ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಇಡುವವರಿಂದ ದೇವಸ್ಥಾನ ಪವಿತ್ರವಾಗಲ್ಲ

ಧರ್ಮಸ್ಥಳದ ಭೇಟಿ ವಿವಾದ ಮಾಡುತ್ತಿರುವವರ ವಿರುದ್ಧ ಕಿಡಿ ಕಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಾನು ಧರ್ಮಸ್ಥಳದ ದೇವಾಲಯದ ಗರ್ಭಗುಡಿ ಒಳಗೆ ಹೋಗಿಲ್ಲ. ಹೊರಗಡೆ ನಿಂತು ನಮಸ್ಕಾರ ಮಾಡಿ ಬಂದೆ. ಒಂದು ವೇಳೆ ಒಳಗಡೆ ಹೋಗಿ ನಮಸ್ಕಾರ ಮಾಡಿದರೆ ದೇವರು ಅಪವಿತ್ರನಾಗುತ್ತಾನಾ? ದೇವರ ಬಗ್ಗೆ ಸ್ಪಷ್ಟ ತಿಳಿವಳಿಕೆ ಇಲ್ಲದವರು ಇಂತಹ ಮಾತುಗಳನ್ನು ಆಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಮಂಚನಬಲೆಯಲ್ಲಿ ಸೋಮವಾರ ಆಯೋಜಿಸಿದ್ದ ಬೀರೇಶ್ವರ, ಆನೆ ದೇವರು, ಚೌಡೇಶ್ವರಿ ಮತ್ತು ಸಿದ್ದೇದೇವರ ನೂತನ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಆ ದಿನ ಮಂಗಳೂರಿನಲ್ಲಿ ಮೀನು, ಕೋಳಿ ತಿಂದದ್ದು ನಿಜ. ಸಂಜೆ ಧರ್ಮಸ್ಥಳದಲ್ಲಿ ಆಯೋಜಿಸಿದ್ದ ಗ್ರಾಮಾಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಅಲ್ಲಿನ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ದರ್ಶನ ಮಾಡಿಕೊಂಡು ಹೋಗುವಂತೆ ಒತ್ತಾಯಿಸಿದರು. ಹೀಗಾಗಿ ಹೊರಗಡೆಯೇ ನಿಂತು ದರ್ಶನ ಪಡೆದು ಬಂದೆ. ಯಾರು ಇನ್ನೊಂದು ಧರ್ಮ, ಜಾತಿ, ವ್ಯಕ್ತಿಯನ್ನು ದ್ವೇಷಿಸುತ್ತಾರೋ, ಮನುಷ್ಯ ಮನುಷ್ಯರ ನಡುವೆ ಬೆಂಕಿ ಇಡುತ್ತಾರೋ ಅವರು ಮನುಷ್ಯರಾಗಲು ಸಾಧ್ಯವಿಲ್ಲ. ಅಂತಹವರಿಂದ ದೇವಸ್ಥಾನ ಪವಿತ್ರವಾಗಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದರು.

‘ಬಸವಣ್ಣವರು ದೇಹವೇ ದೇಗುಲ ಎಂದು ಪ್ರತಿಪಾದಿಸಿದರು. ದೇವರು ನಮ್ಮಲ್ಲಿಯೂ ಇದ್ದಾನೆ. ಹಾಗಾದರೆ ಮಾಂಸ ತಿನ್ನುವುದನ್ನು ಬಿಡಬೇಕೆ? ಮಾಂಸ ತಿಂದ ಮೇಲೆ 48 ಗಂಟೆ ಶರೀರದೊಳಗೆ ಇರುತ್ತದೆ. ಆಗೆಲ್ಲ ದೇವಸ್ಥಾನಕ್ಕೆ ಹೋಗಬಾರದೆ? ಸತ್ಯವೇ ಸ್ವರ್ಗ, ಮಿಥ್ಯವೇ ನರಕ– ಕನಿಷ್ಠ ಇಷ್ಟನ್ನಾದರೂ ತಿಳಿದುಕೊಂಡರೆ ಸಾಕು. ಆದರೆ ಇಷ್ಟು ಕೂಡ ತಿಳಿದುಕೊಳ್ಳದೆ ತಪ್ಪು ದಾರಿಗೆ ಎಳೆಯುವವರ ಬಗ್ಗೆ ಜನರು ಬಹಳ ಎಚ್ಚರಿಕೆಯಿಂದ ಇರಬೇಕು’ ಎಂದರು.

‘ಆತ್ಮಸಾಕ್ಷಿಯೇ ದೇವರು. ಅದಕ್ಕೆ ದ್ರೋಹ ಮಾಡದವನೇ ನಿಜವಾದ ಮನುಷ್ಯ. ಅದನ್ನೇ ದೇವರು ಮೆಚ್ಚಿಕೊಳ್ಳುತ್ತಾನೆ. ಅದನ್ನು ಬಿಟ್ಟು ನಾವು ಎಷ್ಟೇ ಸಾರಿ ಗಂಧದ ಕಡ್ಡಿ, ಅರಿಶಿನ– ಕುಂಕುಮ, ಕರ್ಪೂರ ಹಚ್ಚಿ, ಕಾಯಿ ಒಡೆದರೂ ದೇವರು ಮೆಚ್ಚಿಕೊಳ್ಳುವುದಿಲ್ಲ. ನಮಗೆ ಬೇಕಾದುದು ಶುದ್ಧ ಮನಸು. ಶುದ್ಧ ಮನಸ್ಸಿನಿಂದ ಪೂಜೆ ಮಾಡಿದವರಿಗೆ ದೇವರು ಒಳ್ಳೆಯದು ಮಾಡುತ್ತಾನೆ. ಅದೇ ದೊಡ್ಡ ಪ್ರಾರ್ಥನೆ ಎಂಬುದರಲ್ಲಿ ನಾನು ನಂಬಿಕೆ ಇಟ್ಟುಕೊಂಡವನು’ ಎಂದು ಹೇಳಿದರು.

ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ‘ಸಿದ್ದರಾಮಯ್ಯ ಅವರು ಇತ್ತೀಚೆಗೆ ಧರ್ಮಸ್ಥಳಕ್ಕೆ ಹೋದ ಸಂದರ್ಭದಲ್ಲಿ ಅವರು ಮಂಜುನಾಥನನ್ನು ಅಪವಿತ್ರಗೊಳಿಸಿಯೇ ಬಿಟ್ಟರು ಎಂದು ಬರೆದರು. ಹಾಲು ಮತದವರಿಗೆ ಸಾಮಾನ್ಯ ಜ್ಞಾನ ಇಲ್ಲವೆಂದು ತಿಳಿದುಕೊಂಡಿದ್ದೀರೇನು? ಹಾಲುಮತದವರಿಗೆ ಸಾಮಾನ್ಯ ಜ್ಞಾನವೂ ಇದೆ. ಭಕ್ತಿಯೂ ಇದೆ. ಸಿದ್ದರಾಮಯ್ಯ ಅವರು ಹೊರಗಡೆ ನಿಂತು ನಮಸ್ಕಾರ ಮಾಡಿ ಬಂದಿದ್ದಾರೆ. ಆದರೆ ಎಲ್ಲರೂ ಮಂಜುನಾಥ ಅಪವಿತ್ರಗೊಂಡ ಎಂದು ಚರ್ಚೆ ಮಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ಭಗವಂತ ಪವಿತ್ರ, ಅಪವಿತ್ರ ಆಗುವುದಿಲ್ಲ. ಆತ ಸದಾ ಶುದ್ಧವಾಗಿರುವ ಪುಣ್ಯಾತ್ಮ. ಒಂದೊಮ್ಮೆ ದೇವರು ಹಾಗೇ ಆಗುವಂತಿದ್ದರೆ ಶ್ರೀಕೃಷ್ಣ ಕನಕದಾಸರಿಗೆ ಒಲಿಯುತ್ತಿರಲಿಲ್ಲ. ನೂರಾರು ವರ್ಷ ದೇವಾಲಯದಲ್ಲಿ ಆರಾಧಿಸಿದ ಯತಿಗಳಿಗೆ ಕೃಷ್ಣ ಮಾತನಾಡಲಿಲ್ಲ. ಕನಕನೊಂದಿಗೆ ಆತ ಏಕೆ ಮಾತನಾಡಿದ ಎಂದರೆ ಆತನ ಅಂತರಂಗದಲ್ಲಿ ಶುದ್ಧವಾದ ಭಕ್ತಿ ಇತ್ತು. ದೇವರು ಭಕ್ತಿಯನ್ನು ನೋಡುತ್ತಾನೆ ವಿನಾ ಆಡಂಬರವಲ್ಲ. ಸಿದ್ದರಾಮಯ್ಯ ಅವರ ಒಳಗೆ ಪರಿಶುದ್ಧತೆ ಇದೆ. ಅವರೊಳಗಿನ ನಿಷ್ಕಲ್ಮಶ ಭಾವನೆಯನ್ನು ಮಂಜುನಾಥ ನೋಡುತ್ತಾನೆ ಹೊರತು ಬೇರೆಯವರಿಗೆ ಅದು ಸಾಧ್ಯವಿಲ್ಲ’ ಎಂದು ಹೇಳಿದರು.

* ಜನರಿಗೆ ಮೋಸ ಮಾಡಿ, ತಪ್ಪು ದಾರಿಗೆ ಎಳೆದು ನಂತರ ನಾವು ಪವಿತ್ರ ಮಾಡುತ್ತೇವೆ ಎಂದರೆ ಆಗುತ್ತದೆಯೆ? ಅದು ಇನ್ನಷ್ಟು ಅಪವಿತ್ರ ಮಾಡಿದಂತೆ.

-ಸಿದ್ದರಾಮಯ್ಯ, ಮುಖ್ಯಮಂತ್ರಿ

‘ಕುಮಾರಸ್ವಾಮಿ ನನ್ನ ಪರ ಮಾತನಾಡಬೇಕಿಲ್ಲ’

ಮೈಸೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ನನ್ನ ಪರ ಮಾತನಾಡಬೇಕಿಲ್ಲ. ಜನ ನನ್ನ ಪರ ಇದ್ದರೆ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಈಚಿನ ದಿನಗಳಲ್ಲಿ ಅವರಿಗೆ ನನ್ನ ಪರ ನಿಲುವಿರುವಂತೆ ಕಾಣುತ್ತಿದೆ. ಹಾಗೆಂದು ಅವರ ಬೆಂಬಲ ನನಗೇನೂ ಬೇಡ. ಜನರ ಬೆಂಬಲ ನನಗೆ ಇದೆ. ಜನ ಯಾರ ಪರ ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು.

ಪಿ.ಜಿ.ಆರ್.ಸಿಂಧ್ಯ ಅವರು ಜೆಡಿಎಸ್‌ನಿಂದ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎನ್ನುವುದು ಸುಳ್ಳು ಸುದ್ದಿ. ಅವರ ಕ್ಷೇತ್ರ ಕನಕಪುರ ಅಥವಾ ರಾಮನಗರ. ಅವರೇಕೆ ಇಲ್ಲಿಗೆ ಬರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ಸಿಂಧ್ಯ ಅವರನ್ನು ಕರೆಸಿಕೊಂಡು ಮಾತನಾಡಿದ್ದಾರೆ. ಸಿಂಧ್ಯ ತಮ್ಮ ನಿಲುವನ್ನು ತಿಳಿಸಿಲ್ಲ. ಅವರು ವರುಣಾದಲ್ಲಿ ಏಕೆ ಸ್ಪರ್ಧಿಸುತ್ತಾರೆ ಎಂದು ಕೇಳಿದರು.

ಯೋಗೀಶ್ವರ್‌ ವ್ಯಾಪಾರಿ: ‘ಸಿ.ಪಿ.ಯೋಗೀಶ್ವರ್‌ ಅವರ ಬಗ್ಗೆ ಮಾತನಾಡಲೇಬಾರದು. ಅವನೊಬ್ಬ ವ್ಯಾಪಾರಿ. ಎಲ್ಲಿ ಅನುಕೂಲವೋ ಅವನು ಅಲ್ಲಿ ಇರುತ್ತಾನೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

‘ಅವನು ಹಲವು ಪಕ್ಷಗಳಿಗೆ ಹೋಗಿ ಬಂದಿದ್ದಾನೆ. ಕಾಂಗ್ರೆಸ್‌ ಸೇರುವುದಾಗಿ ನನ್ನ ಬಳಿಯೂ ಬಂದಿದ್ದ. ಬರುವಂತೆಯೂ ಹೇಳಿದ್ದೆ. ಈಗ ಬಿಜೆಪಿಗೆ ಸೇರಿದ್ದಾನೆ. ಅವನ ಬಗ್ಗೆ ಮಾತನಾಡಿ ಸಮಯ ವ್ಯರ್ಥಮಾಡಿಕೊಳ್ಳಲಾರೆ’ ಎಂದರು.

‘ಬಿಜೆಪಿಯವರು ರಾಜ್ಯದಲ್ಲಿ ಯಾವ ಯಾತ್ರೆ ಮಾಡಿದರೂ ಜನ ಬದಲಾಗುವುದಿಲ್ಲ. ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದಿಂದ ಏನೂ ಬದಲಾಗುವುದಿಲ್ಲ. ಅವರೇನು ಬದಲಾವಣೆ ಮಾಡುವ ಮಂತ್ರದಂಡ ಇಟ್ಟುಕೊಂಡಿದ್ದಾರೇನು’ ಎಂದು ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಾಗ ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT