೇದನಾಶೀಲ ಪತ್ರಿಕೆಗಳಲ್ಲೂ ಇಂಥ ಸುದ್ದಿಗಳು ಬರುತ್ತವೆ. ಪತ್ರಿಕೆಯಲ್ಲಿ ಆ ಸುದ್ದಿಯನ್ನು ಓದಲು ಅಥವಾ ಓದದೇ ಇರಲು ಸ್ವಾತಂತ್ರ್ಯವಿರುತ್ತದೆ. ಓದಿದರೂ ವೈಯಕ್ತಿಕವಾಗಿ ಓದುತ್ತೇವೆ. ಅಲ್ಲಿನ ಭಾಷೆ ಸಮೂಹ ಮಾಧ್ಯಮದ ಶಿಷ್ಟತೆಯನ್ನು ಪಾಲಿಸುತ್ತದೆ, ವಿವರ ಎಷ್ಟು ಬೇಕೋ ಅಷ್ಟು ಇರುತ್ತದೆ.

ಪ್ರಕರಣವನ್ನು ತಿಳಿಯಲು ಇಷ್ಟು ಸಾಕಾಗುತ್ತದೆ. ಆದರೆ ಟಿ.ವಿ. ವಾಹಿನಿಗಳಲ್ಲಿ ಒಂದು ನಿಗದಿತ ಸ್ಲಾಟ್‌ನಲ್ಲಿ ಸುದ್ದಿಗಳು ಪ್ರಸಾರವಾಗುವಾಗ ವೀಕ್ಷಕರು ಎಲ್ಲ ಸುದ್ದಿಗಳನ್ನು ನಿರಂತರವಾಗಿ ನೋಡಬೇಕಾಗುತ್ತದೆ; ಆಯ್ಕೆಯಿಲ್ಲ. ಟಿ.ವಿ. ಸುದ್ದಿಗಳನ್ನು ವೀಕ್ಷಿಸುವಾಗ ಸಾಮಾನ್ಯವಾಗಿ ಇಡೀ ಕುಟುಂಬ ಜೊತೆಯಲ್ಲಿ ಕುಳಿರುತ್ತದೆ ಎಂಬ ಎಚ್ಚರಿಕೆ ವಾರ್ತಾ ಪ್ರಸಾರದ ಪ್ರತಿಯೊಂದು ಸುದ್ದಿಯ ಸಂಕಲನದಲ್ಲಿ ಇರಬೇಕು.

ಇವತ್ತಿನ ಹೆಚ್ಚಿನ ಟಿ.ವಿ. ಚಾನೆಲ್‌ಗಳ ಸುದ್ದಿಸಂಪಾದಕರು, ಬರಹಗಾರರು, ಪ್ರಸ್ತುತಪಡಿಸುವವರು ಇವರ್‍ಯಾರಿಗೂ ಈ ಸೂಕ್ಷ್ಮತೆ, ಸಂವೇದನೆ ಇರುವ ಹಾಗೆ ತೋರುವುದಿಲ್ಲ.

ಇವರು ಲೈಂಗಿಕ ಹಗರಣ, ಅತ್ಯಾಚಾರ, ಕೊಲೆ ಇತ್ಯಾದಿಗಳ ಕುರಿತು ತೋರಿಸುವ ಕಚ್ಚಾ ಕಚ್ಚಾ ದೃಶ್ಯಗಳಷ್ಟೇ ಅಲ್ಲ, ಅದನ್ನು ಸವಿವರವಾಗಿ ಬಣ್ಣಿಸಲು ತೋರುವ ಅತ್ಯುತ್ಸಾಹ, ಬಳಸುವ ಭಾಷೆ, ಪದಗಳು ಪಡ್ಡೆ ಹುಡುಗರೂ ತಾವು ತಾವೇ ಇರುವಾಗಲೂ ಬಳಸಲು ನಾಚಿಕೆ ಪಟ್ಟುಕೊಳ್ಳುವಷ್ಟು ಅಸಹ್ಯವಾಗಿರುತ್ತವೆ. ಇವರು ತಮ್ಮ ಮನೆಯ ಹಿರಿಯರು, ಮಕ್ಕಳು ಮತ್ತು ಮಹಿಳೆಯರೊಂದಿಗೆ ಇರುವಾಗಲೂ ಇದೇ ಹೊಲಸು ಭಾಷೆಯಲ್ಲಿ ಮಾತಾಡುತ್ತಾರೆಯೇ? ನನಗನ್ನಿಸುತ್ತದೆ, ಇಲ್ಲ. ಹಾಗಾದರೆ ಇಲ್ಲಿ ಯಾಕೆ ಹೀಗೆ?

ಇನ್ನು ಸುದ್ದಿಯ ಭಾಗವಾಗಿ ಶವಗಳನ್ನು ತೋರಿಸುವ ವಿಚಾರಕ್ಕೆ ಬರೋಣ. ಮೃತದೇಹಗಳನ್ನು, ಅಪಘಾತಕ್ಕೆ ಒಳಗಾಗಿ ಛಿದ್ರವಾಗಿರುವ, ರಕ್ತಸಿಕ್ತವಾಗಿರುವ ದೇಹ ಇತ್ಯಾದಿಗಳನ್ನು ಚಿತ್ರ ಅಥವಾ ವಿಡಿಯೊದಲ್ಲಿ ತೋರಿಸುವುದು ಮಾಧ್ಯಮಗಳ ಸ್ವಯಂಪ್ರೇರಿತ ನೀತಿ ಸಂಹಿತೆಯ ಶಿಷ್ಟಾಚಾರಕ್ಕೆ ವಿರುದ್ಧ. ಇದನ್ನು ಟಿ.ವಿ. ವಾಹಿನಿಗಳು ಗಾಳಿಗೆ ತೂರುತ್ತವೆ.

ಉರುಳು ಹಾಕಿಕೊಂಡು ನೇತುಬಿದ್ದಿರುವ ದೇಹಗಳನ್ನೂ ತೋರಿಸುವವರಿಗೆ ಈ ಸೂಕ್ಷ್ಮ ಹೇಗೆ ಅರಗೀತು. ರಿಸರ್ಚ್‌ ಅಂಡ್ ಅನ್ಯಾಲಿಸಿಸ್ ವಿಂಗ್ (ರಾ) ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್ ಒಂದು ಕಡೆ ‘ಶವಗಳನ್ನು ನೋಡುವುದರಿಂದ ವೀಕ್ಷಕರಲ್ಲಿ ಭಯ ಉಂಟಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲಂತೂ ಇಂಥ ಭಯ, ಆತಂಕದ ಭಾವನೆಯನ್ನು ಉತ್ತೇಜಿಸುವುದು ಅನೇಕ ಬಗೆಯ ಅರಾಜಕತೆ, ಅಪಾಯಗಳಿಗೆ ಎಡೆ ಮಾಡಿಕೊಡುತ್ತದೆ’ ಎಂದಿದ್ದಾರೆ.

ಇದಕ್ಕಾಗಿ 2001ರ ಸೆಪ್ಟೆಂಬರ್ 11ರಲ್ಲಿ ಅಮೆರಿಕದಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿಯ ಘಟನೆಯನ್ನು ಅವರು ಉದಾಹರಿಸುತ್ತಾರೆ. ಈ ದುರ್ಘಟನೆಯಲ್ಲಿ ಸುಮಾರು 3000 ಜನ ನಾಗರಿಕರು ಹತ್ಯೆಯಾದರೂ ಘಟನೆಯ ಮತ್ತು ನಿರಂತರವಾಗಿ ನಡೆದ ಪರಿಹಾರ ಚಟುವಟಿ ಕೆಗಳ ಕುರಿತು ಆದ ಸುದ್ದಿ ಪ್ರಸಾರದಲ್ಲಿ ಎಲ್ಲಿಯೂ ಒಂದು ಶವವನ್ನು ತೋರಿಸಲಿಲ್ಲ, ಇದು ಮಾಧ್ಯಮದ ಶಿಷ್ಟಾಚಾರ.

ಲೇಖಕಿ, ವಿಮರ್ಶಕಿ ಮತ್ತು ನ್ಯೂಸ್‌ಲಾಂಡ್ರಿಡಾಟ್‌ಕಾಮ್‌ ವ್ಯವಸ್ಥಾಪಕ ಸಂಪಾದಕಿ ದೀಪಾಂಜನ ಪಾಲ್‌ ಅವರು ಗೌರಿ ಲಂಕೇಶ್ ಹತ್ಯೆಯ ನಂತರ ಟಿ.ವಿ. ವಾಹಿನಿಗಳು ಅವರ ಮೃತ ದೇಹವನ್ನು ನಿರಂತರವಾಗಿ ತೋರಿಸಿದ ಕುರಿತು ಪ್ರತಿಕ್ರಿಯಿಸುತ್ತ ಬರೆದ ‘ಏಕೆ ನಾವು ಗೌರಿ ಲಂಕೇಶ್‌ರ ಮೃತ ದೇಹವನ್ನು ನೋಡಬೇಕಾಗಿರಲಿಲ್ಲ’ ಎಂಬ (ಇಂಗ್ಲಿಷ್) ಲೇಖನ ಮನಸ್ಸಿಗೆ ನಾಟುವಂತಿದೆ, ವಾಹಿನಿಗಳು ನಾಚುವಂತಿದೆ.

ಅವರು ಬರೆಯುತ್ತಾರೆ, ‘ದೈಹಿಕವಾಗಿ ಸಣ್ಣಗೆ, ದುರ್ಬಲವಾಗಿ ಕಾಣುತ್ತಿದ್ದರೂ ಗೌರಿಯವರ ಮಾನಸಿಕ ಸ್ಥೈರ್ಯ, ಸೈದ್ಧಾಂತಿಕ ಗಟ್ಟಿತನ ಮತ್ತು ತನ್ನ ವಾದವನ್ನು ಪ್ರತಿಪಾದಿಸುವ ಕೆಚ್ಚನ್ನು ನೀವು ನೋಡಿದ್ದರೆ ಆಕೆಯ ಮೃತ ದೇಹ ಅದಕ್ಕೆ ಸಂಪೂರ್ಣ ತದ್ವಿರುದ್ಧವಾಗಿ ಅಸಹಾಯಕತೆ ಮತ್ತು ವಿಫಲತೆಯನ್ನು ಬಿಂಬಿಸುತ್ತಿತ್ತು. ಗೌರಿಯವರನ್ನು ಬಲ್ಲವರಾಗಿರಲಿ, ಇಲ್ಲದಿರಲಿ, ಟಿ.ವಿ. ವಾಹಿನಿಗಳು ನಿರಂತರವಾಗಿ ದಿನಗಟ್ಟಲೆ ಪ್ರಸಾರ ಮಾಡಿದ ಅವರ ಮೃತ ದೇಹದ ಫೋಟೊ–ವಿಡಿಯೊ ಒಂದು ಸಂದೇಶವನ್ನಂತೂ ಸ್ಪಷ್ಟವಾಗಿ ಸಾರುತ್ತಿತ್ತು: ‘ನಮ್ಮ ಎದುರು ಮಾತಾಡಿದರೆ ಹುಷಾರ್! ನಿಮ್ಮ ಪೆನ್ನಿಗಿಂತ ನಮ್ಮ ಗನ್ನು ಹೆಚ್ಚು ಶಕ್ತಿಯುತವಾದದ್ದು. ವಿರುದ್ಧ ಮಾತಾಡಿದರೆ ಮುಗಿಸಿಬಿಡುತ್ತೇವೆ’ ಎಂದು. ಕೊಲೆಗಡುಕರ ಉದ್ದೇಶವೂ ಈ ಸಂದೇಶವನ್ನು ನೀಡುವುದೇ ಆಗಿತ್ತಲ್ಲವೇ? ಇದನ್ನು ಪ್ರಸಾರ ಮಾಡಿ ಎದೆತಟ್ಟಿಕೊಳ್ಳುವ ಸುದ್ದಿ ವಾಹಿನಿಗಳು ಯೋಚಿಸಬೇಕು, ತಾವು ಯಾರ ಪಕ್ಷದಲ್ಲಿದ್ದಾರೆ ಎಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT