7

ಸುವರ್ಣ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಅಪೂರ್ಣ

Published:
Updated:
ಸುವರ್ಣ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಅಪೂರ್ಣ

ಕಮಲನಗರ: ರಸ್ತೆ ಮೇಲೆ ಹರಿಯುವ ಹೊಲಸು ನೀರು, ತುಂಬಿ ತುಳುಕುತ್ತಿರುವ ಚರಂಡಿಗಳು, ಸಮರ್ಪಕವಾಗಿ ಅನುಷ್ಠಾನಗೊಳ್ಳದ ಸರ್ಕಾರಿ ಯೋಜನೆಗಳು, ಅನೈರ್ಮಲ್ಯದಿಂದಾಗಿ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ. ಇದು ಕಮಲನಗರ ಸಮೀಪದ ಚಾಂಡೇಶ್ವರ ಗ್ರಾಮದ ಚಿತ್ರಣ.

ಡಿಗ್ಗಿ ಗ್ರಾಮ ಪಂಚಾಯಿತಿಗೆ ಒಳಪಡುವ ಚಾಂಡೇಶ್ವರ ಗ್ರಾಮದಲ್ಲಿ ಸುಮಾರು ಎರಡು ಸಾವಿರ ಜನಸಂಖ್ಯೆ ಇದೆ. ಗ್ರಾಮದಲ್ಲಿ ಐವರು ಪಂಚಾಯಿತಿ ಸದಸ್ಯರಿದ್ದಾರೆ. ಆದರೆ ಮೂಲ ಸೌಕರ್ಯಗಳು ಮಾತ್ರ ಇಲ್ಲಿ ಮರೀಚಿಕೆ.

ಗ್ರಾಮದಲ್ಲಿ ಬಹುತೇಕ ರಸ್ತೆಗಳ ಮೇಲೆಯೇ ಚರಂಡಿ ನೀರು ಹರಿಯುತ್ತಿದೆ. ರಸ್ತೆಗಳೆಲ್ಲ ಹಾಳಾಗಿದ್ದು ಒಂದೆಡೆಯಾದರೆ, ಮಲೀನ ನೀರು ರಸ್ತೆಯ ತುಂಬ ಹರಡಿಕೊಂಡಿದ್ದು, ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಿದೆ. ಅಲ್ಲದೇ ಮಕ್ಕಳು, ಮಹಿಳೆಯರು, ವಯೋವೃದ್ಧರು ದುರ್ವಾಸನೆಯಿಂದ ಕೂಡಿದ ಈ ರಸ್ತೆ ಮೂಲಕವೇ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಕೆಲವೆಡೆ ರಸ್ತೆ ಮಧ್ಯಭಾಗದಲ್ಲಿಯೇ ಚರಂಡಿ ಮಾದರಿಯಲ್ಲಿ ಹಳ್ಳ ನಿರ್ಮಾಣ ವಾಗಿದೆ. ಮತ್ತೆ ಕೆಲವು ಕಡೆ ಚರಂಡಿಯಲ್ಲಿ ಮಣ್ಣು, ಕಲ್ಲು ತುಂಬಿಕೊಂಡಿದೆ. ಕೊಳಚೆ ನೀರು ಸರಾಗವಾಗಿ ಹೋಗದೇ ಅಲ್ಲಲ್ಲಿ ಸಂಗ್ರಹಗೊಂಡು ದುರ್ವಾಸನೆ ಬರುತ್ತಿದೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ.

‘ಚರಂಡಿ ಹೂಳು ತೆಗೆಸಿ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅನೇಕ ಸಲ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

ಸುವರ್ಣ ಗ್ರಾಮ: ‘5ನೇ ಹಂತದ ಸುವರ್ಣ ಗ್ರಾಮೋದಯ ಯೋಜನೆಯಡಿ ಚಾಂಡೇಶ್ವರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸುಮಾರು ₹ 39.21 ಲಕ್ಷ ವೆಚ್ಚದಲ್ಲಿ ಅನುದಾನ ನೀಡಲಾಗಿತ್ತು. ಯೋಜನೆಯಡಿ ₹ 29.39 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ ಹಾಗೂ ಘನ ತ್ಯಾಜ್ಯ ವಿಲೇವಾರಿಗೆ ₹ 7.87 ಲಕ್ಷ ಹಾಗೂ ಇತರೆ ಕಾಮಗಾರಿಗಳಿಗೆ ₹ 1.95 ಲಕ್ಷ ನಿಗದಿಪಡಿಸಲಾಗಿತ್ತು. ಆದರೆ ಕಳಪೆ ಹಾಗೂ ಅಪೂರ್ಣ ಕಾಮಗಾರಿ ಕೈಗೊಂಡು ಭೂ ಸೇನಾ ನಿಗಮದ ಅಧಿಕಾರಿಗಳು ಯೋಜನೆ ಆಶಯಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ’ ಎನ್ನುತ್ತಾರೆ ಗ್ರಾಮದ ಶಿವಾಜಿ ಪಾಟೀಲ.

‘ಗ್ರಾಮದ ಮಹಾದೇವ ಮಂದಿರ, ಲಕ್ಷ್ಮಿ ಮಂದಿರ, ಪರಿಶಿಷ್ಟರ ಬಡಾವಣೆಗಳಲ್ಲಿ ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ ಮಾಡಿಲ್ಲ. ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದ ಭೂ ಸೇನಾ ನಿಗಮದ ಅಧಿಕಾರಿಗಳು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಯಾವುದೇ ಕಾಮಗಾರಿ ಪೂರ್ಣಗೊಳಿಸಿಲ್ಲ’ ಎಂದು ಮಲ್ಲಿಕಾರ್ಜುನ ಧಬಾಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹದಗೆಟ್ಟ ರಸ್ತೆ: ‘ಕಮಲನಗರದಿಂದ ಕೇವಲ 5 ಕಿ.ಮೀ ಅಂತರದಲ್ಲಿರುವ ಚಾಂಡೇಶ್ವರ ಗ್ರಾಮಕ್ಕೆ ತಲುಪಲು ಸಾಮಾನ್ಯವಾಗಿ 10 ರಿಂದ 15 ನಿಮಿಷದ ಸಮಯ ತಗುಲುತ್ತದೆ. ಆದರೆ, ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಬರೋಬ್ಬರಿ 40 ನಿಮಿಷ ಬೇಕಾಗುತ್ತಿದೆ. ಈ ರಸ್ತೆ ಮಾರ್ಗದಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ.

ರಸ್ತೆಯ ಡಾಂಬರು ಕಿತ್ತಿದೆ. ಹದಗೆಟ್ಟ ರಸ್ತೆಯಿಂದಾಗಿ ಅನೇಕ ಬೈಕ್‌ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಆದರೂ ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ’ ಎಂದು ಶರಣು ಕುಶನೂರೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಗ್ರಾಮದಲ್ಲಿ ನೈರ್ಮಲ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಖಾತರಿ ಹಾಗೂ 14ನೇ ಹಣಕಾಸು ಯೋಜನೆಯಡಿ ಸಿಮೆಂಟ್‌ ರಸ್ತೆ, ಚರಂಡಿ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ, ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಡಿಒ ನರೇಂದ್ರ ಬಿರಾದಾರ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry