ಶನಿವಾರ, ಫೆಬ್ರವರಿ 27, 2021
29 °C

ಸಾರಿಗೆ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾರಿಗೆ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು: ‘ಅಂತರ್‌ ನಿಗಮ ವರ್ಗಾವಣೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಬೇಕು. ಈಗಾಗಲೇ ವರ್ಗಾವಣೆ ಮಾಡಿದ ಕೆಲ ನೌಕರರನ್ನು ಸೇವೆಯಿಂದ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿ ಕೆ.ಎಸ್‌.ಆರ್‌.ಟಿ.ಸಿ ಹಾಗೂ ಬಿ.ಎಂ.ಟಿ.ಸಿ ನೌಕರರು ನಗರದಲ್ಲಿ ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಶಾಂತಿನಗರದ ಕೆ.ಎಸ್‌.ಆರ್‌.ಟಿ.ಸಿ ಕೇಂದ್ರ ಕಚೇರಿ ಎದುರು ‘ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಒಕ್ಕೂಟ’ದ ನೇತೃತ್ವದಲ್ಲಿ ಸೇರಿರುವ ನೌಕರರು, ‘ವರ್ಗಾವಣೆ ನಮ್ಮ ಹಕ್ಕು’, ‘ಅಧಿಕಾರಿಗಳ ಕಿರುಕುಳ ನಿಲ್ಲಲಿ’, ‘ನೌಕರರ ಬೇಡಿಕೆಗಳನ್ನು ಈಡೇರಿಸಿ’ ಎಂಬ ಘೋಷಣೆಯುಳ್ಳ ಫಲಕಗಳನ್ನು ಪ್ರದರ್ಶಿಸಿದರು.

ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ರೇವಪ್ಪ ಮಾತನಾಡಿ, ‘ನಿಗಮಗಳ ಅಭಿವೃದ್ಧಿಗೆ ಸಾವಿರಾರು ನೌಕರರು ಹಗಲಿರುಳು ದುಡಿಯುತ್ತಿದ್ದಾರೆ. ಅಂಥ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಸಚಿವರು ಹಾಗೂ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಿಗಮದಿಂದ ನಿಗಮಕ್ಕೆ ವರ್ಗಾವಣೆ ನೀಡಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಈ ಬೇಡಿಕೆ ಪೂರ್ಣಪ್ರಮಾಣದಲ್ಲಿ ಈಡೇರಿಲ್ಲ. ಮಂಗಳೂರು ವಿಭಾಗಕ್ಕೆ 3 ತಿಂಗಳ ಎರವಲು ಸೇವೆಗೆಂದು ನಿಯೋಜಿಸಿದ್ದ ನೌಕರರನ್ನು ಮಾತೃ ವಿಭಾಗಕ್ಕೆ ವಾಪಸ್‌ ಕಳುಹಿಸಿಲ್ಲ. ಇದರಿಂದ ಆ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ದೂರಿದರು.

‘ಬಿ.ಎಂ.ಟಿ.ಸಿ ನೌಕರರಿಗೆ 2015–16ನೇ ಸಾಲಿನ ಬೋನಸ್‌ ಹಾಗೂ ಗಳಿಕೆ ಹಣ ನೀಡಬೇಕು. 2016ರ ಜುಲೈ 25ರಿಂದ 27ರವರೆಗೆ ಮುಷ್ಕರ ಮಾಡಿದ್ದ ಕಾರಣಕ್ಕೆ ವಜಾ ಮಾಡಿರುವ ನೌಕರರನ್ನು ಪುನಃ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ತಿಂಗಳಿಗೆ 4 ಹಕ್ಕಿನ ರಜೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಖಾಸಗಿ ವಾಹನ ಗುತ್ತಿಗೆ ನಿರ್ಧಾರಕ್ಕೆ ಖಂಡನೆ: ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌.ಮಂಜುನಾಥ್‌ ಮಾತನಾಡಿ, ‘1,500 ಖಾಸಗಿ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಬಿ.ಎಂ.ಟಿ.ಸಿ ಆಡಳಿತ ಮಂಡಳಿ ನಿರ್ಧರಿಸಿದ್ದು, ಇದನ್ನು ಒಕ್ಕೂಟ ಖಂಡಿಸುತ್ತದೆ’ ಎಂದರು.

‘ನಿಗಮವು ಸಾವಿರಾರು ಕೋಟಿ ಮೌಲ್ಯದ ಆಸ್ತಿ ಹೊಂದಿದೆ. ಅತ್ಯುತ್ತಮ ನಗರ ಸಾರಿಗೆ ಎಂಬ ಪ್ರಶಂಸೆಗೂ ಪಾತ್ರವಾಗಿದೆ. ಇಂಥ ಸಂಸ್ಥೆಯು ಅಭಿವೃದ್ಧಿ ಹೊಂದುವ ಬದಲು, ಖಾಸಗಿ ಸಂಸ್ಥೆಗಳನ್ನು ಅಭಿವೃದ್ಧಿ ಮಾಡಲು ಈ ರೀತಿ ಮಾಡುತ್ತಿದೆ. ಈ ಕೂಡಲೇ ನಿರ್ಧಾರವನ್ನು ಆಡಳಿತ ಮಂಡಳಿಯು ಕೈಬಿಡಬೇಕು’ ಎಂದು ಅವರು ಒತ್ತಾಯಿಸಿದರು.

ಮಾತುಕತೆ ವಿಫಲ: ಸಾರಿಗೆ ನಿಗಮಗಳ ಉನ್ನತ ಅಧಿಕಾರಿಯನ್ನು ಪ್ರತಿಭಟನಾಕಾರರು ಸಂಜೆ ಭೇಟಿಯಾದರು. ಅವರೊಂದಿಗೆ ನಡೆಸಿದ ಮಾತುಕತೆ ವಿಫಲವಾಯಿತು. ಬಳಿಕ ನೌಕರರು ಕಚೇರಿ ಎದುರು ಅಹೋರಾತ್ರಿ ಧರಣಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.