ಶನಿವಾರ, ಫೆಬ್ರವರಿ 27, 2021
23 °C

ವಿಶ್ವಬ್ಯಾಂಕ್‌ ಶಹಬ್ಬಾಸ್‌ಗಿರಿ: ಸುಧಾರಣೆಗಳಿಗೆ ವೇಗ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಬ್ಯಾಂಕ್‌ ಶಹಬ್ಬಾಸ್‌ಗಿರಿ: ಸುಧಾರಣೆಗಳಿಗೆ ವೇಗ ಸಿಗಲಿ

ಉದ್ಯಮ ಮತ್ತು ಕೈಗಾರಿಕಾ ಸ್ನೇಹಿ ಉತ್ತೇಜನಾ ಉಪಕ್ರಮಗಳನ್ನು ಕೈಗೊಳ್ಳುವಲ್ಲಿ ಭಾರತವು ಜಾಗತಿಕ ಶ್ರೇಯಾಂಕದಲ್ಲಿ ಗಮನಾರ್ಹ ಜಿಗಿತ ಕಂಡಿದೆ. ದೇಶದಲ್ಲಿ ಉದ್ದಿಮೆ – ವಹಿವಾಟು ನಡೆಸುವುದು ಕಳೆದ ವರ್ಷಕ್ಕಿಂತ ಈಗ ಹೆಚ್ಚು ಸುಲಭ ಎನಿಸಿದೆ. ಕೈಗಾರಿಕೆಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಪೂರಕ, ಸುಲಲಿತ ಪರಿಸರ ಕಲ್ಪಿಸುವಲ್ಲಿ ಆಗಿರುವ ಪ್ರಗತಿಯನ್ನೂ ಇದು ಧ್ವನಿಸುತ್ತದೆ.

ವಿಶ್ವಬ್ಯಾಂಕ್‌ ತನ್ನ ವಾರ್ಷಿಕ ವರದಿಯಲ್ಲಿ ಕಠಿಣ ಸ್ವರೂಪದ 10 ಮಾನದಂಡಗಳ ಪೈಕಿ 8ರಲ್ಲಿ ಶಹಬ್ಬಾಸ್‌ಗಿರಿ ನೀಡಿರುವುದು ಅರ್ಥವ್ಯವಸ್ಥೆ ಪಾಲಿಗೆ ಚೇತೋಹಾರಿಯಾಗಿದೆ. ಆರ್ಥಿಕ ಸ್ವರೂಪ ಬದಲಿಸುವ ಸುಧಾರಣಾ ಕ್ರಮ ಜಾರಿಗೊಳಿಸಿರುವ 10 ದೇಶಗಳ ಪೈಕಿ ಭಾರತವೂ ಒಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಸಮೀಕ್ಷೆಗೆ ಒಳಪಟ್ಟ 190 ದೇಶಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತವು 30 ಸ್ಥಾನಗಳ ಬಡ್ತಿ ಪಡೆದು 100ನೇ ಸ್ಥಾನಕ್ಕೆ ಏರಿರುವುದು ಸಕಾರಾತ್ಮಕ. ಮೂರು ವರ್ಷಗಳಲ್ಲಿ 142ನೇ ಸ್ಥಾನದಿಂದ 100ರ ಸ್ಥಾನಕ್ಕೆ ಪದೋನ್ನತಿ ಪಡೆದಿರುವುದು ಹೊಸ ಮೈಲುಗಲ್ಲು ಆಗಿದೆ. ಈ ವಿದ್ಯಮಾನವು ಬಂಡವಾಳ ಹೂಡಿಕೆದಾರರಿಗೆ ಉತ್ತೇಜನ ನೀಡುವಂತಹದ್ದು. ದೇಶಿ ಆರ್ಥಿಕ ವೃದ್ಧಿ ದರವು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವಾಗ, ವಿಶ್ವಬ್ಯಾಂಕ್‌ನ ಈ ವರದಿಯು ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರಕ್ಕೆ ಒಂದಿಷ್ಟು ಸಮಾಧಾನ ನೀಡುವಂತಹದ್ದು.

ಮೂರ್ನಾಲ್ಕು ವರ್ಷಗಳಲ್ಲಿ ಜಾರಿಗೆ ತಂದ ಆರ್ಥಿಕ, ಬ್ಯಾಂಕಿಂಗ್‌ ಸುಧಾರಣೆಗಳು, ನಿಯಂತ್ರಣಗಳ ಸಡಿಲಿಕೆಯು ಉದ್ದಿಮೆ ವಹಿವಾಟು ಆರಂಭಿಸುವುದನ್ನು ಸುಲಭಗೊಳಿಸಿವೆ. ದಿವಾಳಿ ಸಂಹಿತೆ ಜಾರಿ, ಕಾರ್ಪೊರೇಟ್‌, ಆದಾಯ ತೆರಿಗೆ ಪಾವತಿ ನಿಯಂತ್ರಣ ಕ್ರಮಗಳಲ್ಲಿನ ಸಡಿಲಿಕೆ, ವಿದ್ಯುತ್‌ ಪೂರೈಕೆ ಮತ್ತು ಬಂಡವಾಳ ಹೂಡಿಕೆದಾರರ ಹಿತರಕ್ಷಣಾ ಕ್ರಮಗಳು ಉದ್ಯಮಸ್ನೇಹಿ ವಾತಾವರಣ ಕಲ್ಪಿಸಿವೆ. ಡಿಜಿಟಲ್‌ ಉಪಕ್ರಮ, ಯೋಜನೆಗಳಿಗೆ ಅನುಮತಿ ನೀಡುವಲ್ಲಿ ರಾಜ್ಯಗಳು ತೋರಿದ ಮುತುವರ್ಜಿಯೂ ನೆರವಿಗೆ ಬಂದಿವೆ.

ಇಷ್ಟಕ್ಕೆ ತೃಪ್ತಿಪಡಬೇಕಾಗಿಲ್ಲ. ಇನ್ನೂ ಸಾಕಷ್ಟು ಸವಾಲುಗಳು ಇವೆ. ವಿಶ್ವಬ್ಯಾಂಕ್‌ ಪಟ್ಟಿ ಮಾಡಿರುವ ಉಳಿದ ವಲಯಗಳಲ್ಲಿಯೂ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದರೆ  ಭಾರತದ ಸ್ಥಾನಮಾನ ಇನ್ನೂ ಎತ್ತರಕ್ಕೆ ಏರುವುದರಲ್ಲಿ ಸಂದೇಹ ಇಲ್ಲ. ಅಧಿಕಾರಶಾಹಿಯ ನಿಧಾನ ಧೋರಣೆ, ಮೊಂಡುತನ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕಾಗಿದೆ.

ದೊಡ್ಡ ಮೊತ್ತದ ಸಾಲದ ಸುಳಿಗೆ ಸಿಲುಕಿರುವ ಬ್ಯಾಂಕಿಂಗ್‌ ಮತ್ತು ಹಣಕಾಸು ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ಬ್ಯಾಂಕ್‌ಗಳ ಸಾಲವು ಉದ್ದಿಮೆ ವಹಿವಾಟಿಗೆ ಇಂಧನ ಇದ್ದಂತೆ. ಸಾಲ ನೀಡಿಕೆ ಪ್ರಮಾಣವೇ ಬತ್ತಿ ಹೋದರೆ ಪ್ರತಿಯೊಂದು ವಹಿವಾಟೂ ಕುಂಠಿತಗೊಳ್ಳುತ್ತದೆ. ಸುಸ್ತಿದಾರರಿಂದ ಸಾಲ ವಸೂಲಿಗೆ ನಿರ್ದಾಕ್ಷಿಣ್ಯ ಕ್ರಮ, ಆಡಳಿತಾತ್ಮಕ ಅಡೆತಡೆಗಳ ನಿವಾರಣೆ, ಜಿಎಸ್‌ಟಿ ಜಾರಿಯಲ್ಲಿನ ಲೋಪದೋಷಗಳನ್ನು ನಿವಾರಣೆ ಮಾಡಿದರೆ ಉದ್ಯಮಿಗಳ ಎದುರಿನ ಸಮಸ್ಯೆಗಳು ದೂರವಾಗಲಿವೆ.

ದೇಶದ ಅತಿದೊಡ್ಡ ನಗರಗಳಾದ ದೆಹಲಿ ಮತ್ತು ಮುಂಬೈಗಳಿಗೆ ಮಾತ್ರ ಅನ್ವಯಿಸಿ ಈ ಶ್ರೇಯಾಂಕ ದೊರೆತಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಭಾರತ ಎಂದರೆ ಬರೀ ಈ ಎರಡೇ ಮಹಾನಗರಗಳಲ್ಲ ಎನ್ನುವುದನ್ನೂ ಸರ್ಕಾರ ಅರಿತುಕೊಳ್ಳಬೇಕಾಗಿದೆ. ಅಧಿಕಾರಶಾಹಿಯು ಬರೀ ಕಾಯ್ದೆಗಳಲ್ಲಿನ ಸದುದ್ದೇಶಗಳನ್ನಷ್ಟೇ ಅರ್ಥೈಸಿಕೊಂಡರೆ ಸಾಲದು, ಅವುಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಬದ್ಧತೆಯನ್ನೂ ತೋರಬೇಕಾಗಿದೆ.

ಸುಧಾರಣಾ ಕ್ರಮಗಳು ಮುಂಬರುವ ವರ್ಷಗಳಲ್ಲಿ ಭಾರತದ ಶ್ರೇಯಾಂಕವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿವೆ ಎನ್ನುವ ಆಶಯ ಆದಷ್ಟು ಬೇಗ ನಿಜವಾಗಲಿ. ಸದ್ಯಕ್ಕಂತೂ ವಿಶ್ವಬ್ಯಾಂಕ್‌ನ ಮೆಚ್ಚುಗೆಯು ಅರ್ಥವ್ಯವಸ್ಥೆ ಮತ್ತು ಉದ್ದಿಮೆದಾರರ ಪಾಲಿಗೆ ಸಕಾರಾತ್ಮಕವಾದ ಬೆಳವಣಿಗೆಯಾಗಿದೆ. ಈ ಶ್ರೇಯಾಂಕವು ಇನ್ನೂ ಸಾಕಷ್ಟು ಸುಧಾರಿಸಲು ವಿಪುಲ ಅವಕಾಶಗಳಿವೆ.

ಈ ದಿಸೆಯಲ್ಲಿ ಭಾರತ ಸಾಗಬೇಕಾದ ಹಾದಿ ದೂರವೂ ಇದೆ. 50ನೇ ಶ್ರೇಯಾಂಕದ ಒಳಗೆ ಸ್ಥಾನ ಪಡೆಯುವ ಮುಂದಿನ ಗುರಿಯತ್ತ ಸಾಗುವುದಕ್ಕೆ ಬದ್ಧವಾಗಿರುವುದಾಗಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಪುನರುಚ್ಚರಿಸಿರುವುದು ಸಮಗ್ರವಾಗಿ ಕಾರ್ಯರೂಪಕ್ಕೆ ಬರಬೇಕಾಗಿದೆ. ರಾಜ್ಯ ಸರ್ಕಾರಗಳೂ ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.