ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಮಿತೆ ದಾಖಲಾಗುವ ಸಮಯ...

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ರಾತ್ರಿ ಬಿದ್ದ ಭರಪೂರ ಮಳೆಗೆ ಮರುದಿನ ಏರು ಮಧ್ಯಾಹ್ನವಾದರೂ ಹೊಳೆ ಆರ್ಭಟಿಸುತ್ತ ಹರಿಯುತ್ತಲೇ ಇತ್ತು...

ಕೂಲಿಗೆ ಹೋದ ಮಗ ಬರಲಿಲ್ಲ ಎಂದು ತಾಯಿ ಲಕ್ಷ್ಮವ್ವ ಗುಡಿಸಲಿನ ಬಾಗಿಲಿಗೆ ಆತುಕೊಂಡು ಹೊಳೆ ಆಚೆ ಕಡೆಯಿಂದ ಯಾರೇ ಬಂದರೂ ‘ಏಯ್ ನಮ್ ಕೂಸು ಬಂತಾ ಕಣ್ಣಪ್ಪಾ’ ಎನ್ನುತ್ತಲೇ ಮಳೆ ಹೊಡೆತಕ್ಕೆ ಅಂಗಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸೌದೆಪುಳ್ಳೆ ಪೇರಿಸುತ್ತಿದ್ದರು. ಇನ್ನೂ ಬಾರದ ಮಗನ ಕುರಿತ ದುಗುಡ ಅವರ ಸುಕ್ಕುಗಟ್ಟಿದ ಮುಖದ ತುಂಬೆಲ್ಲಾ ಹರಡಿಕೊಂಡಿತ್ತು.

ಅವರ ಚಿಂತೆಗೆ ಭಂಗವಾಗದಂತೆ ಮಾತಿಗೆ ಎಳೆದಾಗ ‘ಈ ವರ್ಸಾ ವಸೀ ಮಳೆ ಬಂತೇ; ಹತ್ತು ವರ್ಸಾ ಆದ್ಮೇಲೆ ಹೊಳೆಗೆ ನೀರ್ ಬಂತು. ಒಂದ್ ಸೇತುವೆ ಕಟ್ಟಿಸಿಕೊಡಿ ಸ್ವಾಮೀ ಎಂದು ಎಮ್ಮೆಲ್ಲೇಗೆ ಕೇಳಿದ್ರೆ ನಿಮ್ ಊರನಾಗೆ ಎಷ್ಟ್ ತಲೆಗಳವೆ’ ಎಂದು ಓಟಿನ ಲೆಕ್ಕಾಚಾರ ಹಾಕಿದರು ಎಂದು ಜನಪ್ರತಿನಿಧಿ ವರ್ತನೆಗೆ ಸಿಡಿಮಿಡಿಗೊಂಡರು.

‘ಹಾಳಾದ್ ಒಂದು ಸೇತುವೆ ಆಗಿದ್ದರೆ ನಿನ್ನೆ ಹೋದ ಮಗ ಸಲೀಸಾಗಿ ಮನೆ ಸೇರುತ್ತಿದ್ದ’ ಎಂದು ತಾನು ವಾಸವಾಗಿರುವ ಕೊಳ್ಳೆಗಾಲ ತಾಲ್ಲೂಕಿನ ಹಿತ್ತಲದೊಡ್ಡಿ ಉಪ್ಪಾರರ ‘ಮೊಳೆ’ ದೈನೇಸಿ ಸ್ಥಿತಿ ಕುರಿತು ಶಪಿಸುತ್ತಿದ್ದರು. ಅವರ ಮಾತುಗಳು ಅಲ್ಲಿನ ಪರಿಸ್ಥಿತಿಗೆ ಸಾಕ್ಷ್ಯ ನುಡಿಯುತ್ತಿದ್ದವು.

ಮಳೆ ಬಂದರೆ ಸಂಪರ್ಕ ಕಳೆದುಕೊಳ್ಳುವ, ದಶಕಗಳಿಂದಲೂ ನೀರು, ರಸ್ತೆ ಕಾಣದ ಗುಡಿಸಲು ನಿವಾಸಿಗಳನ್ನು ರಾಜಕಾರಣಿಗಳು ಓಟ್ ಹಾಕಲು ಅಷ್ಟೇ ಗಾಳ ಮಾಡಿಕೊಂಡಿದ್ದಾರೆ ಎಂದು ಗ್ರಾಮದ ಯುವಕ ರಾಜು ತಮ್ಮ ಹಕ್ಕುಗಳ ಬಗ್ಗೆ ಎಚ್ಚೆತ್ತ ದನಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿರುವ ಇಂತಹ ದಾಖಲೆ ರಹಿತ ಗ್ರಾಮಗಳಿಗೆ ಭೇಟಿ ನೀಡಿದರೆ ಒಡಲುರಿಯ ಕಥೆಗಳು ತೆರೆದುಕೊಳ್ಳುತ್ತವೆ. ದಶಕಗಳಿಂದಲೂ ಜನರ ಒಡಲಿನಲ್ಲಿ ಅಡಗಿರುವ ನೋವು, ಅಸಹಾಯಕತೆ ದೂರವಾಗುವ ಕಾಲ ಬಂದಿದೆ.

ಕರ್ನಾಟಕ ಭೂ ಸುಧಾರಣೆ 2016 ಮಸೂದೆಗೆ ರಾಷ್ಟ್ರಪತಿ ಅವರಿಂದ ಅಂಕಿತ ಬಿದ್ದಿರುವುದರಿಂದ ದಶಕಗಳಿಂದಲೂ ದಾಖಲೆ ಇಲ್ಲದ ಗಡಿ ಮತ್ತು ಎಲ್ಲೆಯನ್ನು ಗುರುತಿಸದ, ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಜನವಸತಿ ಪ್ರದೇಶದ ಬಡ ಜನರಿಗೆ ಭೂಮಿ ಮತ್ತು ನಿವೇಶನದ ಒಡೆತನ ಸಿಗಲಿದೆ. ಕಡುಕಷ್ಟ ಅನುಭವಿಸಿದ ಜನರ ಮುಖಭಾವದಲ್ಲಿ ಈ ಐತಿಹಾಸಿಕ ನಿರ್ಣಯದಿಂದ ಭರವಸೆಯ ಕೋಲ್ಮಿಂಚು ಮಿನುಗು ತೊಡಗಿದೆ.

ಸಾವಿರಾರು ಕೂಲಿ ಹಾಗೂ ಕೃಷಿ ಕಾರ್ಮಿಕರು 1979ರ ಜನವರಿ ಮೊದಲ ದಿನಕ್ಕೆ ಪೂರ್ವದಲ್ಲಿ ಯಾವುದೇ ಗ್ರಾಮದಲ್ಲಿ ತನಗೆ ಸೇರಿರದ ಭೂಮಿಯಲ್ಲಿ ವಾಸವಾಗಿದ್ದಲ್ಲಿ ಅಂತಹ ವಾಸದ ಮನೆಯನ್ನು ಅವರು ಇರುವ ನಿವೇಶನದ ಸಹಿತವಾಗಿ ಮತ್ತು ಅದಕ್ಕೆ ನಿಕಟವಾಗಿ ತಾಗಿಕೊಂಡಿರುವ ಹಾಗೂ ಅದರ ಅನುಭೋಗಕ್ಕೆ ಅವಶ್ಯವಾಗಿರುವ ಭೂಮಿಗೆ ಹಕ್ಕುಪತ್ರ ಸಿಗಲಿದೆ.

ರಾಜ್ಯದಲ್ಲಿ ಇಂತಹ 58,000 ಜನವಸತಿ ಪ್ರದೇಶಗಳು ಇವೆ ಎಂದು ಸರ್ಕಾರದ ಅಂಕಿ– ಅಂಶಗಳಿಂದ ತಿಳಿದು ಬಂದಿದೆ. ಅದರಲ್ಲಿ ಕಂದಾಯ ಗ್ರಾಮ ಪರಿವರ್ತನೆಗೆ ಅರ್ಹವಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳ ಸಂಖ್ಯೆ 8239 ಎಂದು ಆಯಾ ಜಿಲ್ಲೆ ಜಿಲ್ಲಾಧಿಕಾರಿಗಳ ವರದಿ ಸಾದರಪಡಿಸುತ್ತದೆ.

ಕಂದಾಯರಹಿತ ಗ್ರಾಮಗಳ ಜನ ಸಮಸ್ಯೆಗಳನ್ನೇ ಹೊದ್ದು ಮಲಗಿದ್ದರು. ಈಗ ನೀರು, ಭೂಮಿ, ನಿವೇಶನ, ರಸ್ತೆ, ಸಾರಿಗೆ, ಶಿಕ್ಷಣ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ ಎಂದರು ನ್ಯಾಷನಲ್ ದಲಿತ್ ಮೂವ್‌ಮೆಂಟ್ ಫಾರ್ ಜಸ್ಟೀಸ್ ಸಂಘಟನೆಯ ಸಿದ್ದರಾಜು.

ಕಾಯ್ದೆ ಜಾರಿಗಾಗಿ ಒತ್ತಾಯಿಸಿ ಇದುವರೆಗೂ ರಾಜ್ಯದಲ್ಲಿ ನಡೆದ ಹೋರಾಟದ ಘಟನಾವಳಿಗಳನ್ನು ‘ಹಮ್ ಗೋರ್ ಕಟ್ ಮಾಳೋ’ ಸಂಘಟನೆಯ ಶಾಂತರಾಜು ಮೆಲುಕು ಹಾಕಿದರು. ದಾಖಲೆ ರಹಿತ ಗ್ರಾಮಗಳಲ್ಲಿ ಕೆಲಸಕ್ಕಾಗಿ ಗುಳೆ ಹೋಗುವುದು, ಜೀತ, ಮಕ್ಕಳ ಮಾರಾಟ, ಭ್ರೂಣಹತ್ಯೆ, ಬಡತನ ಸೇರಿದಂತೆ ಹಲವು ಸಾಮಾಜಿಕ ಸಮಸ್ಯೆಗಳು ಹೆಚ್ಚಿವೆ. ಇನ್ನುಮುಂದೆ ಅವುಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಆಗುವುದರಿಂದ ಬೆಳಕು ಮೂಡಲಿದೆ ಎಂದು ಹರ್ಷಪಟ್ಟರು.

ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಂಡರೆ ದಾಖಲೆ ರಹಿತ ಜನವಸತಿ ಪ್ರದೇಶದಲ್ಲಿ ಭೂ ಸ್ವಾಧೀನಹಕ್ಕು, ಶಿಕ್ಷಣ, ಉದ್ಯೋಗ, ಆಹಾರ, ಮಾಹಿತಿ ಹಕ್ಕುಗಳಿಗೆ ವಿಶೇಷ ಮಾನ್ಯತೆ ಸಿಗಲಿದೆ.

ಅಲ್ಲದೆ, ಆಧುನಿಕ ಗ್ರಾಮ, ಸುವರ್ಣ ಗ್ರಾಮ, ಆದರ್ಶ ಗ್ರಾಮ, ವಿಕಾಸ ಗ್ರಾಮಗಳ ಮಾದರಿಯಂತೆ ಈ ಗ್ರಾಮಗಳೂ ಮುಂದಿನ ದಿನಮಾನಗಳಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಹಕಾರಿಯಾಗಲಿದೆ ಎಂಬುದು ಈ ಜನರ ಆಶಾವಾದ.

ರಾಜ್ಯದ ಐತಿಹಾಸಿಕ, ಸಾಂಸ್ಕೃತಿಕ, ಪಾರಂಪರಿಕ ಹೆಸರುಗಳಾದ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರಹಟ್ಟಿ , ಮಜರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್ ಮತ್ತು ಕಾಲೊನಿ, ಬಡಾವಣೆಗಳು, ವಾಡಿಗಳು ಇನ್ನೂ ಇತರ ಹೆಸರುಗಳಿಂದ ಕರೆಯಲ್ಪಡುವ ಸಮುದಾಯಗಳು ಪ್ರತ್ಯೇಕವಾಗಿ ತಮ್ಮ ಅಸ್ಮಿತೆ ಉಳಿಸಿಕೊಳ್ಳಲು ಈ ಕಾಯ್ದೆ ನೆರವಾಗಲಿದೆ ಎಂಬುದು ತಜ್ಞರ ವಿಶ್ಲೇಷಣೆ.

ಇದುವರೆಗೂ ಈ ದಾಖಲೆ ರಹಿತ ಗ್ರಾಮಗಳು ಗುಡ್ಡ – ಬೆಟ್ಟ, ಅರಣ್ಯ ಪ್ರದೇಶ, ಠಾಣ, ಬೇಚರ ಗ್ರಾಮದಲ್ಲಿ, ಕೇಂದ್ರ ಅಧಿಪತ್ಯದಲ್ಲಿರುವ ಅರಣ್ಯ ಪ್ರದೇಶದಲ್ಲಿ, ಖಾಸಗಿ ವ್ಯಕ್ತಿಗಳ ಭೂಮಿಯಲ್ಲಿ ಮತ್ತು ಅರೆ ಸರ್ಕಾರಿ ಪ್ರದೇಶದಲ್ಲಿ ನೆಲೆಗೊಂಡಿವೆ. ಇವೆಲ್ಲವೂ ಅನಧಿಕೃತ ಎಂದು ಕಂದಾಯ ದಾಖಲೆಗಳು ಹೇಳುತ್ತವೆ.

ಯಾವುದೇ ಜನವಸತಿ ಪ್ರದೇಶವನ್ನು ಕಂದಾಯ ಗ್ರಾಮವಾಗಿ ಘೋಷಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಪ್ರಕರಣ 5–6ರಲ್ಲಿ ಅವಕಾಶ ಕಲ್ಪಿಸಲಾಗಿದೆ.

1993ರಲ್ಲಿಯೇ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿ ಅದರಂತೆ ಕುಟುಂಬಗಳ ಸಂಖ್ಯೆ 60, ಜನಸಂಖ್ಯೆ 300, ಜಮೀನಿನ ವಿಸ್ತೀರ್ಣ 900 ಎಕರೆ ಮಿತಿಯಲ್ಲಿರುವ ಮೂಲಗ್ರಾಮಕ್ಕೆ ಹೊಂದಿಕೊಂಡಿರದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಮಾನದಂಡ ರೂಪಿಸಿತ್ತು.

ನಂತರದ ವಿದ್ಯಮಾನದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಈ ಸಂಬಂಧ ಆಗಿರುವ ಪ್ರಗತಿಯ ವರದಿ ಸರ್ಕಾರಕ್ಕೆ ತೃಪ್ತಿ ಆಗದ ಕಾರಣ ಈ ಯೋಜನೆ ದಾಖಲೆಗಳಲ್ಲಿಯೇ ನನೆಗುದಿಗೆ ಬಿದ್ದಿತು.

2013ರಲ್ಲಿ ಈ ವಿಷಯದ ಪ್ರಸ್ತಾವ ಮುನ್ನೆಲೆಗೆ ಬಂತು. ಇದರ ಸಾಧಕ –ಬಾಧಕ ಪರಾಮರ್ಶಿಸಿದ ಸರ್ಕಾರ ಅಂತಿಮವಾಗಿ ಕರ್ನಾಟಕ ರಾಜ್ಯ ಭೂ ಸುಧಾರಣಾ (ತಿದ್ದುಪಡಿ) ಮಸೂದೆ 2016 ರೂಪಿಸಿ ಸದನದ ಅನುಮೋದನೆ ಪಡೆಯಿತು. ‘ಇದು ನಾಡಿನ ಸಾವಿರಾರು ದಲಿತ, ಆದಿವಾಸಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಸತಿ ಮತ್ತು ಭೂಮಿ ಹಕ್ಕು ನೀಡುವ ಕಾಯ್ದೆ ಎನ್ನುವುದು ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೊ. ಪ್ರದೀಪ್ ರಮಾವತ್ ಅಭಿಪ್ರಾಯ.

ಕೃಷಿ ಕಾರ್ಮಿಕರಿಗೆ ಭೂಮಿ ಒಡೆತನದ ಹಕ್ಕು ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ತಳಸಮುದಾಯಗಳ ಅಧ್ಯಯನ ಕೇಂದ್ರದ ಸಂಶೋಧನಾ ಸಲಹೆಗಾರ ಡಾ.ಆರ್‌.ವಿ. ಚಂದ್ರಶೇಖರ್ ಪ್ರತಿಪಾದಿಸಿದರು.

ಭವಿಷ್ಯದ ಕುಡಿಗಳು ಸ್ವಂತಸೂರಿನ ಹಕ್ಕುದಾರರಾಗಿ, ಡಾಂಬರು ರಸ್ತೆಯಲ್ಲಿ ನಡೆದಾಡುವ, ದೀಪದ ಬೆಳಕು ಕಾಣುವ, ನಾಗರಿಕ ಸೌಲಭ್ಯ ಪಡೆಯುವ ಕನಸಿಗೆ ರೆಕ್ಕೆ ಮೂಡುವ ಸಮಯ ಬಂದಿದೆ ಎಂದು ಹಲವು ವರ್ಷಗಳಿಂದ ಈ ಜನರ ಹೋರಾಟದಲ್ಲಿ ಹೆಜ್ಜೆಹಾಕಿರುವ ಅಶೋಕ ಶೆಟ್ಟಿ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT