ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತ ನಿರ್ಧಾರಗಳೇ ಒತ್ತಡಕ್ಕೆ ಪರಿಹಾರ

Last Updated 31 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವೃತ್ತಿ, ಕುಟುಂಬ, ಸ್ನೇಹಿತರ ಬಳಗ ಸೇರಿ ಎಲ್ಲ ಕಡೆಯಿಂದಲೂ ಒತ್ತಡ ಇದ್ದೇ ಇರುತ್ತದೆ. ಒತ್ತಡವನ್ನು ನಾನು ಅರ್ಥ ಮಾಡಿಕೊಳ್ಳುವುದು ಬೇರೆ, ಮತ್ತೊಬ್ಬರು ಅರ್ಥ ಮಾಡಿಕೊಳ್ಳುವುದು ಬೇರೆ. ಅವರವರ ಜೀವನಶೈಲಿಗೆ ತಕ್ಕಂತೆ ಒತ್ತಡವಿರುತ್ತದೆ.

ಏಳು ವರ್ಷ ಕೇಂದ್ರ ತನಿಖಾ ದಳದಲ್ಲಿ (ಸಿಬಿಐ), ನಂತರ ಹಲವು ಜಿಲ್ಲೆಗಳ ಎಸ್ಪಿಯಾಗಿ,  ಕಮಿಷನರ್‌ ಆಗಿ ಕೆಲಸ ಮಾಡಿದ್ದೇನೆ. ಅಲ್ಲೆಲ್ಲ ಎಷ್ಟೇ ಒತ್ತಡಗಳು ಬಂದರೂ ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ. ಅದರಿಂದ ಒತ್ತಡವು ನನ್ನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಪೊಲೀಸರು ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂಥ ನಿರ್ಧಾರಗಳನ್ನು ಯಾರೇ ನ್ಯಾಯಾಲಯದಲ್ಲಿ ಪ್ರಶ್ನಿಸಿದರೂ ಉತ್ತರಿಸುವಂತಿರಬೇಕು. ನಿರ್ಧಾರ ತೆಗೆದುಕೊಳ್ಳದಿದ್ದರೆ ಆ ಸಮಸ್ಯೆಯೇ ದೊಡ್ಡದಾಗಿ, ಒತ್ತಡ ಜಾಸ್ತಿಯಾಗುತ್ತದೆ. ತಿಂಗಳು, ವರ್ಷಗಳವರೆಗೆ ಯೋಚನೆ ಮಾಡುತ್ತಲೇ ಕುಳಿತರೆ ಯಾವುದೇ ಪ್ರಯೋಜನವಾಗುವುದಿಲ್ಲ.

ಪೊಲೀಸರಿಗೆ ಇರುವುದು ಎರಡೇ ಆಯ್ಕೆ. ಒಂದು: ‘ಹೌದು’; ಇನ್ನೊಂದು: ‘ಇಲ್ಲ’. ಎರಡರಲ್ಲಿ ಒಂದನ್ನು ತ್ವರಿತವಾಗಿ ನಿರ್ಧರಿಸಲೇ ಬೇಕು. ಹೌದು – ಎಂಬುದರ ಪರ ಸಾವಿರ ಜನ ಇರುತ್ತಾರೆ. ಇಲ್ಲ – ಎಂಬುದರ ಪರವೂ ಸಾವಿರ ಜನ ಇರುತ್ತಾರೆ. ಅವಾಗ ಒತ್ತಡ ಎದುರಾಗುವುದು ಸಹಜ. ಆಗ ನಾವು, ಕಾನೂನಿನ ಪ್ರಕಾರ ಒಂದನ್ನು ತ್ವರಿತವಾಗಿ ಆಯ್ಕೆ ಮಾಡಿಕೊಳ್ಳಲೇಬೇಕಾಗುತ್ತದೆ.

ಕರ್ತವ್ಯನಿರತ ಸಂಚಾರ ಪೊಲೀಸರು ನಿತ್ಯವೂ ಒತ್ತಡದಲ್ಲೇ ಕೆಲಸ ಮಾಡುತ್ತಾರೆ. ರಸ್ತೆಯಲ್ಲಿ ವಾಹನ ನಿಲ್ಲಿಸಬೇಕಾ? ಅಥವಾ ಬೇಡವಾ? – ಎಂಬ ಒತ್ತಡ ಅವರಿಗೆ ಇರುತ್ತದೆ. ನಿಲ್ಲಿಸಿದರೆ, ಸವಾರ ಗಣ್ಯ ವ್ಯಕ್ತಿಯಾಗಿದ್ದರೆ ಕಷ್ಟ. ದೊಡ್ಡ ಕಳ್ಳನಾದರೆ ಆತನನ್ನು ಹಿಡಿದೆ ಎಂಬ ಖುಷಿ. ವಾಹನ ನಿಲ್ಲಿಸುವ ಬಗ್ಗೆಯೇ ಗಂಟೆಗಟ್ಟಲೇ ಯೋಚಿಸಿ ತೀರ್ಮಾನ ಕೈಗೊಳ್ಳುವಷ್ಟರಲ್ಲಿ, ಆ ವಾಹನ ಸ್ಥಳದಿಂದ ಹೊರಟು ಹೋಗಿರುತ್ತದೆ.

ನಾನು ಮಂಗಳೂರಿನಲ್ಲಿ ಕೆಲಸ ನಿರ್ವಹಿಸುವಾಗ ಕೋಮು ಗಲಭೆಗಳು ನಡೆಯುತ್ತಿದ್ದವು. ಅದರ ಹತೋಟಿಗೆ ಒತ್ತಡ ಹೆಚ್ಚಿತ್ತು. ಆಗ ನಾನು ತ್ವರಿತವಾಗಿ ಹಲವು ನಿರ್ಧಾರ ತೆಗೆದುಕೊಂಡು ಗಲಭೆ ನಿಯಂತ್ರಿಸಿದೆ. ಆ ನಂತರ ನನ್ನ ನಿರ್ಧಾರವನ್ನು ಯಾರೊಬ್ಬರು ಪ್ರಶ್ನಿಸಲಿಲ್ಲ. 1998ರಲ್ಲಿ ಶಿರಸಿಯ ಹೆಚ್ಚುವರಿ ಜಿಲ್ಲಾ ಎಸ್ಪಿ ಆಗಿದ್ದ ವೇಳೆ, ದೇವಸ್ಥಾನವೊಂದರ ರಥವನ್ನು ಭಕ್ತರು ವಿವಾದಿತ ಜಾಗದಲ್ಲಿ ಇರಿಸಲು ಹೊರಟಿದ್ದರು. ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ರಥವನ್ನು ಅರ್ಧದಲ್ಲೇ ತಡೆಹಿಡಿದೆ. ಆಕಸ್ಮಾತ್‌ ರಥ ಆ ಜಾಗಕ್ಕೆ ಹೋಗಿದ್ದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತಿತ್ತು.

ಮಾಡಿ ಬೈಯಿಸಿಕೊಳ್ಳುವವರು ಹಾಗೂ ಮಾಡದೆ ಬೈಯಿಸಿಕೊಳ್ಳುವವರು ನಮ್ಮಲ್ಲಿದ್ದಾರೆ. ಇದರಲ್ಲಿ ಮಾಡಿ ಬೈಯಿಸಿಕೊಳ್ಳುವುದು ಉತ್ತಮವೆಂದು ತಿಳಿದವನು ನಾನು. ಯಾವುದೇ ಒತ್ತಡವಿದ್ದರೂ ಸ್ಥಳದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇನೆ. ಆ ನಿರ್ಧಾರದ ಬಗ್ಗೆ ಮುಂದೆ ಯಾವುದೇ ಅಡೆತಡೆಗಳು ಬಂದರೂ ಎದುರಿಸಲು ಸಿದ್ಧನಿರುತ್ತೇನೆ. ಹೀಗಾಗಿಯೇ ಒತ್ತಡ ನನ್ನ ಬಳಿ ಸುಳಿದಿಲ್ಲ.

20 ವರ್ಷಗಳ ನನ್ನ ಸೇವೆಯಲ್ಲಿ ಇದುವರೆಗೂ ಮನೆಗೆ ಕಡತಗಳನ್ನು ತೆಗೆದುಕೊಂಡು ಹೋಗಿಲ್ಲ. ಕಚೇರಿಯಲ್ಲೇ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕೆಲಸ ಮಾಡಿದರೆ ಕಡತ ವಿಲೇವಾರಿ ಬಾಕಿ ಉಳಿಯುವುದಿಲ್ಲ. ಇದನ್ನು ವೃತ್ತಿಗೆ ಸೇರಿದಾಗಿನಿಂದಲೂ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ.

ಪತ್ನಿ, ಇಬ್ಬರು ಮಕ್ಕಳಿದ್ದಾರೆ. ನಾನು ಪೋಷಕರಿಗೆ ಮಗ, ಮಕ್ಕಳಿಗೆ ತಂದೆ, ಪತ್ನಿಗೆ ಪತಿ, ಕೆಳಗಿನ ಸಿಬ್ಬಂದಿಗೆ ಮೇಲಧಿಕಾರಿ. ಅವರೆಲ್ಲರೂ ನನ್ನಿಂದ ಏನೇನೋ ನಿರೀಕ್ಷೆಗಳನ್ನು ಮಾಡುತ್ತಾರೆ. ಅವರೆಲ್ಲರಿಗೂ ನಾನು ಸಮಯ ಕೊಡುತ್ತೇನೆ. ಕೆಲವು ಬಾರಿ ಕರ್ತವ್ಯದಲ್ಲಿರುವಾಗ ಕುಟುಂಬದವರ ವೈದ್ಯಕೀಯ ತುರ್ತುಪರಿಸ್ಥಿತಿಯ ಬಗ್ಗೆ ತಿಳಿಯುತ್ತದೆ. ಆಗ ಅವರ ನೋವಿಗೆ ತ್ವರಿತವಾಗಿ ಸ್ಪಂದಿಸುತ್ತೇನೆ. ಇಂಥ ಹಲವು ಸಂದರ್ಭಗಳಲ್ಲಿ  ಯಾವುದು ಮುಖ್ಯವೋ ಅದನ್ನು ಮೊದಲು ಮಾಡಿ ಮುಗಿಸಿದ್ದೇನೆ.

ಒತ್ತಡ ನಿವಾರಣೆಗೆ ದೈಹಿಕ ಆರೋಗ್ಯವೂ ಮುಖ್ಯ. ನಿತ್ಯವೂ ಬೆಳಿಗ್ಗೆ 5ಕ್ಕೆ ಏಳುತ್ತೇನೆ. 7 ಗಂಟೆಯವರೆಗೆ ಓಟ, ವ್ಯಾಯಾಮ ಮಾಡುತ್ತೇನೆ. ವಾರಕ್ಕೆ 25 ಕಿ.ಮೀ. ಓಡುವುದನ್ನು ರೂಢಿಸಿಕೊಂಡಿದ್ದೇನೆ. ಮ್ಯಾರಾಥಾನ್‌ಗಳಲ್ಲಿ ಭಾಗವಹಿಸುತ್ತೇನೆ. ಸಂಗೀತ ಕೇಳುತ್ತೇನೆ. ಸಿನಿಮಾ ನೋಡುತ್ತೇನೆ. ನಿತ್ಯವೂ ಎಲ್ಲರಿಗೂ ಶೇ. 97ರಷ್ಟು ಕೆಲಸಗಳು ಒಂದೇ ತೆರನಾಗಿರುತ್ತವೆ. ಅವುಗಳನ್ನು ಆರಂಭದಲ್ಲಿ ಮಾಡಿ ಮುಗಿಸಿದರೆ ಹೆಚ್ಚು ಒತ್ತಡವಿರುವುದಿಲ್ಲ.

ನಿರೂಪಣೆ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT