7

‘ಪ್ಯಾಂಥರ್’, ‘ಕಿಲ್ಲರ್’, ‘ಮಿನಿಸ್ಟರ್‌’ಗಳ ವಿಷಚಕ್ರ

ನಾಗೇಶ ಹೆಗಡೆ
Published:
Updated:
‘ಪ್ಯಾಂಥರ್’, ‘ಕಿಲ್ಲರ್’, ‘ಮಿನಿಸ್ಟರ್‌’ಗಳ ವಿಷಚಕ್ರ

ಮಹಾರಾಷ್ಟ್ರದ ಕೃಷಿ ಸಚಿವ ಸದಾಭಾವು ಖೋತ್ ತಮ್ಮ ಬೆಂಬಲಿಗರ ಜೊತೆಗೆ ಯವತ್ಮಾಲ್ ಜಿಲ್ಲೆಯ ಕಲಮ್ ಎಂಬ ಹಳ್ಳಿಗೆ ಅಕ್ಟೋಬರ್ 4ರಂದು ಭೇಟಿ ನೀಡಿದ್ದರು. ಹತ್ತಿಯ ಬೆಳೆಗೆ ಕೀಟನಾಶಕ ಸಿಂಪಡಿಸಲು ಹೋಗಿ ಅಸ್ವಸ್ಥರಾದ ರೈತರಿಗೆ ಸಾಂತ್ವನ ಹೇಳುವುದು ಅವರ ಉದ್ದೇಶವಾಗಿತ್ತು. ಇದ್ದಕ್ಕಿದ್ದಂತೆ ರೈತನೊಬ್ಬ ಚೀರುತ್ತ, ಕೂಗುತ್ತ ಜನಜಂಗುಳಿಯನ್ನು ಭೇದಿಸಿ ಮಂತ್ರಿಯ ಮೇಲೆ ಕೀಟನಾಶಕ ವಿಷವನ್ನು ಎರಚಲೆಂದು ಬಂದ. ಮಿನಿಸ್ಟರ್ ಓಟ ಕಿತ್ತರು. ವಿಷ ಹಿಡಿದವನೂ ಓಡಿದ. ಭದ್ರತಾ ಸಿಬ್ಬಂದಿಯೂ ಓಡಿ ಸಚಿವರಿಗೆ ರಕ್ಷಣೆ ಕೊಟ್ಟು, ತಪ್ಪಿತಸ್ಥನನ್ನು ಹಿಡಿದು ಲಾಕಪ್ಪಿಗೆ ಹಾಕಿದರು.

ಸಿಟ್ಟಿಗೆದ್ದ ಜನರು ಮಂತ್ರಿಗಳ ಮೇಲೆ ಮೊಟ್ಟೆ, ಚಪ್ಪಲು, ಟೊಮ್ಯಾಟೊ, ಬೂಟು, ಮಣ್ಣು- ಮಸಿ ಎಸೆಯುವುದು ನಮಗೆ ಹೊಸದಲ್ಲ. ಉಕ್ರೇನ್ ದೇಶದಲ್ಲಿ ಒಬ್ಬ ಸಂಸದನನ್ನು ಜನರು ಹೊತ್ತೊಯ್ದು ಕಸದ ತೊಟ್ಟಿಗೇ ಎಸೆದಿದ್ದೂ ನಡೆದಿದೆ. ಆದರೆ ಮಂತ್ರಿಯ ಮೇಲೆ ಕೀಟನಾಶಕ ಎರಚಲು ಹೋದ ಘಟನೆ ಇದೇ ಮೊದಲಿರಬೇಕು. ಕೃಷಿಕರಿಗೆ ಅಷ್ಟೊಂದು ಕೋಪ ಬರಲು ಕಾರಣ ಏನೆಂದರೆ, ಕಳೆದ ಎರಡು ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಸಾವಿರಕ್ಕೂ ಹೆಚ್ಚು ರೈತರು ತಾವು ಸಿಂಪಡಿಸುತ್ತಿದ್ದ ಕೀಟನಾಶಕಗಳ ವಿಷಬಾಧೆಗೆ ತಾವೇ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ.

ಈ ಘಟನೆಯ ನಂತರ ಮಾಧ್ಯಮಗಳ ಗಮನ ಮತ್ತೆ ಅತ್ತ ಹರಿದಿದೆ. ಯವತ್ಮಾಲ್ ಎಂದರೆ ರೈತರ ಆತ್ಮಹತ್ಯೆಗಳ ನಾಭಿಕೇಂದ್ರ ಎಂತಲೇ ಪ್ರತೀತಿ ಇತ್ತು. ಸಾಯಲೆಂದೇ ಕೃಷಿವಿಷಗಳನ್ನು ಬಳಸುತಿದ್ದ ರೈತರು ಅಲ್ಲಿ ಈಗ ಬದುಕುಳಿಯುವ ಯತ್ನದಲ್ಲೂ ಸಾವಪ್ಪುತ್ತಿದ್ದಾರೆ. ಹತ್ತಿಯ ಬೆಳೆಗೆ ಕಾಯಿಕೊರಕ ಹುಳಗಳ ಬಾಧೆ ಈ ವರ್ಷ ಜಾಸ್ತಿಯಾಗಿದ್ದು, ಹತಾಶ ರೈತರು ಹೇಗಾದರೂ ಫಸಲು ಉಳಿಸಿಕೊಳ್ಳಬೇಕೆಂದು ಸಿಕ್ಕ ಸಿಕ್ಕ ವಿಷಗಳನ್ನು ಹೊಲಕ್ಕೆ ಎರಚುತ್ತಿದ್ದಾರೆ.

ಅನೇಕರು ತುಸು ಹೆಚ್ಚು ಕಮ್ಮಿ ಆ ಕೀಟಗಳ ಹಾಗೆಯೇ ವಿಲವಿಲ ಒದ್ದಾಡಿ, ಕೆಲವರು ವಾಂತಿ ಭೇದಿ ಮಾಡಿಕೊಂಡೊ, ತಲೆಸುತ್ತಿ ಬಿದ್ದೊ, ಮೈಕೈಗೆ ಉರಿಹತ್ತಿಸಿಕೊಂಡೊ ರೋಗಗ್ರಸ್ತರಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ವಿಷಪೀಡನೆಯಿಂದ ಸತ್ತವರ ಸಂಖ್ಯೆ 16, 30, 40 ದಾಟಿ ಈಗ 50ರ ಮನೆ ತಲುಪಿದೆ.

ಸರ್ಕಾರ ನಿಧಾನವಾಗಿ ಎಚ್ಚೆತ್ತಿದೆ. ಕೃಷಿ ನಿರ್ದೇಶಕರ ಅಮಾನತು, ಹಳ್ಳಿಗಳತ್ತ ಸಚಿವರ ದಂಡಿನ ದೌಡಾವಣೆ, ಪರಿಹಾರ ಘೋಷಣೆ, ತನಿಖಾ ಸಮಿತಿ ರಚನೆ ಇತ್ಯಾದಿ ನಡೆದಿದೆ. ತಮ್ಮದೇ ಲ್ಯಾಬ್‌ಲೋಕದಲ್ಲಿ ಮುಳುಗಿದ್ದ ಕೃಷಿ ವಿಜ್ಞಾನಿಗಳನ್ನೂ ಮಾಧ್ಯಮಗಳು ತಟ್ಟಿ ಎಬ್ಬಿಸಿ ಮೈಕ್ ಒಡ್ಡತೊಡಗಿವೆ.

ವಿಜ್ಞಾನಿಗಳೋ ವಿಷದ ಈ ಸಾವಿನ ಸರಣಿಗೂ ನೈಸರ್ಗಿಕ ವಿಕೋಪಗಳೇ ಕಾರಣವೆಂದು ಹೇಳುತ್ತಿದ್ದಾರೆ. ಮಳೆ, ಬಿಸಿಲು ಜೋರಾಗಿದ್ದರಿಂದ ಹತ್ತಿಯ ಗಿಡಗಳು ಆರಡಿ ಎತ್ತರ ಬೆಳೆದಿವೆ. ರೈತರು ಕತ್ತೆತ್ತಿ ಮೇಲ್ಮುಖ ಸಿಂಚನ ಮಾಡಬೇಕು. ಜೊತೆಗೆ ಗಾಳಿಯೂ ಜೋರಾಗಿ ಬೀಸುತ್ತಿರುವುದರಿಂದ ಹತ್ತಿಯ ಗಿಡಕ್ಕೆ ಎರಚಿದ ವಿಷವೆಲ್ಲ ಮುಖಕ್ಕೇ ಸಿಡಿಯುತ್ತಿದೆ ಎಂದಿದ್ದಾರೆ.

ಈ ವರ್ಷ ಜಗತ್ತಿನ ಎಲ್ಲೆಡೆ ಪ್ರಕೃತಿ ಅತಿಯಾಗಿಯೇ ಮುನಿಸಿಕೊಂಡಿದೆ ನಿಜ. ಕಳೆದ ಎರಡು ತಿಂಗಳಿನ ದಾಖಲೆಗಳನ್ನು ನೋಡಿ: ಚಂಡಮಾರುತಗಳಿಂದ ತತ್ತರಿಸಿದ ಅಮೆರಿಕ ತುಸು ಚೇತರಿಸಿಕೊಳ್ಳುತ್ತಲೇ ಅಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚಿಗೆ 40ಕ್ಕೂ ಹೆಚ್ಚು ಜನರು ಸಾವಪ್ಪಿದ್ದಾರೆ. ಊರಿಗೆ ಊರೇ ಬೂದಿಯಾಗಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ಇತ್ತ ಯುರೋಪ್‌ನಲ್ಲಿ ಒಫೀಲಿಯಾ ಎಂಬ ಸುಂದರ ಹೆಸರಿನ ಸುಂಟರಗಾಳಿ ಐರ್ಲೆಂಡ್ ಮತ್ತು ಇಂಗ್ಲಂಡ್‌ಗಳಲ್ಲಿ ಹಾವಳಿ ಎಬ್ಬಿಸಿದೆ. ನೈಜೀರಿಯಾ, ಕೆಮರೂನ್, ಟೋಗೋ, ಇಥಿಯೋಪಿಯಾ, ಮಧ್ಯ ಆಫ್ರಿಕ, ದಕ್ಷಿಣ ಸುಡಾನ್ ಮತ್ತು ಇತ್ತ ವಿಯೆಟ್ನಾಮ್‌ನಲ್ಲಿ ಭೀಕರ ನೆರೆ ಹಾವಳಿ; ಕಾಂಗೋ, ಸಿಯೆರಾ ಲಿಯೋನ್ ದೇಶಗಳಲ್ಲಿ ಭೂಕುಸಿತ- ಕೆಸರಕುಸಿತ; ಮುನ್ನೂರಕ್ಕೂ ಹೆಚ್ಚು ಸಾವು. ಮೆಕ್ಸಿಕೊ, ಗ್ವಾಟೆಮಾಲಾಗಳಲ್ಲಿ ಭೂಕಂಪನ; ಇಂಡೊನೇಶ್ಯ, ವಾನುವಾಟುಗಳಲ್ಲಿ ಜ್ವಾಲಾಮುಖಿ; ಸ್ಪೇನ್ ಮತ್ತು ಪೋರ್ಚುಗಾಲ್‌ಗಳಲ್ಲಿ ಕಾಡಿನ ಬೆಂಕಿಯಿಂದ 67 ಸಾವು.

ಬೆಂಗಳೂರಿನಲ್ಲಂತೂ ‘ನೈಸರ್ಗಿಕ ವಿಕೋಪ ತಗ್ಗಿಸುವ ದಿನ’ ಎಂದು ವಿಶ್ವಸಂಸ್ಥೆ ನಿಗದಿಪಡಿಸಿದ ಅಕ್ಟೊಬರ್ 13ರಂದೇ ಸುರಿದ ಮಹಾಮಳೆ ಹಿಂದಿನ ದಾಖಲೆಗಳನ್ನೆಲ್ಲ ಅಳಿಸಿ ಹಾಕಿದೆ. ಹಾಗೆಂದ ಮಾತ್ರಕ್ಕೇ ಮಧ್ಯಭಾರತದ ಕೀಟನಾಶಕ ದುರಂತವನ್ನೂ ಪ್ರಕೃತಿ ವಿಕೋಪದ ಪಟ್ಟಿಗೆ ಸೇರಿಸಲಾದೀತೆ?

ಸೇರಿಸಬಹುದು. ಬಿಸಿಲು, ಮಳೆ, ಬೀಸುಗಾಳಿ ಮೂರೂ ಸೇರಿದರೆ ಏನೂ ಆಗಬಹುದು. ಪೋರ್ಚುಗಾಲ್‌ನಲ್ಲಿ ಅದು ಕಾಳ್ಗಿಚ್ಚಿನ ರೂಪ ತಾಳಿದರೆ ನಮ್ಮದೇ ದಾವಣಗೆರೆ, ಚಿತ್ರದುರ್ಗದಲ್ಲಿ ಆರ್ಮಿವರ್ಮ್ ಎಂಬ ಕರೀ ‘ಸೈನಿಕ ಹುಳು’ಗಳು ರಾತ್ರೋರಾತ್ರಿ ಕಾಳ್ಗಿಚ್ಚಿನಂತೆ ವ್ಯಾಪಿಸಿ ಸಾವಿರಾರು ಎಕರೆ ಜೋಳದ ಫಸಲನ್ನು ಪೊರಕೆಕಡ್ಡಿ ಮಾಡಿವೆ. ಮಹಾರಾಷ್ಟ್ರದಲ್ಲಿ ಕಬ್ಬಿಗೆ ಬಿಳಿನೊಣಗಳು; ವಿದರ್ಭದಲ್ಲಿ ಹತ್ತಿ ಮತ್ತು ಸೋಯಾ ಹೊಲಗಳಲ್ಲಿ ಕಾಯಿಕೊರಕ ಹುಳುಗಳ ದಾಳಿ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ, ಝಾರ್ಖಂಡ್ ಎಲ್ಲ ಕಡೆ ಕೃಷಿಕೀಟಗಳ ಹಾವಳಿ ಮೇರೆ ಮೀರಿದೆ.

ಹತ್ತಿ ಬೆಳೆಗಾರರ ಕತೆ ವಿಶೇಷವಾಗಿ ದಾರುಣವಾದುದು ಏಕೆಂದರೆ ಅದರ ಹಿಂದೆ ವಿಜ್ಞಾನದ ಬಹುದೊಡ್ಡ ಯಶಸ್ಸು ಮತ್ತು ವೈಫಲ್ಯ ಎರಡೂ ಬೆಸೆದುಕೊಂಡಿವೆ. ಹತ್ತಿಬೆಳೆಗೆ ದಾಳಿ ಮಾಡುವ ಬೊಲ್‌ವರ್ಮ್ ಎಂಬ ಕಾಯಿಕೊರಕ ಹುಳಗಳನ್ನು ಹತ್ತಿಕ್ಕಲೆಂದೇ ‘ಬಿಟಿ ಹತ್ತಿ’ ಎಂಬ ಕುಲಾಂತರಿ ತಳಿಯನ್ನು ವಿಜ್ಞಾನಿಗಳು ಸೃಷ್ಟಿಸಿದ್ದರು. ದೇಶದೆಲ್ಲೆಡೆ ಬಿಟಿ ಹತ್ತಿ ಮತ್ತು ಅದರ ಅನುರೂಪ, ನಕಲಿ ಅವತಾರಗಳು ವಿಜೃಂಭಿಸಿದವು.

ಕಾಯಿಕೊರಕ ಹುಳ ಕೂಡ ಇದೇ ಹತ್ತಿಯ ರಸವನ್ನು ಹೀರಿ ಬದುಕಲು ಕಲಿಯಿತು. ಕಂಪನಿಗಳ ಲಾಭಾಂಶ ಏರುತ್ತ ಹೋದಂತೆ ರೈತರ ನಸೀಬು ಕುಸಿಯುತ್ತ ಹೋಯಿತು. ಈಗ ಪಾರಂಪರಿಕ ಹತ್ತಿ ತಳಿಗಳೂ ಇಲ್ಲವಾದ್ದರಿಂದ ಬಿಟಿ ಹತ್ತಿಗೇ ವಿಷಸ್ನಾನ ಮಾಡಿಸಿ ಅಷ್ಟಿಷ್ಟು ಫಸಲು ತೆಗೆಯಬೇಕಾಗಿ ಬಂದಿದೆ. ‘ಹತ್ತಿಯ ಹೊಲ ಕಾಯುವ ಬೆರ್ಚಪ್ಪನಿಗೆ ಹರಕು ಬಟ್ಟೆಯೇ ಗತಿ’ ಎಂಬಲ್ಲಿಗೆ ಕತೆ ಬಂದು ನಿಂತಿದೆ.

ಈಗಿನ ಈ ಸರಣಿ ದುರಂತಗಳ ಹಿಂದೆ ಸರ್ಕಾರಗಳ ಸಾಲು ಸಾಲು ವೈಫಲ್ಯಗಳಿವೆ. ವಿಷ ತಯಾರಿಕೆಯಿಂದ ಹಿಡಿದು ಅವುಗಳ ಉತ್ಪಾದನೆ, ದಾಸ್ತಾನು, ಸಾಗಾಟ, ಮಾರಾಟ, ಬಳಕೆ ಎಲ್ಲವುಗಳ ಮೇಲೆ ನಿಗಾ ಇಡಲೆಂದೇ ದಿಲ್ಲಿಯಲ್ಲಿ ಕೀಟನಾಶಕ ಮಂಡಲಿ ಇದೆ. ಆದರೂ ಉತ್ಪಾದನೆಯ ಹಂತದಲ್ಲಿ ಜಗತ್ತಿನ ಅತಿ ದೊಡ್ಡ ದುರಂತ ಭೋಪಾಲದಲ್ಲಿ ಸಂಭವಿಸಿದೆ; ಬಳಕೆಯ ಹಂತದಲ್ಲಿ ಜಗತ್ತಿನ ಅತಿದೊಡ್ಡ ಎಂಡೊಸಲ್ಫಾನ್ ದುರಂತ ಪಡ್ರೆಯಲ್ಲಿ ಸಂಭವಿಸಿದೆ.

ತೀರ ನಾಚಿಕೆಗೇಡಿ ಭಾನಗಡಿಗಳೂ ನಮ್ಮಲ್ಲಿ ನಡೆದಿವೆ (ಖಾಲಿಯಾದ ವಿಷದ ಡಬ್ಬಿಯಲ್ಲೇ ಅಡುಗೆ ಎಣ್ಣೆ ತಂದಿದ್ದರಿಂದ ಬಿಹಾರದ ಶಾಲೆಯ 23 ಮಕ್ಕಳು ಸಾವಪ್ಪಿದ್ದಾರೆ). ನಮ್ಮ ದೇಶದಲ್ಲಿ ಮಾತ್ರ ಕ್ಯಾನ್ಸರ್ ಟ್ರೇನ್ ಓಡುತ್ತಿದೆ. ಕೃಷಿವಿಷಗಳನ್ನು ನಿಯಂತ್ರಿಸುವ ನಮ್ಮ ವ್ಯವಸ್ಥೆ ಅತ್ಯಂತ ಭ್ರಷ್ಟ ಮತ್ತು ಹೊಣೆಗೇಡಿಯದಾಗಿದೆ ಎಂಬುದು ಮತ್ತೆಮತ್ತೆ ಸಾಬೀತಾಗಿದೆ.

ಕೀಟನಾಶಕಗಳ ಅವೈಜ್ಞಾನಿಕ ಬಳಕೆಯ ವಿರುದ್ಧ ಪೆಸ್ಟಿಸೈಡ್ ಆಕ್ಷನ್ ನೆಟ್‌ವರ್ಕ್ (ಪ್ಯಾನ್) ಎಂಬ ಸರ್ಕಾರೇತರ ಸಂಸ್ಥೆ ಕೆಲಸ ಮಾಡುತ್ತಿದೆ. ಇದರ ಭಾರತೀಯ ಶಾಖೆ ಈಚೆಗೆ ಝಾರ್ಖಂಡ್ ರಾಜ್ಯದಲ್ಲಿ ತರಕಾರಿ ಬೆಳೆಯುವ 25 ರೈತರಲ್ಲಿರುವ ಕೀಟನಾಶಕಗಳ ಸಮೀಕ್ಷೆ ನಡೆಸಿತು. ಅನಕ್ಷರಸ್ಥ ರೈತರು ಬಳಿಯಿದ್ದ ವಿವಿಧ ಕಂಪನಿಗಳ 57 ಬಗೆಯ ವಿಷಗಳನ್ನು ಹೊರಕ್ಕೆ ತರಿಸಿ ನೋಡಿದಾಗ ಅವುಗಳಲ್ಲಿ ಕೀಟನಾಶಕ, ಕಳೆನಾಶಕ ಮತ್ತು ಶಿಲೀಂಧ್ರ ನಾಶಕ ಎಲ್ಲವೂ ಇದ್ದವು. ಯಾವುದನ್ನು ಯಾವ್ಯಾವ ಬೆಳೆಗೆ ಬಳಸಲೇಬಾರದು ಎಂಬ ನಿಯಮಗಳಿದ್ದರೂ ರೈತರಿಗೆ ಆ ಬಗ್ಗೆ ಏನೂ ಗೊತ್ತಿರಲಿಲ್ಲ. ತರಕಾರಿಗಳಿಗೆ ಬಳಸಲೇಬಾರದಾಗಿದ್ದ ಮೊನೊಕ್ರೊಟೊಫಾಸ್ ಎಂಬ ವಿಷದ್ರವ್ಯ ಎಲ್ಲೆಡೆ ಧಾರಾಳ ಬಳಕೆಯಾಗುತ್ತಿತ್ತು.

ಹತ್ತಿಗಾಗಿ ಮಾತ್ರ ಬಳಸಬೇಕಿದ್ದ ‘ಮಿನಿಸ್ಟರ್’, ‘ಪ್ಯಾಂಥರ್’, ‘ಟೆರರ್ ಸೂಪರ್’ ಎಂಬೆಲ್ಲ ಭಯಂಕರ ಬ್ರ್ಯಾಂಡ್ ಹೆಸರುಗಳ ವಿಷಗಳನ್ನು ಧಾರಾಳವಾಗಿ ಸೊಪ್ಪು, ತರಕಾರಿಗಳಿಗೆ ಸುರಿಯುತ್ತಿದ್ದರು. ‘ಮಿನಿಸ್ಟರ್’ ಹೆಸರಿನ ವಿಷದ ಬಾಟಲಿಯ ಮೇಲಂತೂ ‘ಇದನ್ನು ಹತ್ತಿ, ಸೇಂಗಾ, ಬದನೆ, ಬೆಂಡೆ, ತೊಗರಿ, ಕ್ಯಾಬೇಜ್, ಹೂಕೋಸು, ಗಡ್ಡೆಕೋಸು, ಟೊಮ್ಯಾಟೊ, ಸೂರ್ಯಕಾಂತಿ, ಸೋಯಾಬೀನ್, ಕಬ್ಬು ಇತ್ಯಾದಿಗಳಿಗೆ ಬಳಸಬಹುದು’ ಎಂದು ರಾಜಾರೋಷಾಗಿ ತಪ್ಪು ಮಾಹಿತಿಯನ್ನು ಮುದ್ರಿಸಲಾಗಿತ್ತು. ‘ಕೊಯ್ಲಿಗೆ 14 ದಿನಗಳ ಮುನ್ನ ಸಿಂಪಡನೆ ನಿಲ್ಲಿಸಬೇಕು’ ಎಂದು ಮುದ್ರಿತವಾಗಿದ್ದರೂ ರೈತರಿಗೆ ಗೊತ್ತಿರಲಿಲ್ಲ.

ಕಟ್ಟುನಿಟ್ಟು ನಿಯಮಗಳೇನೊ ಕಾನೂನು ಪುಸ್ತಕದಲ್ಲಿವೆ. ಆದರೆ ಉತ್ಪಾದನೆಯಿಂದ ಹಿಡಿದು ಖಾಲಿಡಬ್ಬಿಗಳ ವಿಲೆವಾರಿವರೆಗಿನ ಸುರಕ್ಷಾ ಮೇಲ್ವಿಚಾರಣೆ ಮಾತ್ರ ಎಲ್ಲ ಹಂತಗಳಲ್ಲೂ ದಿಕ್ಕೆಟ್ಟು ಕೂತಿವೆ. ವಿಷವನ್ನು ಮಾರುವ ಅಂಗಡಿಗಳ ಯಜಮಾನ ಅನೇಕ ಸಂದರ್ಭಗಳಲ್ಲಿ ಯಮರಾಜನೇ ಆಗಿರುತ್ತಾನೆ. ಅಂವ ಕೊಟ್ಟಿದ್ದೇ ವರದಾನ. ವಿಷ ಸೇಂಚನ ಮಾಡುವ ಮುನ್ನ ಕೈಗವಸು, ಮುಖವಾಡ, ಕನ್ನಡಕ, ಬೂಟು ಮತ್ತು ಮೈತುಂಬ ಬಟ್ಟೆ ಧರಿಸಬೇಕು ಎಂಬ ಸುರಕ್ಷಾ ವಿಧಿಯ ಅರಿವಿಲ್ಲದೆ, ಮೈತುಂಬ ಅರಿವೆಯೂ ಇಲ್ಲದೆ ವಿಷ ಎರಚಲು ಹೋಗಿ ರೈತ ಎಚ್ಚರದಪ್ಪಿ ಬೀಳುತ್ತಾನೆ.

ಆಸ್ಪತ್ರೆಗೆ ತಂದರೆ ಚಿಕಿತ್ಸೆಯೂ ಎರ್‍ರಾಬಿರ್‍ರಿ. ವಿಷ ಹೊಟ್ಟೆಗೋ ಶ್ವಾಸಕೋಶಕ್ಕೊ, ಕಣ್ಣಿಗೊ ಕಿವಿಗೊ ಎಲ್ಲಿಗೆ ಸೇರಿದೆ ಎಂಬುದೇ ಗೊತ್ತಿರುವುದಿಲ್ಲ. ತ್ವಚೆಯ ಮೂಲಕವೂ ಅದು ಕೊಬ್ಬಿನ ಪದರಕ್ಕೆ ಸೇರಿ ಅಲ್ಲಿಂದ ರಕ್ತನಾಳಕ್ಕೆ ಹೋಗಿದ್ದರೆ ವಾಂತಿ ಮಾಡಿಸಿಯೂ ಪ್ರಯೋಜನವಿಲ್ಲ.

ವಿಷ ಇಳಿಸಲೆಂದು ಅಟ್ರೊಪೈನ್ ಚುಚ್ಚುಮದ್ದನ್ನು ಕೊಡಬೇಕಾಗುತ್ತದೆ. ಅದರ ಅಡ್ಡ ಪರಿಣಾಮದಿಂದ ಅಂಗಾಂಗಗಳೆಲ್ಲ ಅದುರುತ್ತವೆ. ಕಣ್ಣುಗುಡ್ಡೆ ಹೊರಚಾಚುತ್ತವೆ. ನೀರಿಗಾಗಿ ಚಡಪಡಿಸುತ್ತಾನೆ. ಎದ್ದೆದ್ದು ಕುಣಿಯುತ್ತಾನೆ. ಬೆಳಕು ಕಂಡರೆ ಚೀರಾಡುತ್ತಾನೆ. ರೋಗಿಯನ್ನು ಮಂಚಕ್ಕೆ ಕಟ್ಟಿರಬೇಕಾಗುತ್ತದೆ. ಔಷಧ ಹೆಚ್ಚಾದರೆ ರೋಗಿ ಸಾವಪ್ಪುತ್ತಾನೆ. ಕಡಿಮೆಯಾದರೂ ಅಷ್ಟೆ.

ಕೃಷಿವಿಷಗಳು ರೈತರನ್ನಷ್ಟೇ ಅಲ್ಲ, ಆತನ ಬಟ್ಟೆಬರೆಯ ಮೂಲಕ ಕುಟುಂಬಕ್ಕೂ, ಆತ ಬೆಳೆದ ಆಹಾರದ ಮೂಲಕ ಎಲ್ಲರಿಗೂ ತಟ್ಟುತ್ತವೆ. ವೈದ್ಯವಿಜ್ಞಾನಿಗಳು ನಮ್ಮ ಅದೆಷ್ಟೊ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಕೃತಕ ಕೆಮಿಕಲ್‌ಗಳ ಅತಿಬಳಕೆಯನ್ನು ದೂಷಿಸುತ್ತಾರೆ. ಇಡೀ ರಾಷ್ಟ್ರದಲ್ಲೇ ಕೆಮಿಕಲ್ ರೈತಾಪಿಯನ್ನು ನಿಷೇಧಿಸಬೇಕೆಂದು ಮಹಾರಾಷ್ಟ್ರದ ಕೃಷಿ ಸ್ವಾವಲಂಬನ ಮಿಶನ್‌ನ ಕಿಶೋರ್ ತಿವಾರಿ ಹೇಳುತ್ತಾರೆ. ಮನುಷ್ಯರಿಗೆ ಹಾನಿ ಮಾಡದ ಜೈವಿಕ ವಿಷಗಳನ್ನು ವಿಜ್ಞಾನಿಗಳು ಶೋಧಿಸಿದ್ದಾರೆ.

ಕೀಟಗಳನ್ನು ಕೊಲ್ಲಬಲ್ಲ ಶಿಲೀಂಧ್ರಗಳನ್ನೇ ಅಸ್ತ್ರವನ್ನಾಗಿ ರೂಪಿಸಿದ್ದಾರೆ. ಆದರೆ ಮಾರುಕಟ್ಟೆಯಲ್ಲಿರುವ ವಿಷದೈತ್ಯರನ್ನು ಬದಿಗೊತ್ತಿ ಹೊಲಕ್ಕಿಳಿಯಲು ಅವಕ್ಕೆ ಸಾಧ್ಯವಾಗುತ್ತಿಲ್ಲ. ವಿಷಮುಕ್ತ ಕೃಷಿ ಸಮುದಾಯವನ್ನು ರೂಪಿಸಲೆಂದು ಅನೇಕ ಸಂಘಸಂಸ್ಥೆಗಳು ಅಲ್ಲಲ್ಲಿ ಕೆಲಸ ಮಾಡುತ್ತಿವೆ. ಮಲೇಶ್ಯದ ಸರೋಜೆನಿ ರೆಂಗಮ್ ಎಂಬಾಕೆ ಅಲ್ಲಿನ 710 ಚದರ ಕಿ.ಮೀ. ಕ್ಷೇತ್ರವನ್ನು ವಿಷಮುಕ್ತ ಮಾಡಿದ್ದು, ಈಚೆಗಷ್ಟೇ ಜಿನಿವಾದಲ್ಲಿ ಸನ್ಮಾನಿತರಾಗಿದ್ದಾರೆ. ನಮ್ಮಲ್ಲಿ ಅಂಥ ಕೆಲಸದಲ್ಲಿ ತೊಡಗಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವವರು ಬೇಕಾಗಿದ್ದಾರೆ.

ಪರಮಾಣು ತಂತ್ರಜ್ಞಾನದ ಹಾಗೆ ಕೆಮಿಕಲ್ ಕೃಷಿಯೂ ಭ್ರಷ್ಟರಹಿತ, ಸುಶಿಕ್ಷಿತ, ಸದಾಜಾಗೃತ ಸಮಾಜವನ್ನು ಬೇಡುತ್ತದೆ. ನಮ್ಮ ಕೃಷಿ ಆಡಳಿತ ಹೇಗಿದೆಯೆಂದರೆ ಅದು ರೈತರ ಸಮಸ್ಯೆಯನ್ನು ಕಡಿಮೆ ಮಾಡುವ ಬದಲು ರೈತರ ಸಂಖ್ಯೆಯನ್ನೇ ಕಡಿಮೆ ಮಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry