ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಊಟ, ಮುಗಿಯದ ಪಾಠ!

Last Updated 3 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅಲ್ಲಿ ನೋಡು ಚಂದಮಾಮಾ... ಆ... ಅನ್ನು ಪುಟ್ಟಾ... ನಂ ಮನೆ ಬಂಗಾರ ಅಲ್ವಾ ನೀನು? ಸ್ವಲ್ಪನಾದ್ರೂ ತಿನ್ನು... ಜಾಣಮರಿ... (ಅನ್ನ ಕಂಡರೆ ಮನೆಯ ಮುಂದೆ ಹಾರಿ ಬಂದು ಕೂರುವ) ಕಾಗೆಗೊಂದು ತುತ್ತು, ನಿಂಗೊಂದು ತುತ್ತು, ಅಲ್ಲಿ ನೋಡು ಮಿಯಾಂವ್... ಪುಟ್ಟ ಪುಟ್ಟ ಕಳ್ಳ ಹೆಜ್ಜೆ ಹಾಕ್ಕೊಂಡು ಬರ್ತಾ ಇದೆ.. ನೀ ತಿನ್ನದಿದ್ರೆ ಅದು ತಿನ್ಕೊಂಡು ಹೋಗ್ಬಿಡತ್ತೆ. ಜಾಣ, ತಿನ್ನಮ್ಮಾ...

ಹೀಗೆಲ್ಲಾ ಪೂಸಿ ಹೊಡೆದೂ ಹೊಡೆದೂ ಮಕ್ಕಳಿಗೆ ನಾಲ್ಕು ತುತ್ತು ತಿನಿಸುವಷ್ಟರಲ್ಲಿ ಅಪ್ಪ–ಅಮ್ಮ ಅಥವಾ ಅಜ್ಜಿ-ತಾತಂದಿರಿಗೆ ಸಾಕು ಸಾಕಾಗುತ್ತದೆ. ಮಕ್ಕಳಿಗೆ ಉಣಿಸುವುದೆಂದರೆ ಅದೊಂದು ಹರಸಾಹಸವೇ ಸರಿ.

ಹೇಗಿದ್ವಿ? ಹೇಗಿದೀವಿ?
ಹಿಂದೆಲ್ಲ ಮನೆತುಂಬ ಜನರು, ಮಕ್ಕಳ ಸೈನ್ಯ. ಹಾಗಾಗಿ ತಿನ್ನಲು ಏನು ಕೊಟ್ಟರೂ ಒಬ್ಬರ ಮೇಲೊಬ್ಬರು ಪೈಪೋಟಿಗೆ ಬಿದ್ದು ತಿನ್ನುತ್ತಿದ್ದರು, ತಿಂದದ್ದೆಷ್ಟು ಎಂಬುದು ತಿಳಿಯದಂತೆ ಚಂದ ಬೆಳೆಯುತ್ತಿದ್ದರು. ಕಾಲ ಬದಲಾಗಿದೆ. ವಿಭಜಿತ ಕುಟುಂಬದಲ್ಲಿ ಸಾಮಾನ್ಯವಾಗಿ ಮನೆಗೊಂದೇ ಮಗು. ತಂದೆ ತಾಯಿಗಳಿಬ್ಬರೂ ಉದ್ಯೋಗಸ್ಥರು. ಮಗುವಿಗೆ ರಾಜ-ರಾಣಿ, ರಾಜಕುಮಾರ, ರಾಕ್ಷಸರ ಕಥೆಯನ್ನು ಹೇಳುತ್ತ, ಇಲ್ಲವೇ ಚಂದಮ್ಮನನ್ನು ತೋರಿಸುತ್ತ ತಿನ್ನಿಸುವ ವ್ಯವಧಾನವಿಲ್ಲ.

ಮಗು ಏನಾದರೂ ತಿಂದರೆ ಸಾಕು ಎಂದು, ಅದು ಕೇಳಿದ್ದನೆಲ್ಲಾ ಕೊಟ್ಟು ಹೊಟ್ಟೆ ತುಂಬಿಸುವ ಪರಿಪಾಠ ಬೆಳೆಯುತ್ತಿದೆ. ನನಗೆ ಗೊತ್ತಿರುವ ಒಬ್ಬರ ಮನೆಯಲ್ಲಿ ಮಗು ಹೆಚ್ಚು ತಿನ್ನಲಿ ಎಂದು ಬಾಯಿಗೆ ಅನ್ನ ತುರುಕುತ್ತಿದ್ದರು. ಕೆಲವು ಬಾರಿ ಅದು ಅನ್ನವೋ ದ್ರವಪದಾರ್ಥವೋ ಎಂದು ತಿಳಿಯದ ಹಾಗೆ ಮಿಕ್ಸಿಯಲ್ಲಿ ಅನ್ನ–ಸಾರು/ಹುಳಿಯನ್ನು ಮಿಕ್ಸ್ ಮಾಡಿ ಅರೆದು ತಿನ್ನಿಸುತ್ತಿದ್ದರು (ಹಸುವಿಗೆ ಗೊಟ್ಟದಿಂದ ಔಷಧಿ ಹಾಕುವ ರೀತಿ). ‘ಹರಳೆಣ್ಣೆ ಕುಡಿದ ಮುಖ’ ಎನ್ನುವ ಗಾದೆಯ ಹಾಗಿರುತ್ತಿತ್ತು ಆ ಮಗುವಿನ ಮುಖ. ಅಮ್ಮನಿಗೆ ‘ಮಗು ಹೊಟ್ಟೆ ತುಂಬ ತಿಂತು’ ಎನ್ನುವ ಸಮಾಧಾನ.‌

ಏನು ತಿನ್ನಬೇಕು ಮತ್ತು ಹೇಗೆ ತಿನ್ನಬೇಕೆನ್ನುವ ಅರಿವು ಹಿರಿಯರಿಗೆ ಇರದಿದ್ದರೆ ಮಕ್ಕಳ ಪಾಡು ಹಾಗೆಯೇ... ರುಚಿ ಇರಲಿ ಬಿಡಲಿ, ಹಸಿವಿರಲಿ ಬಿಡಲಿ, ಸಮಯ ಇರಲಿ ಬಿಡಲಿ, ಮಗು ತಿನ್ನು ಅಂದಾಗ ತಿನ್ನಬೇಕು. ತಿನ್ನದಿದ್ದರೆ ಟೀವಿ ಹಾಕಿ ಪೂಸಿ ಹೊಡೆಯಬೇಕು. ಅದೂ ಆಗದಿದ್ದರೆ ಪೊಲೀಸ್, ಕಳ್ಳ-ಗುಮ್ಮ ಕೊನೆಗೆ ರಾಕ್ಷಸ ಬರುತ್ತಾನೆ. ಅವನು ಕೋರೆಹಲ್ಲಿನಿಂದ ಕಚ್ಚುತ್ತಾನೆ ಎಂದಾಗಲಂತೂ ಮಗು ತಿಂದೇ ತಿನ್ನುತ್ತದೆ ಎಂಬ ನಂಬಿಕೆ ಪೋಷಕರದು. ನಮ್ಮ ಹಿಂದಿನ ಕ್ರಾಸ್‌ನಲ್ಲಿ ಇರುವ ತಾಯಿಯೊಬ್ಬರು ತಮ್ಮ ಮಗು ಶಾಲೆಗೆ ಹೋಗುವಾಗ ಅದಕ್ಕೆ ತಿನ್ನಿಸಲು ‘ಪದ್ದೂ ತಿನ್ನೋ ತಿನ್ನೋ. ಇಲ್ದಿದ್ರೆ ಹೊಡೆದುಬಿಡ್ತೀನಿ.

ಆಟೋ ಬರೋ ಟೈಮ್ ಆಯ್ತು ಬೇಗ್ ಬೇಗ್ ತಿನ್ನೋ’ ಅಂತ ಕಿರುಚುವುದು ಅವರ ರಸ್ತೆಗೆ ಮಾತ್ರವಲ್ಲ; ನಮ್ಮ ಮುಂದಿನ ರಸ್ತೆಯವರಿಗೂ ಕೇಳುತ್ತಿರುತ್ತದೆ. ಮಗು ಶಾಲೆಗೆ ಹೋದ ಮೇಲೆ ಉಸ್ಸಪ್ಪಾ ಅಂತ ಅವರು ಕೂರೋದೂ ಗೊತ್ತಾಗುತ್ತೆ. ಆ ತಾಯಿಯ ಪಾಡು ನೋಡಿದರೆ - ‘ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನಗಳ ಈ ಬದುಕಿನಲಿ’ ಎನ್ನುವ ಜಿ.ಎಸ್.ಎಸ್ ಅವರ ಸಾಲುಗಳು, ‘ಎಷ್ಟು ಕಷ್ಟವೋ ಮಕ್ಕಳಿಗೆ ಉಣಿಸುವುದೆಂಬುದು’ ಎಂದು ನನಗೆ ಅನಿಸುತ್ತದೆ. ‘ಆಹಾರವೇ ಔಷಧ’ ಎಂಬುದು ನಮಗಿಂದು ಮರೆತುಹೋಗಿದೆ. ಪರಿಪೂರ್ಣ ಆಹಾರದಲ್ಲಿ ಹಿರಿಯರು ಕಾಯ್ದುಕೊಳ್ಳುತ್ತಿದ್ದ ಸಮತೋಲನವನ್ನು ನಾವು ಮತ್ತೆ ತರಬೇಕು. ಅದು ಹೇಗೆ ಎನ್ನುವ ಯಕ್ಷಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು.

ಅಡುಗೆ ಮಾಡುವ ಕಲೆ
ಅಡುಗೆ ಮಾಡುವುದು ಒಂದು ಕಲೆ. ತಿನ್ನುವುದು ಕೂಡ ಕಲೆಯೇ. ಇವತ್ತಿನ ಯಾವ ಮಗುವನ್ನಾದರೂ ಕೇಳಿ -  ‘ನಿನಗೆ ಏನು ಇಷ್ಟ?’ ಎಂದು, ಅದು ‘ನೂಡಲ್ಸ್’ ಎನ್ನುತ್ತದೆ. ‘ಮತ್ತೇನು ಇಷ್ಟ?’ ಎಂದರೆ ‘ಲೇಸ್, ಕುರುಕುರೆ’ ಎನ್ನುತ್ತದೆ. ಹಿಂದಿನ ಕಾಲದಲ್ಲಾದರೆ ಮಕ್ಕಳಿಂದ ‘ಚಕ್ಕುಲಿ, ಕೋಡುಬಳೆ, ಪುಳ್ಳಂಗಾಯಿಉಂಡೆ, ಲಾಡು, ಮುಚ್ಚೋರೆ, ಕಡಬು, ಕಜ್ಜಾಯ’ ಎನ್ನುವ ಉತ್ತರಗಳು ಬರುತ್ತವೆ, ಇವೆಲ್ಲ ಪೋಷಕಾಂಶಯುಕ್ತ ಆಹಾರಗಳು.

ನಮ್ಮ ಆಚರಣೆಗಳಲ್ಲೂ ಆಹಾರಕ್ಕೆ ಪ್ರಮುಖ ಪಾತ್ರವಿತ್ತು. ಹುಟ್ಟಿದ ಹಬ್ಬಕ್ಕೆಂದರೆ ಎಷ್ಟೊಂದು ಬಗೆಯ ಉಂಡೆಗಳು - ಪುರಿ ಉಂಡೆ, ಕಡಲೆ ಉಂಡೆ, ಅವಲಕ್ಕಿ ಪುರಿ ಉಂಡೆ, ಭತ್ತದ ಅರಳಿನ ಉಂಡೆ, ಕಡಲೆ ಬೀಜದ ಉಂಡೆ, ಚಿಗಳಿ(ಎಳ್ಳಿನ)ಉಂಡೆ, ತಂಬಿಟ್ಟಿನ ಉಂಡೆ... ಹೀಗೆ. ಹಳೆಯದೆಲ್ಲ ಸರಿ, ಹೊಸದೆಲ್ಲ ತಪ್ಪು ಎಂದಲ್ಲ. ‘ಹೊಸ ಯುಕ್ತಿ ಹಳೆ ತತ್ತ್ವ ಒಡಗೂಡೆ ಧರ್ಮ’ ಎನ್ನುವ ಹಾಗೆ ಹಳೆಯದನ್ನು ಹಳೆಯದಾಗಿ ಮಾತ್ರ ನೋಡದೆ ಹೊಸಬಗೆಯಲ್ಲಿ ನೋಡಲೂ ಸಾಧ್ಯ ಮಾಡಿಕೊಳ್ಳಬೇಕು.

ಏನು ಮಾಡಬೇಕು...
ಇವತ್ತಿನ ನಮ್ಮ ಬದುಕು ಧಾವಂತದ್ದು, ಯಾವುದಕ್ಕೂ ಸಮಯವಿಲ್ಲ ಎನ್ನುವುದೇನೋ ಸರಿ. ಇಂಥ ಬದುಕಿನ ಮಧ್ಯೆಯೂ ಮಕ್ಕಳಿಗೆ ನಮ್ಮ ಆಹಾರ ಪದ್ದತಿಯಲ್ಲಿ ಆಸಕ್ತಿ ಉಂಟುಮಾಡುವಂಥ ಕೆಲವು ಪ್ರಯೋಗಗಳನ್ನು ಮಾಡಬಹುದು.

ಮೊದಲ ಪ್ರಯೋಗವೆಂದರೆ ಎಲ್ಲರೂ ಒಟ್ಟಿಗೆ ಕುಳಿತು ತಿನ್ನುವುದು. ಹರಟುತ್ತಾ, ನಗುತ್ತಾ ನಾವು ತಿಂದರೆ ಮಗು ತಾನೂ ತಿನ್ನುತ್ತದೆ. ಎರಡನೆಯದು, ಯಾವುದೇ ಮಗು ಒಮ್ಮೆ ಮೆಚ್ಚಿದ್ದನ್ನು ಮತ್ತೊಮ್ಮೆ ಮೆಚ್ಚುವುದಿಲ್ಲ. ದಿನವೂ ಅದಕ್ಕೆ ಬೇರೆಯದೇ ಆಹಾರ, ರುಚಿ ಬೇಕು. ಉದಾಹರಣೆಗೆ ನೀವು ಮಗುವಿಗೆ ದೋಸೆ ಇಷ್ಟವೆಂದು ದಿನವೂ ಮಾಡಿದರೆ ಖಂಡಿತಾ ಅದು ಇಷ್ಟಪಡುವುದಿಲ್ಲ (ದೊಡ್ಡವರಿಗಾದ್ರೂ ಅಷ್ಟೇ ಅನ್ನಿ...!). ಆದರೆ ದೋಸೆಯಲ್ಲಿಯೇ ಬೇರೆ ಬೇರೆ ರೀತಿ ಮಾಡಿದರೆ ವಾರಪೂರ್ತಿ ತಿನ್ನಬಹುದು.

ಉದಾಹರಣೆಗೆ, ಸೊಪ್ಪಿನ ದೋಸೆ ಹಸಿರು ಬಣ್ಣದ್ದಾಗಿರುತ್ತದೆ. ಹಸಿರಿನ ವಸ್ತುಗಳನ್ನು ಸಮೀಕರಿಸಿ ಮಗುವಿಗೆ ಹೇಳಿದರೆ ಆಸಕ್ತಿಯಿಂದ ತಿನ್ನುತ್ತದೆ. ದೋಸೆಗೆ ಕ್ಯಾರೆಟ್ ಹಾಕಿದರೆ ಅದರ ಬಣ್ಣ ಕಿತ್ತಳೆ ಬಣ್ಣದ್ದಾಗಿರುತ್ತದೆ. ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ಆಕಾರಗಳಲ್ಲಿ ದೋಸೆ ಮಾಡಿಕೊಟ್ಟರೆ ಯಾವ ಮಗುವೂ ಬೇಡ ಎನ್ನುವುದಿಲ್ಲ. ತುಪ್ಪದ ದೋಸೆ, ಬೆಣ್ಣೆ ದೋಸೆ, ಟೊಮೆಟೊ ದೋಸೆ, ಈರುಳ್ಳಿ ದೋಸೆ, ಸಿಹಿದೋಸೆ, ಸೌತೆಕಾಯಿಯ ದೋಸೆ, ಹೆಸರಕಾಳಿನದೋಸೆ, ಹೀರೇಕಾಯಿ ದೋಸೆ - ಹೀಗೆ ನೂರೆಂಟು ಬಗೆಯ ದೋಸೆಗಳ ಜೊತೆಗೆ ಅದನ್ನು ನೆಂಚಿಕೊಳ್ಳಲು ಕಾಯಿ ಚಟ್ನಿ, ಕಡಲೆಬೇಳೆ ಚಟ್ನಿ, ಈರುಳ್ಳಿ ಚೆಟ್ನಿ, ಬೆಳ್ಳುಳ್ಳಿ ಚಟ್ನಿ, ಸಾಂಬರ್, ಸಾಗು, ಬೇರೆ ಬೇರೆ ತರಕಾರಿಗಳ ಗೊಜ್ಜು, ಪಲ್ಯ ಹೀಗೆ ಎಷ್ಟು ಬಗೆಯ ಸ್ವಾದ... ನಾಲಗೆಗೂ ರುಚಿ, ಕಣ್ಣಿಗೂ ಹಬ್ಬ!

ಸಾಮಾನ್ಯವಾಗಿ ನಾವು ಉಪಾಹಾರಕ್ಕೆ ಒಂದೇ ತಿಂಡಿ ಮಾಡುತ್ತೇವೆ. ಕೆಲವೊಮ್ಮೆ ಎರಡು ತಿಂಡಿ ಮಾಡುವುದು ಒಳ್ಳೆಯದು. ಉದಾ: ಉಪ್ಪಿಟ್ಟು-ಕೇಸರಿ ಬಾತ್. ಮಗುವಿಗೆ ಕೇಸರಿ ಬಾತ್ ಚೆನ್ನ ಎನಿಸಿದರೆ ಅದನ್ನೇ ಹೆಚ್ಚು ತಿನ್ನುತ್ತದೆ. ರುಚಿಯಾಗಿದ್ದರೆ ಉಪ್ಪಿಟ್ಟನ್ನೇ ಹೆಚ್ಚು ತಿನ್ನುತ್ತದೆ.

ಪೂರಿ ಮಾಡುವಾಗ ಗುಂಡಗೆ ಮಾಡುವ ಬದಲು ಮಾವಿನಕಾಯಿಯಾಕಾರವೋ, ಮೊಟ್ಟೆಯಾಕಾರವೋ, ತ್ರಿಕೋನಾಕಾರವಾಗಿಯೋ ಮಾಡಿಕೊಟ್ಟರೆ ಖಂಡಿತ ಬೇಡ ಎನ್ನುವುದಿಲ್ಲ. ಚೌಕದ ಬಟ್ಟಲಿದ್ದರೆ ಅದರಿಂದ ಪೂರಿಗಾಗಿ ಲಟ್ಟಿಸಿದ ಹಿಟ್ಟನ್ನು ಕತ್ತರಿಸಿ, ಕರಿಯಿರಿ. ಮಕ್ಕಳ ಮುಖ ಅರಳುವುದನ್ನು ನೋಡಿ.

ನಮ್ಮ ಮೂಲ ಆಹಾರಧಾನ್ಯಗಳಾದ ಗೋಧಿ, ರಾಗಿ, ಕಡಲೇಕಾಳು, ಹೆಸರುಕಾಳು, ಮಡಕೆಕಾಳು, ಹುರಳಿಕಾಳು, ಮೆಂತ್ಯ, ಸೀಮೆಅಕ್ಕಿ ಮೊದಲಾದವುಗಳನ್ನು ಮೊಳಕೆ ಕಟ್ಟಿ ಒಣಗಿಸಿ ಜೊತೆಗೆ ನೆನೆಸಿ ಒಣಗಿಸಿದ ಅಕ್ಕಿ, ನವಣೆ, ಸಜ್ಜೆ, ಬಾರ್ಲಿಯನ್ನೂ ಸೇರಿಸಿ ಪುಡಿಮಾಡಿಟ್ಟುಕೊಂಡು ಅದಕ್ಕೆ ತೆಂಗಿನಕಾಯಿತುರಿ, ಬೆಲ್ಲ ಹಾಕಿ ಹಾಲಿನಲ್ಲಿ ಕಲೆಸಿ (ಹಿಂದೆಲ್ಲ ನಮ್ಮ ಅಪ್ಪ ಅಮ್ಮ ಅಜ್ಜಿಯರು ಹುರಿಹಿಟ್ಟು ಮಾಡಿಕೊಡುತ್ತಿದ್ದರಲ್ಲಾ ಹಾಗೆ). ಚಾಕೊಲೇಟ್ ಥರ ಪುಟ್ಟ ಪುಟ್ಟ ಉಂಡೆ ಮಾಡಿ ಅದರ ಮೇಲೊಂದು ಬಾದಾಮಿಯನ್ನೋ, ದ್ರಾಕ್ಷಿಯನ್ನೋ ಇರಿಸಿ ಕೊಟ್ಟರೆ ಬೇಡ ಎನ್ನುವ ಮಕ್ಕಳಿರುವರೇ...? ಇದೇ ಪುಡಿಯಿಂದ ಕ್ಯಾರೆಟ್, ಈರುಳ್ಳಿ ಹಾಕಿದ ಅಂಗೈ ಅಗಲದ ಪುಟಾಣಿ ರೊಟ್ಟಿಗಳನ್ನು ಮಾಡಿಕೊಟ್ಟರೆ ಆರೋಗ್ಯಕ್ಕೂ ಸರಿ; ಮಕ್ಕಳ ಮನಸ್ಸಿಗೂ ಹಿತ. ನೋಡಿದ ಕೂಡಲೇ ತಿನ್ನುವ ಆಸೆಯಾದರೆ ಜೀರ್ಣಕ್ಕೆ ಬೇಕಾದ ಕಿಣ್ವ(ಎನ್ಝೈಮ್ಸ್)ಗಳು ಉತ್ಪತ್ತಿಯಾಗುತ್ತವೆಂಬುದು ಆಹಾರ ತಜ್ಞರ ಅಭಿಪ್ರಾಯ.

ಬಡಿಸುವುದಕ್ಕೂ ರೀತಿ-ನೀತಿ!
ತಿಂಡಿಯನ್ನು ಹೇಗೆ ಸರ್ವ್ ಮಾಡುತ್ತೇವೆ ಎಂಬುದನ್ನು ‘ಗಾರ್ನಿಷಿಂಗ್’ ಎನ್ನುತ್ತಾರೆ. ಅದು ಕೇವಲ ಫ್ಯಾಷನ್ ಮಾತ್ರವಲ್ಲ, ಮನಕ್ಕೆ ಹಿತ ಕೊಡುವ ಕ್ರಮ. ಹಿಂದೆಲ್ಲ ಬಾಳೆಯೆಲೆಯ ಮೇಲಿನ ಊಟ ತಿಂಡಿ ಬಲು ರುಚಿ ಇರುತ್ತಿತ್ತು. ಜೊತೆಗೆ ಹರಿತ್ತಿನ ಮೂಲಕ ಆರೋಗ್ಯವೂ ಇತ್ತು. ಬಿಸಿ ಬಿಸಿ ಕೆಂಪಕ್ಕಿ ಅನ್ನ, ಅದರ ಮೇಲೆ ಒಂದು ಹನಿ ತುಪ್ಪ, ಚಿಟಿಕೆ ಉಪ್ಪು- ಎಂಥ ರುಚಿ ಬಾಳೆ ಎಲೆ ಊಟದ ಗಮ್ಮತ್ತು. ಬಾಳೆಯೆಲೆಯನ್ನು ದಿನವೂ ಬೇರೆ ಬೇರೆ ಆಕಾರವಾಗಿ ಕತ್ತರಿಸಿ (ರೌಂಡ್, ಸ್ಕ್ವೇರ್, ತ್ರಿಕೋನ, ಅಷ್ಟಭುಜ ಹೀಗೆ) ಪ್ಲೇಟ್ ಮೇಲಿಟ್ಟರೆ ಎಷ್ಟೊಂದು ಚಂದ.

ಇದು ನನ್ನ ಅನುಭವ ಕೂಡ. ನಮ್ಮ ಕುಟುಂಬದ ಮಕ್ಕಳು ಹೀಗೆಲ್ಲ ಅಲಂಕರಿಸಿದ ಪ್ಲೇಟ್ ನೋಡಿದಾಕ್ಷಣ ‘ಆಹಾ’ ಎನ್ನುತ್ತ ಕಣ್ಣರಳಿಸಿ, ನಾಲಗೆ ಸ್ರವಿಸುತ್ತ ಊಟ ತಿಂಡಿ ಸವಿಯುವುದನ್ನು ಕಂಡಿದ್ದೇನೆ.ಕ್ಯಾರೆಟ್, ಸೌತೆಕಾಯಿ, ಟೊಮೆಟೊ, ಈರುಳ್ಳಿಗಳನ್ನು ವಿವಿಧ ಆಕೃತಿಗಳಲ್ಲಿ ಕತ್ತರಿಸಿ ಡಿಸೈನ್ ಮಾಡಿ ಪ್ಲೇಟ್ ಮೇಲಿಡಿ. (ನಾವು ಆ ದಿನ ಮಾಡುವ ತಿಂಡಿಗೆ ಬಳಸಿದ ತಕರಾರಿಗಳನ್ನೇ ವಿವಿಧ ರೀತಿಯಲ್ಲಿ ಅಲಂಕರಿಸಬಹುದು) ಉದಾ: ವಕ್ರವಾದ ಹಸಿಮೆಣಸಿನಕಾಯಿಯನ್ನು ಅರ್ಧ ಚಂದ್ರನಂತೆ ಇಟ್ಟು ಅದರ ಮೇಲೆ ಕರಿಬೇವಿನ ಎಲೆಯನ್ನೋ, ಕೊತ್ತಂಬರಿ ಸೊಪ್ಪಿನ ಕುಡಿಯನ್ನೋ ಇರಿಸಿದರೆ ಬೋಟ್ ತರಹ ಕಾಣುತ್ತದೆ. ಉಪ್ಪಿಟ್ಟನ್ನು ತಟ್ಟೆಯಲ್ಲಿ ಬಿಂದಿಗೆಯಾಕಾರದಲ್ಲಿಟ್ಟು ಸುತ್ತಲೂ ಕಡಲೆಬೀಜ, ಕಡಲೆಬೇಳೆ ಮುಂತಾದವನ್ನು ಜೋಡಿಸಬಹುದು. ಡಿಸೈನ್ ಬಟ್ಟಲಿದ್ದರೆ ಅದರಲ್ಲಿ ಉಪ್ಪಿಟ್ಟನ್ನು ತುಂಬಿ ಬಗ್ಗಿಸಿದರೆ ಡಿಸೈನ್ ಬಟ್ಟಲಿನಾಕಾರದಲ್ಲಿ ಉಪ್ಪಿಟ್ಟೂ ಸಂಭ್ರಮಿಸುತ್ತದೆ! ಬ್ರೆಡ್‌ನ್ನು ಬೇರೆ ಬೇರೆ ಆಕಾರಗಳಲ್ಲಿ ಕತ್ತರಿಸಿ ಅದಕ್ಕೆ ಬೇರೆ ಬೇರೆ ತರಕಾರಿಗಳಿಂದ ಅಲಂಕರಿಸಬಹುದು.

ಒಂದಿಷ್ಟು ಸಮಯ ಕೊಡೋಣ: ನಮ್ಮ ನಿಜವಾದ ಆಸ್ತಿ ಮಕ್ಕಳ ಆರೋಗ್ಯ ಮತ್ತು ಆನಂದ. ಹಾಗಾಗಿ ಟಿ.ವಿ. ಅಥವಾ ಮೊಬೈಲ್, ಕಂಪ್ಯೂಟರ್ ಕೈಗೆ ನಮ್ಮ ಮಕ್ಕಳನ್ನು ಕೊಡದೆ, ಒಂದೆರೆಡು ನಿಮಿಷ ಪ್ರೀತಿಯಿಂದ ತಲೆ ನೇವರಿಸಿ, ಅವರಿಗೆ ಪ್ರಿಯವಾಗುವ ಹಾಗೆ ಪುಟ್ಟ ಪುಟ್ಟ ಕಥೆಗಳನ್ನು ಹೇಳುತ್ತಲೇ ನೀವೂ ತಿಂಡಿ ತಿನ್ನಿ. ಕಥೆಗಳ ಜೊತೆಗೆ ಮಕ್ಕಳನ್ನೂ ಪಾತ್ರದ ಜೊತೆ ಸಮೀಕರಿಸಿ, ಅಥವಾ ಅವರನ್ನೂ ಒಂದು ಪಾತ್ರವಾಗಿಸಿ.

ಇದಕ್ಕೆಲ್ಲ ಸಮಯ ಎಲ್ಲಿದೆ ಎನ್ನುವಿರಲ್ಲಾ? ನೀವು ಸರ್ಕಸ್ ಮಾಡಿ ತಿನ್ನಿಸುವ ಅರ್ಧದಷ್ಟು ಸಮಯ ಇದಕ್ಕೆ ಸಾಕು. ನಾನು ಹಲವು ತಾಯಂದಿರು ಮಕ್ಕಳನ್ನು ಬೈಯುವುದನ್ನು ನೋಡಿದ್ದೇನೆ. ‘ಇಷ್ಟಪಟ್ಟು ಮಾಡಿದ್ದೇನೆ, ಸೊಕ್ಕು ನೋಡು ಇವನದು!’, ‘ಎಲ್ಲಿಗೆ ಹೋಗ್ತೀಯಾ ಹಸಿವಾದ್ರೆ ಬಂದೇ ಬರ್ಬೇಕು’. ‘ದುರಹಂಕಾರ, ನಮ್ ಕಾಲ್ದಲ್ಲಿ ಹೀಗಿರ್ಲಿಲ್ಲಪ್ಪಾ. ಕೊಟ್ರೆ ಸಾಕು ಅಂತ ಖುಷಿಯಾಗಿ ತಿನ್ತಿದ್ವಿ’ ಎಂಬೆಲ್ಲ ಡೈಲಾಗ್‌ಗಳು ಉದುರುತ್ತವೆ. ಹೀಗೆಲ್ಲ ಕಂದಮ್ಮಗಳಿಗೆ ಬೈದರೆ ಮತ್ತೆ ಅವಕ್ಕೆ ತಿನ್ನುವ ಆಸೆಯಾಗುವುದಾದರೂ ಹೇಗೆ?

ಕೆಲವು ಸಂದರ್ಭಗಳಲ್ಲಿ ಮಕ್ಕಳು ತಿನ್ನುವಾಗ ಚೆಲ್ಲಿಬಿಡುತ್ತವೆ. ಅದು ಸಹಜ ಕೂಡ. ಚೆಲ್ಲಿದ ಸಂಕಟಕ್ಕಿಂತ ಅಪ್ಪನ-ಅಮ್ಮನ ಬೈಗುಳದ ಭಯವೇ ಹೆಚ್ಚಾಗಿ, ತಿನ್ನುವುದೇ ಬೇಡ ಎನಿಸುವುದೂ ಉಂಟು. ‘ಹೋಗಲಿಬಿಡು ಕಂದಾ, ಬೇರೆ ಪ್ಲೇಟ್ ತೆಗೆದುಕೊಂಡು ಬಾ. ಒಮ್ಮೊಮ್ಮೆ ಹೀಗಾಗುತ್ತೆ. ಸ್ವಲ್ಪ ಹುಷಾರಾಗಿರಬೇಕು’ ಎಂದರೆ ಮಗು ಸಮಾಧಾನವಾಗಿ ತಿನ್ನುತ್ತದೆ. ನಾವೆಲ್ಲರೂ ತಿಳಿದಿರಿಬೇಕಾದ ಸತ್ಯವೆಂದರೆ ಆಹಾರ ಜೀರ್ಣವಾಗಲು ಮನಸ್ಸೂ ಪ್ರಪುಲ್ಲವಾಗಿರಬೇಕು. ಹಾಗಾದರೆ ಮಾತ್ರ ಆಹಾರ ಔಷಧವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT