ಶನಿವಾರ, ಫೆಬ್ರವರಿ 27, 2021
23 °C

ಒತ್ತಡ ಕಳೆಯುವ ಕೇಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒತ್ತಡ ಕಳೆಯುವ ಕೇಸ್

ಒತ್ತಡ ಯಾರಿಗಿಲ್ಲ ಹೇಳಿ? ಒತ್ತಡವೆನಿಸಲು ನಿರ್ದಿಷ್ಟ ಕಾರಣವೇ ಬೇಕಿಲ್ಲ. ಬೆಳಿಗ್ಗೆ ಎಚ್ಚರಗೊಂಡಾಗಿನಿಂದ ರಾತ್ರಿ ನಿದ್ದೆಗೆ ಜಾರುವವರೆಗೂ ಒತ್ತಡವೇ ನಮ್ಮನ್ನು ಸುತ್ತುತ್ತಿರುತ್ತದೆ. ನಮ್ಮ ದಿನನಿತ್ಯದ ಬದುಕಿನೊಂದಿಗೇ ಒತ್ತಡ ಬೆಸೆದುಕೊಂಡುಬಿಟ್ಟಿದೆ.

ಹಾಗೆಯೇ ಅದನ್ನು ನಿವಾರಿಸಿಕೊಳ್ಳುವ ದಾರಿಗಳೂ ಹುಟ್ಟಿಕೊಳ್ಳುತ್ತಲೇ ಇವೆ. ನಮ್ಮ ಗಮನವನ್ನು ಕ್ಷಣಕಾಲ ಬೇರೆಡೆ ಸೆಳೆಯುವ ಮೂಲಕ ಒತ್ತಡ ತರುವ ಸಂಗತಿಗಳನ್ನು ದೂರವಿಡುವ ಸಾಮಗ್ರಿಗಳ ವಿನ್ಯಾಸದತ್ತ ಹಲವು ಕಂಪನಿಗಳು ಒಲವು ತೋರುತ್ತಿವೆ.

ಡ್ಯಾಂಗ್ಲಿಂಗ್ ಬಾಲ್‌, ಸ್ಟ್ರೆಸ್‌ಬಾಲ್, ಫಿಜೆಟ್ ಸ್ಪಿನ್ನರ್ ಇವೆಲ್ಲವೂ ವಿನ್ಯಾಸಗೊಂಡಿದ್ದು ಇದೇ ಹಾದಿಯಲ್ಲೇ. ಇದೀಗ ಫೋನ್ ಕೇಸ್‌ ಕೂಡ ಒತ್ತಡ ನಿವಾರಣೆಗೆ ಮುಂದಾಗಿದೆ.

ಕೊರಿಯನ್ ಬ್ರ್ಯಾಂಡ್‌ ‘ಕೇಸ್‌ ಪಬ್’ ಈ ವಿಶೇಷವಾದ ಮೊಬೈಲ್ ಕೇಸ್ ಅನ್ನು ರೂಪಿಸಿರುವುದು. ಬಹುತೇಕ ಮಂದಿ ಬಳಿ ಫೋನ್ ಇರುವುದು ಸಾಮಾನ್ಯವಾದ್ದರಿಂದ ಒತ್ತಡ ನಿವಾರಿಸಿಕೊಳ್ಳಲು ಬೇರೆ ಸಾಮಗ್ರಿ ಕೊಳ್ಳುವ ಬದಲು ಸದಾ ಕೈಯಲ್ಲೇ ಇರುವ ಮೊಬೈಲ್‌ನಿಂದಲೇ ಅದು ಸಾಧ್ಯವಾಗದೇಕೆ ಎಂದುಕೊಂಡು ಈ ಕೇಸ್ ರೂಪಿಸಿದೆಯಂತೆ.

ಕೇಸ್‌ಗೆ ಮೆತ್ತನೆಯ ಸಿಲಿಕಾನ್‌ನಿಂದ ರೂಪಿಸಿದ ಪ್ರಾಣಿಗಳ ಗೊಂಬೆಗಳನ್ನು ಇಡಲಾಗಿದೆ. ಬೆಕ್ಕು, ಸೀಲ್‌ನಂಥ ಗೊಂಬೆಗಳನ್ನು ನೋಡಿಯೇ ಕೊಳ್ಳುವಷ್ಟು ಮುದ್ದಾಗಿವೆ. ಜೊತೆಗೆ ಒತ್ತಡವನ್ನೂ ಸುಲಭವಾಗಿ ಕಳೆಯಬಲ್ಲವಂತೆ. ಇವು ಹೇಗೆ ಒತ್ತಡ ನಿವಾರಿಸುತ್ತವೆ ಎಂದು ಯೋಚಿಸಬೇಕಿಲ್ಲ. ನಿಮಗೆ ಒತ್ತಡ ಎನ್ನಿಸಿದಾಗ ಅವುಗಳ ಹೊಟ್ಟೆಯನ್ನು ಒತ್ತಿದರೆ ಸಾಕು. ಮೆತ್ತಗಿರುವ ಅವುಗಳನ್ನು ಒತ್ತುತ್ತಿದ್ದರೆ ನಿಮ್ಮ ಗಮನ ಸಂಪೂರ್ಣ ಅದರೆಡೆಗೆ ಹೋಗಿ ಖುಷಿಯೊಂದಿಗೆ ಮನಸ್ಸು ತಿಳಿಯಾಗುತ್ತದಂತೆ. ತುಂಬಾ ಆತಂಕ ಭಯವಾದಾಗಲೂ ಹೀಗೆ ಮಾಡಿದರೆ ಮನಸ್ಸು ತಹಬದಿಗೆ ಬರುತ್ತದೆ, ಸ್ವಲ್ಪ ಆರಾಮ ಎನ್ನಿಸುತ್ತದೆ ಎಂಬುದು ಇದನ್ನು ರೂಪಿಸಿರುವ ಕಂಪನಿಯ ಹೇಳಿಕೆ.

ಮೆತ್ತಗಿರುವ ಈ ಕೇಸ್ ಎಲ್ಲೆಲ್ಲೂ ವೈರಲ್ ಆಗಿ ಮಾರಾಟವೂ ಜೋರಾಗಿದೆಯಂತೆ. ಒತ್ತಡ ಕಳೆಯದಿದ್ದರೂ ಪರವಾಗಿಲ್ಲ ಎಂದು ಇವುಗಳ ಚೆಂದ ನೋಡಿಯೇ ಸೋತು ಕೊಳ್ಳುವವರೂ ಹೆಚ್ಚಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.