ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಂಕ್ ದ್ವಿಶತಕ; ಸಮರ್ಥ್‌ ಶತಕ

ಆರಂಭಿಕ ಬ್ಯಾಟ್ಸ್‌ಮನ್‌ಗಳ ದಾಖಲೆಯ 259 ರನ್‌ ಜೊತೆಯಾಟ, ಕರ್ನಾಟಕಕ್ಕೆ 216 ರನ್‌ ಮುನ್ನಡೆ
Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪುಣೆ: ಬೆಟ್ಟದ ಅಂಚಿಗಿರುವ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಸುಂದರ ಕ್ರೀಡಾಂಗಣದಲ್ಲಿ ಆರ್‌. ಸಮರ್ಥ್‌ ಮತ್ತು ಮಯಂಕ್ ಅಗರವಾಲ್‌ ಅವರ ಆಮೋಘ ಜುಗಲ್‌ಬಂದಿ ಕರ್ನಾಟಕ ತಂಡದ ಗೆಲುವಿನ ಆಸೆಗೆ ಬಲ ತುಂಬಿದೆ.

ಇದರಿಂದ ರಾಜ್ಯ ತಂಡ ರಣಜಿ ಟೂರ್ನಿಯ ‘ಎ’ ಗುಂಪಿನ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ. ಮಹಾರಾಷ್ಟ್ರ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 245 ರನ್‌ಗೆ ಕಟ್ಟಿಹಾಕಿ ಮೊದಲ ದಿನ ರಾಜ್ಯದ ಬೌಲರ್‌ಗಳು ಪ್ರಾಬಲ್ಯ ಮೆರೆದಿದ್ದರು. ಗುರುವಾರ ಆರಂಭಿಕ ಬ್ಯಾಟ್ಸ್‌ಮನ್‌ಗಳ ಸೊಗಸಾದ ಆಟ ಮನಸೂರೆಗೊಂಡಿತು.

ಬುಧವಾರದ ಅಂತ್ಯಕ್ಕೆ ರಾಜ್ಯ ತಂಡ 31 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 117 ರನ್ ಗಳಿಸಿತ್ತು. ಉತ್ತಮ ಆರಂಭದ ಲಾಭ ಪಡೆದ ಸಮರ್ಥ್ ಹಾಗೂ ಮಯಂಕ ಮೊದಲ ವಿಕೆಟ್‌ಗೆ 259 ರನ್‌ಗಳ ದಾಖಲೆಯ ಜೊತೆಯಾಟವಾಡಿದರು. ಮಹಾರಾಷ್ಟ್ರ ಎದುರು ಮೊದಲ ವಿಕೆಟ್‌ಗೆ ಮೂಡಿಬಂದ ರಾಜ್ಯದ ಹೆಚ್ಚು ರನ್‌ ಜೊತೆಯಾಟ ಇದಾಯಿತು. 2013–14ರ ರಣಜಿ ಫೈನಲ್‌ನಲ್ಲಿ ಕೆ.ಎಲ್‌. ರಾಹುಲ್‌ ಮತ್ತು ಗಣೇಶ ಸತೀಶ್‌ ಮೊದಲ ವಿಕೆಟ್‌ಗೆ 216 ರನ್‌ ಕಲೆ ಹಾಕಿದ್ದು ಹಿಂದಿನ ಉತ್ತಮ ಸಾಧನೆಯಾಗಿತ್ತು.

ಇದರಿಂದ ತಂಡ ಎರಡನೇ ದಿನ ದಾಟದ ಅಂತ್ಯಕ್ಕೆ 125 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 461ರನ್‌ ಗಳಿಸಿ, ಒಟ್ಟು 216 ರನ್‌ ಮುನ್ನಡೆ ಹೊಂದಿದೆ.

ವೇಗ ಹೆಚ್ಚಿಸಿಕೊಂಡ ಸಮರ್ಥ್‌: ಬುಧವಾರದ ಆಟದಲ್ಲಿ 93 ಎಸೆತಗಳನ್ನು ಎದುರಿಸಿ 48 ರನ್‌ ಗಳಿಸಿದ್ದ ಸಮರ್ಥ್‌ (ಒಟ್ಟು 129, 298 ನಿಮಿಷ, 219 ಎಸೆತ, 17 ಬೌಂ.) ಎರಡನೇ ದಿನ ವೇಗವಾಗಿ ರನ್‌ ಗಳಿಸಿದರು. ದಿನದ ಮೊದಲ ಎಸೆತವನ್ನು ಬೌಂಡರಿ ಬಾರಿಸಿದರು.
ಭೋಜನ ವಿರಾಮಕ್ಕೂ ಮೊದಲೇ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಏಳನೇ ಶತಕ ದಾಖಲಿಸಿದ್ದರು.

49ನೇ ಓವರ್‌ನಲ್ಲಿ ರಾಹುಲ್‌ ತ್ರಿಪಾಠಿ ಬೌಲಿಂಗ್‌ನಲ್ಲಿ  ಸ್ಕ್ವೇರ್ ಲೆಗ್‌ನಲ್ಲಿ ಎರಡು ರನ್‌ ಗಳಿಸಿ ಮೂರಂಕಿ ಮುಟ್ಟಿದರು. ಶತಕ ಗಳಿಸಲು 163 ಎಸೆತಗಳನ್ನು ತೆಗೆದುಕೊಂಡರು. ಭೋಜನ ವಿರಾಮದ ವೇಳೆಗೆ ಉಭಯ ತಂಡಗಳ ರನ್ ಸಮವಾಗಿದ್ದವು. ಬಳಿಕ 65ನೇ ಓವರ್‌ನಲ್ಲಿ ಪ್ರದೀಪ್‌ ಧಾಡೆ ಬೌಲಿಂಗ್‌ನಲ್ಲಿ ಎರಡು ರನ್‌ ಗಳಿಸಿ ಮಯಂಕ್ ಇನಿಂಗ್ಸ್‌ ಮುನ್ನಡೆ ತಂದುಕೊಟ್ಟರು.

ಚೊಚ್ಚಲ ದ್ವಿಶತಕ: ಒಂದೆಡೆ ಸಮರ್ಥ್‌ ವೇಗವಾಗಿ ರನ್ ಗಳಿಸುತ್ತಿದ್ದರೆ, ಮಯಂಕ್ (ಬ್ಯಾಟಿಂಗ್‌ 219) ಆರಂಭದಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋದರು. ಮೊದಲ ದಿನ 94 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಇದನ್ನು ಶತಕವಾಗಿ ಪರಿವರ್ತಿಸಲು 111 ಎಸೆತ ತೆಗೆದುಕೊಂಡರು. ವೈಯಕ್ತಿಕ ರನ್‌ ಹೆಚ್ಚಿದಷ್ಟು ಅವರ ಬ್ಯಾಟಿಂಗ್‌ ವೇಗ ಕೂಡ ಇಮ್ಮಡಿಗೊಂಡಿತು. 331 ಎಸೆತಗಳಲ್ಲಿ ದ್ವಿಶತಕ ಗಳಿಸಿದರು.

ಲಾಂಗ್‌ ಆನ್‌ ಮತ್ತು ಲಾಂಗ್ ಆಫ್‌ ಬಳಿ ಬಾರಿಸಿದ ಸಿಕ್ಸರ್‌ಗಳು ಮಯಂಕ ನೈಜ ಬ್ಯಾಟಿಂಗ್‌ಗೆ ಸಾಕ್ಷಿಯಂತಿದ್ದವು. ಅವರು 84ನೇ ಓವರ್‌ನಲ್ಲಿ ಮೊದಲ ಸಿಕ್ಸರ್‌ ಸಿಡಿಸಿದರು. ಬೌಂಡರಿಗಳು (25) ಮೂಲಕವೇ ನೂರು ರನ್‌ ಗಳಿಸಿದರು.

ಮಹಾರಾಷ್ಟ್ರ ತಿಣುಕಾಟ: ಆರಂಭಿಕ ಜೋಡಿಯನ್ನು ಕಟ್ಟಿಹಾಕಲು ಮಹಾರಾಷ್ಟ್ರ ತಂಡದ ನಾಯಕ ಅಂಕಿತ್‌ ಭಾವ್ನೆ ಪ್ರಯತ್ನಿಸಿದರೂ ಬೇಗನೆ ಫಲ ಲಭಿಸಲಿಲ್ಲ. ಅವರು ಪದೇ ಪದೇ ಬೌಲರ್‌ಗಳನ್ನು ಬದಲಿಸಿದರು. ಬೌಲಿಂಗ್‌ ‘ಎಂಡ್‌’ ಕೂಡ ಬದಲಿಸಿದರೂ ಫಲ ಲಭಿಸಲಿಲ್ಲ.

ಅಂತಿಮವಾಗಿ 68ನೇ ಓವರ್‌ನಲ್ಲಿ ಸ್ವಪ್ನಿಲ್‌ ಗುಗಲೆ ಬೌಲಿಂಗ್‌ನಲ್ಲಿ ಸಮರ್ಥ್ ಅವರು ರೋಹಿತ್‌ ಮೋಟ್ವಾನಿಗೆ ಕ್ಯಾಚ್‌ ನೀಡಿದಾಗ ಫೀಲ್ಡರ್‌ಗಳು ನಿಟ್ಟುಸಿರು ಬಿಟ್ಟರು. ಕೊನೆಯಲ್ಲಿ ಕರುಣ್‌ ನಾಯರ್ (ಬ್ಯಾಟಿಂಗ್‌ 55) ಜೊತೆ ಮಯಂಕ್‌ ಮತ್ತೊಂದು ಸುಂದರ ಜೊತೆಯಾಟವಾಡಿ ಮಹಾರಾಷ್ಟ್ರ ತಂಡದ ಸಂಕಷ್ಟ ಹೆಚ್ಚಿಸಿದರು.

ಮಯಂಕ್‌ ಚೊಚ್ಚಲ ದ್ವಿಶತಕ
ನಾಲ್ಕು ವರ್ಷಗಳ ಹಿಂದೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮಯಂಕ್ ಗಳಿಸಿದ ಚೊಚ್ಚಲ ದ್ವಿಶತಕವಿದು. 2015ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ 118 ರನ್‌ ಗಳಿಸಿದ್ದರು. ಈ ಪಂದ್ಯದ ಬಳಿಕ ಅವರಿಗೆ ಒಮ್ಮೆಯೂ ಮೂರಂಕಿಯ ಮೊತ್ತ ಮುಟ್ಟಲು ಸಾಧ್ಯವಾಗಿರಲಿಲ್ಲ. ರಣಜಿಯಲ್ಲಿ ಗಳಿಸಿದ ವೈಯಕ್ತಿಕ ಶ್ರೇಷ್ಠ ಮೊತ್ತ ಇದಾಗಿದೆ.

ಪ್ರತಿ ರನ್‌ ಹಿಂದೆ ವೈಫಲ್ಯದ ಪಾಠ
ಪುಣೆ: ‘ಹಿಂದೆ ಅನೇಕ ಪಂದ್ಯಗಳಲ್ಲಿ ಒಂದು ರನ್‌ ಗಳಿಸಲು ಕೂಡ ಪರದಾಡಿದ್ದೇನೆ. ತಪ್ಪುಗಳಿಂದ ಪಾಠ ಕಲಿತಿದ್ದೇನೆ. ಆದ್ದರಿಂದ ಈಗ ದ್ವಿಶತಕ ಹೊಡೆಯಲು ಸಾಧ್ಯವಾಗಿದೆ. ಮೊದಲ ಬಾರಿಗೆ ದ್ವಿಶತಕ ಹೊಡೆದಿದ್ದಕ್ಕೆ ಖುಷಿಯಿದೆ, ಆದರೆ ತೃಪ್ತನಾಗಿಲ್ಲ. ಮುಂದಿನ ಪಂದ್ಯಗಳಲ್ಲಿ ಇನ್ನೂ ಚೆನ್ನಾಗಿ ಆಡಬೇಕಿದೆ...’

ಮಹಾರಾಷ್ಟ್ರ ಎದುರಿನ ರಣಜಿ ಪಂದ್ಯದಲ್ಲಿ ಗುರುವಾರ ದ್ವಿಶತಕ ಬಾರಿಸಿದ ಮಯಂಕ್ ಅಗರವಾಲ್‌ ಅವರ ಮಾತುಗಳಿವು.

ಬಲಗೈ ಬ್ಯಾಟ್ಸ್‌ಮನ್‌ ಮಯಂಕ್ 2013ರಲ್ಲಿ ಜಾರ್ಖಂಡ್‌ ವಿರುದ್ಧ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದುವರೆಗೂ 32 ಪಂದ್ಯಗಳನ್ನಾಡಿದ್ದು (ಮಹಾರಾಷ್ಟ್ರ ಎದುರಿನ ಪಂದ್ಯ ಸೇರಿದಂತೆ) ಪ್ರಥಮ ದರ್ಜೆಯಲ್ಲಿ ಎರಡು ಶತಕ ಮತ್ತು ಒಂದು ದ್ವಿಶತಕ ಗಳಿಸಿದ್ದಾರೆ.

ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ಆಡುವಾಗಿನಿಂದಲೂ ಮಯಂಕ್ ವೇಗವಾಗಿ ರನ್‌ ಗಳಿಸುವ ಆಟಕ್ಕೆ ಹೆಸರುವಾಸಿ. ಆದರೆ ಇಲ್ಲಿನ ಪಂದ್ಯದಲ್ಲಿ ಅವರ ಬ್ಯಾಟಿಂಗ್‌ ಪೂರ್ಣ ಭಿನ್ನವಾಗಿತ್ತು. ತಾಳ್ಮೆಯ ಮತ್ತು ರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟಿದ್ದು ವಿಶೇಷವಾಗಿತ್ತು. ಆರೂವರೆ ಗಂಟೆ ಕ್ರೀಸ್‌ನಲ್ಲಿ ಇದ್ದದ್ದು ಇದಕ್ಕೆ ಸಾಕ್ಷಿ.

ಇದರ ಬಗ್ಗೆ ದಿನದಾಟದ ಬಳಿಕ ಅವರನ್ನು ಪ್ರಶ್ನಿಸಿದಾಗ ‘ಸಂದರ್ಭಕ್ಕೆ ತಕ್ಕಂತೆ ಆಡಬೇಕು ಎನ್ನುವ ಯೋಜನೆಯಿತ್ತು. ಮೊದಲ ದಿನ 31 ಓವರ್ ಆಡಿ ಉತ್ತಮ ಆರಂಭ ತಂದುಕೊಟ್ಟಿದ್ದೆವು. ಎದುರಾಳಿ ತಂಡದವರು ಉತ್ತಮ ವೇಗದ ಬೌಲಿಂಗ್‌ ಕೂಡ ಸಮರ್ಥವಾಗಿ ಎದುರಿಸಿದ್ದೆವು. ಆದ್ದರಿಂದ ಮೊದಲು ನಿಧಾನವಾಗಿ ರನ್ ಗಳಿಸಿದೆ’ ಎಂದು ಪ್ರತಿಕ್ರಿಯಿಸಿದರು.

ಇದರಿಂದ ಅವರಿಗೆ ರಣಜಿಯಲ್ಲಿ ಮಹಾರಾಷ್ಟ್ರ ವಿರುದ್ಧ ದ್ವಿಶತಕ ಗಳಿಸಿದ ಎರಡನೇ ಆಟಗಾರ ಎನ್ನುವ ಕೀರ್ತಿ ಲಭಿಸಿತು. 2012–13ರಲ್ಲಿ ಇದೇ ಮೈದಾನದಲ್ಲಿ ಸಿ.ಎಂ. ಗೌತಮ್‌ ಅಜೇಯ 264 ರನ್ ಗಳಿಸಿದ್ದರು.

ವೈಫಲ್ಯದಿಂದ ಸಾಧನೆಯತ್ತ: ಕಳೆದ ಎರಡು, ಮೂರು ವರ್ಷಗಳಿಂದ ಮಯಂಕ್‌ ರಣಜಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. 2016–17ರ ಟೂರ್ನಿಯಲ್ಲಿ ಒಂದೂ ಶತಕ ಬಾರಿಸಿರಲಿಲ್ಲ. ಅಷ್ಟೇ ಏಕೆ, ಈ ಬಾರಿಯ ರಣಜಿಯ ಮೊದಲ ಪಂದ್ಯದಲ್ಲಿ ಅಸ್ಸಾಂ ಎದುರು 31 ರನ್‌ ಮಾತ್ರ ಹೊಡೆದಿದ್ದರು. ಹೈದರಾಬಾದ್‌ ವಿರುದ್ಧ ಎರಡೂ ಇನಿಂಗ್ಸ್‌ಗಳಲ್ಲಿ ಸೊನ್ನೆ ಸುತ್ತಿದ್ದರು.

‘ಇತ್ತೀಚೆಗೆ ಬ್ಯಾಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. 19 ವರ್ಷದ ಒಳಗಿನವರ ಕ್ರಿಕೆಟ್‌ನಲ್ಲಿ ಆಗ ಪಂಜಾಬ್‌ ವಿರುದ್ಧ 170 ರನ್‌ ಹೊಡೆದಿದ್ದೆ. ಆಗ ಸುದೀರ್ಘಹೊತ್ತು ಕ್ರೀಸ್‌ನಲ್ಲಿದ್ದೆ. ಅದೇ ರೀತಿ ಆಡಲು ಈಗ ಅಭ್ಯಾಸ ಮಾಡುತ್ತಿದ್ದೇನೆ’ ಎಂದರು.

*
ರಾಹುಲ್‌, ಮನೀಷ್‌ ಗುಣಮಟ್ಟದ ಕ್ರಿಕೆಟ್‌ ಆಡುತ್ತಿದ್ದಾರೆ. ನಾನೂ ಅವರಂತೆ ಆಡುತ್ತೇನೆ. ಆಗ ನನಗೂ ಭಾರತ ತಂಡದಲ್ಲಿ ಅವಕಾಶ ಲಭಿಸಬಹುದು.
–ಮಯಂಕ್‌ ಅಗರ್‌ವಾಲ್‌, ಕರ್ನಾಟಕದ ಆಟಗಾರ

*

*


*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT