ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಎಲ್‌ ಕುಟುಂಬಕ್ಕೆ ಗೋಧಿ ಪೂರೈಕೆ

ಪಡಿತರ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯವಲ್ಲ: ಆಹಾರ ಸಚಿವ ಖಾದರ್
Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಕರ್ನಾಟಕದ 15 ಜಿಲ್ಲೆಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬದ ಸದಸ್ಯರಿಗೆ ಡಿಸೆಂಬರ್‌ನಿಂದ ತಲಾ ಎರಡು ಕೆ.ಜಿ. ಗೋಧಿ ಪೂರೈಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.

ಕುಟುಂಬದ ಸದಸ್ಯರಿಗೆ ಮೊದಲು ಮೂರು ಕೆ.ಜಿ. ಅಕ್ಕಿ, ಎರಡು ಕೆ.ಜಿ. ಗೋಧಿ ವಿತರಿಸಲಾಗುತ್ತಿತ್ತು. ಗೋಧಿ ಬದಲು ಐದು ಕೆ.ಜಿ. ಅಕ್ಕಿ ನೀಡುವಂತೆ ಗ್ರಾಹಕರು ಒತ್ತಾಯಿಸಿದ್ದರಿಂದಾಗಿ ಗೋಧಿ ಪೂರೈಕೆ ನಿಲ್ಲಿಸಲಾಗಿತ್ತು. ಸದಸ್ಯರಿಗೆ ತಲಾ ಏಳು ಕೆ.ಜಿ. ಆಹಾರ ಧಾನ್ಯ ವಿತರಣೆ ಆರಂಭಿಸಿದ ಮೇಲೆ ಐದು ಕೆ.ಜಿ. ಅಕ್ಕಿ, ಎರಡು ಕೆ.ಜಿ. ಗೋಧಿ ನೀಡಬೇಕು ಎಂಬ ಬೇಡಿಕೆ ಬಂದಿದೆ. ಈ ಬಗ್ಗೆ ಎಲ್ಲ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ  ವಿವರಿಸಿದರು.

ಆಧಾರ್ ಸಂಖ್ಯೆ ಕಡ್ಡಾಯವಲ್ಲ: ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯಗೊಳಿಸಿಲ್ಲ. ಆಧಾರ್ ಇಲ್ಲದೇ ಇದ್ದರೆ ಪಡಿತರ ನೀಡುವುದಿಲ್ಲ ಎಂದು ಹೇಳುವ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಸಂಬಂಧಪಟ್ಟ ಜಿಲ್ಲಾಧಿಕಾರಿ ಅಥವಾ ಆಹಾರ ಇಲಾಖೆ ಉಪನಿರ್ದೇಶಕರಿಗೆ ದೂರು ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ಹೇಳಿದರು.

ಆಧಾರ್‌ ಸಂಖ್ಯೆ ಕಡ್ಡಾಯವಾಗಿ ನೀಡಬೇಕು ಎಂದು ಕೆಲವು ಅಂಗಡಿಗಳವರು ಹೇಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈಗಾಗಲೇ ಇರುವ ಪಡಿತರ ಚೀಟಿ ತೋರಿಸಿ ಪಡಿತರ ಪಡೆಯಲು ಅವಕಾಶ ಇದೆ. ಹೊಸ ಪಡಿತರ ಚೀಟಿ ಪಡೆಯಲು ಮಾತ್ರ ಆಧಾರ್‌ ಕಡ್ಡಾಯಗೊಳಿಸಲಾಗಿದೆ ಎಂದೂ ತಿಳಿಸಿದರು.

ಮೊಬೈಲ್ ಸಂಖ್ಯೆ ನೀಡಿ: ಮುಂದಿನ ತಿಂಗಳಿನಿಂದ ಪಡಿತರ ಪಡೆಯಲು ಹೋಗುವ ಪ್ರತಿಯೊಬ್ಬ ಪಡಿತರ ಚೀಟಿದಾರರು ಮೊಬೈಲ್ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ನೀಡಬೇಕು. ಅಂತಹ ಮೊಬೈಲ್‌ ನಂಬರ್‌ಗೆ ಬಾರ್‌ ಕೋಡ್ ಕಳುಹಿಸಲಾಗುತ್ತದೆ. ಅದನ್ನು ತೋರಿಸಿ, ಪಡಿತರ ಪಡೆಯಲು ಅವಕಾಶ ಇರುತ್ತದೆ ಎಂದರು.

1.08 ಕೋಟಿ ಬಿಪಿಎಲ್ ಪಡಿತರ ಚೀಟಿದಾರರ ಪೈಕಿ ಶೇ 60 ರಷ್ಟು ಜನ ಈಗಾಗಲೇ ಮೊಬೈಲ್ ಸಂಖ್ಯೆ ನೀಡಿದ್ದಾರೆ. ಉಳಿದವರು ಕೂಡಲೇ ನೀಡಬೇಕು. ಬಯೋಮೆಟ್ರಿಕ್‌ ಇಲ್ಲದೇ ಇದ್ದರೂ ಬಾರ್‌ ಕೋಡ್ ಬಳಸಿ ಪಡಿತರ ಪಡೆಯುವ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಎಲ್ಲಿ ಬೇಕಾದರೂ ಪಡಿತರ: ಪಡಿತರ ಚೀಟಿ ಹೊಂದಿರುವವರು ರಾಜ್ಯದ ಯಾವುದೇ ಭಾಗದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದು. ತಾವು ಪಡಿತರ ಪಡೆಯಲು ಇಚ್ಛಿಸುವ ನ್ಯಾಯಬೆಲೆ ಅಂಗಡಿಯಲ್ಲಿ ಈ ಕುರಿತು ಮಾಹಿತಿ ನೀಡಬೇಕು. ಉದ್ಯೋಗ ಅರಸಿ ವಲಸೆ ಹೋಗುವವರಿಗೆ ಅನುಕೂಲವಾಗಬೇಕು ಎಂಬ ಕಾರಣಕ್ಕೆ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಖಾದರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT