3
ಅತಿವೃಷ್ಟಿ, ತೇವಾಂಶ ಹೆಚ್ಚಳ; ರೈತರಿಗೆ ತೀವ್ರ ಆರ್ಥಿಕ ಹಾನಿ

ಹೊಲದಲ್ಲೇ ಕೊಳೆಯುತ್ತಿರುವ ಈರುಳ್ಳಿ

Published:
Updated:

ಲಕ್ಷ್ಮೇಶ್ವರ: ತಾಲ್ಲೂಕಿನ ಹಲವೆಡೆ ಬೆಳೆದಿದ್ದ ಈರುಳ್ಳಿ ತೇವಾಂಶ ಹೆಚ್ಚಳದಿಂದ ಹೊಲದಲ್ಲಿಯೇ ಕೊಳೆತು ನಾರುತ್ತಿದೆ.

‘ನೀರಾವರಿ ಸೌಲಭ್ಯ ಇದ್ದ ಕಡೆ ಬೆಳೆಯಲಾಗಿದ್ದ ಈರುಳ್ಳಿ ಇನ್ನೇನು ಕಟಾವಿಗೆ ಬಂತು ಎನ್ನುವಷ್ಟರಲ್ಲಿ ಮಳೆ ಪ್ರಾರಂಭವಾಗಿತ್ತು. ಎರಡು ವಾರಗಳ ಕಾಲ ಸತತವಾಗಿ ಸುರಿದ ಧಾರಾಕಾರ ಮಳೆ ಬೆಳೆ ನಾಶಮಾಡಿತು. ಸಾಕಷ್ಟು ಕಡೆ ಈರುಳ್ಳಿ ಜಲಾವೃತಗೊಂಡಿತ್ತು. ಮಳೆ ಪೂರ್ವದಲ್ಲಿ ಈರುಳ್ಳಿ ಕೀಳದೆ ಬಿಟ್ಟವರು ಈಗ ನಷ್ಟ ಅನುಭವಿಸಿದ್ದಾರೆ. ನೂರಾರು ಎಕರೆ ಪ್ರದೇಶದಲ್ಲಿನ ಈರುಳ್ಳಿ ತೇವಾಂಶ ಹೆಚ್ಚಳದಿಂದ ಜಮೀನಿನಲ್ಲೇ ಕೊಳೆಯತೊಡಗಿದೆ.

‘ಮಳೆಗೂ ಮುನ್ನ ಈರುಳ್ಳಿ ಕೀಳಲು ಸಾಧ್ಯವಾಗಿರಲಿಲ್ಲ. ಈಗ 4 ಎಕರೆ ಹೊಲದಲ್ಲಿ ಬೆಳೆದಿದ್ದ ಈರುಳ್ಳಿ ಫಸಲು ಕೊಳೆತು ಹೋಗಿದೆ. ಬೆಳೆ ಕೈಗೆ ಬಂದಿದ್ದರೆ ₹ 4 ಲಕ್ಷ ಆದಾಯ ಬರುತ್ತಿತ್ತು. ರೈತನಿಗೆ ಒಂದಿಲ್ಲೊಂದು ಕಷ್ಟಗಳು ಕಾಡುತ್ತಲೇ ಇರುತ್ತವೆ’ ಎಂದು ಲಕ್ಷ್ಮೇಶ್ವರದ ರೈತ ಖಾನ್‌ಸಾಬ್‌ ಸೂರಣಗಿ ಅಳಲು ತೋಡಿಕೊಂಡರು.

‘ಈ ಸಲಾ ಚಲೋ ಪೀಕು ಬಂದಿತ್ರಿ. ಆದರ ಉಳ್ಳಾಗಡ್ಡಿ ಕೀಳ ಹೊತ್ತಿಗೆ ಮಳಿ ಶುರುವಾತು. ಹಿಂಗಾಗಿ, ಉಳ್ಳಾಗಡ್ಡಿ ಹೊಲದಾಗ ಕೊಳತಾವ್ರೀ’ ಎಂದು ಅವರು ನೋವು ತೋಡಿಕೊಂಡರು.

‘ಮೊದಲು ಗ್ರಾಮ ಸೇವಕರು ರೈತರ ಜಮೀನಿಗೆ ಭೇಟಿ ನೀಡಿ, ತೇವಾಂಶ ಹೆಚ್ಚಿದ್ದರೆ, ಅಥವಾ ಕಡಿಮೆ ಆದರೆ, ಏನು ಕ್ರಮ ತೆಗೆದುಕೊಳ್ಳಬೇಕು ಅನ್ನೂದನ್ನ ಹೇಳುತ್ತಿದ್ದರು. ಆದರ ಈಗ ಯಾವ ಗ್ರಾಮ ಸೇವಕರೂ ಹೊಲಕ್ಕೆ ಭೇಟಿ ನೀಡಂಗಿಲ್ಲ’ ಎಂದು ಒಡೆಯರ ಮಲ್ಲಾಪುರದ ರೈತ ಪದ್ಮರಾಜ ಪಾಟೀಲ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry