ಸೋಮವಾರ, ಮಾರ್ಚ್ 8, 2021
26 °C

‘ಬೆನ್ನುಡಿ’ಯ ಸೊಗಸಿನಲ್ಲಿ ಅವಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬೆನ್ನುಡಿ’ಯ ಸೊಗಸಿನಲ್ಲಿ ಅವಳು...

ಫ್ಯಾಷನ್ ಎನ್ನುವುದು ಸದಾ ಹರಿಯುವ ನದಿಯಿದ್ದಂತೆ. ಋತುಮಾನಕ್ಕನುಗುಣವಾಗಿ ಟ್ರೆಂಡ್‌ಗಳು ಬದಲಾಗುತ್ತಿರುತ್ತವೆ. ಶುಭ ಸಮಾರಂಭಗಳು, ಪಾರ್ಟಿಗಳಲ್ಲಂತೂ ನೂತನ ಟ್ರೆಂಡ್‌ಗಳ ಪ್ರದರ್ಶನದ ಮಹಾಪೂರವೇ ಕಾಣಸಿಗುತ್ತದೆ. ಇತ್ತೀಚೆಗೆ ಅಂಥ ಟ್ರೆಂಡ್‌ಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವುದು ಬ್ಯಾಕ್‌ಲೆಸ್ ಉಡುಪುಗಳು.

ಬೆನ್ನಿನ ಸೌಂದರ್ಯವನ್ನು ತೆರೆದಿಡುವ ಬ್ಯಾಕ್‌ಲೆಸ್‌ ಉಡುಪುಗಳು ಸಂಪ್ರದಾಯಸ್ಥ ಭಾರತೀಯರ ಮನಸ್ಸನ್ನೂ ಗೆದ್ದಿರುವುದು ಈ ಉಡುಪುಗಳ ವಿಶೇಷ. ಬಹುಕಾಲದಿಂದಲೂ ಡೀಪ್ ನೆಕ್ ಮತ್ತು ಬ್ಯಾಕ್‌ ಡೀಪ್ ಇರುವ ರವಿಕೆಗಳು ಟ್ರೆಂಡಿಯಾಗಿದ್ದವು. ಈಗ ಆ ಸ್ಥಾನವನ್ನು ಬ್ಯಾಕ್‌ಲೆಸ್ ಗೌನ್‌ಗಳು, ಚೂಡಿದಾರ್‌, ಸ್ಕರ್ಟ್‌ಗಳು ಆಕ್ರಮಿಸಿವೆ.

ಬಚ್ಚಿಟ್ಟ ಬೆನ್ನಿನ ಸೌಂದರ್ಯವನ್ನು ಅನಾವರಣಗೊಳಿಸುವ ಈ ಉಡುಪುಗಳು ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯರ ಮನಸನ್ನೂ ಗೆದ್ದಿವೆ. ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ, ಸೋನಂ ಕಪೂರ್, ಅನುಷ್ಕಾ ಶರ್ಮಾ, ಸೋಫಿಯಾ ಚೌಧರಿ, ಪ್ರಿಯಾಂಕಾ ಚೋಪ್ರಾ, ಸನ್ನಿ ಲಿಯೋನ್, ದಿಶಾ ಪಟಾನಿ ತಮ್ಮ ‘ಬೆನ್ನುಡಿಯ’ ಉಡುಪುಗಳಿಂದಲೇ ಸುದ್ದಿಯ ಕೇಂದ್ರವಾದವರು.

ಬಾಲಿವುಡ್‌ನಲ್ಲಿ ಬ್ಯಾಕ್‌ಲೆಸ್ ರವಿಕೆಗಳ ಟ್ರೆಂಡ್‌ ಅನ್ನು ಚಾಲ್ತಿಗೆ ತಂದವರು ನಟಿ ಮಾಧುರಿ ದೀಕ್ಷಿತ್ ಎನ್ನಬಹುದು. ‘ಬೇಟಾ’ ಚಿತ್ರದ ‘ಧಕ್‌ ಧಕ್’ ಹಾಡಿನಲ್ಲಿ ತಿಳಿಹಳದಿ ಸೀರೆಗೆ ಮಾಧುರಿ ತೊಟ್ಟಿದ್ದು ಬ್ಯಾಕ್‌ಲೆಸ್ ರವಿಕೆಯೇ. ಮುಂದೆ ಈ ಟ್ರೆಂಡ್ ‘ಖಳ್‌ನಾಯಕ್’ ಸಿನಿಮಾದ ಚೋಲಿ ಕೆ ಪೀಚೆ ಹಾಡಿನ ಲಂಬಾಣಿ ಉಡುಪಿನಲ್ಲೂ ಮುಂದವರಿದಿತ್ತು. ‘ಹಮ್ ಆಪ್ಕೆ ಹೈ ಕೌನ್’ ಚಿತ್ರದಲ್ಲೂ ಮಾಧುರಿ ತೊಟ್ಟಿದ ಬ್ಯಾಕ್‌ಲೆಸ್ ರವಿಕೆ ಆ ಕಾಲಕ್ಕೆ ಬೆತ್ತಲೆ ಬೆನ್ನಿನ ಉಡುಪಿಗೆ ಹೊಸ ಭಾಷ್ಯವೇ ಬರೆದಿತ್ತು. ಅಂದಿನಿಂದಲೂ ಫ್ಯಾಷನ್ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಕಾಯಂಗೊಳಿಸಿಕೊಂಡಿರುವ ಬ್ಯಾಕ್‌ಲೆಸ್ ಉಡುಪು ಇತ್ತೀಚೆಗೆ ಹೊಸ ವಿನ್ಯಾಸಗಳ ಉಡುಪುಗಳಲ್ಲಿ ಹೆಚ್ಚು ಟ್ರೆಂಡಿಯಾಗಿದೆ.

‘ಅನಾರ್ಕಲಿ ಕುರ್ತಾ, ಇಂಡೋ–ವೆಸ್ಟರ್ನ್‌ ಶೈಲಿಯ ಉಡುಪುಗಳು, ಬ್ಯಾಕ್‌ಲೆಸ್ ಕುರ್ತಾ, ಲೆಹಂಗಾ, ಗೌನ್‌ಗಳಲ್ಲಿ ಬ್ಯಾಕ್‌ಲೆಸ್ ಉಡುಪುಗಳು ಹೆಂಗಳೆಯರ ಮನಗೆದ್ದಿವೆ. ಕೆಲವು ಸರಳ ಟಿಪ್ಸ್‌ಗಳನ್ನು ಅನುಸರಿಸಿದರೆ ಬ್ಯಾಕ್‌ಲೆಸ್ ಉಡುಪುಗಳನ್ನು ಯಾವುದೇ ಮುಜುಗರವಿಲ್ಲದೇ ತೊಡಬಹುದು' ಎನ್ನುತ್ತಾರೆ ಫ್ಯಾಷನ್ ಡಿಸೈನರ್ ಸುಷ್ಮಾ.

ಸಾಮಾನ್ಯವಾಗಿ ಹೆಣ್ಣುಮಕ್ಕಳು ಮುಖದ ಸೌಂದರ್ಯಕ್ಕೆ ನೀಡುವಷ್ಟು ಗಮನವನ್ನು ಬೆನ್ನಿನ ಸೌಂದರ್ಯಕ್ಕೆ ನೀಡುವುದಿಲ್ಲ. ಆದರೆ, ಬ್ಯಾಕ್‌ಲೆಸ್ ಉಡುಪುಗಳನ್ನು ತೊಡುವವರು ಬೆನ್ನಿನ ಸೌಂದರ್ಯಕ್ಕೆ ಆದ್ಯತೆ ಕೊಡುವುದು ಅಗತ್ಯ. ಸಮಾರಂಭಗಳಲ್ಲಿ ಬ್ಯಾಕ್‌ಲೆಸ್ ಉಡುಪುಗಳನ್ನು ತೊಟ್ಟು ಎಲ್ಲರ ಆಕರ್ಷಣೆಯ ಕೇಂದ್ರವಾಗಬೇಕೆನ್ನುವ ಆಸೆಯುಳ್ಳವರು ತಮ್ಮ ದೇಹಸೌಷ್ಠವಕ್ಕೆ ತಕ್ಕಂತೆ ಬ್ಯಾಕ್‌ಲೆಸ್ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.

ಬ್ಯಾಕ್‌ಲೆಸ್ ಉಡುಪು ತೊಡುವವರು ಪಾರದರ್ಶಕ ಬ್ರಾ, ಸಿಲಿಕಾನ್ ಬ್ರಾ ಅಥವಾ ಉಡುಪಿನಲ್ಲಿಯೇ ಬರುವ ಪ್ಯಾಡ್ ಇರುವ ಬ್ರಾಗಳನ್ನು ಧರಿಸಬೇಕು. ಇದರಿಂದ ಬ್ಯಾಕ್‌ಲೆಸ್ ಉಡುಪು ದೇಹದ ಆಕಾರಕ್ಕೆ ತಕ್ಕಂತೆ ಹೊಂದಿಕೊಂಡು ತೊಟ್ಟವರ ಅಂದವನ್ನು ಹೆಚ್ಚಿಸುತ್ತದೆ.

ಬ್ಯಾಕ್‌ಲೆಸ್ ಗೌನ್‌ಗಳು ರಾತ್ರಿಯ ಔತಣಕೂಟಕ್ಕೆ ಹೇಳಿ ಮಾಡಿಸಿದಂತಿರುತ್ತವೆ. ಇನ್ನು ಮದುವೆ, ನಿಶ್ಚಿತಾರ್ಥ, ಶುಭಸಮಾರಂಭಗಳಲ್ಲೂ ಬ್ಯಾಕ್‌ಲೆಸ್ ಅನಾರ್ಕಲಿ ಕುರ್ತಾ, ಲೆಹಂಗಾ, ರವಿಕೆಗಳು ಹೆಂಗಳೆಯರ ನೆಚ್ಚಿನ ಆಯ್ಕೆಯಾಗಿವೆ.

ಬ್ಯಾಕ್‌ಲೆಸ್ ಉಡುಪು ತೊಟ್ಟಾಗ ಉದ್ದನೆಯ ಜಡೆ ಅಥವಾ ಕೂದಲು ಇಳಿಬಿಡುವ ಬದಲು ತುರುಬು ಅಥವಾ ಕೂದಲು ಎತ್ತಿಕಟ್ಟುವ ಹೇರ್‌ಸ್ಟೈಲ್ ಮಾಡಿಕೊಂಡರೆ ‘ಬೆನ್ನುಡಿ’ಯ ಸೊಗಸಿಗೆ ಪೂರಕವಾಗಿರುತ್ತದೆ. ದೇಹವನ್ನು ಬಾಗಿಸದೇ ನೇರಗೆ ಇರುವುದರಿಂದ ಬ್ಯಾಕ್‌ಲೆಸ್‌ ಉಡುಪಿನ ಸೊಗಸು ಇಮ್ಮಡಿಯಾಗುತ್ತದೆ. ಇಂತಹ ಉಡುಪುಗಳು ತೊಟ್ಟಾಗ ಆತ್ಮವಿಶ್ವಾಸದಿಂದ ಇರಬೇಕು. ಬೆನ್ನು ತೋರುತ್ತದೆ ಎನ್ನುವ ಆತಂಕವಿದ್ದರೆ ಧರಿಸಿದ ಉಡುಪಿನ ಜೊತೆಗೆ ನಿಮ್ಮ ವ್ಯಕ್ತಿತ್ವವೂ ಕಳಾಹೀನವಾಗುತ್ತದೆ ಎನ್ನುತ್ತಾರೆ ಫ್ಯಾಷನ್ ತಜ್ಞರು.

ಅಸ್ಮಿತಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.