ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯದ ಹಿನ್ನೀರಿನಲ್ಲೇ ಶವಯಾತ್ರೆ

Last Updated 3 ನವೆಂಬರ್ 2017, 5:47 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ತಾಲ್ಲೂಕಿನ ಧನ್ನೂರ (ಕೆ) ವಾಡಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದ್ದರಿಂದ ಎದೆಮಟ್ಟ ನೀರು ಇರುವ ಚುಳಕಿನಾಲಾ ಜಲಾಶಯದ ಹಿನ್ನೀರಿನಲ್ಲೇ ಗುರುವಾರ ಶವವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲಾಯಿತು.

ಹೈದರಸಾಬ್ (80) ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗೂ ಮುನ್ನ ಗ್ರಾಮಸ್ಥರು ತಹಶೀಲ್ದಾರ್ ಜಗನ್ನಾಥರೆಡ್ಡಿ ಅವರಿಗೆ ಗ್ರಾಮದ ಸಮೀಪದಲ್ಲಿ ಸ್ಮಶಾನಭೂಮಿ ಒದಗಿಸಬೇಕು ಎಂದು ಮನವಿಪತ್ರ ಸಲ್ಲಿಸಿದರಾದರೂ ಪ್ರಯೋಜನ ಆಗಲಿಲ್ಲ.

‘ತಹಶೀಲ್ದಾರ್ ಅವರು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ಆದರೆ ನೀರಾವರಿ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಹಿನ್ನೀರು ನಿಲ್ಲುವ ನಾಲೆಗೆ ಸೇತುವೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದಷ್ಟೇ ಭರವಸೆ ನೀಡಿದರು. ಅಂತ್ಯಕ್ರಿಯೆಗೆ ಸ್ಥಳ ಒದಗಿಸಲು ಮುಂದಾಗಲಿಲ್ಲ. ಆದ್ದರಿಂದ ಹಿನ್ನೀರಿನಲ್ಲೇ ಹೋಗಬೇಕಾಯಿತು’ ಎಂದು ಗ್ರಾಮದ ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ ಮಹ್ಮದ್ ಇಸ್ಮಾಯಿಲ್ ತಿಳಿಸಿದರು.

‘ವರ್ಷದ ಹಿಂದೆಯೂ ಇದೇ ರೀತಿ ತೊಂದರೆ ಅನುಭವಿಸಬೇಕಾಯಿತು. ಅಂದಿನಿಂದ ಗ್ರಾಮದ ಸಮೀಪದಲ್ಲಿ ಸ್ಮಶಾನಭೂಮಿ ಒದಗಿಸಬೇಕು ಎಂದು ಸಂಬಂಧಿತರಿಗೆ ಮನವಿ ಸಲ್ಲಿಸುತ್ತಿದ್ದೇವೆ. ಆದರೂ ಯಾರೂ ಈ ಕಡೆ ಗಮನ ನೀಡುತ್ತಿಲ್ಲ. ಈಗಿರುವ ಸ್ಮಶಾನಭೂಮಿ ಒಂದು ಕಿ.ಮೀ ದೂರದಲ್ಲಿದೆ. ಅಲ್ಲದೆ ಮಧ್ಯದಲ್ಲಿ ಜಲಾಶಯದ ಹಿನ್ನೀರು ತುಂಬಿರುವ ನಾಲೆ ಇರುವುದರಿಂದ ಅದನ್ನು ದಾಟಿ ಆ ಕಡೆ ಹೋಗುವುದಕ್ಕೆ ಕಷ್ಟವಾಗುತ್ತದೆ’ ಎಂದು ಹೇಳಿದರು.

‘ಹಿಂದೂ ಮತ್ತು ಮುಸ್ಲಿಮರ ಸ್ಮಶಾನ ಒಂದೇ ಸ್ಥಳದಲ್ಲಿ ಇದೆ. ಜಲಾಶಯ ನಿರ್ಮಾಣವಾದ ನಂತರ ಗ್ರಾಮವನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಆದ್ದರಿಂದ ಹಿನ್ನೀರು ದಾಟಿ ಹೋಗಬೇಕಾಗಿದೆ. ಪುನರ್ವಸತಿ ಕೇಂದ್ರದ ಹತ್ತಿರದಲ್ಲಿ ಜಾಗ ಒದಗಿಸಿದರೆ ಅನುಕೂಲ ಆಗುತ್ತದೆ’ ಎಂದು ಗ್ರಾಮದ ಶರಣಪ್ಪ ಬಿರಾದಾರ ಹೇಳಿದರು.

ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಮುಖಂಡರಾದ ಇಕ್ರಾಮೊದ್ದೀನ್ ಖಾದಿವಾಲೆ, ಶಿವಶರಣಪ್ಪ ಬಿರಾದಾರ, ನಗರಸಭೆ ಸದಸ್ಯ ಅಕ್ತರಬಾಗ್, ಬಹುಜನ ಸಮಾಜ ಪಕ್ಷದ ಕಾರ್ಯದರ್ಶಿ ಶೇರ ಅಲಿ, ಅಲ್ತಾಫ್, ನೂರುದ್ದೀನ್ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT