ಶನಿವಾರ, ಫೆಬ್ರವರಿ 27, 2021
26 °C

ಚಿನ್ನಕ್ಕೆ ಕೊರಳೊಡ್ಡಿದ ಶಾಜರ್‌, ಪೂಜಾ

ಪಿಟಿಐ Updated:

ಅಕ್ಷರ ಗಾತ್ರ : | |

ಚಿನ್ನಕ್ಕೆ ಕೊರಳೊಡ್ಡಿದ ಶಾಜರ್‌, ಪೂಜಾ

ಬ್ರಿಸ್ಬೇನ್‌: ಭಾರತ ತಂಡ ಬುಧವಾರ ಇಲ್ಲಿ ನಡೆದ ಕಾಮನ್‌ವೆಲ್ತ್ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಪಿಸ್ತೂಲು ವಿಭಾಗದಲ್ಲಿ ಮೂರೂ ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಕ್ಲೀನ್‌ಸ್ವೀಪ್ ಸಾಧಿಸಿದೆ.

10 ಮೀಟರ್ಸ್ ಏರ್‌ ಪಿಸ್ತೂಲು ವಿಭಾಗದಲ್ಲಿ ಭಾರತದ ಶಾಜರ್ ರಿಜ್ವಿ, ಓಂಕಾರ್ ಸಿಂಗ್ ಹಾಗೂ ಜಿತು ರಾಯ್‌ ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದರು.

16 ಸ್ಪರ್ಧಿಗಳ ಅರ್ಹತಾ ಸುತ್ತಿನಲ್ಲಿ ರಿಜ್ವಿ 581 ಪಾಯಿಂಟ್ಸ್‌ ಕಲೆಹಾಕುವ ಮೂಲಕ ಮೊದಲ ಸ್ಥಾನ ಪಡೆದಿದ್ದರು. ಓಂಕಾರ್ ಹಾಗೂ ಜಿತು ಕ್ರಮವಾಗಿ 576 ಮತ್ತು 571 ಪಾಯಿಂಟ್ಸ್‌ಗಳಿಂದ ನಂತರದ ಸ್ಥಾನ ಗಳಿಸಿದ್ದರು.

ಅಂತಿಮ ಸುತ್ತಿನ ಆರಂಭದಲ್ಲಿ ಜಿತು ಮುನ್ನಡೆ ಹೊಂದಿದ್ದರು. 18ನೇ ಶಾಟ್‌ ವೇಳೆ ಓಂಕಾರ್ ಮುನ್ನಡೆ ಸಾಧಿಸಿದರು. 20 ಶಾಟ್‌ಗಳ ಬಳಿಕ ಯುವ ಸ್ಪರ್ಧಿ ಶಾಜರ್ ತಮ್ಮ ಪ್ರಾಬಲ್ಯವನ್ನು ಬಿಟ್ಟುಕೊಡಲಿಲ್ಲ. 240.7 ಪಾಯಿಂಟ್ಸ್‌ಗಳಿಂದ ಅವರು ಅಗ್ರಸ್ಥಾನ ಕಾಯ್ದುಕೊಂಡರು. ಓಂಕಾರ್‌ 236 ಪಾಯಿಂಟ್ಸ್ ಪಡೆದರೆ, ಜಿತು 214.1 ಪಾಯಿಂಟ್ಸ್ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಪೂಜಾಗೆ ಚಿನ್ನ: ಮಹಿಳೆಯರ 10ಮೀ ರೈಫಲ್ ವಿಭಾಗದಲ್ಲಿ ಭಾರತದ ಪೂಜಾ ಘಾತ್ಕರ್ ಚಿನ್ನಕ್ಕೆ ಗುರಿನೆಟ್ಟಿದ್ದಾರೆ. ಬೆಳ್ಳಿ ಪದಕವನ್ನು ಭಾರತದವರೇ ಆದ ಅಂಜುಮ್ ಮೊದ್ಗಿಲ್ ಜಯಿಸಿದ್ದಾರೆ. ಸಿಂಗಪುರದ ಮಾರ್ಟಿನಾ ವೆಲೊಸೊ ಕಂಚಿಗೆ ಕೊರಳೊಡ್ಡಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಸಿಂಗಪುರದ ಅಗ್ರಗಣ್ಯ ಶೂಟರ್ ಜಾಸ್ಮಿನ್ ಕ್ಸೆರ್‌ ಮೊದಲ ಸ್ಥಾನ ಹೊಂದಿದ್ದರು. ಮಾರ್ಟಿನಾ ಎರಡನೇ ಸ್ಥಾನದಲ್ಲಿದ್ದರು. ಎಂಟು ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ ಅಂಜುಮ್ ಆರಂಭದಲ್ಲಿ ಮುಂದಿದ್ದರು. ಕೆಲವೇ ಶಾಟ್‌ಗಳಲ್ಲಿ ಪೂಜಾ ಅವರನ್ನು ಹಿಂದಿಕ್ಕಿದರು. 249.8 ಪಾಯಿಂಟ್ಸ್‌ಗಳಿಂದ ಪೂಜಾ ಅಧಿಪತ್ಯ ಸಾಧಿಸಿದರು. ಅಂಜುಮ್‌ 248.7 ಪಾಯಿಂಟ್ಸ್‌ ಗಳಿಸಿದರೆ, ವೆಲೊಸೊ 224.8 ಪಾಯಿಂಟ್ಸ್‌ಗಳಿಂದ ಕಂಚು ಗೆದ್ದರು. ಮೇಘನಾ 183.8 ಪಾಯಿಂಟ್ಸ್‌ಗಳಿಂದ ನಿರಾಸೆ ಅನುಭವಿಸಿದರು. ಪುರುಷರ ಸ್ಕೀಟ್ ವಿಭಾಗದಲ್ಲಿ ಮೈರಾಜ್ ಅಹಮ್ಮದ್‌ ಖಾನ್‌, ಅಂಗದ್‌ ವೀರ್ ಸಿಂಗ್‌ ಭಾಜ್ವ ಮತ್ತು ಶೀರಾಜ್ ಶೇಖ್‌ ಸ್ಪರ್ಧಿಸಿದ್ದರು. ಮೈರಾಜ್ ಹಾಗೂ ಅಂಗದ್ ಕ್ರಮವಾಗಿ 119 ಮತ್ತು 125 ಪಾಯಿಂಟ್ಸ್‌ಗಳಿಂದ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

ಎರಡನೇ ದಿನ ಭಾರತ ತಂಡ ಎರಡು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆದ್ದುಕೊಂಡಿದೆ. ಮೊದಲ ದಿನ ಭಾರತದ ಹೀನಾ ಸಿಧು 10ಮೀ ಏರ್‌ ಪಿಸ್ತೂಲ್ ವಿಭಾಗದಲ್ಲಿ ಚಿನ್ನ, 10ಮೀ ಏರ್‌ ರೈಫಲ್‌ನಲ್ಲಿ ದೀಪಕ್ ಕುಮಾರ್ ಬೆಳ್ಳಿ ಜಯಿಸುವ ಮೂಲಕ ಶುಭಾರಂಭ ಮಾಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.