ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪಗಿದ್ದೇನೆ ಎಂಬ ಮುಜುಗರ ಕಾಡುತ್ತಿದೆ...

Last Updated 3 ನವೆಂಬರ್ 2017, 19:30 IST
ಅಕ್ಷರ ಗಾತ್ರ

1. ನನಗೆ ಮದುವೆಯಾಗಿ ಮಗುವಿದೆ. ಆದರೆ ನನ್ನ ಅತ್ತೆಯವರಿಗೆ ನನ್ನ ಮೇಲೆ ಅಸಮಾಧಾನ. ಅವರ ಜೊತೆ ಹೇಗೆ ಮಾತನಾಡಬೇಕು ಎಂಬುದೇ ತಿಳಿಯುತ್ತಿಲ್ಲ. ಅವರು ನಾನು ಏನು ಮಾತನಾಡಿದರೂ ತಪ್ಪು ಕಂಡು ಹಿಡಿಯುತ್ತಾರೆ. ನನ್ನ ಮಗನ ಜೊತೆ ಸಮಯ ಕಳೆಯಲು ಬಿಡುವುದಿಲ್ಲ. ಬರೀ ಅವರ ಜೊತೆಯಲ್ಲೇ ಇರಬೇಕು ಎಂದು ಬಯಸುತ್ತಾರೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ನನಗೆ ಇದರಿಂದ ಹೊರ ಬರಲು ಪರಿಹಾರ ತಿಳಿಸಿ.‌
ಹೆಸರು, ಊರು ಇಲ್ಲ

ಇದು ಮಹಿಳೆಯ ಸ್ವಾಭಾವಿಕ ಗುಣ. ಒಮ್ಮೆ ಸೊಸೆ ತಮ್ಮ ಜೀವನಕ್ಕೆ ಪ್ರವೇಶ ಪಡೆಯುತ್ತಾಳೆ ಎಂದಾಗ ಅತ್ತೆಯ ಮನಸ್ಸಿನಲ್ಲಿ ಅಭದ್ರತೆಯ ಭಾವನೆಗಳು ಹುಟ್ಟಿಕೊಳ್ಳುತ್ತವೆ. ತಮ್ಮ ಮಗನ ಗಮನ ಭಾಗವಾಗುತ್ತದೆ ಎಂಬ ಭಾವನೆ ಅವರ ಮನಸ್ಸಿನಲ್ಲಿ ಮೂಡುತ್ತವೆ. ಆದ್ದರಿಂದ ಸಂಘರ್ಷಗಳು ಹುಟ್ಟಿಕೊಳ್ಳುತ್ತದೆ. ಆದರೆ ತಲೆಮಾರಿನೊಂದಿಗೆ ವಿಷಯ‌ಗಳು ಬದಲಾಗುತ್ತಿದೆ. ಇತ್ತೀಚಿನ ಹೆಚ್ಚಿನ ಟಿ‍ಪಿಕಲ್ ಅತ್ತೆ–ಸೊಸೆ ಸಂಬಂಧದ ನಡುವೆ ಈ ರೀತಿ ಇಲ್ಲ. ಹಾಗಾಗಿ ನೀವು ನಿಮ್ಮ ಗಂಡನ ನೇತೃತ್ವದಲ್ಲಿ ನಿಮ್ಮ ಅತ್ತೆಯೊಂದಿಗೆ ಮಾತನಾಡಿ. ಮೊದಲು ನಿಮ್ಮ ಸಂಸಾರ ಹೇಗಿತ್ತೊ ಹಾಗೇ ಇರುತ್ತದೆ, ‘ನಾನು ಬಂದಿದ್ದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ’ ಎಂದು ಅವರಿಗೆ ಭರವಸೆ ನೀಡಿ. ಆರೋಗ್ಯಕರ ಸಂವಹನ ಎಲ್ಲ ಸಮಸ್ಯೆಯನ್ನು ಪರಿಹರಿಸುತ್ತದೆ. ಹಾಗಾಗಿ ಮನೆಯ ಎಲ್ಲ ವಿಷಯಗಳಲ್ಲಿ ಅವರನ್ನು ಸೇರಿಸಿಕೊಳ್ಳಿ. ಹಾಗೆಯೇ ನಿಮ್ಮ ನಡುವೆ ಬಾಂಧವ್ಯ ಗಟ್ಟಿಯಾಗುತ್ತದೆ. ಸಮಯ ಸರಿದಂತೆ ನೀವೇ ಬದಲಾವಣೆಯನ್ನು ಗುರುತಿಸುತ್ತೀರಿ.

ಅವರಿಗೆ ಮಾಡಲು ಹೆಚ್ಚಿಗೆ ಏನು ಕೆಲಸವಿಲ್ಲದಿದ್ದಾಗ, ಅವರು ಮೊಮ್ಮಕ್ಕಳೊಂದಿಗೆ ತುಂಬಾ ಆತ್ಮೀಯರಾಗುತ್ತಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಮಗುವಿನೊಂದಿಗೆ ಸೇರಿ ತಮ್ಮ ಮಗನೊಂದಿಗೆ ಕಳೆದ ಸಮಯವನ್ನು ಮೆಲುಕು ಹಾಕುತ್ತಾರೆ. ಅದು ಅವರನ್ನು ಉತ್ಸಾಹಭರಿತರಾಗಿ, ಸಂತೋಷದಿಂದಿರುವಂತೆ ಮಾಡುತ್ತದೆ. ಒಮ್ಮೆ ನಿಮ್ಮ ಸಂಬಂಧದ ಅನುಬಂಧ ಗಟ್ಟಿಯಾಗಿದೆ ಎಂದೆನಿಸಿದರೆ, ನೀವು ಮತ್ತು ನಿಮ್ಮ ಅತ್ತೆ ಜೊತೆಯಾಗುತ್ತೀರಿ, ಆಗ ಅವರು ನಿಮ್ಮನ್ನು ಸಂಪೂರ್ಣವಾಗಿ ಒಪ್ಪುತ್ತಾರೆ ಮತ್ತು ನಿಮ್ಮ ಮಗನನ್ನು ನಿಮಗೆ ನೀಡುತ್ತಾರೆ; ನೀವು ಮಗುವಿನೊಂದಿಗೆ ಸಮಯ ಕಳೆಯಲು ಅನುಕೂಲ ಮಾಡಿಕೊಡುತ್ತಾರೆ.

2. ನಾನು ಬಿ.ಎ ಓದಿದ್ದೇನೆ. ಸದ್ಯ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಯಾರ ಮೇಲೂ ನಂಬಿಕೆ ಇಲ್ಲ. ಯಾರಾದರೂ ತಪ್ಪು ಮಾಡಿದರೆ ಶಿಕ್ಷಿಸಬೇಕು ಎನ್ನಿಸುತ್ತದೆ. ಕೋಪ ಬಂದರೆ ಯಾವುದೂ ನನ್ನ ಹಿಡಿತದಲ್ಲಿ ಇರುವುದಿಲ್ಲ. ಕೈಗೆ ಸಿಕ್ಕ ವಸ್ತುಗಳನ್ನು ಒಡೆದು ಹಾಕುತ್ತೇನೆ. ಸ್ವಲ್ಪ ಸಮಯದ ನಂತರ ನಾನು ಯಾಕೆ ಹೀಗೆ ಮಾಡಿದೆ ಎಂದು ಅನ್ನಿಸುತ್ತದೆ. ನನ್ನ ಈ ಸಮಸ್ಯೆಗೆ ಪರಿಹಾರ ತಿಳಿಸಿ.
ಶೋಭಾ, ಊರು ಬೇಡ

ಮನುಷ್ಯರ ನಡುವೆ ಬಾಂಧವ್ಯವನ್ನು ಗಟ್ಟಿಗೊಳಿಸುವುದೇ ನಂಬಿಕೆ. ಮತ್ತು ನೀವು ಹೇಳುತ್ತಿದ್ದೀರಿ, ನೀವು ಯಾರನ್ನು ನಂಬುವುದಿಲ್ಲ ಎಂದು. ಹೆಚ್ಚಿನ ಸಮಯದಲ್ಲಿ ವ್ಯಕ್ತಿ ನಂಬಿಕೆ ಕಳೆದುಕೊಳ್ಳಲು ನಿರ್ಲಕ್ಷ್ಯ, ತಿರಸ್ಕಾರ, ಯಾವುದೋ ಒಂದು ಸಮಯದಲ್ಲಿ ಯಾರಾದರೂ ದುರುಪಯೋಗ ಪಡಿಸಿಕೊಂಡಿರುವುದು – ಇಂಥ ಕೆಟ್ಟ ಅನುಭವಗಳೇ ಕಾರಣಗಳು. ಅದಲ್ಲದೇ ಅಸಹಜ, ಹೇಳಲಾಗದ ಅಸ್ಪಷ್ಟ ನಿರೀಕ್ಷೆಗಳು ಕೂಡ ನಂಬಿಕೆ ಮುರಿದು ಹೋಗಲು ಇರುವ ಪ್ರಾಥಮಿಕ ಕಾರಣ. ಮೊದಲು ನೀವು ನಂಬಿಕೆ ಕಳೆದುಕೊಳ್ಳಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಿ. ಅತಿಯಾದ ನಿರೀಕ್ಷೆ, ಮಾನಸಿಕ ಜಂಜಡ, ಬೇರೆಯವರಿಂದ ಹೊಡೆತ ತಿಂದಿದ್ದರೆ ಅಥವಾ ಸ್ವಯಂ ಗೌರವದ ಕೊರತೆ, ಆರೋಗ್ಯಕರ ಮತ್ತು ಅತಿಯಾಗಿ ಒಬ್ಬರನ್ನು ನಂಬಿ ಅವರು ನಿಮ್ಮ ನಂಬಿಕೆಯನ್ನು ಹಾಳುಗೆಡವಿರುವುದು – ಇವು ನಂಬಿಕೆ ಒಡೆಯಲು ಕಾರಣಗಳು. ನಿಮ್ಮ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಿ. ಇದು ನಿಮ್ಮ ಕೋಪವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅತಿಯಾದ ನಿರೀಕ್ಷೆಯೇ ಸಿಟ್ಟಿಗೆ ಕಾರಣ. ನೀವು ಅಂದುಕೊಂಡ ಹಾಗೇ ಕೆಲಸಗಳು ನಡೆಯದಿದ್ದರೆ ಮನಸ್ಸು ಸಿಟ್ಟಾಗುವುದು ಸಾಮಾನ್ಯ.

ಹಾಗಾಗಿ ನೀವು ಸಿಟ್ಟಾಗುವುದರಿಂದ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾಳಾಗುವುದರ ಜೊತೆಗೆ ನಿಮ್ಮ ಜೊತೆಯವರ ನಡುವಿನ ಸಂಬಂಧವೂ ಬಿರುಕು ಬಿಡುತ್ತದೆ. ನೀವು ನಿಮ್ಮ ಭಾವನೆಗಳನ್ನು ನಿಗ್ರಹಿಸಿಕೊಳ್ಳಲು ಕಲಿಯಬೇಕು. ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ನಿಮ್ಮನ್ನು ಪ್ರಚೋದಿಸುವಂತಹ ಘಟನೆಗಳಿಂದ ದೂರವಿರಿ, ಅಹಿತಕರ ಮಾತುಕತೆಗಳಿಂದ ದೂರಿವಿರಿ. ದೀರ್ಘವಾಗಿ ಉಸಿರೆಳೆದುಕೊಂಡು ಮನಸ್ಸಿನಲ್ಲಿಯೇ ಧನಾತ್ಮಕವಾಗಿ ಮಾತನಾಡಿ. ಕೆಲವೊಮ್ಮೆ ನೀವು ಸಂದರ್ಭಗಳನ್ನು ಎದುರಿಸುವ ರೀತಿಯು ನಿಮ್ಮನ್ನು ಸಿಟ್ಟಿಗೇಳಿಸುತ್ತದೆ. ಆದ್ದರಿಂದ ಕೂಡಲೇ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿ. ಸ್ವಲ್ಪ ಸಮಯ ತೆಗೆದುಕೊಳ್ಳಿ. ಆಗ ಪರಿಣಾಮಾತ್ಮಕವಾಗಿ, ಶಾಂತ ಮನೋಭಾವದಿಂದ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳಲು ಇರುವ ಒಂದೇ ಒಂದು ದಾರಿಯೆಂದರೆ ಯೋಗ ಮತ್ತು ಧ್ಯಾನ. ಇದರಿಂದ ದೀರ್ಘಕಾಲದ ಲಾಭವಿದೆ. ಅದನ್ನೇ ಮುಂದುವರಿಸಿ ಎಂದು ನಾನು ಸಲಹೆ ನೀಡುತ್ತೇನೆ.

3. ನಾನು ಬಿ.ಕಾಂ. ಪ್ರಥಮ ವರ್ಷದಲ್ಲಿ ಓದುತ್ತಿದ್ದೇನೆ. ನಾನು ನೋಡಲು ಸ್ವಲ್ಪ ಕಪ್ಪಗಿದ್ದೇನೆ. ಇದರಿಂದ ನನಗೆ ತುಂಬಾ ಮುಜಗರವಾಗುತ್ತಿದೆ. ನಾನು ನನ್ನ ಸ್ನೇಹಿತರೊಡನೆ ಮಾತನಾಡಲು ಹಾಗೂ ಫೋಟೊ ತೆಗೆಸಿಕೊಳ್ಳಲು ಹೋಗುವುದಿಲ್ಲ. ಕಾಲೇಜಿನಲ್ಲಿ ಯಾವುದೇ ತರಹದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಿಂಜರಿಕೆಯಾಗುತ್ತಿದೆ. ಆದರೆ ನನ್ನನ್ನು ಯಾರೂ ಹೀಯಾಳಿಸುವುದಿಲ್ಲ. ನನ್ನ ಮನಸ್ಸಿಗೆ ನಾನು ಕಪ್ಪಗಿದ್ದೇನೆ, ನೋಡಲು ಚೆನ್ನಾಗಿಲ್ಲ ಅನ್ನಿಸುತ್ತದೆ. ದಯವಿಟ್ಟು ಇದರಿಂದ ಹೊರಬರಲು ಪರಿಹಾರ ತಿಳಿಸಿ.
ದರ್ಶನ್, ಊರು ಬೇಡ

ಚರ್ಮದ ಬಣ್ಣ ಎನ್ನುವುದು ನಮ್ಮ ಹುಟ್ಟಿನೊಂದಿಗೆ ಬಂದಿರುತ್ತದೆ. ಇದನ್ನು ನಾವು ಏನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಮೊ‌ದಲು ನೀವು ಅದನ್ನು ಒಪ್ಪಿಕೊಳ್ಳಿ. ಸ್ವಯಂ ಸ್ವಿಕಾರ ನಿಮ್ಮ ಬೆಲೆಯನ್ನು ಹೆಚ್ಚಿಸುತ್ತದೆ. ನೀವು ಇರುವಂತೆ ನಿಮ್ಮನ್ನು ಒಪ್ಪಿಕೊಂಡರೆ ಗೌರವವೂ ಹೆಚ್ಚುತ್ತದೆ. ಆಗ ಮಾತ್ರ ನೀವು ಧನಾತ್ಮಕ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸದೊಂದಿಗೆ ಸಮಾಜದಲ್ಲಿ ಜೀವನ ಸಾಗಿಸಲು ಸಾಧ್ಯ. ಹಾಗಾಗಿ ಮೊದಲು ನಿಮ್ಮನ್ನು ನೀವೇ ನಿರ್ಣಯಿಸಿಕೊಳ್ಳುವುದು ಮ‌ತ್ತು ದೂಷಣೆ ಮಾಡಿಕೊಳ್ಳುವುದನ್ನು ನಿಲ್ಲಿಸಿ. ನಿಮ್ಮ ಸುತ್ತಲೂ ಒಳ್ಳೆಯ ಜನರಿದ್ದಾರೆ. ಅದಕ್ಕಾಗಿ ಸಂತೋಷಪಡಿ.

ನೀವು ಹೇಗೆ ಇದ್ದಿರೋ ಹಾಗೇ ನಿಮ್ಮನ್ನು ಒಪ್ಪಿಕೊಂಡು ಸ್ನೇಹಿತರಾದವರಿದ್ದಾರೆ. ನಿಮ್ಮ ಬಣ್ಣ ಹಾಗೂ ನೀವು ಹೇಗಿದ್ದೀರಿ ಎಂಬುದು ಮುಖ್ಯವಲ್ಲ. ನಿಮ್ಮ ಜಾಣ್ಮೆಯೇ ಮುಖ್ಯ. ತುಂಬು ಆತ್ಮವಿಶ್ವಾಸದಿಂದ ಸಮಾಜದಲ್ಲಿ ಬದುಕಿ ಮತ್ತು ಕಾಲೇಜಿನ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿ. ಆಗ ಯಾರು ನಿಮ್ಮನ್ನು ಬಣ್ಣದಿಂದ ಗುರುತಿಸುವುದಿಲ್ಲ. ಬದಲಾಗಿ ನೀವು ಮಾಡುವ ಕೆಲಸಗಳೇ ನಿಮ್ಮನ್ನು ಗುರುತಿಸುವಂತೆ ಮಾಡುತ್ತವೆ.

ನೀವು ನಿಮ್ಮ ಬಗ್ಗೆ ಹೇಗೆ ಮಾತನಾಡುತ್ತಿದ್ದಿರೋ ಅದನ್ನು ಹಿಮ್ಮೆಟ್ಟಿ ಮುಂದೆ ಸಾಗಿ, ಸ್ವಯಂ–ಸ್ವಿಕಾರ ಮಾಡಿಕೊಳ್ಳಲು ಕೂಡ ಸ್ವಲ್ಪ ಸಮಯ ಹಿಡಿಯುತ್ತದೆ. ತಾಳ್ಮೆಯಿಂದಿರಿ. ತಾಳ್ಮೆ ಹಾಗೂ ಸಹಾನುಭೂತಿಯೊಂದಿಗೆ ನಿಮ್ಮ ಕೆಲಸ ಮಾಡಿ. ಇನ್ನೊಬ್ಬರ ಟೀಕೆಗಳನ್ನು ಕಡೆಗಣಿಸಿ, ಕೇವಲ ಸಲಹೆಗಳನ್ನಷ್ಟೇ ಸ್ವೀಕರಿಸಿ. ಆತ್ಮಗೌರವದಿಂದ ಕೆಲಸ ಮಾಡಿ, ನಿಮ್ಮನ್ನು ನೀವೆ ಸುಧಾರಿಸಿಕೊಳ್ಳಿ. ಇದು ನಿಮ್ಮ ಬಗ್ಗೆ ನೀವು ತಲೆ ಕೆಡಿಸಿಕೊಳ್ಳುವುದನ್ನು ಮತ್ತು ನೀವು ಕಡಿಮೆ ಎಂಬ ಭಾವನೆಯನ್ನು ತಡೆಯುತ್ತದೆ. ನೆನಪಿನಲ್ಲಿಡಿ, ಸೌಂದರ್ಯ ಎನ್ನುವುದು ನಿಮ್ಮ ಚರ್ಮದ ಮೇಲೆ ನಿಂತಿಲ್ಲ, ಸೌಂದರ್ಯ ಹೃದಯದ ಬೆಳಕು.

4. ನಾನು ಬಾಲ್ಯ ವಿವಾಹಕ್ಕೆ ಒಳಗಾದ ಹುಡುಗಿ. ನನಗೆ 14 ವರ್ಷಕ್ಕೆ ಮದುವೆಯಾಯ್ತು. ನನಗೂ ನನ್ನ ಗಂಡನಿಗೂ 20 ವರ್ಷಗಳ ಅಂತರವಿದೆ. ನನ್ನ ಗಂಡನಿಗೆ ನನ್ನ ಮೇಲೆ ಬಹಳ ಅನುಮಾನ. ನನ್ನ ಅಣ್ಣನ ಬಳಿ ಕೂಡ ಮಾತನಾಡಲು ಬಿಡುವುದಿಲ್ಲ. ನನ್ನ ಶಿಕ್ಷಣ ಮತ್ತು ಹೆರಿಗೆಯ ಖರ್ಚುಗಳನ್ನು ನನ್ನ ಮನೆಯವರೇ ನೋಡಿಕೊಂಡರು. ಅವರು ನನಗೆ ಮತ್ತು ಮಕ್ಕಳಿಗೆ ಏನನ್ನೂ ಕೊಡಿಸುತ್ತಿರಲಿಲ್ಲ, ಆ ಕಾರಣಕ್ಕೆ ನಾನು ಗಂಡನ ಮನೆ ಬಿಟ್ಟು ತವರು ಮನೆಯಲ್ಲಿ ಇದ್ದೆ. ಈಗ ನನಗೆ ಬೇರೊಬ್ಬರ ಪರಿಚಯ ಆಗಿದೆ. ಅವರು ನನ್ನನ್ನು ಪ್ರೀತಿಸುತ್ತಿದ್ದಾರೆ. ಅವರಿಗೆ ನನಗೆ ಮದುವೆಯಾಗಿದೆ ಎಂಬುದು ತಿಳಿದಿಲ್ಲ. ನನಗೆ ಹೇಳುವುದಕ್ಕೆ ಭಯ. ನನಗೆ ಜೀವನದಲ್ಲಿ ಒಬ್ಬ ಒಳ್ಳೆಯ ಗಂಡ ಬೇಕು ಎಂಬ ಆಸೆ ಇದೆ.  ಏನು ಮಾಡಲಿ?
ಹೆಸರು, ಊರು ಇಲ್ಲ

ಕಾನೂನಿನ ಪ್ರಕಾರ ಬಾಲ್ಯವಿವಾಹಕ್ಕೆ ಮಾನ್ಯತೆ ಇಲ್ಲ. ಹಾಗಾಗಿ ಮೊದಲು ನೀವು ನಿಮ್ಮ ಪೋಷಕರ ಸಹಕಾರದೊಂದಿಗೆ ಒಬ್ಬ ವಕೀಲರನ್ನು ನೋಡಿ. ಅವರು ನಿಮ್ಮ ಎರಡನೇ ಮದುವೆಯ ಬಗ್ಗೆ ಮಾಹಿತಿ ನೀಡುತ್ತಾರೆ. ಈಗ ನೀವು ಬೇರೆಯವರು ನಿಮ್ಮ ಜೀವನದಲ್ಲಿ ಪ್ರವೇಶ ಪಡೆದಿದ್ದಾರೆ. ನೀವು ಅವರಿಗೆ ನಿಮ್ಮ ಮೊದಲ ಮದುವೆ ಹಾಗೂ ಮಕ್ಕಳ ಬಗ್ಗೆ ತಿಳಿಸಿ. ಪಾರದರ್ಶಕ ಸಂಬಂಧ ಆರೋಗ್ಯಕರ ಸಂಬಂಧವನ್ನು ಖಾತ್ರಿಗೊಳಿಸುತ್ತದೆ. ನಂಬಿಕೆ ನಿಮ್ಮಬ್ಬರ ನಡುವಿನ ಬಂಧವನ್ನು ಗಟ್ಟಿಗೊಳಿಸುತ್ತದೆ. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT