ಸೋಮವಾರ, ಮಾರ್ಚ್ 8, 2021
22 °C
ಮೂರು ಗೋಲು ಗಳಿಸಿದ ಗುರ್ಜಿತ್ ಕೌರ್‌; ಕಜಕಸ್ತಾನಕ್ಕೆ 1–7ರಿಂದ ಸೋಲು

ಹಾಕಿ: ಸೆಮಿಗೆ ಭಾರತ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

ಹಾಕಿ: ಸೆಮಿಗೆ ಭಾರತ ತಂಡ

ಕಕಮಿಗಹರ, ಜಪಾನ್‌: ಮಿಂಚಿನ ಆಟ ಆಡಿದ ಡ್ರ್ಯಾಗ್ ಫ್ಲಿಕ್ಕರ್‌ ಗುರ್ಜಿತ್ ಕೌರ್‌ ಮೂರು ಗೋಲು ಗಳಿಸಿದರು. ಅವರಿಗೆ ಸಮರ್ಥ ಬೆಂಬಲ ನೀಡಿದ ನವನೀತ್ ಕೌರ್‌ ಎರಡು ಗೋಲು ಗಳಿಸಿ ಮಿಂಚಿದರು. ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ದೀಪ್ ಗ್ರೇಸ್‌ ಗೋಲಾಗಿ ಪರಿವರ್ತಿಸಿದರು. ಇದರ ಪರಿಣಾಮ ಭಾರತ ತಂಡ ಮಹಿಳೆಯರ ಏಷ್ಯಾ ಕಪ್‌ ಹಾಕಿ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿತು.

ಗುರುವಾರ ಇಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಮಹಿಳೆಯರು ಕಜಕಸ್ತಾನವನ್ನು 7–1 ಗೋಲುಗಳ ಅಂತರದಿಂದ ಮಣಿಸಿದರು. ಈ ಮೂಲಕ ಚಾಂಪಿಯನ್‌ಷಿಪ್‌ನಲ್ಲಿ ಅಜೇಯ ಓಟ ಮುಂದುವರಿಸಿದರು.

ಎರಡನೇ ನಿಮಿಷದಲ್ಲೇ ಗೋಲು ಗಳಿಸಿ ಭಾರತ ಪಾಳಯದಲ್ಲಿ ಆತಂಕ ಸೃಷ್ಟಿಸಿದ ಕಜಕಸ್ತಾನ ನಂತರ ರಾಣಿ ರಾಂಪಾಲ್‌ ಬಳಗದ ದಾಳಿಗೆ ಕಂಗೆಟ್ಟಿತು. ಭಾರತದ ಫಾರ್ವರ್ಡ್ ಆಟಗಾರ್ತಿಯರು ನಿರಂತರ ಆಕ್ರಮಣ ನಡೆಸಿ ಎದುರಾಳಿ ಪಾಳಯದಲ್ಲಿ ಆತಂಕ ಸೃಷ್ಟಿಸಿದರು.

ಮೊದಲ ಗೋಲು ಗಳಿಸಿಕೊಟ್ಟ ಡೊಮಶ್ನೇವಾ ಕಜಕಸ್ತಾನ ತಂಡದಲ್ಲಿ ಸಂಭ್ರಮ ಉಕ್ಕಿಸಿದ್ದರು. ಆದರೆ ಗುರ್ಜೀತ್ ಕೌರ್‌ ನಾಲ್ಕನೇ ನಿಮಿಷದಲ್ಲಿ ತಿರುಗೇಟು ನೀಡಿದರು. ನಂತರ 16ನೇ ನಿಮಿಷಗಳವರೆಗೆ ಉಭಯ ತಂಡದವರು ಸಮಬಲದ ಹೋರಾಟ ನಡೆಸಿದರು. ಇದಾದ ಮೇಲೆ ಭಾರತ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.

ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿದ ದೀಪ್‌ ಗ್ರೇಸ್‌ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 22ನೇ ನಿಮಿಷದಲ್ಲಿ ಲಭಿಸಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ನವನೀತ್ ಕೌರ್‌ ಗೋಲು ಗಳಿಸಿ ಭಾರತದ ಮುನ್ನಡೆ ಹೆಚ್ಚಿಸಿದರು.

27ನೇ ನಿಮಿಷದಲ್ಲಿ ಅವರು ಮತ್ತೊಂದು ಗೋಲು ಗಳಿಸಿದರು. ನಂತರ ಕಜಕಸ್ತಾನ ಪ್ರತಿರೋಧ ಒಡ್ಡಿ ಭಾರತದ ಫಾರ್ವರ್ಡ್ ಪಡೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆದರೆ ಆ ತಂಡದವರಿಗೆ ಗೋಲು ಗಳಿಸಲು ಭಾರತದ ರಕ್ಷಣಾ ವಿಭಾಗದವರು ಅವಕಾಶ ನೀಡಲಿಲ್ಲ.

41ನೇ ನಿಮಿಷದಿಂದ ಪಂದ್ಯದ ಚಿತ್ರಣವೇ ಬದಲಾಯಿತು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ದೀಪ್ ಗ್ರೇಸ್‌ ಗೋಲು ಗಳಿಸಿದ ಬೆನ್ನಲ್ಲೇ ಗುರ್ಜಿತ್ ಎರಡು ಗೋಲು ಗಳಿಸಿದರು. 42ನೇ ನಿಮಿಷದಲ್ಲಿ ಗೋಲು ಗಳಿಸಿದ ಅವರು 56ನೇ ನಿಮಿಷದಲ್ಲಿ ಮತ್ತೊಂದು ಬಾರಿ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.