ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರುವುದನ್ನು ನಿಲ್ಲಿಸಬೇಕು

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನಮ್ಮಲ್ಲಿ ಕೆಲವರಿಗೆ ಜೀವನದಲ್ಲಿ ಯಾವುದರಲ್ಲೂ ತೃಪ್ತಿಯಿಲ್ಲ. ಯಾವಾಗಲೂ ಗೊಣಗುತ್ತಾ, ದೂರುತ್ತಾ ಇರುವ ಅಭ್ಯಾಸ. ಪರಿಸ್ಥಿತಿ ಎಷ್ಟೇ ಒಳ್ಳೆಯದಿದ್ದರೂ, ಆ ಪರಿಸ್ಥಿತಿಯ ಗೌಣ ಹುಳುಕುಗಳನ್ನು ಹುಡುಕಿ ತೆಗೆದು ಅವುಗಳ ಬಗ್ಗೆ ದೂರುತ್ತೇವೆ. ರಸ್ತೆಗಳ ಬಗ್ಗೆ, ಸ್ವಚ್ಛತೆಯ ಬಗ್ಗೆ, ಸೌಕರ್ಯಗಳು ಇಲ್ಲದಿರುವ ಬಗ್ಗೆ, ಬಸ್ಸುಗಳ ಬಗ್ಗೆ ದೂರುತ್ತಲೇ ಇರುತ್ತೇವೆ.

ಹೀಗೊಂದು ಕಥೆಯಿದೆ. ಸ್ಪೇಯ್ನ್ ದೇಶದ ಧಾರ್ಮಿಕ ಮಠವೊಂದಕ್ಕೆ ಯುವಕನೊಬ್ಬ ತರಬೇತಿಗಾಗಿ ಸೇರ್ಪಡೆಗೊಂಡ. ಆ ಗುರುಮಠದಲ್ಲಿ ಮಾತಾಡುವುದು ನಿಷಿದ್ಧ. ಸಂಪೂರ್ಣ ಮೌನದಿಂದ ಜೀವಿಸಬೇಕಿತ್ತು. ಮಾತಾಡಲು ಅವಕಾಶ ಎರಡು ವರ್ಷಗಳಿಗೊಮ್ಮೆ ಸಿಗುತ್ತಿತ್ತು, ಅದೂ ಕೇವಲ ಎರಡು ಪದಗಳು.

ಉಸಿರು ಕಟ್ಟಿ ಜೀವಿಸಿದ ಯುವಕ ಎರಡು ವರ್ಷಗಳ ನಂತರ ಎರಡು ಪದಗಳನ್ನು ಆಡಲು ಸಿಕ್ಕಿದ ಅವಕಾಶದಲ್ಲಿ, ಊಟ ಚೆನ್ನಾಗಿಲ್ಲ ಎಂದ. ಮತ್ತೆರಡು ವರ್ಷಗಳು ಕಳೆದಾಗ ಮತ್ತೆ ಸಿಕ್ಕಿದ ಅವಕಾಶದಲ್ಲಿ, ಹಾಸಿಗೆ ಒರಟಾಗಿದೆ ಎಂದ.

ಇನ್ನೂ ಎರಡು ವರ್ಷಗಳ ತರುವಾಯ ಸಿಕ್ಕಿದ ಅವಕಾಶದಲ್ಲಿ, ನಾನಿನ್ನು ಹೊರಡುತ್ತೇನೆ ಎಂದು ಧಾರ್ಮಿಕ ಮಠವನ್ನು ಬಿಟ್ಟು ಮನೆಗೆ ಹೊರಟ. ಇದನ್ನು ಕೇಳಿದ ಧಾರ್ಮಿಕ ಮಠದ ಮುಖ್ಯಸ್ಥರು ಯುವಕನಿಗೆ ಹೇಳಿದರು, ಇದು ನನಗೆ ಒಂದಿಷ್ಟೂ ಹೊಸತಲ್ಲ, ನೀನು ಈ ಧಾರ್ಮಿಕ ಮಠಕ್ಕೆ ಕಾಲಿಟ್ಟ ದಿನದಿಂದ ಮಾಡಿದ್ದು ಒಂದೇ, ದೂರುವುದು.

ಸಂತ ಪೌಲರು ಫಿಲಿಪ್ಪಿಯರಿಗೆ ಬರೆದ ಪತ್ರದಲ್ಲಿ, ನೀವು ಮಾಡುವ ಎಲ್ಲಾ ಕಾರ್ಯಗಳನ್ನು ಗೊಣಗುಟ್ಟದೆ, ವಿವಾದವಿಲ್ಲದೆ, ಏಕ ಮನಸ್ಸಿನಿಂದ ಮಾಡಿ. ಆಗ ನಕ್ಷತ್ರಗಳು ಆಕಾಶವನ್ನು ಬೆಳಗಿಸುವಂತೆ ಪ್ರಪಂಚದಲ್ಲಿ ನೀವು ಕಂಗೊಳಿಸುವಿರಿ ಎಂದು ಹೇಳುತ್ತಾರೆ.

ಯೇಸುಸ್ವಾಮಿ ಹೇಳಿದ ಚಿನ್ನದ ನಾಣ್ಯಗಳ ಸಾಮತಿಯಲ್ಲಿ ತಮ್ಮ ಒಡೆಯನಿಂದ ಐದು ಹಾಗೂ ಎರಡು ತಲೆಂತುಗಳನ್ನು ಪಡೆದ ಸೇವಕರು ಶ್ರಮಪಟ್ಟು ವ್ಯಾಪಾರ ಮಾಡಿ ಆ ನಾಣ್ಯಗಳನ್ನುಗಳನ್ನು ದ್ವಿಗುಣಗೊಳಿಸಿದರು. ಆದರೆ ಒಂದು ನಾಣ್ಯವನ್ನು ಪಡೆದ ಸೇವಕ ಶ್ರಮಪಡದೆ, ತನಗೆ ಒಂದೇ ತಲೆಂತು ಸಿಕ್ಕಿದೆ ಎಂದು ಗೊಣಗುಡುತ್ತಾ ಹೋಗಿ ಆ ನಾಣ್ಯವನ್ನು ಭೂಮಿಯಲ್ಲಿ ಹೂತಿಟ್ಟ.

ತನ್ನ ಪಾಲಿಗೆ ಸಿಕ್ಕಿದ ಒಂದು ನಾಣ್ಯವನ್ನು ವೃದ್ಧಿಗೊಳಿಸಲು ಅಶಕ್ತನಾದ ಆ ಸೇವಕನನ್ನು ಒಡೆಯನು, ಸೋಮಾರಿ ದುಷ್ಟ ಸೇವಕನೆಂದು ಜರಿದು, ಆ ನಾಣ್ಯವನ್ನು ಅವನಿಂದ ಕಿತ್ತುಕೊಂಡು ಆ ಸೇವಕನ್ನು ಶಿಕ್ಷೆಗೆ ಒಳಪಡಿಸುತ್ತಾನೆ.

ಭಗವಂತ ಪ್ರತಿಯೊಬ್ಬರಿಗೂ ಅನೇಕ ವರಗಳನ್ನು ನೀಡಿರುವನು. ಕಾಲನ್ನು ಕಳೆದುಕೊಂಡು ಒಂದೇ ಕಾಲಿನಲ್ಲಿ ನಡೆಯುವವನನ್ನು ಕಂಡಾಗ ನಮ್ಮ ಎರಡು ಬಲಶಾಲಿ ಆರೋಗ್ಯಕರ ಕಾಲುಗಳು ಎಷ್ಟೊಂದು ದೊಡ್ಡದಾದ ದೇವರ ವರ ಎಂಬ ಅರಿವು ನಮಗಾಗುತ್ತದೆ.

ಇದೇ ರೀತಿ, ನಮ್ಮ ಜೀವ, ಜೀವನ ಹಾಗೂ ಅದರಲ್ಲಿರೋ ನೂರಾರು, ಸಾವಿರಾರು ಒಳ್ಳೆಯ ವಿಷಯಗಳ ಬಗ್ಗೆ ಸಂತಸಪಟ್ಟು ದೇವರನ್ನು ಸ್ತುತಿಸದೆ, ಸಣ್ಣ ಪುಟ್ಟ ಅನಾನುಕೂಲತೆಗಳಿಗಾಗಿ ಗೊಣಗುಡುವುದು, ದೂರುವುದು ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT