ಸೋಮವಾರ, ಮಾರ್ಚ್ 1, 2021
29 °C

ಕನ್ನಡ ಕಲಿತ ಖುಷಿಯಲ್ಲಿ ಸ್ಯಾಂಡಲ್‌ವುಡ್‌ ನಟಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಕಲಿತ ಖುಷಿಯಲ್ಲಿ ಸ್ಯಾಂಡಲ್‌ವುಡ್‌ ನಟಿಯರು

ಇಷ್ಟಪಟ್ಟು ಕನ್ನಡ ಕಲಿಯುವೆ

ಮೊದಲ ಸಿನಿಮಾ ಮಾಡುವಾಗ ಕನ್ನಡದ ಬಗ್ಗೆ ಸ್ವಲ್ಪವೂ ಜ್ಞಾನವಿರಲಿಲ್ಲ. ಪ್ರಾರಂಭದಲ್ಲಿ ಕಷ್ಟವೆನ್ನಿಸುತ್ತಿತ್ತು. ನಿಧಾನವಾಗಿ ಕನ್ನಡ ಮಾತನಾಡಲು ಕಲಿತೆ. ಸ್ಪಷ್ಟವಾಗಿ ಅಲ್ಲದಿದ್ದರೂ, ಕನ್ನಡಿಗರ ಜೊತೆಗೆ ವ್ಯವಹರಿಸುವಷ್ಟು ಕಲಿತಿದ್ದೇನೆ. ಹಿಂದಿಯ ‘ಕ್ವೀನ್‌’ ಸಿನಿಮಾ ಕನ್ನಡಕ್ಕೆ ರಿಮೇಕ್‌  ಆಗುತ್ತಿದೆ. ರಮೇಶ್‌ ಅರವಿಂದ್‌ ಅವರು ಕನ್ನಡ ಕಲಿತು, ನೀವೇ ಡಬ್‌ ಮಾಡಬೇಕು ಎಂದು ತಿಳಿಸಿದ್ದರು. ಈ ಚಿತ್ರದಲ್ಲಿ ಗೋಕರ್ಣ ಪ್ರದೇಶದ ಕನ್ನಡ ಮಾತನಾಡಬೇಕು. ರಮೇಶ್‌ ಅವರು ಈಗಾಗಲೇ ಕಾರ್ಯಾಗಾರ ನಡೆಸಿದ್ದಾರೆ.

ಲತಾ ಎನ್ನುವ ಶಿಕ್ಷಕಿ ನನಗೆ ಪ್ರತಿದಿನ ಒಂದು ಗಂಟೆ ಕನ್ನಡ ಹೇಳಿಕೊಡುತ್ತಿದ್ದಾರೆ. ಭಾಷೆ ಕಲಿಯುವುದು ಒಂದೊಂದು ಸಲ ಕಷ್ಟ ಎನಿಸಿದ್ದು ಉಂಟು. ಆದರೆ, ಇಲ್ಲಿಯ ಜನರು ನನಗೆ ಇಷ್ಟೊಂದು ಪ್ರೀತಿ ತೋರಿಸುತ್ತಿದ್ದಾರೆ. ಅವರಿಗಾಗಿ ಇಷ್ಟನ್ನೂ ಮಾಡದಿದ್ದರೆ ಹೇಗೆ? ಕನ್ನಡವನ್ನು ಇಷ್ಟಪಟ್ಟು ಕಲಿಯುತ್ತಿದ್ದೇನೆ.

–ಪಾರೂಲ್‌ ಯಾದವ್‌, ನಟಿ

**

ಭಾಷೆ ಕಲಿಯುವುದು ಸುಲಭ

ನಾನು ಪಂಜಾಬ್‌ನಿಂದ ಇಲ್ಲಿಗೆ ಬಂದಾಗ ಕನ್ನಡ ಬರುತ್ತಿರಲಿಲ್ಲ. ಇಲ್ಲಿನವರ ಒಡನಾಟದಿಂದ ಕ್ರಮೇಣ ಕನ್ನಡ ಕಲಿತುಕೊಂಡೆ. ನಾನ್ಯಾವತ್ತೂ ಕನ್ನಡ ಕಲಿಯಲು ಕಷ್ಟಪಟ್ಟಿಲ್ಲ. ಭಾಷೆಯನ್ನು ಕೇಳುತ್ತಾ, ಮಾತನಾಡುತ್ತಾ, ಓದುತ್ತಾ ಅರಗಿಸಿಕೊಂಡೆ. ಕನ್ನಡದಲ್ಲಿಯೇ ಮಾತನಾಡುತ್ತಿದ್ದೆ. ಯಾರಾದರೂ ಕೇಳುವ ಪ್ರಶ್ನೆಗೆ ಕನ್ನಡದಲ್ಲಿಯೇ ಉತ್ತರಿಸುತ್ತಿದ್ದೆ. ಹೀಗೆ ಭಾಷೆಯ ತಿಳಿವಳಿಕೆ ಹೆಚ್ಚಿಸಿಕೊಂಡೆ.

ಪತಿ ಅನಂತ್‌ನಾಗ್‌ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಅದರ ಪ್ರಭಾವ ನನ್ನ ಮೇಲೂ ಇದೆ. ನಾನು ಯಾವುದೇ ಭಾಷೆಯನ್ನಾದರೂ ಬೇಗ ಕಲಿತುಕೊಳ್ಳುತ್ತೇನೆ. ಯಾರಾದರೂ ಗೇಲಿ ಮಾಡುತ್ತಾರೆ ಎಂದು ಮಾತನಾಡಲು ಹಿಂಜರಿಕೆ ಪಡುವುದಿಲ್ಲ. ನನಗೆ ಹನ್ನೆರಡು ಭಾಷೆಗಳು ಗೊತ್ತು. ನಾವು ಭಾರತೀಯರು ಇಲ್ಲಿ ಭಾಷೆ, ಸಂಸ್ಕೃತಿಯ ವೈವಿಧ್ಯವಿದೆ. ಅದನ್ನು ಒಪ್ಪಿಕೊಳ್ಳಲೇಬೇಕು. ಕನ್ನಡ ಕಲಿಯುವ ಪ್ರಯತ್ನಪಟ್ಟಿದ್ದಕ್ಕಿಂತ, ಅದು ತಾನಾಗಿಯೇ ನನಗೆ ಒಲಿಯಿತು.

–ಗಾಯತ್ರಿ ಅನಂತ್‌ನಾಗ್, ನಟಿ

**

ನಿಧಾನವಾಗಿ ಕಲಿತೆ

ಕನ್ನಡಕ್ಕೂ ಬಂಗಾಳಿಗೂ ತುಂಬಾ ವ್ಯತ್ಯಾಸವಿದೆ. ಕನ್ನಡವನ್ನು ನಿಧಾನವಾಗಿ ಕಲಿತೆ. ಉಪೇಂದ್ರ ಅವರ ಜೊತೆ ಮೊದಲು ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಿದ್ದೆ. ಜನರ ಮಾತು ಕೇಳಿ, ಮಾತನಾಡಲು ಪ್ರಯತ್ನಿಸಿ ಕಲಿಯುವ ಹೊತ್ತಿಗೆ ಹಲವು ವರ್ಷಗಳೇ ಆಯಿತು. ಟಿವಿ ಕಾರ್ಯಕ್ರಮ ಮಾಡುವಾಗ ಕನ್ನಡವನ್ನೇ ಹೆಚ್ಚು ಬಳಸಬೇಕಾಗಿತ್ತು. ಹೀಗಾಗಿ ಭಾಷೆಯನ್ನು ಇನ್ನಷ್ಟು ಚೆನ್ನಾಗಿ ಕಲಿತೆ. ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಆದರೆ ಸುಲಲಿತವಾಗಿ ಮಾತನಾಡಲು ಪ್ರಯತ್ನ ಮಾಡುತ್ತಲೇ ಇದ್ದೇನೆ.–ಪ್ರಿಯಾಂಕ ಉಪೇಂದ್ರ, ನಟಿ

**

ಮಾತನಾಡುತ್ತಲೇ ಕಲಿತೆ

ಭಾಷೆಯ ಬಗ್ಗೆ ಪ್ರೀತಿ, ಅಭಿಮಾನವಿದ್ದರೆ ಕಲಿಯುವುದು ಸುಲಭ. ಕಲಾವಿದರಿಗೆ ಜನಪ್ರಿಯತೆ ಕೊಡುವ ಪ್ರದೇಶ ಅವರಿಗೆ ಆಪ್ತವಾಗಿಬಿಡುತ್ತದೆ. ನಾನು ಯಾವಾಗಲೂ ಕರ್ನಾಟಕವೇ ನನ್ನ ಕರ್ಮಭೂಮಿ ಎನ್ನುತ್ತಿರುತ್ತೇನೆ. ಇಲ್ಲಿಯ ಜನರು ನನಗೆ ಅಷ್ಟೊಂದು ಪ್ರೀತಿ ತೋರಿಸಿದ್ದಾರೆ. ನನಗೆ ಜನಪ್ರಿಯತೆ ಕೊಟ್ಟ ಪ್ರದೇಶವಿದು. ಹಾಗಾಗಿ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡೆ. ಕನ್ನಡವನ್ನು ಕಲಿಯಲೇಬೇಕೆಂಬ ಹಟ ಇತ್ತು. ನನ್ನ ಸಹಾಯಕರ ಜೊತೆಗೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದೆ. ಹೀಗೆ ಮಾತನಾಡುತ್ತಲೇ ಸುಲಭದಲ್ಲಿ ಕನ್ನಡವನ್ನು ಕಲಿತೆ.

–ಪೂಜಾ ಗಾಂಧಿ, ನಟಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.