7

ರಾಜಕೀಯ: ಹಿಂದೆ ಉಳಿದ ‘ಡ್ರ್ಯಾಗನ್’ ಮಹಿಳೆ

Published:
Updated:
ರಾಜಕೀಯ: ಹಿಂದೆ ಉಳಿದ ‘ಡ್ರ್ಯಾಗನ್’ ಮಹಿಳೆ

ಕಳೆದ ವಾರ ಚೀನಾದಲ್ಲಿ ದೊಡ್ಡ ರಾಜಕೀಯ ಸಂಭ್ರಮ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಎರಡನೇ ಅವಧಿಗೆ ಮುಂದುವರಿಸಲು ಚೀನೀ ಕಮ್ಯುನಿಸ್ಟ್ ಪಕ್ಷ ತೀರ್ಮಾನಿಸಿತು. ಮಾವೊ ತ್ಸೆ ತುಂಗ ಹಾಗೂ ಡೆಂಗ್ ಕ್ಸಿಯೊಪಿಂಗ್ ನಂತರದ ಅತಿ ಪ್ರಭಾವಶಾಲಿ ನಾಯಕರಾಗಿದ್ದಾರೆ ಕ್ಸಿ ಈಗ. ಕ್ಸಿ ಅವರ ಹೆಸರು ಹಾಗೂ ಅವರ ತತ್ವಸಿದ್ಧಾಂತವನ್ನು ಪಕ್ಷದ ಸಂವಿಧಾನಕ್ಕೆ ಸೇರಿಸಲು ತಿದ್ದುಪಡಿಯನ್ನೂ ತರಲಾಗಿದೆ. ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ಪೀಪಲ್‌ನಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ಅತ್ಯುನ್ನತ ಘಟಕವಾದ ಪಾಲಿಟ್‌ಬ್ಯುರೊ ಸ್ಥಾಯಿ ಸಮಿತಿಯ ಏಳು ಸದಸ್ಯರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡರು ಕ್ಸಿ. ಈ ಪಾಲಿಟ್‌ಬ್ಯುರೊ ಸ್ಥಾಯಿ ಸಮಿತಿಯ ಸದಸ್ಯರು ಯಾರಾಗುತ್ತಾರೆಂಬುದು ತೀವ್ರ ವಾದವಿವಾದಗಳ ವಿಷಯವಾಗಿತ್ತು. ಆದರೆ ಒಂದು ವಿಷಯ ಮಾತ್ರ ಖಚಿತ ಇತ್ತು. ಅದು, ಈ ಸಮಿತಿಯಲ್ಲಿ ಮಹಿಳೆ ಇರುವುದಿಲ್ಲ ಎಂಬ ಸಂಗತಿ.

‘ಕಾಲ ಬದಲಾಗಿದೆ... ಇಂದು ಪುರುಷರು ಹಾಗೂ ಮಹಿಳೆಯರು ಸಮಾನರು. ಆಕಾಶ ಹೊತ್ತುಹಿಡಿಯಲು ಪುರುಷನಂತೆ ಮಹಿಳೆಗೂ ಸಮಪಾಲಿದೆ’ (ವಿಮೆನ್ ಹೋಲ್ಡ್ ಅಪ್ ಹಾಫ್ ದಿ ಸ್ಕೈ) ಎಂಬುದು ಮಾವೊ ಅವರ ಪ್ರಸಿದ್ಧ ಹೇಳಿಕೆ. ‘ಪುರುಷ ಕಾಮ್ರೇಡ್‌ಗಳು ಸಾಧಿಸುವುದನ್ನೆಲ್ಲಾ ಮಹಿಳಾ ಕಾಮ್ರೇಡ್‌ಗಳೂ ಸಾಧಿಸಬಲ್ಲರು’ ಎಂದು ಮಾವೊ ಹೇಳಿದ್ದರು. ‘ಆದರೆ ದೇಶ ಮುನ್ನಡೆಸುವ ವಿಚಾರ ಬಿಟ್ಟು...’ ಎಂಬ ಮಾತನ್ನು ಮಾವೊ ಹೇಳಿಕೆಗೆ ಈಗ ಸೇರಿಸಬೇಕೇನೊ ಎಂಬುದು ಕಳೆದ ವಾರದ ವಿದ್ಯಮಾನಗಳಿಂದ ಮತ್ತೆ ಸಾಬೀತಾಯಿತು.

ಚೀನಾ ಕ್ರಾಂತಿಯ ನಂತರ 1949ರಲ್ಲಿ ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ’ ಸ್ಥಾಪನೆಯಾಗಿ ಮಾವೊವಾದಿ ಕಮ್ಯುನಿಸ್ಟರು ಅಧಿಕಾರ ಗದ್ದುಗೆ ಏರಿದಾಗಲಿಂದಲೂ ದೇಶದ ಅಧ್ಯಕ್ಷೆಯಾಗುವುದಿರಲಿ, ಪಾಲಿಟ್‌ಬ್ಯುರೊ ಸ್ಥಾಯಿ ಸಮಿತಿಯಂತಹ ಉನ್ನತ ರಾಜಕೀಯ ಸಮಿತಿಗೂ ಈವರೆಗೆ ಮಹಿಳೆ ನೇಮಕವಾಗಿಲ್ಲ. ರಾಷ್ಟ್ರವನ್ನು ಮುನ್ನಡೆಸುವ ಕುರಿತಾದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಂತಹ ಸಮಿತಿ ಇದು. ಇದರ ಕೆಳಗೆ ಬರುವ 25 ಸದಸ್ಯರ ಪಾಲಿಟ್‌ಬ್ಯುರೊದಲ್ಲಿ ಈಗ ಕೇವಲ ಒಬ್ಬ ಮಹಿಳೆ ಇದ್ದಾರೆ. ಈ ಮೊದಲು ಇಬ್ಬರು ಮಹಿಳೆಯರಿದ್ದರು. ಜೊತೆಗೆ, ಈ ಪ್ರತಿಷ್ಠಿತ ಪಾಲಿಟ್‌ಬ್ಯುರೊದಲ್ಲಿ ಹಿಂದೆ ಇದ್ದ ಹೆಚ್ಚಿನ ಮಹಿಳೆಯರೂ ಚೀನೀ ನಾಯಕರ ಪತ್ನಿಯರೇ ಎಂಬು

ದನ್ನೂ ಗಮನಿಸಬೇಕು. ಆದರೆ, ಪಕ್ಷದ 204 ಜನರ ಕೇಂದ್ರೀಯ ಸಮಿತಿಯಲ್ಲಿ ಮತ್ತೆ 10 ಮಹಿಳೆಯರಿದ್ದಾರೆ ಎಂಬುದಕ್ಕೆ ಒಂದಿಷ್ಟು ಸಮಾಧಾನಪಟ್ಟುಕೊಳ್ಳಬೇಕು.

ಪ್ರತೀ ಐದು ವರ್ಷಗಳಿಗೊಮ್ಮೆ ಇಡೀ ವಾರ ನಡೆಯುವ ಕಮ್ಯುನಿಸ್ಟ್ ಪಾರ್ಟಿ ಸಮಾವೇಶದಲ್ಲಿ (ಸಿಪಿಸಿ) ಹಾಜರಾದ 2300 ಪ್ರತಿನಿಧಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಾಲು ಭಾಗ ಮಾತ್ರ. ‘ಬಿಳಿ ಗ್ಲೋವ್ಸ್ ಹಾಗೂ ಸ್ಕರ್ಟ್ ಧರಿಸಿದ ಯುವತಿಯರು ಸಭಾಂಗಣದ ಬದಿಗಳಲ್ಲಿ ಬಿಗುಮಾನದಿಂದ ನಿಂತಿದ್ದರು. ಅತಿಥಿಗಳನ್ನು ಅವರ ಸೀಟ್‌ಗಳತ್ತ ಕರೆದೊಯ್ಯುತ್ತಿದ್ದರು. ಚೀನಾ ಭವಿಷ್ಯದ ಬಗ್ಗೆ ಪುರುಷರು ಚರ್ಚಿಸುತ್ತಿದ್ದಾಗ ಈ ಮಹಿಳೆಯರು ಕಪ್ಪುಗಳಿಗೆ ಚಹಾ ಸುರಿಯುತ್ತಿದ್ದರು’ ಎಂದು ಮಾಧ್ಯಮ ವರದಿಯೊಂದು ಬಣ್ಣಿಸಿದೆ.

ಚೀನಾ ತನ್ನ ಹಳೆಯ ವೈಭವವನ್ನು ಮರು ಪಡೆಯುತ್ತಿದೆ ಎಂಬಂತಹ, ಚೀನೀ ಮಹಿಳೆಯರಿಗೆ ಆತಂಕ ತರುವ ಹೇಳಿಕೆಗಳನ್ನು ಬೇರೆ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಗಾಗ್ಗೆ ನೀಡುತ್ತಲೇ ಇರುತ್ತಾರೆ. ಪ್ರತಿಗಾಮಿಯಾಗಿಬಿಡಬಹುದಾದ ಈ ಹಳೆಯ ‘ವೈಭವ’ದ ಬಗ್ಗೆ ಸಹಜವಾಗಿಯೇ ಮಹಿಳೆಯರಿಗೆ ದಿಗಿಲು. ಇದನ್ನು ‘ಅಮೆರಿಕವನ್ನು ಮತ್ತೆ ಮಹಾನ್‌ ರಾಷ್ಟ್ರ ಮಾಡೋಣ’ ಎಂಬಂಥ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತುಗಳಿಗೆ ಹೋಲಿಕೆ ಮಾಡಬಹುದು.

ಚೀನಾದ ಗತವೈಭವದ ಕಾಲದಲ್ಲಿ ಮಹಿಳೆಯರು ಹೇಗಿದ್ದರು? ಎಂಬುದರ ಬಗ್ಗೆ ಹಿನ್ನೋಟ ಹಾಯಿಸಬಹುದು. ಕಟ್ಟಿದ ಕಾಲುಗಳೊಂದಿಗೆ ಪತಿಯಂದಿರಿಗೆ ಜೀತದಾಳುಗಳ ಹಾಗೆ ಇರುತ್ತಿದ್ದರು ಎಂಬುದು ಒಂದು ವ್ಯಾಖ್ಯಾನ. ಕಟ್ಟಿದ ಕಾಲುಗಳು ಕುಲೀನ ಸ್ತ್ರೀಯರ ಸೌಂದರ್ಯದ ಪ್ರತೀಕ ಎಂಬಂತೆ ಆಗ ಭಾವಿಸಲಾಗುತ್ತಿತ್ತು. ಇನ್ನು, ಸುಂಗ್ ವಂಶದ ಆಳ್ವಿಕೆಯ ಬಗ್ಗೆಯೂ ಕ್ಸಿ ಬಹಳ ಸಲ ಪ್ರಸ್ತಾಪಿಸುತ್ತಿರುತ್ತಾರೆ. ಕ್ರಿ.ಶ. 960 ರಿಂದ 1279ರವರೆಗಿನ ಕಾಲ ಅದು. ವಿವಿಧ ನೀತಿಗಳ ರಾಜಕೀಯ ಪಕ್ಷಗಳುಳ್ಳ ಆಧುನಿಕ ಸರ್ಕಾರ ಇತ್ತು ಆಗ, ಆ ಕಾಲದಲ್ಲಿ ಚೀನೀಯರು ಕಂಪಾಸ್ ಹಾಗೂ ಮುದ್ರಣ ತಂತ್ರಜ್ಞಾನವನ್ನು ಕಂಡು ಹಿಡಿದರು ಎಂಬುದೂ ನಿಜ. ಆದರೆ ಆ ಅವಧಿಯಲ್ಲೇ ಹೆಣ್ಣು ಶಿಶು ಹತ್ಯೆ ಸಹ ತೀವ್ರವಾಗಿತ್ತು ಎಂಬುದನ್ನು ಹೇಗೆ ಮರೆಯುವುದು?

ಕೈಗಾರಿಕೀಕರಣ ಹಾಗೂ ಆರ್ಥಿಕ ವ್ಯವಸ್ಥೆ ಆಧುನೀಕರಣದಿಂದ ಮಹಿಳೆಯ ರಾಜಕೀಯ ಶಕ್ತಿ ಹೆಚ್ಚಾಗದು ಎಂಬುದಕ್ಕೆ ಚೀನಾ ದೊಡ್ಡ ಉದಾಹರಣೆ. ಏಷ್ಯಾದಲ್ಲಿ ಹೊಸದಾಗಿ ಕೈಗಾರಿಕೀಕರಣಗೊಂಡ ರಾಷ್ಟ್ರಗಳಲ್ಲಿ, ಕಾರ್ಮಿಕ ವಲಯಕ್ಕೆ ಪ್ರವೇಶಿಸುವ ಮಹಿಳೆಯರು ಕೆಳಗಿನ ಸ್ಥಾನಮಾನದ ಕೌಶಲ ರಹಿತ ದುಡಿಮೆಗೆ ಸೀಮಿತಗೊಳ್ಳುವುದು ಮಾಮೂಲು. ಕೃಷಿ ಉತ್ಪಾದನೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆಯನ್ನು ಪುರುಷರು ಅತಿಕ್ರಮಿಸಿಕೊಳ್ಳುತ್ತಿದ್ದಂತೆಯೇ ಕೃಷಿಲೋಕದಲ್ಲೂ ಮಹಿಳೆ ಹಿಂದೆ ಸರಿದುಹೋಗುತ್ತಾಳೆ. ಈ ಮಹಿಳಾ ಕಾರ್ಮಿಕ ಶಕ್ತಿ ತಾನೇ ಸ್ವತಃ ರಾಜಕೀಯ ಬಂಡವಾಳ ಶಕ್ತಿಯಾಗಿ ಪರಿವರ್ತಿತವಾಗುವುದು ಕ್ಲಿಷ್ಟಕರ. ಚೀನಾದಲ್ಲೂ ಇದು ಅನಾವರಣಗೊಂಡಿದೆ.

ವಾಸ್ತವವಾಗಿ ಕಳೆದ ಎರಡು ದಶಕಗಳಲ್ಲಿ ಕಾರ್ಮಿಕ ಶಕ್ತಿಯಲ್ಲಿ ಸಾಮಾನ್ಯವಾಗಿ ಪ್ರತಿವರ್ಷ ಎಂಬಂತೆ, ಚೀನಾ ಮಹಿಳೆಯರ ಪಾಲ್ಗೊಳ್ಳುವಿಕೆಯೂ ಕಡಿಮೆಯಾಗುತ್ತಿದೆ. 1990ರಲ್ಲಿ ಶೇ 73.5 ಇದ್ದದ್ದು 2016ರಲ್ಲಿ ಇದು ಶೇ 63.3 ಕ್ಕೆ ಕುಸಿದಿದೆ. ಹೆಚ್ಚಿನ ಸಾಧನೆ ಮಾಡಲು ಚೀನೀ ಕಾನೂನುಗಳೂ ಮಹಿಳೆ ಸಾಮರ್ಥ್ಯಕ್ಕೆ ತಡೆ ಒಡ್ಡಿವೆ. ಬಹುತೇಕ ಪುರುಷರಿಗೆ ಅಧಿಕೃತ ನಿವೃತ್ತಿ ವಯಸ್ಸು 60 ವರ್ಷಗಳು. ಆದರೆ ಮಹಿಳಾ ನಾಗರಿಕ ಸೇವಕರು, ಪಾರ್ಟಿ ಕೇಡರ್‌ಗಳು ಹಾಗೂ ಸರ್ಕಾರದ ಸಂಸ್ಥೆಗಳ ಮಹಿಳಾ ನೌಕರರ ನಿವೃತ್ತಿ ವಯಸ್ಸು 55. ಇನ್ನೂ ಕೆಲವು ಮಹಿಳಾ ನೌಕರ ವರ್ಗಕ್ಕೆ ಇದು 50 ವರ್ಷ. ಈ ತಾರತಮ್ಯ ನೀತಿಗಳ ವಿರುದ್ಧ ದನಿ ಎತ್ತುವುದೂ ಕಷ್ಟ. 2015ರಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದಂದು ಶಾಂತಿಯುತ ಪ್ರತಿಭಟನೆಗೆ ಸಜ್ಜಾಗುತ್ತಿದ್ದ ಐವರು ಚೀನೀ ಸ್ತ್ರೀವಾದಿ

ಗಳನ್ನು ಬಂಧಿಸಲಾಗಿತ್ತು.

ಚೀನಾ ಸೇರಿದಂತೆ ಹಲವು ಏಷ್ಯನ್ ರಾಷ್ಟ್ರಗಳಲ್ಲಿನ ಸಂಸ್ಕೃತಿ, ಚೀನೀ ಸಂತ ಕನ್‌ಫ್ಯೂಷಿಯಸ್ ಸಿದ್ಧಾಂತಗಳಿಂದ ಪ್ರೇರಿತವಾಗಿವೆ. ‘ಮಹಿಳೆ ಇತರರನ್ನು ಅನುಕರಿಸಬೇಕೇ ಹೊರತು ನಾಯಕತ್ವ ವಹಿಸಬಾರದು’ ಎಂಬಂತಹ ಆಣಿಮುತ್ತು ಸೇರಿದಂತೆ ಹಲವು ಮಹಿಳಾ ವಿರೋಧಿ ಮಾತುಗಳು ಕನ್‌ಫ್ಯೂಷಿಯಸ್ ತತ್ವಗಳಲ್ಲಿವೆ. ಭಾರತದಲ್ಲಿ ಮನು ಧರ್ಮ ಶಾಸ್ತ್ರ ನಿರ್ದೇಶಿಸಿರುವಂತೆಯೇ ‘ಮಹಿಳೆ ಪುರುಷನಿಗೆ ವಿಧೇಯಳಾಗಿರಬೇಕು. ಯೌವನದಲ್ಲಿ ತಂದೆ, ಅಣ್ಣನನ್ನು ಅನುಸರಿಸಬೇಕು. ವಿವಾಹದ ನಂತರ ಗಂಡನನ್ನು ಅನುಸರಿಸಬೇಕು. ಗಂಡ ಸತ್ತಾಗ ಮಗನನ್ನು ಅನಸುರಿಸಬೇಕು’ ಎಂಬಂತಹ ಆದರ್ಶ ಸಂಹಿತೆಯನ್ನು ಸ್ತ್ರೀಗೆ ಕನ್‌ಫ್ಯೂಷಿಯಸ್ ಸಿದ್ಧಾಂತ ಬೋಧಿಸುತ್ತದೆ. ಸಮಾಜದೊಳಗೆ ಅಂತರ್ಗತವಾಗಿರುವ ಇಂತಹ ಸಾಂಸ್ಕೃತಿಕ ಆದರ್ಶಗಳು ಮಹಿಳೆಯ ರಾಜಕೀಯ ಪಾಲ್ಗೊಳ್ಳುವಿಕೆಯನ್ನು ದಮನ ಮಾಡುವಲ್ಲಿ ಪರೋಕ್ಷವಾಗಿ ಕೊಡುಗೆ ಸಲ್ಲಿಸುತ್ತಲೇ ಇರುತ್ತದೆ ಎಂಬುದು ಆಧುನಿಕ ಚೀನೀ ಮಹಿಳೆಯರು ಎದುರುಗೊಳ್ಳುತ್ತಿರುವ ಕಟುವಾಸ್ತವ.

ಸಂವಿಧಾನದಲ್ಲಿ ಲಿಂಗ ಸಮಾನತೆ ಅಳವಡಿಸಲಾಗಿದೆ. ಹೀಗಿದ್ದೂ ರಾಜಕಾರಣದಲ್ಲಿ ಹೆಚ್ಚಿನ ನೆಲೆ ಪಡೆದುಕೊಳ್ಳಲು ಪಾರಂಪರಿಕ ಸಾಮಾಜಿಕ ರಚನೆಗಳು ಮುಖ್ಯ ಅಡ್ಡಿಯಾಗಿವೆ. ಕೆರಿಯರ್‌ಗಿಂತ ಕುಟುಂಬ ಪಾತ್ರಗಳಿಗೆ ಮಹಿಳೆ ಹೆಚ್ಚಿನ ಆದ್ಯತೆ ನೀಡಬೇಕಾದ ಒತ್ತಡ ಇದೆ. ಜನಸಂಖ್ಯೆ ‘ಗುಣಮಟ್ಟ’ ಸುಧಾರಿಸುವುದಕ್ಕಾಗಿ ಸುಶಿಕ್ಷಿತ ಮಹಿಳೆಯರು ಮಕ್ಕಳನ್ನು ಹೊಂದಲು ಉತ್ತೇಜಿಸಿ ಪ್ರಚಾರಾಂದೋಲನವನ್ನು 2007ರಲ್ಲಿ ಸರ್ಕಾರ ಆರಂಭಿಸಿದಾಗ, ಅವಿವಾಹಿತ ವೃತ್ತಿಪರ ಮಹಿಳೆಯರನ್ನು ವಿವರಿಸಲು ‘ಉಳಿದುಹೋದ ಮಹಿಳೆಯರು’ (ಲೆಫ್ಟ್ ವೋವರ್ ವಿಮೆನ್) ಎಂಬಂತಹ ಅವಹೇಳನಕಾರಿ ನುಡಿಗಟ್ಟನ್ನು ಅಧಿಕೃತ ಅಖಿಲ ಚೀನಾ ಮಹಿಳಾ ಒಕ್ಕೂಟ (ಆಲ್ ಚೀನಾ ವಿಮೆನ್ಸ್ ಫೆಡರೇಷನ್) ಸೃಷ್ಟಿಸಿತ್ತು.

2012ರಲ್ಲಿ ಕ್ಸಿ ಅಧಿಕಾರಕ್ಕೇರಿದ ನಂತರವಂತೂ ‘ಮಹಿಳೆಯರ ಸ್ಥಾನ ಮನೆಯಲ್ಲಿ’ ಎಂಬ ತತ್ವ ಇನ್ನೂ ಹೆಚ್ಚು ಜನಪ್ರಿಯವಾಗಿದೆ. ತಾಯಂದಿರಾಗಿ ತಮ್ಮ ಕರ್ತವ್ಯಗಳಿಗೆ ಮಹಿಳೆಯರು ಮರಳಬೇಕು ಎಂಬಂತಹ ವಿಚಾರಗಳಿಗೆ ಉತ್ತೇಜನ ನೀಡುವ ವಿಚಾರಗಳನ್ನು ಚೀನಾ ಸರ್ಕಾರಿ ಮಾಧ್ಯಮಗಳು ಸಾಮಾನ್ಯವಾಗಿ ಚರ್ಚೆ ನಡೆಸುತ್ತವೆ. ಉದಾಹರಣೆಗೆ 2017ರ ಜುಲೈ ತಿಂಗಳಲ್ಲಿ ಒಂದು ವದಂತಿ ಹಬ್ಬಿತು. ಜನಪ್ರಿಯ ಹಾಂಕಾಂಗ್ ನಟಿ ಐರೀನ್ ವಾನ್ ಅವರ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದೆ. ತಮ್ಮ ಅಭಿನಯ ವೃತ್ತಿಯಲ್ಲಿ ಮುಂದುವರಿಯುವ ಅವರ ಅಪೇಕ್ಷೆಯೂ ಈ ಬಿರುಕಿಗೆ ಒಂದು ಕಾರಣ, ಇದು ‘ಇತರರಿಗೆ ಎಚ್ಚರಿಕೆ ಗಂಟೆಯಾಗಿದೆ’ ಎಂದು ಸರ್ಕಾರಿ ಸ್ವಾಮ್ಯದ ಅಂತರ್ಜಾಲ ಸುದ್ದಿ ವೇದಿಕೆಯ ಲೇಖನವೊಂದರಲ್ಲಿ ಎಚ್ಚರಿಸಲಾಗಿತ್ತು... ಪತಿಗೆ ನೆರವಾಗಿ ಮಕ್ಕಳನ್ನು ಬೆಳೆಸಲು ನೆರವಾಗಲು ಮಹಿಳೆಯರು ಮನೆಗೆ ಹಿಂದಿರುಗಬೇಕೆಂದು ಕರೆ ನೀಡಲಾಗಿತ್ತು.

2015ರ ಅಕ್ಟೋಬರ್ ತಿಂಗಳಲ್ಲಿ, ಚೀನಾದಲ್ಲಿದ್ದ ‘ಒಂದೇ ಮಗು ನೀತಿ’ಯನ್ನು ಸಡಿಲಗೊಳಿಸಲಾಯಿತು. ಎರಡನೇ ಮಗುವನ್ನು ಕಾನೂನಾತ್ಮಕವಾಗಿ ಹೊಂದುವ ಅವಕಾಶವನ್ನು ಲಕ್ಷಾಂತರ ಚೀನೀ ಕುಟುಂಬಗಳಿಗೆ ಒದಗಿಸಲಾಯಿತು. ಈ ಕುರಿತಂತೆ 2016ರ ಫೆಬ್ರುವರಿಯಲ್ಲಿ ಚೀನಾದ ಸರ್ಕಾರದ ಸುದ್ದಿ ಸಂಸ್ಥೆ ‘ಕ್ಸಿನ್ ಹುವಾ’ ಚೀನೀ ಸಮಾಜವಿಜ್ಞಾನಿ ಮಾ ಮೇಯಿಂಗ್ ಅವರ ಈ ಮಾತುಗಳನ್ನು ಉಲ್ಲೇಖಿಸಿತ್ತು. ‘ಮಹಿಳೆಯರು ಮನೆಗೆಳಿಗೆ ಹಿಂದಿರುಗುತ್ತಿರುವ ವಿದ್ಯಮಾನವನ್ನು ಬೆಂಬಲಿಸಬೇಕು. ಮಕ್ಕಳ ಪೋಷಣೆಗೆ ಅನುಕೂಲವಾಗುವುದಲ್ಲದೆ ಕುಟುಂಬ ಸ್ಥಿರತೆ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಅನುಕೂಲಕರ’ ಎಂದು ಅವರು ಹೇಳಿದ್ದರು.

ರಾಜಕೀಯದಲ್ಲಂತೂ, ಚೀನೀ ಮಹಿಳೆಯರಿಗೆ ಬಲವಾದ ಮಹಿಳಾ ಮಾದರಿಗಳೇ ಇಲ್ಲ. ಕ್ಸಿಯವರ ಪತ್ನಿ ಪೆಂಗ್ ಲಿಯುವಾನ್, ಚೀನಾದ ಬಹು ಶಕ್ತಿವಂತ ಮಹಿಳೆ, ಪತಿಯನ್ನು ಬೆಂಬಲಿಸುವುದಕ್ಕಾಗಿ, ಏಳಿಗೆ ಹೊಂದುತ್ತಿದ್ದ ತಮ್ಮ ಗಾಯನ ವೃತ್ತಿ ಬದುಕನ್ನೇ ತ್ಯಾಗ ಮಾಡಿದವರು ಅವರು. ‘ಡ್ಯಾಡಿ ಕ್ಸಿ ಯಿಂದ ಪುರುಷರು ಕಲಿಯಬೇಕು. ಮಾಮಿ ಪೆಂಗ್‌ನಿಂದ ಮಹಿಳೆಯರು ಕಲಿಯಬೇಕು’ ಎಂಬುದು ಚೀನಾದ ಜನಪ್ರಿಯ ಪ್ರಚಾರ ಗೀತೆಯ ತಿರುಳು.

ಚೀನಾದ ಇತಿಹಾಸದಲ್ಲಿ ಆಡಳಿತ ನಡೆಸಿದ ಸಶಕ್ತ ಮಹಿಳೆಯರು ಇಲ್ಲವೇ ಇಲ್ಲ ಎಂದೇನೂ ಇಲ್ಲ. 7ನೇ ಶತಮಾನದಲ್ಲಿ ಚಕ್ರವರ್ತಿನಿಯಾಗಿ ಆಳಿದವರು ವು ಝೆಟಿಯಾನ್. 20ನೇ ಶತಮಾನದ ಆರಂಭದಲ್ಲಿ ಚಕ್ರವರ್ತಿನಿ ಡೊವಾಗರ್ ಸಿಕ್ಸಿ ಆಡಳಿತ ನಡೆಸಿದ್ದಾರೆ. 1966 -1976 ರ ನಡುವೆ ಸಾಂಸ್ಕೃತಿಕ ಕ್ರಾಂತಿ ಸಂದರ್ಭದಲ್ಲಿ ರಾಷ್ಟ್ರವನ್ನು ಮುನ್ನಡೆಸಲು ನೆರವಾದವರು ಮೇಡಂ ಮಾವೊ ಎಂದು ಕರೆಯಲಾಗುತ್ತಿದ್ದ ಮಾವೊ ಜೆಡಾಂಗ್ ಪತ್ನಿ ಜಿಯಾಂಗ್ ಕ್ವಿಂಗ್. ಆದರೆ ಮಹಿಳೆಯರಿಗೆ ಆಡಳಿತ ನಡೆಸಲು ಅವಕಾಶ ನೀಡಿದಾಗ ಏನಾಗುತ್ತದೆ ಎಂಬುದಕ್ಕೆ ಎಚ್ಚರಿಕೆಯ ಕಥನಗಳಂತೆ ಇಂದು ಈ ಉದಾಹರಣೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಾಂಸ್ಕೃತಿಕ ಕ್ರಾಂತಿ ಸಂದರ್ಭದಲ್ಲಿನ ಅತಿರೇ

ಕಗಳು, ದೇಶದ್ರೋಹದ ಅಪರಾಧಗಳಿಂದ ಕುಖ್ಯಾತಿಗೊಳಗಾದ ‘ಗ್ಯಾಂಗ್ ಆಫ್ ಫೋರ್’ ಎಂದು ಕರೆಯಲಾಗುತ್ತಿದ್ದ ತಂಡದ ಭಾಗವಾಗಿದ್ದವರು ಜಿಯಾಂಗ್ ಕ್ವಿಂಗ್.

ನೆರೆಯ ತೈವಾನ್‌ನಲ್ಲಿ ಈಗ ಮಹಿಳಾ ಅಧ್ಯಕ್ಷರಿದ್ದಾರೆ. ಹಾಂಕಾಂಗ್‌ನಲ್ಲೂ ಮೊದಲ ಬಾರಿಗೆ ಮಹಿಳಾ ಚೀಫ್ ಎಕ್ಸಿಕ್ಯುಟಿವ್ ಇದ್ದಾರೆ. ಆದರೆ ಚೀನಾದ 31 ಪ್ರಾದೇಶಿಕ ಸರ್ಕಾರಗಳಲ್ಲೂ ಹೆಚ್ಚಿನ ಮಹಿಳಾ ನಾಯಕತ್ವವಿಲ್ಲ. ರಾಜಕೀಯದಲ್ಲಿ ಹೆಚ್ಚಿನ ಮಹಿಳಾ ಧ್ವನಿಗಳು ಇಲ್ಲದಿರುವುದು ಜಾಗತಿಕ ವಿದ್ಯಮಾನ. ಆದರೆ ಸಮಾನತೆಯ ಮಾತನಾಡುವ ಕಮ್ಯುನಿಸ್ಟ್ ಆಡಳಿತದಲ್ಲೂ ಇದು ಮುಂದುವರಿಯುವುದು ವಿಪರ್ಯಾಸ. 2050ರೊಳಗೆ ಚೀನಾ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚಿನವರು 65 ವರ್ಷಕ್ಕಿಂತ ಮೇಲ್ಪಟ್ಟವರಾಗಿರುತ್ತಾರೆ. ಹೀಗಾಗಿ ಅಧಿಕಾರದ ಮೊಗಸಾಲೆಗಳಿಗಿಂತ ಮನೆಗಳಲ್ಲಿ ಮಹಿಳೆಯರ ಅಗತ್ಯ ಹೆಚ್ಚಿದೆ ಎಂಬುದು ಚೀನಾ ಆಡಳಿತಕ್ಕೆ ಮನದಟ್ಟಾದಂತಿದೆ. ಆದರೆ ಮಹಿಳಾ ರಾಜಕಾರಣಿಗಳ ಕೊರತೆ, ವಿಸ್ತೃತ ನೆಲೆಯಲ್ಲಿ ಮಹಿಳಾ ಹಕ್ಕುಗಳ ಕ್ಷೀಣಿಸುವಿಕೆಗೂ ಸೂಚಕ ಎಂಬುದನ್ನು ಮರೆಯಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry