ರಾಜ್ಯದ ಪರಿಸ್ಥಿತಿಯನ್ನು ಬದಲಿಸಲು ಪರಿವರ್ತನಾ ಯಾತ್ರೆ: ಅಮಿತ್ ಷಾ

ಬೆಂಗಳೂರು: ‘ಬಿಜೆಪಿ ಆರಂಭಿಸಿರುವ ಈ ಪರಿವರ್ತನಾ ಯಾತ್ರೆ ಕರ್ನಾಟಕದ ಮುಖ್ಯಮಂತ್ರಿಯನ್ನು ಬದಲಿಸಲು ಮಾತ್ರ ಅಲ್ಲ. ಇದು ಕರ್ನಾಟಕದ ಸ್ಥಿತಿಯನ್ನು ಬದಲಿಸಲು, ಇಲ್ಲಿನ ಕೃಷಿ, ಯುವಕರ ಸ್ಥಿತಿ, ಕಾನೂನು ಸುವ್ಯವಸ್ಥೆ ಬದಲಿಸಲು ಆರಂಭವಾಗಿರುವ ಪರಿವರ್ತನಾ ಯಾತ್ರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದರು.
ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನದಲ್ಲಿ ಗುರುವಾರ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಯಾವ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೋ ಅಲ್ಲೆಲ್ಲಾ ಉತ್ತಮ ಆಡಳಿತ ನೀಡಿದ್ದೇವೆ. ಆದರೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ ಅವರು ಭ್ರಷ್ಟರನ್ನು ರಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಕೇಂದ್ರ ಸರ್ಕಾರ ಅನುದಾನ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ₹ 2 ಲಕ್ಷ ಕೋಟಿಗೂ ಹೆಚ್ಚು ಅನುದಾನ ನೀಡಿದೆ. ಸಿದ್ದರಾಮಯ್ಯ ₹ 1 ಲಕ್ಷ ಕೋಟಿಯ ಲೆಕ್ಕ ಮಾತ್ರ ಹೇಳುತ್ತಾರೆ. ಹಾಗಾದರೆ ಉಳಿದ ₹ 1 ಲಕ್ಷ ಕೋಟಿಯಷ್ಟು ಹಣ ಎಲ್ಲಿ ಹೋಯಿತು. ಇದು ರಾಜ್ಯದ ಕಾಂಗ್ರೆಸ್‌ನ ಭ್ರಷ್ಟರ ಪಾಲಾಗಿದೆ’ ಎಂದರು.
ಟಿಪ್ಪು ಜಯಂತಿಗೆ ಮಾತ್ರ ಉತ್ಸಾಹ
‘ನವೆಂಬರ್ 1ರ ರಾಜ್ಯೋತ್ಸವವನ್ನು ರಾಜ್ಯ ಸರ್ಕಾರ ಅದ್ಧೂರಿಯಿಂದ ಆಚರಿಸಬೇಕಿತ್ತು. ಆದರೆ, ನಾಡಿನ ಉತ್ಸವ ಆಚರಿಸಲು ಸಿದ್ದರಾಮಯ್ಯ ಅವರಿಗೆ ಉತ್ಸಾಹವಿಲ್ಲ. ಅವರಿಗೆ ನವೆಂಬರ್ 10ರ ಟಿಪ್ಪು ಜಯಂತಿ ಆಚರಣೆಗೆ ಹೆಚ್ಚು ಉತ್ಸಾಹ. ಮತಬ್ಯಾಂಕ್ ರಾಜಕಾರಣಕ್ಕಾಗಿ ಸಿದ್ದರಾಮಯ್ಯ ಟಿಪ್ಪು ಜಯಂತಿಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಹೆಚ್ಚು ಆರ್‌ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆಗಳು ನಡೆದಿವೆ’ ಎಂದು ಷಾ ದೂರಿದರು.
‘ಸಿದ್ದರಾಮಯ್ಯ ತಮ್ಮನ್ನು ಹಿಂದುಳಿದ ವರ್ಗದವರ ನಾಯಕ ಎಂದು ಕರೆದುಕೊಳ್ಳುತ್ತಾರೆ. ಆದರೆ, ಕೇಂದ್ರ ಸರ್ಕಾರ ಒಬಿಸಿ ಮಸೂದೆ ತರಲು ಮುಂದಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಈ ಮಸೂದೆಯನ್ನು ವಿರೋಧಿಸಿದ್ದು ಏಕೆ’ ಎಂದು ಷಾ ಪ್ರಶ್ನಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.