ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತಿಗಳನ್ನು ಮೀರುವ ಎಚ್ಚರದ ಹಾದಿ

Last Updated 31 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವ್ಯಕ್ತಿತ್ವದ ಬೆಳವಣಿಗೆಯ ಪರಿಕಲ್ಪನೆಯು ವಿನೂತನವಾದುದು. ವ್ಯಕ್ತಿಗತ ಮಿತಿಗಳನ್ನು ಕಂಡುಕೊಂಡು ಅವುಗಳ ಸೀಮಿತ ಚೌಕಟ್ಟಿನಾಚೆಗೆ ಜಿಗಿಯುವ ಕ್ರಮಾನುಗತ ನಡೆಯ ಹಾದಿಯನ್ನಾಗಿ ಅದನ್ನು ಗುರುತಿಸಬಹುದು. ಅಂತರ್ಗತ ಮಿತಿಗಳನ್ನು ಮೀರುವ ಎಚ್ಚರವು ವ್ಯಕ್ತಿತ್ವವನ್ನು ಶುದ್ಧಗೊಳಿಸುತ್ತದೆ. ಅಷ್ಟೇ ಅಲ್ಲ, ವ್ಯಕ್ತಿತ್ವದ ಅಸ್ತಿತ್ವಕ್ಕೆ ಅಂಟಿಕೊಳ್ಳಬಹುದಾದ ಸ್ವಾರ್ಥದ ಪೊರೆ ಕಳಚಿಕೊಳ್ಳುವುದಕ್ಕೆ ಪೂರಕವಾಗುತ್ತದೆ. ವ್ಯಕ್ತಿಗತ ಹಿತಾಸಕ್ತಿಯನ್ನಷ್ಟೇ ಮುಖ್ಯವಾಗಿಸಿಕೊಳ್ಳದೇ ಸಮಷ್ಟಿಯ ಒಳಿತನ್ನೂ ಜೀವಾಳವಾಗಿಸಿಕೊಳ್ಳುವ ಪ್ರಜ್ಞೆಯನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ. ಸಕಲ ಜೀವರಾಶಿಗಳಿಗೂ ಲೇಸನ್ನೇ ನಿರೀಕ್ಷಿಸುವ ಸ್ಪಷ್ಟ ಮನಃಸ್ಥಿತಿಯನ್ನು ರೂಪಿಸುತ್ತದೆ. ಈ ಬಗೆಯ ಗುಣವನ್ನು ವ್ಯಕ್ತಿತ್ವದ ಅಮೂಲ್ಯ ಲಕ್ಷಣವನ್ನಾಗಿಸಿಕೊಳ್ಳುವುದರಲ್ಲಿಯೇ ವ್ಯಕ್ತಿಗಳ ವೈಶಿಷ್ಟ್ಯ ಅಡಗಿರುತ್ತದೆ. ಪರಿಪೂರ್ಣರಾಗುವ ಹಂಬಲಕ್ಕೆ ನೀರೆರೆಯುತ್ತದೆ.

ಹುಟ್ಟಿನಿಂದಲೇ ಮನುಷ್ಯನಿಗೆ ಪರಿಪೂರ್ಣತೆ ಲಭ್ಯವಾಗುವುದಿಲ್ಲ. ಪರಿಪೂರ್ಣರಾಗಿ ನಿಲ್ಲುವ ಗುರಿ ತಲುಪಿಕೊಳ್ಳುವ ಅಪೇಕ್ಷೆಯು ಹಂತಹಂತವಾಗಿ ಗಟ್ಟಿಗೊಳ್ಳುತ್ತಾ ಹೋದಂತೆ ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಕ ನಿಧಾನಗತಿಯಲ್ಲಿ ತಿಳಿವಿಗೆ ಎಟುಕುತ್ತಾ ಹೋಗುತ್ತದೆ. ಜಗತ್ತಿನ ಶ್ರೇಷ್ಠ ದಾರ್ಶನಿಕ ತತ್ತ್ವಗಳೆಲ್ಲವೂ ಇಂಥ ವಿವೇಚನಾತ್ಮಕ ಅರಿವಿನ ಬೆಂಬಲದಲ್ಲಿಯೇ ಅರಳಿಕೊಂಡಿವೆ. ಈ ಅರಿವು ಹಿರಿಯರಿಂದ ಕಿರಿಯರಿಗೆ, ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ, ಒಂದು ಕಾಲಘಟ್ಟದಿಂದ ಮತ್ತೊಂದು ಕಾಲಘಟ್ಟಕ್ಕೆ ವಿವಿಧ ರೂಪಗಳಲ್ಲಿ ದಾಟಿಕೊಳ್ಳುತ್ತಲೇ ಇರುತ್ತದೆ. ಅನೇಕ ವ್ಯಕ್ತಿಗಳ ವ್ಯಕ್ತಿತ್ವ ರೂಪಿಸುವುದಕ್ಕೆ ಕಾರಣವಾಗುತ್ತದೆ. ಆ ಕ್ಷಣಕ್ಕೆ ಮಿತಿಗಳನ್ನು ಗುರುತಿಸಿಕೊಂಡು ಅವುಗಳನ್ನು ಮೀರುವ ಅನಿವಾರ್ಯತೆ ಮನಗಾಣಿಸಿಕೊಳ್ಳುವ ಶಕ್ತಿಯನ್ನು ದಕ್ಕಿಸಿಕೊಡುತ್ತದೆ.

ಮಿತಿ ಎಂಬ ಪದವನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಬಹುದು. ಅದೊಂದು ವ್ಯಕ್ತಿಗತ ದೌರ್ಬಲ್ಯ. ಮುಂದೊಂದು ದಿನ ಬೃಹದಾಕಾರವಾಗಿ ಎದುರುಗೊಳ್ಳಬಹುದಾದ ಬಿಕ್ಕಟ್ಟೊಂದರ ಮೂಲವೂ ಹೌದು. ಕುಟುಂಬ, ಸಮಾಜ ಮತ್ತು ವ್ಯಾಪಕ ಸಮೂಹದೊಂದಿಗಿನ ವಿಶ್ವದ ಅಸ್ತಿತ್ವಕ್ಕೆ ಸವಾಲಾಗಿ ಪರಿಣಮಿಸುವುದಕ್ಕೆ ಕಿಡಿ ಹೊತ್ತಿಸುವ ಸಣ್ಣ ಸಮಸ್ಯೆಯನ್ನಾಗಿಯೂ ಮಿತಿಯನ್ನು ವ್ಯಾಖ್ಯಾನಿಸಬಹುದು. ಈ ಮಿತಿಯನ್ನು ಮೀರುವುದೆಂದರೆ ವ್ಯಕ್ತಿಯೊಬ್ಬ ಸ್ವಯಂ ಉದಾತ್ತತೆಯ ಮೌಲ್ಯವನ್ನು ದರ್ಶಿಸಿಕೊಂಡು ಅದರಂತೆ ನಡೆ-ನುಡಿಯನ್ನು ರೂಪುಗೊಳಿಸಿಕೊಳ್ಳುವ ಕ್ರಿಯೆ. ಸ್ವಯಂ ಸಂವಿಧಾನಕ್ಕೆ ಬೇಕಾಗುವ ಪ್ರಾಥಮಿಕ ಕಲಿಕೆಯ ಪ್ರಕ್ರಿಯೆಯನ್ನಾಗಿಯೂ ಇದನ್ನು ಗ್ರಹಿಸಬಹುದು. ಪ್ರತಿಕ್ಷಣವನ್ನೂ ಕಲಿಕೆಯ ಸಂದರ್ಭವನ್ನಾಗಿಸುವ ಕ್ರಿಯಾಶೀಲ ಅನುಭವವನ್ನಾಗಿಯೂ ಗುರುತಿಸಬಹುದು.

ಇಂಥ ವ್ಯಕ್ತಿ ಸರಿಯಿಲ್ಲ, ಕ್ರೂರಿ ಎಂದು ಹೇಳುವ ಕಾಲಕ್ಕೆ ಆ ವ್ಯಕ್ತಿಯ ಮಿತಿಗಳೇ ದೃಷ್ಟಿಯಲ್ಲಿರುತ್ತವೆ. ಅವರೊಬ್ಬರಿದ್ದಾರೆ, ವಿಚಿತ್ರ ಎಂಬ ತೀರ್ಪು ನೀಡುವಾಗಲೂ ಆ ವ್ಯಕ್ತಿತ್ವಕ್ಕಂಟಿಕೊಂಡಿರುವ ಸಮಸ್ಯಾತ್ಮಕ ಗುಣಲಕ್ಷಣವನ್ನೇ ಗಮನಿಸಲಾಗಿರುತ್ತದೆ. ಅವನ ಜೊತೆಗೆ ಯಾರು ಜಗಳವಾಡುತ್ತಾರೆ, ಬಾಯಿಯೆಂಬುದು ಬೊಂಬಾಯಿ ಎಂದು ಗೊಣಗುವಾಗಲೂ ಆ ವ್ಯಕ್ತಿಯ ಜಗಳಗಂಟತನದ ಸಮಸ್ಯೆಯನ್ನು ಪರಿಗಣಿಸಲಾಗಿರುತ್ತದೆ. ಜಿಪುಣರು, ಚಾಡಿ ಹೇಳಿ ಕಾಲ ಕಳೆಯುವವರು, ಸದಾ ಇನ್ನೊಬ್ಬರ ಬಗ್ಗೆ ಮಾತನಾಡುತ್ತಲೇ ಇರುವವರು, ದ್ವೇಷವನ್ನೇ ಉಸಿರಾಗಿಸಿಕೊಂಡವರು, ಇನ್ನೊಬ್ಬರ ದಯನೀಯ ಸ್ಥಿತಿಯನ್ನು ಕಂಡು ಸಂತೋಷಿಸುವವರು, ಬಣ್ಣ ಬದಲಾಯಿಸುತ್ತಲೇ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುವವರು, ನಮಗೇಕೆ ಬೇಕು ಊರವರ ಸುದ್ದಿ ಎನ್ನುತ್ತಲೇ ಊರಿನವರ ಹುಳುಕು ಪತ್ತೆಹಚ್ಚುವುದರಲ್ಲಿಯೇ ತಮ್ಮ ಶಕ್ತಿ ವ್ಯಯಿಸುವವರು, ತಮ್ಮ ಪಾಡಿಗೆ ತಾವಿರದೇ ನಿರ್ದಿಷ್ಟ ಕೆಲಸವನ್ನೂ ನಿರ್ವಹಿಸದೇ ಸದಾ ಜಡತ್ವದ ಅಮಲಿನಲ್ಲಿರುವವರು, ತಿಳಿದುಕೊಳ್ಳುವ ಮುನ್ನವೇ ಇನ್ನೊಬ್ಬರನ್ನು ತಪ್ಪಿತಸ್ಥರನ್ನಾಗಿ ನೋಡಿ ಉಡಾಫೆ ಮಾತುಗಳನ್ನು ಹರಿಬಿಡುವವರು, ತಾವೂ ಖುಷಿಯಾಗಿರದೇ ಇನ್ನೊಬ್ಬರನ್ನೂ ಖುಷಿಯಾಗಿರಲು ಬಿಡದವರು, ಚುಚ್ಚುಮಾತುಗಳನ್ನಾಡುತ್ತಲೇ ಗುರುತಿಸಿಕೊಳ್ಳುವ ಹಂಬಲವುಳ್ಳವರು, ಇನ್ನೊಬ್ಬರ ತೇಜೋವಧೆಯ ಮೂಲಕ ಆನಂದ ಪಡುವವರು.... ವ್ಯಕ್ತಿಗಳ ಇಂಥ ಸಮಸ್ಯಾತ್ಮಕ ವರ್ತನೆಗಳು ವ್ಯಕ್ತಿಗತ ಮಿತಿಗಳನ್ನೇ ಸಂಕೇತಿಸುತ್ತವೆ.

ಇಂಥವರು ಸರ್ಟಿಫಿಕೇಟ್‌ಗಳ ಬೆಂಬಲದಲ್ಲಿ ಎಂಥದ್ದೇ ಉನ್ನತ ಹುದ್ದೆಯನ್ನು ಅಲಂಕರಿಸಿದರೂ ಆ ಹುದ್ದೆಯ ಘನತೆ ಹೆಚ್ಚಿಸುವುದಿಲ್ಲ. ತಮ್ಮ ವ್ಯಕ್ತಿಗತ ಸಂಕುಚಿತ ಮಿತಿಗಳ ವರ್ತುಲದಲ್ಲಿಯೇ ಸಿಲುಕಿಕೊಂಡು ಹುದ್ದೆಯ ಘನತೆ ಹೆಚ್ಚಿಸುವುದರ ಬದಲು ತಾವು ಪ್ರತಿನಿಧಿಸುವ ಸಂಸ್ಥೆಯ ಅಧೀನ ವೃತ್ತಿಪರರಿಗೆ ಕಿರಿಕಿರಿಯುಂಟುಮಾಡುತ್ತಾರೆ. ಸಂಸ್ಥೆಗೆ ಬೇಕಾದ ಯೋಜನಾಬದ್ಧ ಕಾರ್ಯಗಳಿಗೆ ಆದ್ಯತೆ ನೀಡದೇ ಉಳಿದವರ ಹುಮ್ಮಸ್ಸನ್ನೇ ಕಳೆದಿಡುತ್ತಾರೆ. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿರುವ ಉದ್ಯೋಗಿಗಳು ಉನ್ನತಾಧಿಕಾರಿಗಳ ಸಣ್ಣತನಗಳ ಕಾರಣಕ್ಕಾಗಿಯೇ ಮಾನಸಿಕವಾಗಿ ನಲುಗುತ್ತಾರೆ. ಉನ್ನತ ಹಂತದಲ್ಲಿರುವವರು ತಮ್ಮ ನಂತರದ ಹಂತದಲ್ಲಿ ಕಾರ್ಯನಿರ್ವಹಿಸುವವರಿಗೆ ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಇಂಥವರಿಂದ ಇಲಾಖೆ ಅಥವಾ ಸಂಸ್ಥೆಯಲ್ಲಿನ ಆರೋಗ್ಯಕರ ವಾತಾವರಣಕ್ಕೆ ಧಕ್ಕೆಯಾಗುತ್ತದೆ. ವ್ಯಕ್ತಿಯೊಬ್ಬ ಯಾವುದೇ ಕಾರ್ಯಕ್ಷೇತ್ರವನ್ನು ಆಯ್ದುಕೊಳ್ಳಬಹುದು. ಆದರೆ, ಆ ಕಾರ್ಯಕ್ಷೇತ್ರಕ್ಕೆ ಅನುಗುಣವಾದ ಕಾರ್ಯಕ್ಷಮತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ತನ್ನನ್ನು ಸಿದ್ಧಗೊಳಿಸಿಕೊಳ್ಳುವುದರ ಕಡೆಗೇ ಆದ್ಯತೆ ನೀಡಬೇಕೇ ಹೊರತು ತನ್ನ ವ್ಯಕ್ತಿಗತ ದೌರ್ಬಲ್ಯಗಳನ್ನು ವಿಸ್ತರಿಸುವಂಥ ಸಂಕುಚಿತ ದೃಷ್ಟಿಕೋನವನ್ನು ಗಟ್ಟಿಗೊಳಿಸಿಕೊಳ್ಳಬಾರದು. ಸಂಕುಚಿತತೆಯ ಮಿತಿಯು ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುತ್ತದೆ. ಉಳಿದವರಿಗಿಂತ ಭಿನ್ನವಾದ ಸಾಧನೆಗೈಯ್ಯುವುದಕ್ಕೆ ಅಡ್ಡಿಯಾಗುತ್ತದೆ. ಉಳಿದವರಿಗೂ ಕಿರಿಕಿರಿಯುಂಟುಮಾಡುತ್ತದೆ. ಉನ್ನತಾವಕಾಶಗಳನ್ನೂ ತಪ್ಪಿಸುತ್ತದೆ.

ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಅರ್ಥಪೂರ್ಣವಾದುದು. ಮನೆಯಲ್ಲಿ ಹಿರಿಯರ ಸಂಸ್ಕಾರದ ಹಾದಿಯಲ್ಲಿ ಮಗುವೊಂದು ತನ್ನ ಮಿತಿಗಳನ್ನು ಮೀರುತ್ತದೆ. ಮೀರುವಂತೆ ಹಿರಿಯರು ಮಾರ್ಗದರ್ಶನ ನೀಡುತ್ತಿರುತ್ತಾರೆ. ಒಳ್ಳೆಯದು ಮತ್ತು ಕೆಟ್ಟದ್ದರ ಕುರಿತು ತಿಳಿಹೇಳುತ್ತಾರೆ. ಹಿರಿಯರೇ ಮಿತಿಗಳೊಂದಿಗಿದ್ದರೆ, ಇಡೀ ಕುಟುಂಬದ ಸದಸ್ಯರು ವಿವಿಧ ಸಮಸ್ಯಾತ್ಮಕ ವರ್ತನೆಗಳೊಂದಿಗೆ ಇದ್ದು ಸಮಾಜಕ್ಕೆ ಭಾರವೆನ್ನಿಸುತ್ತಾರೆ. ಪಕ್ಕದ ಮನೆಯವರಿಗೆ ಕಿರಿಕಿರಿಯಾಗುತ್ತಾರೆ. ತಾವು ಕಾರ್ಯನಿರ್ವಹಿಸುವ ಇಲಾಖೆ ಅಥವಾ ಸಂಸ್ಥೆಯ ಸ್ಪರ್ಧಾತ್ಮಕ ವಾತಾವರಣವನ್ನೇ ಕಲುಷಿತಗೊಳಿಸುವಷ್ಟು ಪ್ರಭಾವ ಬೀರುತ್ತಾರೆ. ಅದೇ ರೀತಿಯ ನಡವಳಿಕೆ ಮನೆಯಲ್ಲೂ ಕಂಡುಬಂದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತದೆ.

ಮಿತಿಗಳನ್ನು ಮೀರದ ದೊಡ್ಡವರು, ಅಂಥವರ ಸಣ್ಣತನಗಳ ವರ್ತನೆಗಳಿಂದ ಪ್ರಭಾವಿತರಾಗುವ ಮಕ್ಕಳು ತಮ್ಮಲ್ಲಿನ ಊನಗಳನ್ನೇ ಶಕ್ತಿ ಎಂದುಕೊಂಡು ಬೆಳೆಯುತ್ತವೆ. ಬೆಳೆದು ನಿಂತಾಗ ಈ ಊನಗಳ ಕಾರಣಕ್ಕಾಗಿಯೇ ಅವರನ್ನು ಇಡೀ ಸಮಾಜ ತಪ್ಪಿತಸ ಎಂದು ಬೆರಳು ತೋರಿದಾಗ ಜ್ಞಾನೋದಯವಾಗುತ್ತದೆ. ಆದರೆ, ಅಷ್ಟರಲ್ಲಾಗಲೇ ಮಾನ ಹರಾಜಾಗಿರುತ್ತದೆ. ಕಾಲ ಮಿಂಚಿರುತ್ತದೆ. ಅಂಥವರಿಗೆ ಉಳಿಯುವುದು ಒಂದೇ ದಾರಿ ತಮ್ಮೊಳಗಿನ ಮಿತಿಗಳನ್ನು ಮೀರಲು ಪ್ರಯತ್ನಿಸುವುದು. ಮತ್ತಷ್ಟು ಉದಾತ್ತವಾಗುತ್ತಾ ಮುನ್ನಡೆಯುವುದು. ಹಿಂದಿನ ಕೆಟ್ಟ ಅನುಭವಗಳನ್ನು ಪರಿಗಣಿಸಿಕೊಂಡು ಮುಂದಿನ ಹೆಜ್ಜೆಗಳನ್ನು ಎಚ್ಚರದಲ್ಲಿರಿಸುವುದು.

ಮಿತಿಗಳ ಕಾರಣಕ್ಕಾಗಿಯೇ ಆದ ಅವಮಾನವನ್ನು ಸಕಾರಾತ್ಮಕವಾಗಿ ಗ್ರಹಿಸದೇ ದ್ವೇಷದ ದೃಷ್ಟಿಯಿಂದ ನೋಡಿದರೆ ಮುಂದಿನ ದಿನಗಳಲ್ಲೂ ಅವಮಾನದ ಸ್ವರೂಪ ತೀವ್ರವಾಗುತ್ತದೆ. ಮತ್ತೆ ಮತ್ತೆ ಮಿತಿಗಳೊಂದಿಗೇ ಗುರುತಿಸಿಕೊಳ್ಳುವ ಸಂಕುಚಿತ ಸ್ವಭಾವ ಶಾಶ್ವತವಾಗಿ ಬೇರೂರಿಬಿಡುತ್ತದೆ. ಇಂಥವರೇ ಕೆಟ್ಟತನದ ಪ್ರತೀಕವಾಗುತ್ತಾರೆ. ಜೀವಪರ ಆಲೋಚನೆಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ನೈತಿಕ ಮಾದರಿಗಳನ್ನು ಧಿಕ್ಕರಿಸಿ ತಾವು ನಡೆದದ್ದೇ ಹಾದಿ ಎಂದುಕೊಳ್ಳುತ್ತಾರೆ. ಹಿರಿಯರ ಕಿವಿಮಾತುಗಳನ್ನು ನಿರ್ಲಕ್ಷಿಸುತ್ತಾರೆ. ತಾವೇ ಶ್ರೇಷ್ಠ ಎಂಬ ಭ್ರಮೆಯಲ್ಲಿ ಉಳಿದುಬಿಡುತ್ತಾರೆ. ಅಹಂಕಾರವನ್ನೇ ತಮ್ಮ ಪ್ರಾಬಲ್ಯ ಎಂದು ಪರಿಗಣಿಸುತ್ತಾರೆ. ಸ್ವಾರ್ಥ ಸಾಧನೆಯನ್ನೇ ಜೀವನಧ್ಯೇಯವಾಗಿಸಿಕೊಳ್ಳುತ್ತಾರೆ. ಭ್ರಷ್ಟ ಮನಃಸ್ಥಿತಿಯನ್ನೇ ಆರಾಧಿಸಿಕೊಳ್ಳುತ್ತಾರೆ. ಯಾರಾದರೂ ಇಂಥವರ ಮಿತಿಗಳ ಕಡೆಗೆ ಬೆರಳು ತೋರಿಸಿದರೆ ಸಿಟ್ಟಿಗೇಳುತ್ತಾರೆ. ಸಹಿಸಿಕೊಳ್ಳದೇ ಬಲ ಪ್ರಯೋಗಿಸಿ ಸುಮ್ಮನಿರಿಸಲು ಪ್ರಯತ್ನಿಸುತ್ತಾರೆ. ಇಂಥವರು ಆಗಾಗ ಲಭ್ಯವಾಗುವ ಬದಲಾಗುವ ಅಥವಾ ಮಿತಿಗಳನ್ನು ಮೀರಿ ತಮ್ಮನ್ನು ಮರುರೂಪಿಸಿಕೊಳ್ಳುವ ಅವಕಾಶಗಳನ್ನು ಬಳಸಿಕೊಳ್ಳುವ ಸಂಯಮವನ್ನೇ ತೋರುವುದಿಲ್ಲ. ಕೊನೆಯ ಉಸಿರಿರುವವರೆಗೆ ಬದಲಾಗದೇ ಉಳಿದುಬಿಡುತ್ತಾರೆ. ತಮ್ಮ ಬದಲಾಗದ ಸಂಕುಚಿತ ಮನಃಸ್ಥಿತಿಯನ್ನು ತಮ್ಮ ವರ್ತನೆಗಳ ಮೂಲಕ ಕಿರಿಯರಿಗೂ ದಾಟಿಸಿರುತ್ತಾರೆ. ಅವರೂ ಹಿರಿಯರ ಹಾದಿಯನ್ನೇ ಅನುಸರಿಸಿ ಹೊಸ ಬಗೆಯ ಸಮಸ್ಯಾತ್ಮಕ ವರ್ತನೆಗಳೊಂದಿಗೇ ಗುರುತಿಸಿಕೊಂಡುಬಿಡುತ್ತಾರೆ.

‘ನಾಲಿಗೆ ಒಳ್ಳೆಯದಾದರೆ ನಾಡೆಲ್ಲಾ ಒಳ್ಳೆಯದು’ ಎಂಬ ನಾಣ್ನುಡಿ ಇಂದಿಗೂ ಪ್ರಸ್ತುತ. ನುಡಿಯು ನಡೆಯನ್ನು ಸಂಕೇತಿಸುತ್ತದೆ. ನಡೆಯು ನುಡಿಯ ಘನತೆಯನ್ನು ಹೆಚ್ಚಿಸುತ್ತದೆ. ನುಡಿದಂತೆ ನಡೆಯುವ ಸ್ವಭಾವವು ವ್ಯಕ್ತಿತ್ವದ ಸೌಂದರ್ಯವನ್ನು ವಿಸ್ತರಿಸುತ್ತದೆ. ಮನಸ್ಸಿಗೆ ಬಂದಹಾಗೆ ಮಾತನಾಡುವವರು ವಿವೇಚನೆಯ ಧ್ವನಿಯನ್ನು ಆಲಿಸಿಯೇ ಇರುವುದಿಲ್ಲ. ವಿವೇಚನೆಯ ಒಳಧ್ವನಿ ಎಚ್ಚರಿಸಿದರೂ ಅದನ್ನು ಅಮುಖ್ಯ ಎಂದು ನಿರ್ಲಕ್ಷಿಸಿ ಮಾತನಾಡಿಬಿಡುವ ವಿಚಿತ್ರ ಮನೋಧರ್ಮವನ್ನೇ ರೂಢಿಸಿಕೊಂಡಿರುತ್ತಾರೆ. ಹೇಳಲೇಬೇಕಾದದ್ದನ್ನು ಹೇಗೆ ಹೇಳಬೇಕು, ಹೇಳುತ್ತಲೇ ಕೇಳುವವರೊಳಗಿನ ತಪ್ಪುಕಲ್ಪನೆಗಳನ್ನು ಹೋಗಲಾಡಿಸಿ ಅವರೊಳಗೆ ಸಕಾರಾತ್ಮಕತೆಯನ್ನು ಹೇಗೆ ಬಿತ್ತಬೇಕು ಎಂಬ ಅರಿವಿರುವವನು ಪ್ರತಿಸಲ ಮಾತನಾಡುವ ಕಾಲಕ್ಕೂ ತನ್ನ ಮಿತಿಗಳನ್ನು ಸ್ಪಷ್ಟಪಡಿಸಿಕೊಂಡು ಅವುಗಳನ್ನು ಮೀರುವ ಪ್ರಯತ್ನದಲ್ಲಿಯೇ ಆದರ್ಶ ಮಾತುಗಾರನಾಗಿ ರೂಪುಗೊಳ್ಳುತ್ತಾನೆ. ನಾನು ಮಾತನಾಡಿದ್ದೇ ಸರಿ, ನನ್ನೊಳಗೆ ಯಾವ ಮಿತಿಗಳೂ ಇಲ್ಲ ಎಂದುಕೊಂಡರೆ ಪ್ರಯೋಜನವಿಲ್ಲ. ಬದಲಾವಣೆಯನ್ನು ಇಷ್ಟಪಡುವ ವ್ಯಕ್ತಿತ್ವಗಳು ಮಾತನ್ನೇ ಪ್ರಬಲ ಅಸ್ತ್ರವಾಗಿಸಿಕೊಂಡು ವ್ಯಾಪಕ ಪ್ರಭಾವ ಬೀರುತ್ತಾರೆ.

ಸಾಧನೆಯ ಹಾದಿಯನ್ನಷ್ಟೇ ನೆಚ್ಚಿಕೊಂಡು ಗಮನ ಕೇಂದ್ರೀಕರಿಸುವವರು ವ್ಯಕ್ತಿಗತ ದೌರ್ಬಲ್ಯಗಳನ್ನು ಮೀರುವ ಸ್ಪಷ್ಟತೆಯನ್ನು ಕಂಡುಕೊಂಡಿರುತ್ತಾರೆ. ಅವರ ಕಣ್ಣಲ್ಲಿ ಸಾಧಿಸುವ ಆತ್ಮವಿಶ್ವಾಸದ ಮಿಂಚಿರುತ್ತದೆ. ಆ ಮಿಂಚಿನ ಪ್ರಭೆಯಲ್ಲಿ ಅವರು ತಮ್ಮ ಮಿತಿಗಳೆಲ್ಲವನ್ನೂ ಹತ್ತಿಕ್ಕಿಕೊಂಡಿರುತ್ತಾರೆ. ಸಾಧಿಸಿದ ನಂತರವೂ ಅವರು ತಮ್ಮ ಮಿತಿಗಳ ಕುರಿತಾದ ಆತ್ಮಾವಲೋಕನದ ಜೊತೆಗೆ ತಮ್ಮ ಪ್ರಭಾವಳಿಗೆ ಒಳಗಾದ ವ್ಯಕ್ತಿತ್ವಗಳ ಒಳಗೇ ಇರುವ ಮಿತಿಗಳನ್ನು ಗುರುತಿಸಿ ಮೀರುವುದಕ್ಕೆ ಬೇಕಾಗುವ ಪ್ರೇರಣಾತ್ಮಕ ಪ್ರಭಾವವನ್ನು ಬೀರುವುದರ ಕಡೆಗೆ ಆದ್ಯತೆ ನೀಡುತ್ತಾರೆ. ಒಳ್ಳೆಯದನ್ನೇ ಆಲೋಚಿಸುವ ವ್ಯಕ್ತಿತ್ವಗಳನ್ನು ಕಟ್ಟುವ ಮೂಲಕ ಸಮಾಜದ ದೌರ್ಬಲ್ಯಗಳನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಾರೆ.

ಈ ಬಗೆಯ ಪ್ರಕ್ರಿಯೆಯು ವ್ಯಕ್ತಿಗತವೂ ಹೌದು, ಸಾಮಾಜಿಕವೂ ಹೌದು. ಈ ಪ್ರಕ್ರಿಯೆಯ ಸಂಸ್ಕಾರಕ್ಕೊಳಗಾಗುವ ವ್ಯಕ್ತಿಗಳು ಮಾತ್ರ ಪ್ರತಿಯೊಂದು ಕಾಲಘಟ್ಟದ ಸಮಸ್ಯೆ ಮತ್ತು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಸಾರ್ವಕಾಲಿಕ ಮನ್ನಣೆ ಪಡೆಯಬಹುದಾದ ಶ್ರೇಷ್ಠ ಗುಣವಿಶೇಷತೆಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಒಂದೊಮ್ಮೆ ಗುಣವೈಶಿಷ್ಟ್ಯದ ಜೊತೆಯಾದ ನಂತರ ಮತ್ತಷ್ಟು ಹೃದಯವೈಶಾಲ್ಯತೆಯ ಎತ್ತರಕ್ಕೇರುವ ಅಪೇಕ್ಷೆ ಮೊಳಕೆಯೊಡೆಯುತ್ತದೆ. ವ್ಯಕ್ತಿತ್ವ ಉದಾತ್ತಗೊಳ್ಳುತ್ತದೆ. ಒಳಗಿನ ಮಿತಿಗಳೆಲ್ಲವನ್ನೂ ಮೀರುವ ಶಕ್ತಿ ಮತ್ತೆ ಮತ್ತೆ ವಿಸ್ತಾರಗೊಳ್ಳುತ್ತಿರುತ್ತದೆ. ನಿಜದ ಬೆಳವಣಿಗೆಯ ಹಾದಿ ಜೊತೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT