ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಪೀಠಕ್ಕೆ ‘ಆಧಾರ್‌’

ನವೆಂಬರ್‌ ಕೊನೆಯ ವಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭ
Last Updated 30 ಅಕ್ಟೋಬರ್ 2017, 20:28 IST
ಅಕ್ಷರ ಗಾತ್ರ

ನವದೆಹಲಿ : ಸರ್ಕಾರದ ಸೌಲಭ್ಯಗಳನ್ನು ಪಡೆಯುವುದಕ್ಕೆ ಆಧಾರ್‌ ನೋಂದಣಿ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಗೆ ಸಂವಿಧಾನ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಸಂವಿಧಾನ ಪೀಠವು ನವೆಂಬರ್‌ ಕೊನೆಯ ವಾರದಲ್ಲಿ ವಿಚಾರಣೆ ಆರಂಭಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠವು ತಿಳಿಸಿದೆ.

ಖಾಸಗಿತನ ಮೂಲಭೂತ ಹಕ್ಕು ಎಂದು ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಇತ್ತೀಚೆಗೆ ತೀರ್ಪು ನೀಡಿತ್ತು. ಆಧಾರ್‌ನ ಸಿಂಧುತ್ವ ಪ್ರಶ್ನಿಸುತ್ತಿರುವ ಅರ್ಜಿದಾರರಲ್ಲಿ ಹಲವರು ಆಧಾರ್‌ ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ವಾದಿಸುತ್ತಿದ್ದಾರೆ.

ಅರ್ಜಿಗಳ ತ್ವರಿತ ವಿಚಾರಣೆ ನಡೆಸಬೇಕು ಎಂದು ಆಧಾರ್‌ ವಿರೋಧಿಗಳ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲರಾದ ಗೋಪಾಲ್‌ ಸುಬ್ರಮಣಿಯನ್‌ ಮತ್ತು ಶ್ಯಾಮ್‌ ದಿವಾನ್‌ ಒತ್ತಾಯಿಸಿದ್ದಾರೆ.

ಮೊಬೈಲ್‌ ಮತ್ತು ಬ್ಯಾಂಕ್ ಖಾತೆಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವ ಆದೇಶ ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಅರ್ಜಿದಾರರು ಪ್ರತಿಪಾದಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆಧಾರ್‌ ಕಡ್ಡಾಯ ಮಾಡಿರುವ ಸಿಬಿಎಸ್‌ಇ ಕ್ರಮಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆಧಾರ್‌ ನೋಂದಣಿ ಮಾಡಿಕೊಳ್ಳಲು ಬಯಸುವ ಆದರೆ, ಸದ್ಯಕ್ಕೆ ಆಧಾರ್‌ ಇಲ್ಲದ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

ಮುಖ್ಯಾಂಶಗಳು

* ಆಧಾರ್‌ ಸರಳಗೊಳಿಸಲು ನೂರಕ್ಕೂ ಹೆಚ್ಚು ಅಧಿಸೂಚನೆ

* ಯಾವುದೇ ಮಧ್ಯಂತರ ಆದೇಶ ಹೊರಡಿಸಬಾರದು

* ವಿರೋಧಿಗಳಿಂದ ಆಧಾರ್‌ ಬಗ್ಗೆ ಅಪಪ್ರಚಾರ

ಆಧಾರ್‌ ಅರ್ಜಿ: ಮಮತಾಗೆ ‘ಸುಪ‍್ರೀಂ’ ತರಾಟೆ

ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್‌ ಕಡ್ಡಾಯ ಮಾಡಿರುವ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಪಶ್ಚಿಮ ಬಂಗಾಳ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಕ್ರಮ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸಂಸತ್ತು ಅಂಗೀಕರಿಸಿದ ಕಾನೂನನ್ನು ರಾಜ್ಯ ಸರ್ಕಾರವೊಂದು ಪ್ರಶ್ನಿಸುವುದಕ್ಕೆ ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬೇಕಿದ್ದರೆ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

ಪಶ್ಚಿಮ ಬಂಗಾಳದ ಕಾರ್ಮಿಕ ಇಲಾಖೆಯು ಈ ಅರ್ಜಿ ಸಲ್ಲಿಸಿದೆ. ಈ ಇಲಾಖೆಯು ಸಹಾಯಧನಗಳನ್ನು ವಿತರಿಸಬೇಕಿರುವುದರಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್ ಹೇಳಿದರು.

‘ಕೇಂದ್ರದ ವಿರುದ್ಧ ರಾಜ್ಯವೊಂದು ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದಕ್ಕೆ ವಿವರಣೆ ಕೊಡಿ. ಆಧಾರ್‌ ವಿಚಾರಣೆಗೆ ಅರ್ಹವಾಗಿರುವ ವಿಷಯ ಎಂಬುದು ನಮಗೆ ತಿಳಿದಿದೆ’ ಎಂದು ಪೀಠ ಹೇಳಿತು. ರಾಜ್ಯಕ್ಕೆ ಇಂತಹ ಅರ್ಜಿ ಸಲ್ಲಿಸುವ ಅವಕಾಶ ಇದೆ ಎಂದು ಸಿಬಲ್‌ ವಾದಿಸಿದರು. ಆದರೆ, ಅರ್ಜಿಯನ್ನು ಪರಿಷ್ಕರಿಸಿ ಸಲ್ಲಿಸುವುದಾಗಿ ಹೇಳಿದರು.

ಆಧಾರ್‌ ಇಲ್ಲದೆ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ನೀಡುವುದಕ್ಕೆ ಸಾಧ್ಯವಿಲ್ಲ ಎಂಬ ನಿಯಮವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಅರ್ಜಿ ಸಲ್ಲಿಸಿತ್ತು.

ಕೇಂದ್ರಕ್ಕೆ ನೋಟಿಸ್‌: ಮೊಬೈಲ್‌ಗೆ ಆಧಾರ್‌ ಜೋಡಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಪ್ರತ್ಯೇಕ ಅರ್ಜಿಯೊಂದರಲ್ಲಿ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ. ಈ ನೋಟಿಸ್‌ಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT