ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋನಿ ಮೂರ್ತಿಯ ‘ನ್ಯಾನೊ’ ದಾರಿ

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅವಶ್ಯಕತೆಯೇ ಆವಿಷ್ಕಾರದ ತಾಯಿ’ ಎನ್ನುವ ಮಾತೊಂದಿದೆ. ಆಮವಾತದಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಪಡಬಾರದ ಪಾಡು ಪಟ್ಟ, ಎದ್ದು ನಿಲ್ಲಲೂ ಆಗದೆ ಸುಮಾರು ಒಂದು ವರ್ಷ ಹಾಸಿಗೆಯಲ್ಲೇ ಮಲಗಿದ್ದ ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೆಕೊಪ್ಪದ ಶ್ರೀನಿವಾಸಮೂರ್ತಿ, ಈ ಮಾತಿಗೆ ಅತ್ಯುತ್ತಮ ಉದಾಹರಣೆ. ಸೊಂಟ ಹಿಡಿದುಕೊಂಡು, ದೇಹದ ಎಲ್ಲ ಭಾಗಗಳಲ್ಲೂ ನೋವು ಅನುಭವಿಸಿಕೊಂಡು ಅಲೋಪಥಿ, ಆಯುರ್ವೇದ ಎಂದು ಹಲವು ವೈದ್ಯರ ಔಷಧಿಗಳನ್ನು ಉಪಯೋಗಿಸಿದರೂ ಗುಣ ಕಾಣದ ಶ್ರೀನಿವಾಸಮೂರ್ತಿಯವರಿಗೆ ಯಾರೋ ಗೆಳೆಯರು ನೋನಿ ರಸ ತಂದುಕೊಟ್ಟರು. ‘ಇದನ್ನು 12 ವರ್ಷಗಳ ಕಾಲ ದಿನವೂ ಬಿಡದೆ ಕುಡಿಯಿರಿ, ಖಂಡಿತಾ ಗುಣವಾಗುತ್ತೆ’ ಎಂದು ಸಲಹೆ ನೀಡಿದರು.

ಬೆಲೆ ನೋಡಿದರೆ ಲೀಟರ್‌ಗೆ 2500 ರೂಪಾಯಿಗೂ ಅಧಿಕವಿತ್ತು! ಏನಪ್ಪಾ ಮಾಡುವುದು... ಎಂದು ಚಿಂತೆಗೆ ಬಿದ್ದ ಶ್ರೀನಿವಾಸಮೂರ್ತಿ, ಅಂತರ್ಜಾಲದಲ್ಲಿ ನೋನಿ ಕುರಿತು ಹುಡುಕಾಟಕ್ಕೆ ತೊಡಗಿದರು. ಅಲ್ಲಿ ಸಿಕ್ಕಿದ ಮಾಹಿತಿಗಳು ಅವರಲ್ಲಿ ಹೊಸ ಉತ್ಸಾಹವನ್ನು ತುಂಬಿದವು. ನೋಡಿಯೇ ಬಿಡೋಣ... ಎಂದು ನಿರ್ಧರಿಸಿ, ನೋನಿ ಹಣ್ಣನ್ನು ತರಲು ಗೆಳೆಯರನ್ನು ಕರಾವಳಿ ಜಿಲ್ಲೆಯೆಡೆಗೆ ಅಟ್ಟಿದರು. ಗೆಳೆಯರು ನೋನಿ ಹಣ್ಣನ್ನು ಹುಡುಕಾಡಿ ತಂದ ಬಳಿಕ, ಕೊಪ್ಪ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಜಯ್‌ ಅವರನ್ನು ಸಂಪರ್ಕಿಸಿದರು.

ಮೂರ್ತಿಯವರು ಸಂಗ್ರಹಿಸಿದ್ದ ನೋನಿ ಹಣ್ಣುಗಳನ್ನು ಹಾಗೂ ನೋನಿ ಔಷಧಿಯ ಬಗ್ಗೆ ಅವರಿಗಿದ್ದ ಆಸಕ್ತಿಯನ್ನು ಗಮನಿಸಿದ ಡಾ.ಸಂಜಯ್‌, ಮೂರ್ತಿಯವರನ್ನು ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿಕೊಂಡರು. ನೋನಿ ರಸವನ್ನು ತೆಗೆಯುವ ಕ್ರಮವನ್ನು ಹೇಳಿಕೊಟ್ಟರು. ಕೆಲವು ದಿನಗಳ ಚಿಕಿತ್ಸೆಯ ಬಳಿಕ ಮನೆಗೆ ಮರಳಿದ ಮೂರ್ತಿ ಮನೆಯಲ್ಲಿಯೇ ನೋನಿ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಂಡರು.

ವಾರಗಳು ಕಳೆದಂತೆ ನಿಧಾನಕ್ಕೆ ಚೇತರಿಸಿಕೊಂಡು ಮನೆಯೊಳಗೆ, ಅಂಗಳದಲ್ಲಿ ಓಡಾಡತೊಡಗಿದರು ಮೂರ್ತಿ. ಬಹುತೇಕ ನೋವು ಇಲ್ಲವಾಗಿತ್ತು. ಈ ಮಧ್ಯೆ ನೋನಿ ರಸವನ್ನು ಕೇಳಿಕೊಂಡು ಮೂರ್ತಿಯವರ ಬಳಿಗೆ ಬೇರೆ ರೋಗಿಗಳೂ ಬರತೊಡಗಿದರು. ಮೊದಲು ಅವರೇ ತಂದ ಬಾಟ್ಲಿಗಳಿಗೆ ತುಂಬಿಕೊಡುತ್ತಿದ್ದ ಮೂರ್ತಿಯವರು ಬೇಡಿಕೆ ಇದೆ ಎನ್ನುವುದು ಗೊತ್ತಾದಾಗ ತಮ್ಮ ಹೊಲದಲ್ಲೇ ನೋನಿ ಬೆಳೆಯಲು ತೊಡಗಿದರು. ಪತ್ನಿ ಅಂಬುಜಾಕ್ಷಿ ಸಣ್ಣ ಗುಡಿ ಕೈಗಾರಿಕೆಯನ್ನೇ ಸ್ಥಾಪಿಸಲು ಮನಸ್ಸು ಮಾಡಿದರು. ಮನೆಯಲ್ಲೇ ಫ್ಯಾಕ್ಟರಿ. ಹಾಗೆ ಹುಟ್ಟಿದ್ದು ‘ಅಮೃತ್‌ ನೋನಿ’. ಅದನ್ನು ಮಾರುಕಟ್ಟೆಗೆ ಒದಗಿಸಲು ರೂಪಿಸಿದ ಕಂಪೆನಿ ValYou Products.

ಗುಡ್ಡೆಕೊಪ್ಪದಿಂದ ಶಿವಮೊಗ್ಗ ಹೊರವಲಯದ ಹೊಸಳ್ಳಿಯ ರಾಮಿನಕೊಪ್ಪಕ್ಕೆ ಶಿಫ್ಟ್ ಆದ ಶ್ರೀನಿವಾಸಮೂರ್ತಿ, ಈಗ ತಿಂಗಳಿಗೆ 1500 ಲೀಟರ್‌ಗಳಷ್ಟು ನೋನಿ ರಸ ತಯಾರಿಸುತ್ತಿದ್ದಾರೆ. ನೋನಿಯ ಜತೆಗೇ ಅಪರೂಪದ ಹಣ್ಣು, ವನಸ್ಪತಿಗಳನ್ನು ತಂದು ಬೆಳೆಸುತ್ತಿರುವ, ಕಸಿ ಮಾಡುತ್ತಿರುವ ಮೂರ್ತಿಯವರ ತೋಟಕ್ಕೆ ವಿಶ್ವವಿದ್ಯಾಲಯದವರು, ಕೃಷಿಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪತ್ರಕರ್ತರು ಭೇಟಿ ಕೊಡುತ್ತಿದ್ದಾರೆ.

ಶ್ರೀನಿವಾಸಮೂರ್ತಿಯವರ ಪತ್ನಿ ಅಂಬುಜಾ ಗಿಡಮೂಲಿಕೆ ಗಳ ಸಂಯೋಜನೆ, ಮಿಶ್ರಣಾಂಶಗಳ ನಿರ್ವಹಣೆ, ಗಿಡಮೂಲಿಕೆಗಳ ಮಿಶ್ರೀಕರಣ ಮುಂತಾದ ವಿಷಯಗಳಿಗೆ ಸಂಬಂಧಿಸಿ ಹಲವು ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಜ್ಞಾನ ಹೆಚ್ಚಿಸಿಕೊಂಡರೆ, ಎಂಬಿಎ ಮುಗಿಸಿದ ಮಗಳೂ ನೆರವಿಗೆ ನಿಂತಳು. ತೋಟದಲ್ಲೇ ಸಂಸ್ಕರಣಾ ಘಟಕ ಹಾಕಿ, ಪ್ರಯೋಗಾಲಯವನ್ನು ಸ್ಥಾಪಿಸಿದರು. ಈಗ ಅಮೃತ್‌ ನೋನಿ ಇವರ ನ್ಯಾನೊ ಉದ್ಯಮದ ಟ್ರಂಪ್‌ಕಾರ್ಡ್‌. ನೋನಿ ಸೋಪ್‌, ಅಮೃತ್‌ ಕೇಶ ತೈಲ, ಅಮೃತ್‌ ನೋವಿನೆಣ್ಣೆ – ಹೀಗೆ ಹಲವು ಉತ್ಪನ್ನಗಳನ್ನು ಹೊರತಂದರು. ಈ ಉತ್ಪನ್ನಗಳ ಗುಣಮಟ್ಟಕ್ಕೆ ಕ್ರಮೇಣ ಅಗ್‌ಮಾರ್ಕ್‌, ಜಿಎಂಪಿ ಮತ್ತು ಐಎಸ್‌ಒ 9001 ಪ್ರಮಾಣಪತ್ರಗಳೂ ಸಿಕ್ಕಿವೆ.

ಅಮೃತ್‌ ನೋನಿಯನ್ನು ‘ಔಷಧಿ’ ಎಂದು ಕರೆಯಲು ಶ್ರೀನಿವಾಸಮೂರ್ತಿ ಒಪ್ಪುವುದಿಲ್ಲ. ಅವರ ಪ್ರಕಾರ, ಇದು ‘ಹೆಲ್ತ್‌ ಸಪ್ಲಿಮೆಂಟ್‌’. ‘ನನ್ನದು ಸಣ್ಣ ಮಟ್ಟದ ಪ್ರಯೋಗ. ವ್ಯಕ್ತಿಯಿಂದ ವ್ಯಕ್ತಿಗೆ ಪ್ರಚಾರ. ಅಮೃತ್‌ ನೋನಿಯನ್ನು ಸೇವಿಸಿದ ಬಳಿಕ ಸಂಧಿವಾತ, ಆಮವಾತ, ಡಯಾಬಿಟಿಸ್‌ ಮುಂತಾದ ಕಾಯಿಲೆಗಳಿಂದ ಗುಣಮುಕ್ತರಾದವರು ನನ್ನ ಉತ್ಪನ್ನಗಳ ಪ್ರಚಾರವನ್ನು ಅವರೇ ನಡೆಸುತ್ತಾರೆ’ ಎನ್ನುತ್ತಾರೆ ಮೂರ್ತಿ.

‘ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳು ನೋನಿರಸದ ಮಾರಾಟ ಮಾಡುತ್ತಿವೆ. ಒಂದೆರಡು ದೊಡ್ಡ ಕಂಪೆನಿಗಳವರು ನನ್ನನ್ನು ಸಂಪರ್ಕಿಸಿ, ಅವರ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡಲು ಬಯಸಿದರು. ಆದರೆ ಅವರದ್ದು ಭಾರೀ ಪ್ರಚಾರ, ಕಡಿಮೆ ಔಷಧಿ, ದುಬಾರಿ ಬೆಲೆ, ಮಾರಾಟಗಾರರಿಗೆ ಹೆಚ್ಚು ಕಮೀಷನ್‌ – ಹೀಗೆ ಮಾರುಕಟ್ಟೆಯ ತಂತ್ರ. ನನಗೆ ಅದು ಸರಿ ಅನ್ನಿಸಲಿಲ್ಲ. ಪ್ರತಿಯೊಬ್ಬರಿಗೂ ನೋನಿಯ ಮಹತ್ವ ಗೊತ್ತಾಗಬೇಕು. ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ಲಭ್ಯವಾಗಬೇಕು ಎನ್ನುವುದು ನನ್ನ ನಿಲುವು. ಹಾಗೆಂದೇ ನಾನು ರಾಜ್ಯದ ವಿವಿಧೆಡೆ ನೋನಿಯ ಔಷಧೀಯ ಮಹತ್ವವನ್ನು ಎಲ್ಲರಿಗೂ ತಿಳಿಸುತ್ತಾ ಓಡಾಡುತ್ತಿದ್ದೇನೆ’ ಎನ್ನುತ್ತಾರೆ ಮೂರ್ತಿ.

‘ಅಂತಹದ್ದೇನಿದೆ ನೋನಿಯಲ್ಲಿ?’ ಎಂದು ಪ್ರಶ್ನಿಸಿದರೆ, ಅವರು ಉತ್ಸಾಹದಿಂದ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋಗುತ್ತಾರೆ. ‘ಸರ್‌, ಈ ಬಗ್ಗೆ ಪ್ರಪಂಚದಾದ್ಯಂತ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಸಹಸ್ರಾರು ಸಂಶೋಧನೆಗಳು ನಡೆದಿವೆ. ನೋನಿಗೆ ಸಂಬಂಧಿಸಿ, 10 ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು ಒಂದು ನೂರಕ್ಕೂ ಹೆಚ್ಚು ಯೂನಿವರ್ಸಿಟಿಗಳಲ್ಲಿ 650ಕ್ಕೂ ಹೆಚ್ಚು ಪಿಎಚ್‌.ಡಿಗಳನ್ನು ತಗೊಂಡಿದ್ದಾರೆ. ನೀವು ಅಂತರ್ಜಾಲದಲ್ಲಿ ಜಾಲಾಡಿದರೆ ಒಂದು ಕೋಟಿಗೂ ಹೆಚ್ಚು ವೆಬ್ ಪುಟಗಳು ಸಿಗುತ್ತವೆ. ಆರೋಗ್ಯವಂತರಾಗಿರಲು ನಮ್ಮ ದೇಹಕ್ಕೆ 200ಕ್ಕೂ ಹೆಚ್ಚು ಪೋಷಕಾಂಶಗಳು ಬೇಕು. ಅದರಲ್ಲಿ 164ರಷ್ಟು ಪೋಷಕಾಂಶಗಳು ಇರುವ ಪ್ರಪಂಚದ ಏಕೈಕ ಹಣ್ಣು ಇದು. 20 ಅಮೈನೋ ಆಸಿಡ್ಸ್ ನಮ್ಮ ದೇಹದಲ್ಲಿ ಕೆಲಸ ಮಾಡಬೇಕು – ಅದರಲ್ಲಿ 17 ಅಮೈನೋ ಆಸಿಡ್ಸ್‌ ಈ ಹಣ್ಣಿನಲ್ಲಿದೆ ಎಂದು ಸಂಶೋಧಕರು ಗುರುತಿಸಿದ್ದಾರೆ’ ಎನ್ನುತ್ತಾರೆ ಮೂರ್ತಿ.

‘ನಮ್ಮ ಜೀವಕೋಶದಲ್ಲಿ ಝೆರಾನೈನ್ ಅಂತ ಆಲ್ಕಲೈಡ್ ಬಿಡುಗಡೆ ಆಗುತ್ತದೆ. ಅದರ ಕೆಲಸ ಜೀವಕೋಶಗಳು ಸಾಯದಂತೆ ನೋಡಿಕೊಳ್ಳುವುದು. ಏನೇ ತಿಂದರೂ ಕರಗುವುದಕ್ಕೆ ಇದು ಬೇಕು. ವಿಷಾಂಶಗಳನ್ನು ದೇಹದಿಂದ ಹೊರಕ್ಕೆ ಹಾಕುತ್ತದೆ. ಇದನ್ನು ಕೃತಕವಾಗಿ ತಯಾರಿಸಲು ಬಹಳ ಸಂಶೋಧನೆಗಳು ನಡೆದರೂ ಸಾಧ್ಯವಾಗಿಲ್ಲ. ನೋನಿಯಲ್ಲಿ ಝೆರಾನೈನ್ ಯಥೇಚ್ಛವಾಗಿದೆ. ಪೈನಾಪಲ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಇದೆ. ಝೆರಾನೈನ್ ಸರಿಯಾಗಿ ದೇಹಕ್ಕೆ ಪೂರೈಕೆ ಆದರೆ ಜೀವಕೋಶಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತವೆ’ ಎನ್ನುವುದು ಮೂರ್ತಿಯವರು ಕಂಡುಕೊಂಡ ಸಂಶೋಧನೆಯ ಅಂಶಗಳು.

‘ನಾನು ಔಷಧಿ ಕೊಟ್ಟು ಪರಿಣಾಮ ವೀಕ್ಷಣೆ ಮಾಡಿದವರಲ್ಲಿ, ಹತ್ತರಲ್ಲಿ ನಾಲ್ಕು ಜನರಿಗೆ ಅದ್ಭುತ ಪರಿಣಾಮ ಲಭಿಸಿದೆ. ಗಂಟಲು ಕ್ಯಾನ್ಸರ್ ಹೊಂದಿದ ರೋಗಿಗೆ ನಡೆದಾಡಲು ಆಗಿದೆ, ಮಾತನಾಡಲು ಆಗಿದೆ. ಕ್ಯಾನ್ಸರ್ ಗುಣ ಆಗಿದೆ ಅಂತ ನಾನು ಹೇಳುತ್ತಿಲ್ಲ. ಆದರೆ ಆ ರೋಗಿ ಆರಾಮವಾಗಿ ಓಡಾಡುತ್ತಿದ್ದಾರೆ. ಬೆಂಗಳೂರಿನ ಜಿಕೆವಿಕೆಯಲ್ಲಿ ಡಾ. ವಸುಂಧರಾ ಅವರ ಸಮ್ಮುಖದಲ್ಲಿ ಹೀಗೆ ವಿವಿಧ ರೋಗಗಳಿಂದ ಗುಣವಾದ ಸುಮಾರು 100 ಮಂದಿಯ ಸಭೆ ನಡೆಸಿ ಅವರ ಅನುಭವಗಳನ್ನು ದಾಖಲಿಸಿದ್ದೇನೆ. ಕೃಷಿಕನಾಗಿ ಇಷ್ಟು ಮಾಡಿದ್ದೇನೆ; ಇದು ನನ್ನ ಸಬ್ಜೆಕ್ಟ್ ಅಲ್ಲ. ಕೃಷಿ ವಿಜ್ಞಾನಿಗಳು ಸಂಶೋಧನೆಯನ್ನು ಮುಂದುವರಿಸಿ ಎಂದು ನಾನು ನೂರು ಗಿಡಗಳನ್ನು ಬೆಳೆಸಲು ಅವರಿಗೆ ಕೊಟ್ಟು ಬಂದಿದ್ದೇನೆ. ಕೊಪ್ಪಕ್ಕೆ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬಂದಾಗ ಭೇಟಿಯಾಗಿ ನೋನಿಯ ಮಹತ್ವವನ್ನು ವಿವರಿಸಿದೆ. ಅವರು ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ದೆಹಲಿಗೆ ರಾಷ್ಟ್ರಪತಿ ಭವನಕ್ಕೆ 400 ಗಿಡಗಳನ್ನು ಕಳಿಸಿದ್ದೇನೆ. ಸಾಧ್ಯವಾದಷ್ಟು ಹೆಚ್ಚು ಜನರಿಗೆ ನೋನಿಯ ಮಹತ್ವ ಅರಿವಾಗಲಿ ಎನ್ನುವುದು ನನ್ನ ಆಸೆ’ ಎನ್ನುತ್ತಾರೆ ಮೂರ್ತಿ.

ಅಮೆರಿಕದಲ್ಲಿ ನೋನಿಯ ಬಳಕೆ ಹೆಚ್ಚಿದೆ. ಯೂರೋಪ್‌ನಲ್ಲಿ ಇದನ್ನು novel food ಎನ್ನುತ್ತಾರೆ. ಸ್ವಿಟ್ಜರ್ಲೆಂಡ್‌ನಲ್ಲಿ ಸಾಕಷ್ಟು ನೋನಿ ಕೆಫೆಗಳಿವೆ. ‘ಡಿವೈನ್‌ ನೋನಿ’ ಎನ್ನುವ ಕಂಪನಿ ತಿಂಗಳಿಗೆ ಒಂದು ಲಕ್ಷ ಲೀಟರ್‌ಗೂ ಹೆಚ್ಚು ನೋನಿ ರಸವನ್ನು 28ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ. ನಮ್ಮಲ್ಲಿ ಮಾತ್ರ ಇನ್ನೂ ನೋನಿ ರಸ ಬಳಕೆ ಪರಿಪೂರ್ಣವಾಗಿ ಆಗುತ್ತಿಲ್ಲ ಎನ್ನುವುದು ಮೂರ್ತಿಯವರ ಅಳಲು.

***

ನೋನಿಯ ಮಹತ್ವ
ನೋನಿಯಲ್ಲಿ ಝೆರಾನಿನ್ ಒಂದೇ ಇಲ್ಲ, ಇದರಲ್ಲಿ ಮನುಷ್ಯ ಮತ್ತು ಪ್ರಾಣಿಗಳಿಗೆ ಬರುವ ಅನೇಕ ರೋಗಗಳನ್ನು ವಾಸಿಮಾಡುವ ಅದ್ಭುತ ಸಸ್ಯ ರಾಸಾಯನಿಕಗಳೂ  ಇವೆ. ಖನಿಜಾಂಶಗಳು, ಅಮೈನೋ ಆಮ್ಲಗಳು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಲವು ಆ್ಯಂಟಿಯಾಕ್ಸಿಡೆಂಟ್‌ಗಳಿವೆ. ಜೀವ ರಾಸಾಯನಿಕ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಆಲ್ಕಲೈಡ್‌ಗಳು, ಫ್ಲೇವನಾಯ್ಡ್ಸ್, ಇರಿಡಾಡೈ, ಫ್ಯಾಟಿ ಆಸಿಡ್ಸ್, ಕಾರ್ಬೋಹೈಡ್ರೇಟ್ಸ್, ಸ್ಕೋಪೊಲಿಟಿನ್, ಬಿಟಾ ಸಿಸ್ಟಾಲ್, ವಿಷಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ, ನೋವು ಬಾವುಗಳನ್ನು ಕಡಿಮೆ ಮಾಡಬಲ್ಲ ಅನೇಕ ಸಸ್ಯ ರಾಸಾಯನಿಕ ಘಟಕಗಳಿವೆ. ಸಂಶೋಧಕರು ನೋನಿ ಗಿಡವನ್ನು ‘ಬದುಕಿರುವ ಒಂದು ಜೀವ ರಾಸಾಯನಿಕ ಕಾರ್ಖಾನೆ’ ಎಂದೇ ಕರೆದಿದ್ದಾರೆ.

***

ಪ್ರಗತಿಪರ ರೈತ
ರಾಮಿನಕೊಪ್ಪದಲ್ಲಿರುವ ಶ್ರೀನಿವಾಸಮೂರ್ತಿಯವರ ತೋಟದಲ್ಲಿ ನೋನಿ ಮಾತ್ರವಲ್ಲ, ಇನ್ನೂ ಹಲವಾರು ವೈಶಿಷ್ಟ್ಯಪೂರ್ಣ ಗಿಡಗಳು ಇವೆ. ಎಲೆ, ಕಾಯಿ ಎಲ್ಲವೂ ನೀಲಿ ಆಗಿರುವ ಮಾವಿನ ಹಣ್ಣಿನ ಗಿಡಗಳಿವೆ (ಇದು ಮಲ್ಲಿಕಾ ಹಣ್ಣನ್ನು ಹೋಲುತ್ತದೆ). ಅತ್ಯಧಿಕ ಇಳುವರಿ ನೀಡುವ ಕಿತ್ತಳೆ ಗಿಡವಿದೆ – ಇದು ಒಂದು ಅಡಿ ಎತ್ತರವಾದಾಗ ಐದಾರು ಕಾಯಿ ಬಿಟ್ಟಿತ್ತು. ಲೋಡ್‌ ಹೆಚ್ಚಾಗಬಾರದು ಎಂದು ಒಂದು ಕಾಯಿಯನ್ನು ಮಾತ್ರ ಉಳಿಸಿಕೊಂಡಿದ್ದಾರೆ. ಮೇಣರಹಿತ ಹಲಸಿನ ಹಣ್ಣು, ಪೂರ್ತಿ ಕೆಂಪು ಬಣ್ಣದ ಹಲಸಿನ ಹಣ್ಣು ಸಹಿತ ಒಟ್ಟು ಐದು ವೆರೈಟಿಯ ಹಲಸಿನ ಹಣ್ಣಿನ ಗಿಡಗಳಿವೆ. ಕೆಂಪು ಮತ್ತು ಗಿಣಿಹಸಿರು ಬಣ್ಣದ ಚಕ್ಕೋತ, ಸೀಬೆಕಾಯಿ, ಅವಕಡ (ಬಟರ್‌ಫ್ರೂಟ್‌)– ಹೀಗೆ ಎಲ್ಲದರ ವಿಶಿಷ್ಟ ತಳಿಗಳಿವೆ. ಕೆಲವನ್ನು ವಿದೇಶಗಳಿಂದ ತರಿಸಿದ್ದಾರೆ.

ಮೂರ್ತಿಯವರ ಸಂಪರ್ಕ ಸಂಖ್ಯೆ: 9663367129 / 9902950200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT