ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ, ಶಾಸಕರ ನಡುವೆ ಆರೋಪ, ಪ್ರತ್ಯಾರೋಪ‍

ಹುಬ್ಬಳ್ಳಿ–ಕುಂದಗೋಳ ರಸ್ತೆ ಸುಧಾರಣೆ ಕಾಮಗಾರಿ ಭೂಮಿಪೂಜೆ
Last Updated 2 ನವೆಂಬರ್ 2017, 9:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಬಿಡ್ನಾಳ–ಕುಂದಗೋಳವರೆಗಿನ ರಸ್ತೆ ಸುಧಾರಣಾ ಕಾಮಗಾರಿಗೆ ಸಂಸದ ಪ್ರಹ್ಲಾದ ಜೋಶಿ ಭೂಮಿ ಪೂಜೆ ನೆರವೇರಿಸಿದರು. ಅದಾದ ಅರ್ಧ ಗಂಟೆಗೆ ಶಾಸಕ ಪ್ರಸಾದ ಅಬ್ಬಯ್ಯ ಮತ್ತೊಮ್ಮೆ ಭೂಮಿ ಪೂಜೆ ನೆರವೇರಿಸಿದರು.

ಶಾಸಕರು ಬರದಿದ್ದರೂ ಭೂಮಿ ಪೂಜೆ ಮಾಡಿರುವುದನ್ನು ಖಂಡಿಸಿ ಬಿಡ್ನಾಳ ಗ್ರಾಮಸ್ಥರು ಹಾಗೂ ಕಾಂಗ್ರೆಸ್‌ ಮುಖಂಡರು ಕೆಲಕಾಲ ಪ್ರತಿಭಟನೆ ನಡೆಸಿದರು. ಇದು ಇಬ್ಬರೂ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಆರೋಪ: ‘ಕೇಂದ್ರ ಸರ್ಕಾರದ ಅನುದಾನದಡಿ ₹5 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿ ಕೈಗೊಳ್ಳಲಾಗಿದೆ. ದೂರವಾಣಿ ಮೂಲಕ ಶಾಸಕ ಅಬ್ಬಯ್ಯ ಅವರೊಂದಿಗೆ ಮಾತನಾಡಿ ಭೂಮಿ ಪೂಜೆ ಮಾಡಲಾಗುತ್ತಿದೆ. ಬರಬೇಕು ಎಂದು ಆಹ್ವಾನಿಸಿದ್ದೆ. ಮಧ್ಯಾಹ್ನ 3 ಗಂಟೆಗೆ ಸಮಯ ನಿಗದಿ ಮಾಡಲಾಗಿತ್ತು. ಬೆಂಗಳೂರಿಗೆ ಹೊರಡಬೇಕಾಗಿದ್ದರಿಂದ ಶಾಸಕರು ಬರದಿದ್ದರೂ ಅನಿವಾರ್ಯವಾಗಿ ಭೂಮಿ ಪೂಜೆ ನೆರವೇರಿಸಬೇಕಾಯಿತು’ ಎಂದು ಸಂಸದ ಪ್ರಹ್ಲಾದ ಜೋಶಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದೊಮ್ಮೆ ಭೂಮಿ ಪೂಜೆ ಸಂದರ್ಭದಲ್ಲಿಯೂ ಹೀಗೆಯೇ ಆಗಿತ್ತು. ಆಹ್ವಾನ ನೀಡಿದರೂ ಬಾರದೇ ರಾಜಕೀಯ ಮಾಡಲಾಗುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದು ನಿಲ್ಲಿಸಬೇಕು’ ಎಂದು ಹೇಳಿದರು.

‘ಈ ಹಿಂದೆ ಕೇಂದ್ರ ಪುರಸ್ಕೃತ ‘ಅಮೃತ’ ಯೋಜನೆಯ ಹಲವಾರು ಕಾಮಗಾರಿಗಳಿಗೆ ಸಂಸದರನ್ನು ಕರೆಯುವ ಸೌಜನ್ಯ ತೋರದೆ ಭೂಮಿಪೂಜೆ ನೆರವೇರಿಸಿದಾಗಲೂ ಜೋಶಿ ಅವರು ಒಂದು ಮಾತನ್ನೂ ಆಡಿಲ್ಲ. ಈಗ ಸಂಸದರೇ ಆಹ್ವಾನಿಸಿದರೂ ಬರದೆ ಉಡಾಫೆಯ ಉತ್ತರ ನೀಡಿದ್ದಾರೆ. ಇದು ಖಂಡನೀಯ ಎಂದು ಬಿಜೆಪಿ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯಾರೋಪ: ‘ಬಿಡ್ನಾಳ ಕ್ರಾಸ್‌ ರಸ್ತೆ ಸುಧಾರಣೆ ಕಾಮಗಾರಿ ರಾಜ್ಯ ಸರ್ಕಾರದ ಹಣದಿಂದ ನಡೆಯುತ್ತಿದೆ. ಸಂಸದ ಪ್ರಹ್ಲಾದ ಪ್ರಹ್ಲಾದ ಜೋಶಿ ಅವರು ಭಾಗವಹಿಸಬಹುದೇ ಹೊರತು ಭೂಮಿ ಪೂಜೆ ಮಾಡುವ ಅಧಿಕಾರ ಅವರಿಗೆ ಇಲ್ಲ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ (ಸಿಆರ್‌ಎಫ್) ಅನುದಾನದಲ್ಲಿ ಶೇ 39ರಷ್ಟನ್ನು ರಾಜ್ಯ ಸರ್ಕಾರಕ್ಕೆ ನೀಡಬೇಕು. ಬಿಡ್ನಾಳ ಕ್ರಾಸ್‌ ಮತ್ತು ನೇಕಾರನಗರದ ರಸ್ತೆ ಕಾಮಗಾರಿಗಳು ನನ್ನ ವ್ಯಾಪ್ತಿಗೆ ಬಂದಿವೆ. ಹೀಗಾಗಿ, ಭೂಮಿ ಪೂಜೆ ಮಾಡುವ ಅಧಿಕಾರ ಇರುವುದು ಆ ಕ್ಷೇತ್ರ ವ್ಯಾಪ್ತಿಯ ಶಾಸಕರಿಗೆ ಮಾತ್ರ’ ಎಂದು ತಿಳಿಸಿದರು.

‘ಪುಕ್ಕಟೆ ಪ್ರಚಾರ ಪಡೆಯುವ ಸಲುವಾಗಿ ಸಂಸದರು ತರಾತುರಿಯಲ್ಲಿ ಭೂಮಿ ಪೂಜೆ ನೆರವೇರಿಸಿ ತೆರಳಿದ್ದಾರೆ. 4 ಗಂಟೆಗೆ ನಿಗದಿಯಾಗಿದ್ದ ಭೂಮಿ ಪೂಜೆಯನ್ನು 3.30ಕ್ಕೆ ನೆರವೇರಿಸುವುದಾಗಿ ತಿಳಿಸಿದರು. ರೈತರು, ಅಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಮೊದಲೇ 4 ಗಂಟೆ ಎಂದು ತಿಳಿಸಿದ್ದರಿಂದ ಹೋಗಲು ಆಗಲಿಲ್ಲ. ನಂತರ ಭೂಮಿ ಪೂಜೆ ನಡೆಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT