ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಗೆ ರತ್ನಗಂಬಳಿ ಸ್ವಾಗತ

‘ಉದ್ಯಮ ಸ್ನೇಹಿ’ ಶ್ರೇಯಾಂಕ: ಬಂಡವಾಳ ಹೂಡಿಕೆಗೆ ಉತ್ತೇಜನ
Last Updated 3 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಆಹಾರ ಸಂಸ್ಕರಣೆ ಉದ್ದಿಮೆಗಳಲ್ಲಿ ಹೂಡಿಕೆದಾರರಿಗೆ ಕೆಂಪುರತ್ನಗಂಬಳಿ ಸ್ವಾಗತ ಕೋರಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಗುತ್ತಿಗೆ ಕೃಷಿ ಮತ್ತು ಕೃಷಿ ಮೂಲಸೌಕರ್ಯ ರಂಗಗಳಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳು ಇವೆ ಎಂದು ಹೇಳಿದ್ದಾರೆ.

ಆಹಾರ ಸಂಸ್ಕರಣೆ ಉದ್ದಿಮೆಗೆ ಸಂಬಂಧಿಸಿದಂತೆ ಶುಕ್ರವಾರ ಇಲ್ಲಿ ಆರಂಭಗೊಂಡ ಮೂರು ದಿನಗಳ ಜಾಗತಿಕ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

‘ವಿಶ್ವವು ಹೊಸ ಜೀವನಶೈಲಿಯ ಕಾಯಿಲೆಗಳ ವಿರುದ್ಧ ಹೋರಾಡುತ್ತಿರುವಾಗ ಭಾರತದ ಸಾಂಪ್ರದಾಯಿಕ ಆಹಾರವು ಈ ಸಮಸ್ಯೆಗೆ ಸೂಕ್ತ ಉತ್ತರವಾಗಿರಲಿದೆ. ಕೃತಕ ಬಣ್ಣ, ರಾಸಾಯನಿಕಗಳು ಮತ್ತು ಸಂರಕ್ಷಕಗಳಿಂದ ದೇಶಿ ಆಹಾರ ಗಾವುದ ದೂರ ಇದೆ.

‘ದೇಶಿ ಸಾಂಪ್ರದಾಯಿಕ ಆಹಾರದ ಆರೋಗ್ಯದ ಪ್ರಯೋಜನಗಳು ಹೆಚ್ಚಿಗೆ ಇವೆ. ಹೊಸ ಉದ್ದಿಮೆ ಆರಂಭಿಸುವುದು ಈಗ ಮೊದಲಿಗಿಂತ ಹೆಚ್ಚು ಸುಲಭವಾಗಿದೆ. ಭಾರತದಲ್ಲಿಯೇ ತಯಾರಿಸಿ ಆಂದೋಲನದಲ್ಲಿ ಆಹಾರ ಸಂಸ್ಕರಣೆಗೆ ಆದ್ಯತಾ ವಲಯವನ್ನಾಗಿ ಗುರುತಿಸಲಾಗಿದೆ’ ಎಂದರು.

ಪ್ರಮುಖ ಉದ್ದಿಮೆ: ಆಹಾರ ವಲಯವು ಪ್ರಮುಖ ಉದ್ದಿಮೆಯಾಗಿ ಬೆಳೆಯಲಿದ್ದು ಇಲ್ಲಿ ಬಂಡವಾಳ ಹೂಡಿಕೆ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ದೇಶಿ ಮತ್ತು ಜಾಗತಿಕ ಹೂಡಿಕೆದಾರರಿಗೆ ಮನವಿ ಮಾಡಿಕೊಂಡರು.

’ಆರ್ಥಿಕತೆ ಬೆಳೆದಂತೆ ಜನರ ಜೀವನಶೈಲಿಯೂ ಬದಲಾಗುತ್ತಿದೆ. ಆಹಾರ ಉದ್ದಿಮೆಯು ಇದರ ಪ್ರಮುಖ ಫಲಾನುಭವಿಯಾಗಿದೆ. ನಗರಗಳಲ್ಲಿ ಇದರ ಪರಿಣಾಮ ಕಂಡುಬರುತ್ತಿದೆ’ ಎಂದರು.

ಹೂಡಿಕೆದಾರರಿಗೆ ರಾಜ್ಯದ ಆಹ್ವಾನ
ನವದೆಹಲಿ:
‘ಉದ್ಯೋಗ ಸೃಷ್ಟಿಯು ದೇಶ ಎದುರಿಸುತ್ತಿರುವ ಅತಿದೊಡ್ಡ ಸವಾಲಾಗಿದ್ದು, ಯುವಜನರ ಕೈಗೆ ಕೆಲಸ ಕೊಡುವ ಉತ್ತಮ ಉದ್ದೇಶದಿಂದ ಉದ್ಯಮಿಗಳು ಕರ್ನಾಟಕದತ್ತ ಧಾವಿಸಬೇಕು’ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಕೋರಿದರು.

ಜಾಗತಿಕ ಆಹಾರ ಮೇಳದಲ್ಲಿ ಅವರು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು. ‘ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಕರ್ನಾಟಕ ಮೊದಲಿನಿಂದಲೂ ಮುಂಚೂಣಿಯಲ್ಲಿದೆ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡುವವರ ಪರವಾದ ನೀತಿಯನ್ನು ಜಾರಿಗೊಳಿಸಿ ಉತ್ತೇಜನ ನೀಡುತ್ತಿರುವ ರಾಜ್ಯ ಸರ್ಕಾರ, ಪಾರದರ್ಶಕ ವ್ಯವಸ್ಥೆಯಿಂದಾಗಿ ಉದ್ಯಮ ಸ್ನೇಹಿ ಎಂದೇ ಹೆಸರಾಗಿದೆ’ ಎಂದರು.

‘ರಫ್ತು ಉದ್ಯಮಕ್ಕೆ ಸಹಕಾರಿಯಾದ ವಾತಾವರಣ ಇರುವ ಕರ್ನಾಟಕದಲ್ಲಿ ಕಚ್ಚಾ ಸಾಮಗ್ರಿಯ ಲಭ್ಯತೆಯೂ ಸಾಕಷ್ಟು ಪ್ರಮಾಣದಲ್ಲಿದೆ. ಆಹಾರ ಸಂಸ್ಕರಣೆ ಕ್ಷೇತ್ರಕ್ಕೆ ನೆರವಾಗುವ ಕೃಷಿ, ತೋಟಗಾರಿಕೆಯಲ್ಲಿ ರೈತರು ತೊಡಗಿದ್ದಾರೆ. ಹೊಸ ಆಲೋಚನೆಗಳೊಂದಿಗೆ ರಾಜ್ಯದಲ್ಲಿ ಹೂಡಿಕೆ ಮಾಡಿರುವ ಉತ್ಸಾಹಿ ಉದ್ಯಮಿಗಳಿಗೆ ಆಹಾರ ಸಂಸ್ಕರಣೆ ಕ್ಷೇತ್ರ ಲಾಭ ತಂದುಕೊಟ್ಟಿದೆ. ಮೂಲ ಸೌಲಭ್ಯಗಳ ವಿಷಯದಲ್ಲೂ ಕರ್ನಾಟಕ ದೇಶದ ಇತರ ರಾಜ್ಯಗಳಿಗಿಂತ ಮುಂದಿದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

*


ಆಹಾರ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಇಡೀ ವಿಶ್ವ ಭಾರತದತ್ತ ನೋಡುತ್ತಿದೆ. ಆಹಾರ ಸಂಸ್ಕರಣೆ ವಹಿವಾಟು ವಿಸ್ತರಿಸಲು ಸಂಸ್ಥೆ ಎದುರು ನೋಡುತ್ತಿದೆ.
ಅಮಂಡಾ ಸೌರ್ರಿ,
ಯೂನಿಲೀವರ್‌ನ ಜಾಗತಿಕ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT