ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಮೇಷ್ಟ್ರು!

ಇಲ್ಲಿಯವರೆಗೆ 10 ಸಾವಿರ ಮಂದಿಗೆ ಕನ್ನಡ ಕಲಿಸಿದ ಶ್ರೀನಿವಾಸ್ ಪ್ರಸಾದ್‌
Last Updated 31 ಅಕ್ಟೋಬರ್ 2019, 11:40 IST
ಅಕ್ಷರ ಗಾತ್ರ

ಬೆಂಗಳೂರು: ಅನ್ಯಭಾಷಿಕರಲ್ಲಿ ಕನ್ನಡ ಕಂಪನ್ನು ಪಸರಿಸುವ ಕಾಯಕದಲ್ಲಿ 34 ವರ್ಷಗಳಿಂದ ತೊಡಗಿಸಿಕೊಂಡಿರುವ ಎಚ್‌.ಜಿ. ಶ್ರೀನಿವಾಸ್ ಪ್ರಸಾದ್‌, ಇಲ್ಲಿಯವರೆಗೆ ಸುಮಾರು 10,000 ಮಂದಿಗೆ ಕನ್ನಡ ಭಾಷೆಯ ಮಾಧುರ್ಯವನ್ನು ಪರಿಚಯಿಸಿದ್ದಾರೆ.

ಉಪನ್ಯಾಸಕನಾಗಬೇಕೆಂಬ ಮಹದಾಸೆಯಲ್ಲಿ ಕನ್ನಡ ಎಂ.ಎ. ಓದಿದ ಶ್ರೀನಿವಾಸ್‌ ಅನಿವಾರ್ಯವಾಗಿ ರಿಸರ್ವ್‌ ಬ್ಯಾಂಕ್‌ನಲ್ಲಿ ‘ನಾಣ್ಯ–ನೋಟು ಪರೀಕ್ಷಕ’ರಾಗಿ ಕೆಲಸಕ್ಕೆ ಸೇರಿದರು. ಬ್ಯಾಂಕ್‌ ಕೆಲಸದ ನಡುವೆ ಕಮರಿಹೋದ ಅವರ ಶಿಕ್ಷಕ ವೃತ್ತಿಯ ಕನಸು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಚಿಗುರೊಡೆಯಿತು.

1981–82ರಲ್ಲಿ ರಾಜ್ಯದಲ್ಲಿ ಕನ್ನಡ ಬಾರದವರಿಗೆ ‘ಕನ್ನಡ ಕಲಿಸುವ ಬೋಧಕರ ತರಬೇತಿ’ಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿತ್ತು. ಇದರಲ್ಲಿ ಶ್ರೀನಿವಾಸ್‌ ತರಬೇತಿ ಪಡೆದರು. ನಂತರ, ರಿಸರ್ವ್‌ ಬ್ಯಾಂಕ್‌ ಆಡಳಿತ ವರ್ಗದ ಬೆಂಬಲದಿಂದ ಬ್ಯಾಂಕ್‌ನಲ್ಲಿಯೇ ಕನ್ನಡ ಕಲಿಕಾ ತರಬೇತಿ ಆರಂಭಿಸಿದರು. ಹೀಗೆ ಶ್ರೀನಿವಾಸ ಅವರ ಕನ್ನಡ ಸೇವೆ ಪ್ರಾರಂಭಗೊಂಡಿತು.

‘ನಂತರದ ದಿನಗಳಲ್ಲಿ ಮೆಡಿಕಲ್ ಕಾಲೇಜು, ತಂತ್ರಜ್ಞಾನ ಕಂಪೆನಿ, ಸಂಘ ಸಂಸ್ಥೆಗಳಿಂದ ಕನ್ನಡ ಕಲಿಕಾ ತರಗತಿ ನಡೆಸಿಕೊಡಲು ಆಹ್ವಾನ ಬಂದಿತು. ಆದರೆ, ವೃತ್ತಿಯ ನಡುವೆ ತರಬೇತಿಗೆ ಸಮಯ ಸಿಗುತ್ತಿರಲಿಲ್ಲ. 2004ರಲ್ಲಿ ವೃತ್ತಿಗೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ಕನ್ನಡ ತರಬೇತಿಯಲ್ಲಿ ತೊಡಗಿಸಿಕೊಂಡೆ’ ಎಂದು ಶ್ರೀನಿವಾಸ್ ಹಂಚಿಕೊಂಡರು.

ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಹತ್ತು ವರ್ಷ ಕನ್ನಡದ ಪಾಠ ಹೇಳಿಕೊಟ್ಟರು. ಭಾರತೀಯ ವಿಜ್ಞಾನ ಸಂಸ್ಥೆ, ಟಾಟಾ ಸಂಸ್ಥೆಯಲ್ಲಿ ಸದ್ಯ ಕನ್ನಡ ಕಲಿಸುತ್ತಿದ್ದಾರೆ. ಜತೆಗೆ ವಸತಿ ಸಮುಚ್ಚಯಗಳಲ್ಲಿ ವಾರಾಂತ್ಯದ ತರಗತಿಗಳು, ಬ್ಯಾಂಕ್‌ ಉದ್ಯೋಗಿಗಳಿಗೆ, ಐಟಿ ಉದ್ಯೋಗಿಗಳಿಗೆ ಕನ್ನಡ ಕಲಿಸುತ್ತಿದ್ದಾರೆ. ಶ್ರೀನಿವಾಸ್‌ ಅವರಿಂದ ಅನೇಕ ವಿದೇಶಿಯರೂ ಕನ್ನಡಿಗರಾಗಿದ್ದಾರೆ.

ಮನವರಿಕೆಯಿಂದ ಕಲಿಕೆ ಸುಲಭ:‘ಒತ್ತಾಯದಿಂದಾಗಲೀ ಒತ್ತಡದಿಂದಾಗಲೀ ಭಾಷೆಯನ್ನು ಕಲಿಸಲುಸಾಧ್ಯವಿಲ್ಲ. ಅದನ್ನು ಪ್ರೀತಿಯಿಂದಲೇ ಕಲಿಸಬೇಕು. ನಾನು ಕನ್ನಡ ಕಲಿಕೆಯ ಅಗತ್ಯ ಮತ್ತು ಅನುಕೂಲಗಳನ್ನು ಮೊದಲು ಮನವರಿಕೆ ಮಾಡಿಕೊಡುತ್ತೇನೆ. ನಂತರ ಅವರಾ ಗಿಯೇ ಬಂದು ಕನ್ನಡ ಕಲಿಯುತ್ತಾರೆ’ ಎನ್ನುತ್ತಾರೆ ಶ್ರೀನಿವಾಸ್‌.

‘ಕನ್ನಡ ಕಲಿಸುವಾಗ ಶಾಸ್ತ್ರೀಯ ವಾಗಿ ವ್ಯಾಕರಣದ ಮೂಲಕ ಕಲಿಸಿದರೆ ತುಂಬ ಸಮಯ ಬೇಕಾ ಗುತ್ತದೆ. ಅಲ್ಲದೇ ಆಸಕ್ತಿಯೂ ಕಳೆದು ಹೋಗುತ್ತದೆ. ಆದ್ದರಿಂದ ತರಗತಿಗಳನ್ನು ಹೆಚ್ಚಾಗಿ ಸಂವಾದ ರೂಪದಲ್ಲಿಯೇ ನಿರ್ವಹಿಸುತ್ತೇನೆ. ನಿತ್ಯ ಬಳಸುವ ಪದಗಳ ಮೂಲಕವೇ ಕನ್ನಡ ಹೇಳಿಕೊಡುತ್ತೇನೆ.’

ಮೂಲತಃ ಹಾಸ್ಯ ಪ್ರವೃತ್ತಿಯವರಾದ ಶ್ರೀನಿವಾಸ್‌ ಅವರು ತರಗತಿಗಳಲ್ಲಿ ವಿನೋದಪ್ರಜ್ಞೆಯನ್ನು ಧಾರಾಳ ವಾಗಿಯೇ ಬಳಸುತ್ತಾರೆ. ‘ಲವಲವಿಕೆಯಿದ್ದರೆ ಯಾವುದನ್ನಾದರೂ ಬೇಗ ಕಲಿಯಬಹುದು. ಕನ್ನಡದ ಒಂದು ಪದ, ಮಲಯಾಳದಲ್ಲಿ ಬೇರೆ ಅರ್ಥವನ್ನು ನೀಡುತ್ತದೆ. ಹಿಂದಿಯಲ್ಲಿ ಅದು ಇನ್ನೋನೊ ಆಗುತ್ತದೆ. ಈ ವಿಷಯಗಳೇ ಹಾಸ್ಯಕ್ಕೆ ವಸ್ತುವಾಗುತ್ತವೆ’ ಎಂದು ಕಲಿಕಾ ವಿಧಾನವನ್ನು ವಿವರಿಸಿದರು.

ಸಂದರ್ಭಕ್ಕೆ ತಕ್ಕಂತೆ ಪಠ್ಯ ಬದಲಾವಣೆ: ‘ಅಭ್ಯರ್ಥಿಗಳ ಅವಶ್ಯಕತೆಗೆ ಅನುಗುಣವಾಗಿ ತರಗತಿ ಪಠ್ಯ ರೂಪಿಸಿಕೊಳ್ಳುತ್ತೇನೆ. ಉದಾಹರಣೆಗೆ ಬ್ಯಾಂಕ್‌ ಉದ್ಯೋಗಿಗಳಿಗೆ ವ್ಯಾವಹಾರಿಕ ಕನ್ನಡ, ಗೃಹಿಣಿಯರಿಗೆ ದೈನಂದಿನ ಕನ್ನಡ, ತಂತ್ರಜ್ಞಾನದ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಹೀಗೆ ಅವರವರ ಅವಶ್ಯಕತೆಗೆ ತಕ್ಕಂತೆ ಕನ್ನಡ ಕಲಿಸುತ್ತೇನೆ. ಅದಕ್ಕೆ ಅನುಗುಣವಾಗಿ 25ರಿಂದ 30 ಪಾಠಗಳನ್ನು ರೂಪಿಸಿಕೊಂಡಿದ್ದೇನೆ’ ಎಂದು ಹೇಳಿದರು.

ವಿಚಿತ್ರ ಕಾರಣಗಳಿಗೆ ಕನ್ನಡ ಕಲಿಕೆ

ಶ್ರೀನಿವಾಸ್‌ ಅವರಲ್ಲಿ ಕನ್ನಡ ಕಲಿಯಲು ಬರುವವರು ಕೊಡುವ ಕಾರಣಗಳೂ ವಿಚಿತ್ರವಾಗಿರುತ್ತವೆ. ‘ಆಟೊ ಡ್ರೈವರ್‌ ಜತೆ ಜಗಳವಾಡಲು ಕನ್ನಡ ಕಲಿಯಬೇಕು’, ‘ಆಶ್ರಮದಲ್ಲಿ ಸ್ವಾಮೀಜಿ ನೀಡುವ ಪ್ರವಚನ ಅರ್ಥವಾಗಲು ಕನ್ನಡ ಕಲಿಯಬೇಕು’, ‘ಕನ್ನಡದ ಸಭೆ–ಸಮಾರಂಭಗಳಲ್ಲಿ ಕನ್ನಡದಲ್ಲಿಯೇ ಮಾತನಾಡಲು ಕನ್ನಡ ಕಲಿಯಬೇಕು’, ‘ಪೊಲೀಸರೊಂದಿಗೆ ವ್ಯವಹರಿಸಲು’ ಹೀಗೆ ಒಬ್ಬೊಬ್ಬರದೂ ಒಂದೊಂದು ಕಾರಣ. ‘ಕನ್ನಡದ ಹುಡುಗನನ್ನು ಮದುವೆಯಾದ ಮರಾಠಿ ಮಹಿಳೆ ತಮ್ಮ ಮನೆಯಲ್ಲಿ ಅತ್ತೆ, ಮಾವ ತನ್ನ ಬಗ್ಗೆ ಏನು ಮಾತನಾಡಿಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಕನ್ನಡ ತರಗತಿಗೆ ಬಂದಿದ್ದೂ ಇದೆ’ ಎಂದು ಜೋರಾಗಿ ನಕ್ಕರು.

ಶುಲ್ಕದ ಬೇಡಿಕೆ ಇಲ್ಲ

‘ತರಗತಿಗಳಿಗೆ ಇಂತಿಷ್ಟೇ ಶುಲ್ಕ ಎಂದು ನಿಗದಿಪಡಿಸಿಲ್ಲ. ಕನ್ನಡ ಕಲಿಸುವುದು ನನಗೆ ಖುಷಿ ಕೊಡುತ್ತದೆ. ಆದರೆ ಉಚಿತವಾಗಿ ಕಲಿಸಲು ಹೋದರೆ, ಬೇಕಾಬಿಟ್ಟಿ ಆಗಿಬಿಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ರಯಾಣ ವೆಚ್ಚವನ್ನು ಕೇಳುತ್ತೇನೆ. ಅದನ್ನು ಹೊರತುಪಡಿಸಿ ಕಲಿತವರು ಕೊಟ್ಟಷ್ಟು ಹಣವನ್ನು ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT