ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟ ಹಣ ರದ್ದಿಯಾಗುವ ಬಗೆ

Last Updated 1 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರದೇಶಾಭಿವೃದ್ಧಿ ನಿಧಿ ಹೆಸರಿನಲ್ಲಿ ರಾಜ್ಯದಲ್ಲಿ ಪ್ರತೀ ಶಾಸಕನಿಗೆ ವರ್ಷಕ್ಕೆ ₹ 2 ಕೋಟಿ ಮತ್ತು ದೇಶದಲ್ಲಿ ಪ್ರತೀ ಸಂಸದನಿಗೆ ವರ್ಷಕ್ಕೆ ₹ 5 ಕೋಟಿ ಹಣವನ್ನು ಸರ್ಕಾರ ನೀಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ‘ಎಂಎಲ್‌ಎ ಫಂಡ್’ ಮತ್ತು ‘ಎಂಪಿ ಫಂಡ್’ ಎಂಬುದು

ಇವುಗಳ ಪ್ರಚಲಿತ ಹೆಸರು. ಈ ಹಣವನ್ನು ಪಡೆದುಕೊಂಡ ಶಾಸಕರು ಮತ್ತು ಸಂಸದರು ಅದನ್ನು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬೇಕು; ತಮ್ಮ ಸ್ವಂತಕ್ಕೆ ಬಳಸಬಾರದು ಎನ್ನುವುದು ಪ್ರಜೆಗಳಿಗೆ ಗೊತ್ತಿರುವ ಸತ್ಯ.

ಆದರೆ ಈ ಹಣವನ್ನು ಹೇಗೆ ವಿನಿಯೋಗಿಸಲಾಗಿದೆ ಎಂಬ ಮಾಹಿತಿ ಪ್ರಜೆಗಳಿಗೆ ಸುಲಭಕ್ಕೆ ಸಿಗುವುದಿಲ್ಲ. ವೋಟು ಹಾಕಿ ಪ್ರಜಾಪ್ರತಿನಿಧಿಯನ್ನು ಆಯ್ಕೆ ಮಾಡಿದ ಪ್ರಜೆಗಳಾದರೂ ತಮ್ಮನ್ನು ಪ್ರತಿನಿಧಿಸುವ ಶಾಸಕ, ಸಂಸದರ ಬಳಿ ವಿಚಾರಿಸಬೇಕು. ಈ ಕೆಲಸ ಮಾಡಲು ಪ್ರಜೆಗಳಿಗೆ ಏಕೋ ಭಯ, ನಾಚಿಕೆ, ಸಂಕೋಚ... ಹೆಚ್ಚಿನ ಶಾಸಕ, ಸಂಸದರ ಕಚೇರಿ ಕೊಠಡಿಯಲ್ಲಿ ಗೃಧ್ರಗಳಂತೆ ಕೆಲವು ಸೋಮಾರಿಗಳು ಹೆಚ್ಚು ಕಡಿಮೆ ಯಾವಾಗಲೂ ಕುಳಿತಿರುತ್ತಾರೆ.

ಇಂಥವರನ್ನು ಶಾಸಕ–ಸಂಸದರ ಕ್ಷೇತ್ರದ ಕಚೇರಿ ಕೊಠಡಿಗಳಲ್ಲಿ ಮಾತ್ರವಲ್ಲ, ವಿಧಾನಸಭೆಯ ಕೊಠಡಿಗಳಲ್ಲಿಯೂ ಕಾಣಬಹುದು. ಸಾಮಾನ್ಯ ಮನುಷ್ಯನಿಗೆ ತನ್ನ ಪ್ರತಿನಿಧಿ ಜತೆ ಮಾತಾಡಲು ಪ್ರೈವಸಿ ಸಿಗಬಾರದು ಎಂಬುದೇ ಅವರ ಉದ್ದೇಶವೋ, ಬಂದವನು ಮಾತಾಡಲಿಕ್ಕಾಗದೆ ಹೊರಟು ಹೋಗಲಿ ಎಂಬುದು ಶಾಸಕ–ಸಂಸದನ ಉದ್ದೇಶವೋ ಎಂಬಂತಿರುತ್ತದೆ ಆ ಸನ್ನಿವೇಶ.

ಸಾಮಾನ್ಯವಾಗಿ, ಗೃಧ್ರಗಳಂತೆ ಕುಳಿತಿರುವ ವ್ಯಕ್ತಿಗಳ ಬಳಿ ಹೋಗಿ ನಿಲ್ಲಲು ಸಾಮಾನ್ಯ ಮನುಷ್ಯನಿಗೆ ಯಾವಾಗಲೂ ಭಯ ಮತ್ತು ಮುಜುಗರ. ಮನುಷ್ಯನಿಗೆ ಮನುಷ್ಯನ ಬಗ್ಗೆ ಉಂಟಾಗುವ ಭಯಕ್ಕೆ ಕಾರಣವಂತೂ ಇದ್ದೇ ಇರುತ್ತದೆ. ಆದರೆ ಪ್ರಜಾಸತ್ತೆಯಲ್ಲಿ ಪ್ರಜೆಗಳಿಗೆ ಇಂಥ ದೌರ್ಬಲ್ಯಗಳು ಇರಬಾರದು.

ಶಾಸಕ, ಸಂಸದರು ತಾವು ಮಾಡಿಸಿದ ಕಾಮಗಾರಿಗಳ ವಿವರ ಮತ್ತು ಖರ್ಚನ್ನು ತಮ್ಮ ಕಚೇರಿ ಕೊಠಡಿಯಲ್ಲಿ ಒಂದು ಫಲಕ ಇರಿಸಿ ಅದರಲ್ಲಿ ಬರೆದು ಅಂಟಿಸಬೇಕು. ಅದನ್ನು ಯಾರೂ ಮಾಡುತ್ತಿಲ್ಲ.

ಶಾಸಕ, ಸಂಸದರು ಈ ವಿವರವನ್ನು ಸ್ವ–ಇಚ್ಛೆಯಿಂದ ಜನರಿಗೆ ತಿಳಿಸಬೇಕು ಎಂಬ ಕಾನೂನು ಇರಬೇಕು. ಸ್ವಂತ ಇಚ್ಛೆಯಿಂದ ಹಾಗೆ ಮಾಡುವ ಮನಸ್ಸು ಯಾರಿಗಿದೆ?

ಈ ಪ್ರದೇಶಾಭಿವೃದ್ಧಿ ನಿಧಿಗಳು ಸದ್ವಿನಿಯೋಗ ಆಗುವುದಿಲ್ಲ ಎಂದು ಪ್ರಜೆಗಳು ಹೇಳುತ್ತಾ ಇರುತ್ತಾರೆ. ಯಾವ ಜನಹಿತ ಕಾಮಗಾರಿಗಳು ತುರ್ತಾಗಿ ಆಗಬೇಕು ಎಂಬುದರ ಬಗ್ಗೆ ಪ್ರಜಾಪ್ರತಿನಿಧಿ ತನ್ನ ಕ್ಷೇತ್ರದಲ್ಲಿ ಸಂಚರಿಸಿ ತಿಳಿದುಕೊಳ್ಳಬೇಕು. ಆದರೆ ಅಷ್ಟು ಸಜ್ಜನ ಪ್ರಜಾಪ್ರತಿನಿಧಿ ನೂರರಲ್ಲಿ ಒಬ್ಬನೂ ಇಲ್ಲ.

ಈಗೀಗ ಪಂಚಾಯಿತಿ ಸದಸ್ಯರು ಕೂಡ ಶಾಸಕ, ಸಂಸದರಿಗಿಂತ ತಾವೇನೂ ಕಡಿಮೆಯವರಲ್ಲ ಎಂಬಂತೆ ವರ್ತಿಸುತ್ತಾರೆ. ಯಾರು ಏನೇ ಆಗಿರಲಿ, ತಮ್ಮ ಸುತ್ತಮುತ್ತ ಸಂಚರಿಸಿ, ತನ್ನಂಥ ಇತರರೊಡನೆ ಮಾತಾಡಿ, ಏನು ಕಾಮಗಾರಿ ಆಗಬೇಕು ಎಂದು ಪಟ್ಟಿ ಮಾಡಿ ಅಹವಾಲನ್ನು ಬರೆದು ಪ್ರಜಾಪ್ರತಿನಿಧಿಗೆ ಜನರು ನೀಡಬಹುದು. ಅದಕ್ಕೆ ಔದಾಸೀನ್ಯ, ಭಯ, ಸಂಕೋಚ ಮುಂತಾದ ಕಾಯಿಲೆಗಳ ಕಾಟ ಇರಬಾರದು.

ಪಂಚಾಯಿತಿ ಮಾಡಲಿ, ಸರ್ಕಾರ ಮಾಡಲಿ, ಯಾರಾದರೂ ಮಾಡಲಿ ಎಂಬ ಉಪೇಕ್ಷಾ ಭಾವ ಕೂಡ ಇರಬಾರದು. ಪಂಚಾಯಿತಿಗಳು ನಡೆಸುವ ಸಭೆಗಳಲ್ಲಿ ಶಾಸಕ, ಸಂಸದರು ಹಾಜರಿದ್ದು ವಿಚಾರ ವಿನಿಮಯ ಮಾಡಬೇಕು. ಜನರ ಸಮಸ್ಯೆಗಳು ಏನು ಎಂದು ಕೇಳಬೇಕು. ಅವರ ಬೇಡಿಕೆಗಳನ್ನು ತಿಳಿದುಕೊಳ್ಳಬೇಕು.

ಸರ್ವರೂ ಗಮನಿಸಬೇಕಾದ ಮುಖ್ಯ ವಿಚಾರ ಎಂದರೆ ನಿಧಿಗಳ ಪರಿಕಲ್ಪನೆ ಆರಂಭವಾದ ದಿನದಿಂದಲೂ ಹೆಚ್ಚಿನ ಶಾಸಕ–ಸಂಸದರು ಈ ನಿಧಿಯನ್ನು ಪೂರ್ತಿ ವಿನಿಯೋಗಿಸುತ್ತಿಲ್ಲ ಎಂಬುದು. ಇದರ ಅರ್ಥ ಏನು? ಆಗಬೇಕಾದ ಅಭಿವೃದ್ಧಿ ಕಾಮಗಾರಿ ಹಾಗೆಯೇ ಇರಲಿ, ಜನರು ಹೀಗೆಯೇ ಇದ್ದರೆ ಒಳ್ಳೆಯದು ಎಂದೇ? ‘ಹೈದರಾಬಾದ್‌ ನಿಜಾಮ ಪ್ರಜೆಗಳನ್ನು ಬೇಕೆಂದೇ ಬಡವರಾಗಿಸಿಟ್ಟುಕೊಂಡ’ ಎಂದು ಇತಿಹಾಸ ಹೇಳುತ್ತದೆ.

ಅದೇ ರೀತಿ ಇವತ್ತು ವೋಟುದಾರರನ್ನು ಸಂತ್ರಸ್ತರನ್ನಾಗಿಯೇ ಇರಿಸಿಕೊಂಡರೆ ಅವರ ವೋಟು ಸಿಕ್ಕಿಯೇ ಸಿಗುತ್ತದೆ ಎಂಬ ಭ್ರಮೆಯೇ? ಎಲ್ಲರಿಗೂ ಗೊತ್ತಿರುವ ಹಾಗೆ ಬಡ ಪ್ರಜಾಪ್ರತಿನಿಧಿ ಶ್ರೀಮಂತನಾಗುತ್ತಾ ಇರುತ್ತಾನೆ. ಬಡವ ಮತದಾರ ಮತ್ತಷ್ಟು ಬಡವನಾಗುತ್ತಾನೆ. ಪ್ರಜಾಪ್ರತಿನಿಧಿಗಳಲ್ಲಿ ಮಾನವ ದ್ವೇಷಿಗಳು ಕೂಡ ಇದ್ದಾರೆಯೇ ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗಿದೆ!

ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು ಇಲ್ಲದಿರುವುದು ಕೆಲವು ಪ್ರಜಾಪ್ರತಿನಿಧಿಗಳ ಗುಣ; ಕೆಲವು ಪ್ರಜಾಪ್ರತಿನಿಧಿಗಳು ಸದಾ ಒಂದು ಕಡೆ ಸ್ಥಿರವಾಗಿ ಇರುವುದೇ ಇಲ್ಲ. ಜನರು ಮದುವೆ, ಮುಂಜಿ, ಹುಟ್ಟುಹಬ್ಬ, ಸಭೆ, ಸಮಾರಂಭ ಇತ್ಯಾದಿ ಏನಾದರೊಂದು ಮಾಡುತ್ತಾ ಇರುತ್ತಾರೆ. ಅದಕ್ಕೆಲ್ಲ ಜನರು ಬಂದು ಶಾಸಕ, ಸಂಸದರನ್ನು ಆಮಂತ್ರಿಸುತ್ತಾರೆ. ಇದು ಅವಿರತವಾಗಿ ನಡೆಯುತ್ತಾ ಇರುತ್ತದೆ. ಅವರ ಮುಖದ ಮೇಲೆಯೋ ಹಣೆಯ ಮೇಲೆಯೋ ವೋಟನ್ನು ಕಾಣುವ ಪ್ರಜಾಪ್ರತಿನಿಧಿಗೆ ಕರೆದಲ್ಲಿಗೆಲ್ಲ ಹೋಗುತ್ತಾ ಇರಲು ಅಲ್ಲ ಜನ ತನ್ನನ್ನು ಆಯ್ಕೆ ಮಾಡಿದ್ದು ಅಂತ ಗೊತ್ತೇ ಇರುವುದಿಲ್ಲ!

ಪ್ರಜಾಪ್ರತಿನಿಧಿಯ ದೊಡ್ಡ ಫೋಟೊವನ್ನು ಟಿ.ವಿ. ಪರದೆಗೆ ಅಂಟಿಸಿ ಇಡೀ ಜಗತ್ತಿಗೆ ತೋರಿಸುವುದರಿಂದ ಪ್ರತಿನಿಧಿಗೆ ಏನು ಲಾಭವಾಗುತ್ತದೆ ಎಂದು ಆತನನ್ನೇ ಕೇಳಿ ತಿಳಿದುಕೊಳ್ಳಬೇಕು. ಜನರ ಪ್ರೀತಿಯನ್ನು, ಅವರ ವೋಟನ್ನು ಆ ರೀತಿ ಗಳಿಸಲು ಸಾಧ್ಯವಿಲ್ಲ. ಜನರ ಬಳಿ ಹೋಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುವುದರಿಂದ ಲಾಭವಿದೆ ಎಂದು ಅರ್ಥ ಮಾಡಿಕೊಳ್ಳಲಾಗದ ಮನುಷ್ಯ ಯಾಕೆ ಪ್ರಜಾಪ್ರತಿನಿಧಿ ಆಗಬೇಕು? ಜನ ಯಾಕೆ ಆತನನ್ನು ಆಯ್ಕೆ ಮಾಡಬೇಕು? ಸರ್ಕಾರ ಕೊಟ್ಟ ಹಣವನ್ನು ಆತ ಯಾವುದಕ್ಕೆಲ್ಲ ಬಳಸಿರಬಹುದು? ಆತನ ಕೊರಳಪಟ್ಟಿ ಹಿಡಿದು ವಿಚಾರಿಸುವ ಧೈರ್ಯ ನಮ್ಮ ಪ್ರಜಾಪ್ರಭುತ್ವಕ್ಕೆ ಇರಬೇಕಲ್ಲವೇ?

‘ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ನಮ್ಮದು’ ಎಂದು ಜಗತ್ತಿಗೆ ಸಾರುತ್ತಾ ಇರುವ ಅಗತ್ಯವಾದರೂ ಏನು? ಅದರಿಂದ ನಮಗೆ ಸಿಗುವುದಾರೂ ಏನು? ಈಗಲಾದರೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಮ್ಮ ಬೃಹತ್ ಪ್ರಜಾಪ್ರಭುತ್ವದ ಕೊಳೆ, ಕೊಚ್ಚೆಯನ್ನೆಲ್ಲಾ ತೆಗೆದು ಸ್ವಚ್ಛವಾಗಿಡಬೇಕಾದುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT