7

ಶಿಯೋಮಿ ಎಂಐ ಮಿಕ್ಸ್2 ಸುಂದರ ವಿನ್ಯಾಸದ ಫೋನ್

ಯು.ಬಿ. ಪವನಜ
Published:
Updated:
ಶಿಯೋಮಿ ಎಂಐ ಮಿಕ್ಸ್2 ಸುಂದರ ವಿನ್ಯಾಸದ ಫೋನ್

ಶಿಯೋಮಿ ಕಂಪ‌ನಿ ಇದು ತನಕ ನೀಡುವ ಬೆಲೆಗೆ ಉತ್ತಮ ಎನ್ನಬಹುದಾದ ಉತ್ಪನ್ನಗಳನ್ನೇ ನೀಡುತ್ತ ಬಂದಿದೆ. ಮೇಕ್ ಇನ್ ಇಂಡಿಯಾ ಘೋಷಣೆಯಂತೆ ಚೀನಾದ ಈ ಕಂಪೆನಿ ಈಗ ಭಾರತದಲ್ಲೂ ಫೋನ್ ತಯಾರಿಸುತ್ತಿದೆ. ಈ ಕಂಪನಿಯ ಹಲವು ಉತ್ಪನ್ನಗಳನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ವಿಮರ್ಶೆ ಮಾಡಲಾಗಿದೆ.

ಶಿಯೋಮಿಯವರ ಎಂಐಎ1 ಫೋನ್ ಹೊರತಾಗಿ ಇತರೆ ಎಲ್ಲ ಫೋನ್‌ಗಳಲ್ಲಿ ತಮ್ಮದೇ ಯೂಸರ್ ಇಂಟರ್‌ಫೇಸ್, ಅಂದರೆ ಶುದ್ಧ ಆ್ಯಂಡ್ರಾಯ್ಡ್ ಮೇಲೆ ತಮ್ಮದೇ ಹೊದಿಕೆ ಇದೆ. ಈ ಸಲ ನಾವು ಅಂತಹುದೇ ಒಂದು ಫೋನಿನ ವಿಮರ್ಶೆ ಮಾಡುತ್ತಿದ್ದೇವೆ. ಅದುವೇ ಶಿಯೋಮಿ ಎಂಐ ಮಿಕ್ಸ್2 (Xiaomi Mi Mix2).

ಇತ್ತೀಚೆಗೆ ಕೆಲವು ಫೋನ್‌ಗಳು ಪೂರ್ತಿ ಪರದೆಯನ್ನು ಬಳಸುತ್ತಿವೆ. ಕಳೆದ ವಾರ ಅಂತಹ ಒಂದು ಫೋನಿನ ವಿಮರ್ಶೆ ಮಾಡಲಾಗಿತ್ತು. ಇಂತಹ ಫೋನ್‌ಗಳಿಗೆ bezelless ಎನ್ನುತ್ತಾರೆ. ಈ ಫೋನ್ ಕೂಡ ಆ ನಮೂನೆಯ ಫೋನ್. ಈ ಫೋನಿನ ಗಾತ್ರ ಇತರೆ 5.5 ಇಂಚು ಪರದೆಯ ಫೋನ್‌ಗಳ ಗಾತ್ರದಷ್ಟೇ ಇದೆಯಾದರೂ ಇದರ ಪರದೆಯ ಗಾತ್ರ ಮಾತ್ರ 5.99 ಇಂಚು ಇದೆ. ಅಂದರೆ ಇದರ ಪರದೆಗೂ ದೇಹಕ್ಕೂ ಇರುವ ಅನುಪಾತ ಉತ್ತಮವಾಗಿದೆ. ಇದರ ಹಿಂಭಾಗದ ದೇಹ ಪಿಂಗಾಣಿಯಿಂದ (ceramic) ಮಾಡಲ್ಪಟ್ಟಿದ್ದು, ತುಂಬ ನಯವಾಗಿದೆ. ಇದರಿಂದಾಗಿ ಇದರ ನೋಟ ಅತ್ಯುತ್ತಮವಾಗಿದೆ. ಆದರೆ ಈ ಪಿಂಗಾಣಿ ದೇಹದಿಂದಾಗಿ ಇದು ಕೈಯಿಂದ ಜಾರಿ ಬೀಳುವ ಭಯವಿದೆ. ಆದುದರಿಂದ ಒಂದು ಅಧಿಕ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಹಿಂಭಾಗದ ಮಧ್ಯಭಾಗದಲ್ಲಿ ಕ್ಯಾಮೆರಾ ಇದೆ. ಅದರ ಬಲಭಾಗದಲ್ಲಿ ಫ್ಲಾಶ್ ಮತ್ತು ಕೆಳಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇವೆ.

ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಇದೆ. ಈ ಫೋನಿನಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿಯಿಲ್ಲ. ಯುಎಸ್‌ಬಿ-ಸಿ ಯಿಂದ 3.5. ಮಿ.ಮೀ. ಇಯರ್‌ಫೋನ್ ಕಿಂಡಿಗೆ ಒಂದು ಅಡಾಪ್ಟರ್ ನೀಡಿದ್ದಾರೆ. ಅದರ ಮೂಲಕ ಮಾಮೂಲಿ ಇಯರ್‌ಫೋನ್ ಜೋಡಿಸಬಹುದು. ಆದರೆ ಹಾಗೆ ಮಾಡಿದಾಗ ನಿಮಗೆ ಫೋನ್ ಚಾರ್ಜ್ ಮಾಡಲು ಆಗುವುದಿಲ್ಲ. ಎಡಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಎರಡು ನ್ಯಾನೋಸಿಮ್ ಹಾಕಲು ಬಳಸಲಾಗುತ್ತದೆ. ಯುಎಸ್‌ಬಿ ಓಟಿಜಿ ಸವಲತ್ತು ಇದೆ. ಇದನ್ನು ಕೈಯಲ್ಲಿ ಹಿಡಿದಾಗ ನಿಜಕ್ಕೂ ಒಂದು ಉತ್ತಮ ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ.

ಇದರಲ್ಲಿ ಒಂದೇ ಪ್ರಾಥಮಿಕ ಕ್ಯಾಮೆರಾ ಹಾಗೂ ಒಂದೇ ಸ್ವಂತೀ ಕ್ಯಾಮೆರಾ ಇವೆ. ಇತ್ತೀಚೆಗೆ ಹಲವು ಫೋನ್‌ಗಳಂತೆ ಇದರಲ್ಲಿ ಎರಡು, ಮೂರು ಕ್ಯಾಮೆರಾಗಳಿಲ್ಲ. ಪ್ರಾಥಮಿಕ ಕ್ಯಾಮೆರಾ 12 ಮೆಗಾಪಿಕ್ಸೆಲ್ ಮತ್ತು ಸ್ವಂತೀ ಕ್ಯಾಮೆರಾ 5 ಮೆಗಾಪಿಕ್ಸೆಲ್. ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಮೋಡ್ ಆಯ್ಕೆ ಕೂಡ ಇದೆ. ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ಕ್ಯಾಮೆರಾದ ಗುಣಮಟ್ಟವನ್ನು ಮೆಗಾಪಿಕ್ಸೆಲ್ ಅಳೆಯುವುದಿಲ್ಲ ಎಂದು ನಾನು ಹಲವು ಸಲ ಬರೆದಿದ್ದೇನೆ. ಈ ಕ್ಯಾಮೆರಾ ಸ್ವಲ್ಪ ಕಡಿಮೆ ಮೆಗಾಪಿಕ್ಸೆಲ್ ಆಗಿದ್ದರೂ ಫೋಟೊಗಳು ಉತ್ತಮವಾಗಿಯೇ ಮೂಡಿಬರುತ್ತವೆ. ಕಡಿಮೆ ಬೆಳಕಿನಲ್ಲಿ ಮಾತ್ರ ಕೆಲವೊಮ್ಮೆ ಫೋಟೊ ಅಷ್ಟು ತೃಪ್ತಿದಾಯಕವಾಗಿ ಮೂಡಿ ಬರುವುದಿಲ್ಲ. ಇದರ ಕ್ಯಾಮೆರಾ ಗುಣಮಟ್ಟದಲ್ಲಿ ಒನ್‌ಪ್ಲಸ್ 5ನ ಕ್ಯಾಮೆರಾಕ್ಕೆ ಹತ್ತಿರ ಹತ್ತಿರ ಬರುತ್ತದೆ.

ಇದರಲ್ಲಿರುವುದು 5.99 ಇಂಚು ಗಾತ್ರದ 1080 x 2160 ಪಿಕ್ಸೆಲ್ ರೆಸೊಲ್ಯೂಶನ್‌ನ ಪರದೆ. ಇದರ ಗುಣಮಟ್ಟ ಚೆನ್ನಾಗಿದೆ. ಫೋನಿನ ಕೆಲಸದ ವೇಗ ಅತ್ಯುತ್ತಮವಾಗಿದೆ. ಅಂಟುಟು ಬೆಂಚ್‌ಮಾರ್ಕ್‌ 1,74,414 ಇದೆ. ಅಂದರೆ ಉತ್ತಮ ವೇಗ ಎಂದು ತೀರ್ಮಾನಿಸಬಹುದು. ವಿಡಿಯೊ ವೀಕ್ಷಣೆ, ಆಟ ಆಡುವುದು ಎಲ್ಲ ಉತ್ತಮವಾಗಿವೆ. ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಕೂಡ ತೃಪ್ತಿದಾಯಕವಾಗಿ ಆಡಬಹುದು. ಹೈಡೆಫಿನಿಶನ್ ಸಹಿತ ಎಲ್ಲ ವಿಡಿಯೊ ವೀಕ್ಷಣೆ ಚೆನ್ನಾಗಿದೆ. 4k ವಿಡಿಯೊ ಚೆನ್ನಾಗಿ ಪ್ಲೇ ಆಗುತ್ತದೆ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಅಡಾಪ್ಟರ್ ಬಳಸಿ ನಿಮ್ಮದೇ ಉತ್ತಮ ಇಯರ್‌ಫೋನ್ ಜೋಡಿಸಿದರೆ ಒಂದು ಮಟ್ಟಿಗೆ ತೃಪ್ತಿದಾಯಕವಾದ ಸಂಗೀತ ಆಲಿಸಬಹುದು. ಕೆಲವು ಶಿಯೋಮಿ ಫೋನ್‌ಗಳ ಬಗ್ಗೆ ಒಂದು ಪ್ರಮುಖ ದೂರು ಎಂದರೆ ಫೋನ್ ಬಿಸಿಯಾಗುವುದು ಆಗಿತ್ತು. ಇದು ಅಷ್ಟು ಬಿಸಿಯಾಗುವುದಿಲ್ಲ.

ಈ ಫೋನಿನಲ್ಲಿ ಎರಡು ಬಳಕೆದಾರರನ್ನು ನಾವು ಆಯ್ಕೆ ಮಾಡಿಕೊಂಡ ಆ್ಯಪ್‌‌ಗಳಿಗೆ ಬಳಸಬಹುದು. ಅಂದರೆ ನಿಮ್ಮಲ್ಲಿ ಎರಡು ಸಿಮ್ ಇವೆ ಹಾಗೂ ಎರಡು ವಾಟ್ಸ್‌ಆ್ಯಪ್‌ ಖಾತೆಗಳಿವೆ ಎಂದಾದಲ್ಲಿ ಒಂದೇ ಫೋನಿನಲ್ಲಿ ಎರಡು ವಾಟ್ಸ್‌ಆ್ಯಪ್‌ಗಳನ್ನು ಬಳಸಬಹುದು.

ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ದೊಡ್ಡ ಪರದೆ ಇದ್ದರೂ ಬ್ಯಾಟರಿ ಚೆನ್ನಾಗಿ ಬಾಳಿಕೆ ಬರುತ್ತದೆ. ಪೂರ್ತಿ ಪರದೆಯ ಬಳಕೆ ಉತ್ತಮ. ನೀಡುವ ಹಣಕ್ಕೆ ಒಂದು ಮಟ್ಟಿಗೆ ತೃಪ್ತಿ ನೀಡುವ ಫೋನ್ ಎನ್ನಬಹುದು.*

ವಾರದ ಆ್ಯಪ್

ಮೈಕ್ರೋಸಾಫ್ಟ್‌ ಲಾಂಚರ್ 

ಆ್ಯಂಡ್ರಾಯ್ಡ್ ಫೋನ್‌ಗಳಿಗೆ ಹಲವು ಲಾಂಚರ್‌ಗಳು ಲಭ್ಯವಿವೆ. ಲಾಂಚರ್ ಎಂದರೆ ಫೋನ್ ಪ್ರಾರಂಭಿಸುವ ತಂತ್ರಾಂಶ ಅಥವಾ ಕಾರ್ಯಾಚರಣ ವ್ಯವಸ್ಥೆಯ ಮೇಲಿನ ಒಂದು ಹೊದಿಕೆ ಎನ್ನಬಹುದು. ಬೇರೆ ಬೇರೆ ನಮೂನೆಯ, ವಿನ್ಯಾಸಗಳ ಹಾಗೂ ಕಾರ್ಯಕ್ಷಮತೆಗಳ ಲಾಂಚರ್‌ಗಳು ಗೂಗಲ್‌ ಪ್ಲೇ ಸ್ಟೋರಿನಲ್ಲಿ ಲಭ್ಯವಿವೆ. ಅಂತಹ ಒಂದು ಲಾಂಚರ್ Microsoft Launcher (Preview) ನಿಮಗೆ ಇದೇ ಹೆಸರಿನಲ್ಲಿ ಹುಡುಕಿದರೆ ಗೂಗಲ್‌ ಪ್ಲೇ ಸ್ಟೋರಿನಲ್ಲಿ ದೊರೆಯುತ್ತದೆ. ಅಥವಾ http://bit.ly/gadgetloka301 ಜಾಲತಾಣಕ್ಕೆ ಭೇಟಿ ನೀಡಿಯೂ ಪಡೆಯಬಹುದು. ಇದು ತುಂಬ ಉಪಯುಕ್ತವಾಗಿರುವುದು ಗಣಕ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಮೈಕ್ರೋಸಾಫ್ಟ್‌ವಿಂಡೋಸ್ ಮತ್ತು ಖಾತೆ ಬಳಸುವವರಿಗೆ. ನಿಮ್ಮ ಎಲ್ಲ ವಿವರಗಳು, ದಿನಚರಿ, ಇಮೈಲ್, ಫೋಟೊ ಎಲ್ಲ ಮೊಬೈಲ್‌ನಲ್ಲೂ ಲ್ಯಾಪ್‌ಟಾಪ್ ಅಥವಾ ಗಣಕದಲ್ಲೂ ನಿಮಗೆ ಲಭ್ಯವಾಗುತ್ತವೆ. ಹಾಗೆಯೇ ಹಲವು ನಮೂನೆಯ ಥೀಮ್‌ಗಳಿವೆ. ಈ ಲಾಂಚರ್ ಮೊದಲು ಆ್ಯರೋ ಲಾಂಚರ್ ಎಂಬ ಹೆಸರಿನಲ್ಲಿತ್ತು (Arrow Launcher).

*

ಗ್ಯಾಜೆಟ್‌ ಸುದ್ದಿ

ಹಾರುವ ಬೈಕ್ 

ನೆಲ ಜಲ ಎರಡರಲ್ಲೂ ಚಲಿಸಬಲ್ಲ ಹೋವರ್‌ಕ್ರಾಫ್ಟ್‌ಗೊತ್ತು ತಾನೆ? ಈಗ ಅದೇ ತತ್ತ್ವವನ್ನು ಅಳವಡಿಸಿದ ಬೈಕ್ ತಯಾರಾಗಿದೆ. ಇದನ್ನು ಹೋವರ್‌ಬೈಕ್ ಎಂದು ಕರೆಯುತ್ತಾರೆ. ಕಲಶಿಂಕೋವ್ ಸ್ವಯಂಚಾಲಿತ ಕೋವಿ ತಯಾರಿಸುವ ಕಂಪನಿ ಇದನ್ನು ತಯಾರಿಸಿದೆ. ಇದು ಒಬ್ಬ ವ್ಯಕ್ತಿಯನ್ನು ಕುಳ್ಳಿರಿಸಿಕೊಂಡು ಹಾರಬಲ್ಲುದು. ಆಪತ್ಕಾಲದಲ್ಲಿ ಇದನ್ನು ಬಳಸಬಹುದು. ಸುಮಾರು 135 ಕಿ.ಗ್ರಾಂ ತೂಕವನ್ನು ಇದು ಧರಿಸಬಲ್ಲುದು. ಇದು ಬಹುತೇಕ ಡ್ರೋಣ್ ಅನ್ನು ಹೋಲುತ್ತದೆ. ಇದು ಇನ್ನೂ ಪ್ರಯೋಗಾವಸ್ಥೆಯಲ್ಲಿದೆ.

*

ಗ್ಯಾಜೆಟ್ ಸಲಹೆ

ಚೇತನ್ ಪ್ರಸಾದ್ ಅವರ ಪ್ರಶ್ನೆ: ಸುಮಾರು ₹ 15 ಸಾವಿರ ದಲ್ಲಿ 4 + 64 ಗಿಗಾಬೈಟ್ ಮೆಮೊರಿಯ ಉತ್ತಮ ಫೋನ್ ಯಾವುದು?

ಉ: ಶಿಯೋಮಿ ಎಂಐ ಎ1.

*

ಗ್ಯಾಜೆಟ್‌ ತರ್ಲೆ

ಬೆಂಗಳೂರಿನಲ್ಲಿ ಇತ್ತೀಚೆಗೆ ಅಧಿಕ ಮಳೆಯಿಂದ ಹಲವು ಬಡಾವಣೆಗಳು ಮುಳುಗಿ ಜನರು ತತ್ತರಿಸಿದ ಘಟನೆಗಳನ್ನು ನೀವೆಲ್ಲ ಪತ್ರಿಕೆಗಳಲ್ಲಿ ಓದಿರುತ್ತೀರ, ಟಿ.ವಿಯಲ್ಲಿ ನೋಡಿರುತ್ತೀರ. ಇಂತಹವರಿಗೆ ಮೇಲೆ ತಿಳಿಸಿದ ಹೋವರ್‌ಬೈಕ್ ತುಂಬ ಪ್ರಯೋಜನಕಾರಿ. ಆದಷ್ಟು ಬೇಗನೆ ಇದು ಬೆಂಗಳೂರಿಗೆ ತಲುಪಲಿ ಎಂದು ಆಶಿಸೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry