ಗುರುವಾರ , ಸೆಪ್ಟೆಂಬರ್ 19, 2019
22 °C
ಅಗ್ಗದ, ವಿದ್ಯುತ್‌ ಮಿತಬಳಕೆಯ, ದೀರ್ಘಬಾಳಿಕೆಯ ಸ್ಮೃತಿಕೋಶ: ಭಾರತದ ವಿಜ್ಞಾನಿಗಳ ಸಾಧನೆ

ಬರಲಿದೆ ಹೊಸ ತಲೆಮಾರಿನ ಮೆಮೊರಿ ಸಾಧನ

Published:
Updated:

ನವದೆಹಲಿ: ಸದ್ಯ ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲಾಗುತ್ತಿರುವ ಮೆಮೊರಿ ಸಾಧನಗಳ (ದಾಖಲೆಗಳನ್ನು ಸಂಗ್ರಹಿಸಿಡಬಹುದಾದಂತಹ ಸಾಧನ–ಸ್ಮೃತಿಕೋಶ) ಜಾಗದಲ್ಲಿ ಬಳಸಬಹುದಾದ ಹೊಸ ತಲೆಮಾರಿನ ಮೆಮೊರಿ ಸಾಧನವನ್ನು ಭಾರತೀಯ ವಿಜ್ಞಾನಿಗಳು, ಅಮೆರಿಕ ಮತ್ತು ಸಿಂಗಪುರದ ತಜ್ಞರೊಂದಿಗೆ ಸೇರಿ ಅಭಿವೃದ್ಧಿ ಪಡಿಸಿದ್ದಾರೆ.

ದೀರ್ಘ ಬಾಳಿಕೆ ಬರುವ, ಕಡಿಮೆ ವೆಚ್ಚದ ಮತ್ತು ಕಡಿಮೆ ವಿದ್ಯುತ್ ಬಳಸುವ ಮೆಮೊರಿ ತಂತ್ರಜ್ಞಾನಗಳಿಗಾಗಿ ಮಾಹಿತಿ ತಂತ್ರಜ್ಞಾನ ಉದ್ಯಮ ಹಲವು ಸಮಯದಿಂದ ಕಾಯುತ್ತಿದೆ.

ಕೋಲ್ಕತ್ತದ ಇಂಡಿಯನ್‌ ಅಸೋಸಿಯೇಷನ್‌ ಫಾರ್‌ ದಿ ಕಲ್ಟಿವೇಷನ್‌ ಸೈನ್ಸ್‌ ವಿಜ್ಞಾನಿಗಳು ಸಿಂಗಪುರದ ನ್ಯಾಷನಲ್‌ ಯುನಿವರ್ಸಿಟಿ ಮತ್ತು ಅಮೆರಿಕದ ಯೇಲ್‌ ವಿವಿಯ ಸಹೋದ್ಯೋಗಿಗಳೊಂದಿಗೆ ಸೇರಿ ಅಭಿವೃದ್ಧಿ ಪಡಿಸಿರುವ ಅತ್ಯಾಧುನಿಕ ಸಾಧನವು ಉದ್ಯಮದ ಅಗತ್ಯವನ್ನು ಪೂರೈಸಲಿದೆ ಎಂದು ನಂಬಲಾಗಿದೆ.

ಈಗ ಬಳಕೆಯಲ್ಲಿರುವ ಮೆಮೊರಿ ಸಾಧನಗಳ ಸಾಮರ್ಥ್ಯ ತುಂಬಾ ಬಳಕೆಯ ನಂತರ ಕುಂದುತ್ತದೆ. ಆದರೆ, ಹೊಸ ಸಾಧನದ ಬಾಳಿಕೆಯ ಅವಧಿ ಹೆಚ್ಚಿರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ನಾವು ಅಭಿವೃದ್ಧಿ ಪಡಿಸಿದ ಸಾಧನಗಳು ಪರಿವರ್ತಿತ ಲೋಹ ಸಂಯುಕ್ತಗಳ ತೆಳ್ಳನೆಯ ಪದರ (ಪಿಲ್ಮ್‌) ಆಧರಿತವಾಗಿದ್ದು, ಒಂದು ಲಕ್ಷ ಕೋಟಿ ಬಾರಿ ಬಳಕೆ ಮಾಡಿದರೂ ಅದರ ಸಾಮರ್ಥ್ಯ ಕುಂದುವುದಿಲ್ಲ. ಈ ಸಾಧನಗಳನ್ನು ಅತ್ಯಂತ ಸಣ್ಣ ಗಾತ್ರಕ್ಕೆ ಕುಗ್ಗಿಸಬಹುದು (ಪರೀಕ್ಷೆಯ ಸಂದರ್ಭದಲ್ಲಿ 60 ಚದರ ನ್ಯಾನೊ ಮೀಟರ್‌ ಗಾತ್ರದವರೆಗಿನ ಸಾಧನ ತಯಾರಿಸಲಾಗಿದೆ)’ ಎಂದು ಯೇಲ್‌ ವಿವಿಯ ಪ್ರಾಧ್ಯಾಪಕ ಮತ್ತು ಸಹ ಅಧ್ಯಯನಕಾರ ವಿಕ್ಟರ್‌. ಎಸ್‌.ಬಟಿಸ್ಟಾ ಹೇಳಿದ್ದಾರೆ.

ಹೆಚ್ಚಿನ ಕಾರ್ಯಕ್ಷಮತೆ: ಈ ಸಾಧನದ ಇನ್ನೊಂದು ವೈಶಿಷ್ಟ್ಯ ವಿದ್ಯುತ್‌ ಕಾರ್ಯಕ್ಷಮತೆ.

‘ಲ್ಯಾಪ್‌ಟಾಪ್‌ಗಳ ಬ್ಯಾಟರಿಗಳಲ್ಲಿನ ಶೇ 25ರಷ್ಟು ವಿದ್ಯುತ್‌ ಅನ್ನು ಮೆಮೊರಿ ಸಾಧನಗಳು ಬಳಸುತ್ತವೆ. ಸರ್ವರ್‌ ಕೇಂದ್ರಗಳಲ್ಲಿ ಶೇ 50ರಷ್ಟು ವಿದ್ಯುತ್‌ ಇವುಗಳ ಕಾರ್ಯನಿರ್ವಹಣೆಗೆ ಬೇಕು. ಕಡಿಮೆ ವಿದ್ಯುತ್‌ ಬಳಸುವ ಮೆಮೊರಿ ಸಾಧನಗಳು ಅತ್ಯಂತ ಸಂಕೀರ್ಣವಾಗಿದ್ದು, ಈಗ ಅಭಿವೃದ್ಧಿ ಪಡಿಸಿರುವ ಸಾಧನಗಳು ಅತ್ಯಂತ ಕಡಿಮೆ ವಿದ್ಯುತ್‌ ಬಳಸುವ ಸಾಧನಗಳಲ್ಲಿ ಒಂದಾಗುವ ಎಲ್ಲ ಸಾಧ್ಯತೆಯೂ ಇದೆ’ ಎಂದು ಅಧ್ಯಯನ ತಂಡದ ಮುಖ್ಯಸ್ಥ ಮತ್ತು ಸಿಂಗಪುರದ ನ್ಯಾಷನಲ್‌ ಯುನಿವರ್ಸಿಟಿಯ ಟಿ. ವೆಂಕಟೇಶನ್‌ ಹೇಳಿದ್ದಾರೆ.

ಹೊಸ ಸಾಧನವು ಪರೀಕ್ಷೆಯ ಸಂದರ್ಭದಲ್ಲಿ ಗರಿಷ್ಠ 80 ಡಿಗ್ರಿ ಸೆಲ್ಸಿಯಸ್‌ನಿಂದ ಕನಿಷ್ಠ ಮೈನಸ್‌ 30 ಡಿಗ್ರಿ ಸೆಲ್ಸಿಯಸ್‌ವರೆಗಿನ ಉಷ್ಣಾಂಶದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ.

ಅಗ್ಗದ ತಂತ್ರಜ್ಞಾನ:  ಈಗಿನ ಫ್ಲ್ಯಾಷ್‌ ಮೆಮೊರಿ ಸಲಕರಣೆಗಳಿಗೆ ಹೋಲಿಸಿದರೆ, ಹೊಸ ಸಾಧನವು ಅಗ್ಗವಾಗಿರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಈಗಿನ ಮೆಮೊರಿ ಸಾಧನಗಳ ತಯಾರಿಕಾ ವಿಧಾನಗಳು ಕ್ಲಿಷ್ಟವಾಗಿರುವುದರಿಂದ ಅವುಗಳು ದುಬಾರಿ. ಬಹುತೇಕ ಸಂದರ್ಭಗಳಲ್ಲಿ ಇವುಗಳ ತಯಾರಿಕೆಗೆ ಅಪರೂಪದ ಮತ್ತು ದುಬಾರಿಯಾದ ಹೆಚ್ಚು ಸಾಂದ್ರತೆ ಹೊಂದಿರುವ ಲೋಹಗಳನ್ನು ಬಳಸುವುದರಿಂದಲೂ ಅವುಗಳಿಗೆ ಹೆಚ್ಚು ಬೆಲೆ ತೆರಬೇಕಾಗತ್ತದೆ. ಆದರೆ, ಹೊಸ ಸಾಧನದ ತಯಾರಿಕೆ ಸುಲಭವಾಗಿರುವುದರಿಂದ ಮತ್ತು ಇವುಗಳು ಇಂಗಾಲದ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಹೊಸ ತಂತ್ರಜ್ಞಾನ ಅಗ್ಗವಾಗಿರಲಿದೆ’ ಎಂದು ಬಟಿಸ್ಟಾ ವಿವರಿಸಿದ್ದಾರೆ.

ಪೇಟೆಂಟ್‌: ಈ ಸಾಧನಕ್ಕೆ ಸಿಂಗಪುರದ ನ್ಯಾಷನಲ್‌ ಯುನಿವರ್ಸಿಟಿ ಮತ್ತು ಇಂಡಿಯನ್‌ ಅಸೋಸಿಯೇಷನ್‌ ಫಾರ್‌ ದಿ ಕಲ್ಟಿವೇಷನ್‌ ಆಫ್‌ ಸೈನ್ಸ್‌ ಜಂಟಿಯಾಗಿ ಪೇಟೆಂಟ್‌ ಪಡೆದಿವೆ.

ಕೆಲವು ವರ್ಷಗಳೇ ಬೇಕು

ಹೊಸ ತಂತ್ರಜ್ಞಾನ ವಾಣಿಜ್ಯ ಉದ್ದೇಶಕ್ಕೆ ಲಭ್ಯವಾಗಲು ಹಲವು ವರ್ಷಗಳೇ ಬೇಕು ಎಂದು ವೆಂಕಟೇಶನ್‌ ಹೇಳಿದ್ದಾರೆ. ಆದರೆ, ಇದಕ್ಕೆ ಯಾವುದೇ ತೊಡಕು ಉಂಟಾಗದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಈ ತಂತ್ರಜ್ಞಾನವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಸೂಕ್ತ ಪಾಲುದಾರರಿಗೆ ನಾವು ಹುಡುಕಾಟ ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

Post Comments (+)