7

ಅವಳ ಬದುಕು ಅವಳದೇ ಆಯ್ಕೆ

Published:
Updated:
ಅವಳ ಬದುಕು ಅವಳದೇ ಆಯ್ಕೆ

ಸುಮಾರು ಮೂವತ್ತು ವರ್ಷಗಳ ಹಿಂದಿನ ನೆನಪು. ಅಕ್ಕನಂತಿದ್ದ ನಂದಿನಿಯ ಮದುವೆಯ ಮುನ್ನಾ ದಿನ. ಸಾವಿರಕ್ಕೂ ಮೀರಿ ಆಮಂತ್ರಣ ಪತ್ರಿಕೆ ಹಂಚಿದ್ದ ಭರ್ಜರಿ ಮದುವೆಯ ಸಡಗರ ಮನೆ ತುಂಬ. ಮೆಹಂದಿ ಎನ್ನುವ ಶಾಸ್ತ್ರವೇ ಇಲ್ಲದಿದ್ದರೂ ಆಸೆಪಟ್ಟು ನಂದಿನಿ ಅಮ್ಮ, ಅಜ್ಜಿಯಂದಿರ ಬೈಗುಳ ಕೇಳುತ್ತಾ ಮೆಹಂದಿ ಹಚ್ಚಿಕೊಳ್ಳುತ್ತಿದ್ದಾಗ ಕೆಳಹೊಟ್ಟೆಯಲ್ಲಿ ಕತ್ತರಿ ಆಡಿಸಿದ ಅನುಭವ. ಒಮ್ಮೆಲೆ ಆತಂಕ ನಂದಿನಿಗೆ, ಅರೇ ಇನ್ನೂ ಹದಿನೈದು ದಿನವಿದೆಯಲ್ಲ! ಸ್ವಲ್ಪ ಕ್ಷಣಗಳ ನಂತರ ಮತ್ತದೇ ನೋವು, ಉಸಿರು ನಿಂತಂತಾಯಿತು ನಂದಿನಿಗೆ.

ಬೇಗಬೇಗನೆ ಶೌಚಾಲಯಕ್ಕೆ ಓಡಿದಾಗ ಸಾಬೀತಾಯಿತು, ಮದುಮಗಳು ನಂದಿನಿ ಹೊರಗಾಗಿದ್ದು. ಫಳಕ್ಕನೆ ಕಣ್ಣೀರು ಚೆಲ್ಲಿತು. ಛೇ! ಇದೇನಾಯಿತು. ಅಮ್ಮನ ಬಳಿ ಓಡಿ ಗುಟ್ಟಾಗಿ ಹೇಳಿದಳು. ನಂದಿನಿಯ ಅಮ್ಮನ ಮುಖದಲ್ಲಿ ಒಂದು ಕ್ಷಣ ಆತಂಕ ಮೂಡಿದರೂ ಪ್ರಜ್ಞಾವಂತ ಅಮ್ಮ ರೂಮಿಗೆ ನಂದಿನಿಯನ್ನು ಕರೆದುಕೊಂಡು ಹೋಗಿ ಸಾಂತ್ವನ ನೀಡಿ ಹೊರಬಂದರು. ಒಳ ಹೋಗುವಾಗ ಇದ್ದ ಆತಂಕ ಹೊರಬರುವಾಗ ಕಾಣೆಯಾಗಿ ಅಮ್ಮನ ಮುಖದಲ್ಲಿ ಮದುವೆ ನಿರ್ವಿಘ್ನವಾಗಿ ನಡೆಸಿಕೊಂಡು ಹೋಗುವ ಆತ್ಮವಿಶ್ವಾಸ ಮಿನುಗಿತ್ತು. ಮರುದಿನ ನಂದಿನಿಯ ಮದುವೆ ಸಾಂಗವಾಗಿ ನಡೆಯಿತು, ಅವಳಮ್ಮನ ವಿವೇಕದಿಂದ, ಪ್ರಜ್ಞೆಯಿಂದ.

ಎಳನೇ ತರಗತಿಯಷ್ಟೇ ಓದಿದ್ದ ನಂದಿನಿಯ ಅಮ್ಮ ನಂಗೆ ಈಗಲೂ ಅತ್ಯಂತ ಪ್ರಜ್ಞಾವಂತ ಮಹಿಳೆಯಾಗಿ ಕಾಣುತ್ತಾರೆ. ಆಹಾರ, ಆತಂಕ, ಓಡಾಟಗಳಿಂದಾಗಿ ಆಗುವ ಸ್ತ್ರೀಶರೀರದ ಏರುಪೇರನ್ನು ಸ್ತ್ರೀಯಷ್ಟೇ ಅರಿಯಲು ಸಾಧ್ಯ. ಅಷ್ಟು ವಿವೇಕವನ್ನು ಆ ಅಮ್ಮ ಮೈಗೂಡಿಸಿಕೊಂಡಿದ್ದರಿಂದ ಊರಜನರ ಮುಂದೆ ಮುಜುಗರಕ್ಕೀಡಾಗುವ ಸಂದರ್ಭದಿಂದ ಇಡೀ ಕುಟುಂಬವನ್ನು ಪಾರು ಮಾಡಿದ್ದರು. ನಂದಿನಿಯಕ್ಕ ಈಗಲೂ ನೆಮ್ಮದಿಯಿಂದ ಬದುಕು ಸಾಗಿಸುತ್ತಾ ಸದ್ಯದಲ್ಲೇ ಬರುವ ಮೊಮ್ಮಗುವಿನ ನಿರೀಕ್ಷೆಯಲ್ಲಿದ್ದಾಳೆ. ಅಮ್ಮನ ನೆನಪಾದ ಕ್ಷಣದಲ್ಲಿ ಭಕ್ತಿ, ಗೌರವಗಳು ಮೂಡಿ ಹನಿಗಣ್ಣಾಗುತ್ತಾಳೆ. ಹೆಣ್ಣು, ಋತುಚಕ್ರ, ಧಾರ್ಮಿಕ ನಂಬಿಕೆಗಳು, ಕಟ್ಟುಪಾಡುಗಳು, ಹೇರಿಕೆ – ಎಲ್ಲವೂ ಸ್ವಲ್ಪ ಹೆಚ್ಚೇ; ಒಮ್ಮೊಮ್ಮೆ ಅನಾವಶ್ಯಕವಾಗಿ ಚರ್ಚೆಯಾಗುತ್ತಿರುವ ಈ ಹೊತ್ತಲ್ಲಿ ಮೇಲಿನ ಘಟನೆ ಪದೇಪದೇ ನೆನಪಾಗುತ್ತಾ ಇದು, ಹೆಣ್ಣಿನ ಪ್ರಜ್ಞಾವಂತಿಕೆಗೆ ಬಿಟ್ಟ ವಿಷಯವಾಗಿದೆ ಅಲ್ಲವೇ ಎಂದೆನಿಸುತ್ತಿದೆ.

ಗಂಡಿನ ಶಾರೀರಿಕ ಏರುಪೇರುಗಳು ಮಾತು, ಸಿಡುಕುತನ, ಕೋಪ – ಇವುಗಳಿಂದ ಹೊರಹೊಮ್ಮಿದರೆ ಗಂಡಿಗಿಂತ ವಿಶೇಷ ಮತ್ತು ಸೃಷ್ಟಿಗೆ ಪೂರಕವಾದ ಅಂಗವಾಗಿ ಗರ್ಭಾಶಯವಿರುವ ಕಾರಣ ಹೆಣ್ಣಿಗೆ ಋತುಚಕ್ರವಿದೆ. ಮೀಸೆ, ಗಡ್ಡಗಳು ಗಂಡನ್ನು ಗಂಡಸಾಗಿ ತೋರಿದಂತೇ ಹೆಣ್ಣು ಋತುಸ್ರಾವದ ಮೂಲಕ ಹೆಣ್ಣಾಗುವ ವ್ಯವಸ್ಥೆಗೆ ಒಳಪಟ್ಟಿದ್ದಾಳೆ. ಇಷ್ಟೇ ಆಗಿದ್ದರೆ ಈ ವಿಷಯ ಇಷ್ಟು ಗಂಭೀರವಾಗಿ ಚರ್ಚೆಗೆ ಒಳಗಾಗುತ್ತಿರಲಿಲ್ಲವೋ ಏನೋ! ಆಕೆಗೆ ಆ ಹೊತ್ತಲ್ಲಿ ಒಂದಷ್ಟು ಬಳಲಿಕೆ, ನೋವು ಆಗುವುದುಂಟು.

ಆಕೆಯ ಹಿತದೃಷ್ಟಿಯಿಂದ ಮಾಡಿದ ಮೂರು ದಿನಗಳ ‘ರಜೆ’ ವ್ಯವಸ್ಥೆ ಆಕೆಗೆ ಒಂದಷ್ಟು ದಿನನಿತ್ಯದ ಹತ್ತಾರು ಕೆಲಸದಿಂದ ವಿರಾಮ ನೀಡುವ ಉದ್ದೇಶವಾಗಿತ್ತು ಎಂದೆಣಿಸಬಹುದು. ಧರ್ಮ ಮತ್ತು ನಂಬಿಕೆಗಳ ಆಧಾರದಲ್ಲಿ ಬದುಕುವ ಅಭ್ಯಾಸ ಮಾಡಿಕೊಂಡಿರುವ ಮನುಷ್ಯಸಮಾಜದಲ್ಲಿ ಅದಕ್ಕೊಂದು ಧಾರ್ಮಿಕಲೇಪ ಕೊಟ್ಟರೆ ಪ್ರಾಯಶಃ ಅದನ್ನು ಸಮಾಜ ಗಂಭೀರವಾಗಿ ಪರಿಗಣಿಸಿ ಅವಳನ್ನು ದಣಿಸುವ ಕಾರ್ಯದಿಂದ ದೂರವಿಡಬಹುದೇನೋ ಎಂದೆಣಿಸಿ ಇಂಥ ಕಟ್ಟಳೆಗಳು ರೂಢಿಯಾದವು ಎಂಬ ಮಾತುಗಳಿವೆ. ಲೈಂಗಿಕವಾಗಿಯೂ ಋತುಸ್ರಾವದ ಹೊತ್ತಲ್ಲೂ ಹೆಣ್ಣನ್ನು ಬಳಸಿಕೊಳ್ಳುವ ದುರಾಭ್ಯಾಸವನ್ನು ಇಂಥ ಕಟ್ಟಳೆಗಳಿಂದ ತಡೆಯಬಹುದೆನ್ನುವ ಸೂಕ್ಷ್ಮವನ್ನು ಅಲ್ಲಗಳೆಯುವಂತಿಲ್ಲ.

ಎಲ್ಲ ಧರ್ಮಗಳಲ್ಲೂ ಈ ಹೊತ್ತನ್ನು ಎಲ್ಲ ಕಾರ್ಯಗಳಿಗೆ ಅಂಗೀಕರಿಸಿಲ್ಲ. ಇನ್ನೂ ಈ ಯುಗದಲ್ಲೂ ಮನೆಯಿಂದ ದೂರದ ಗುಡಿಸಲಿನಲ್ಲಿ ಕೂರಿಸುವ ಆಚರಣೆಗಳ ನಡುವೆಯೂ ವಿದ್ಯಾವಂತ, ವಿದ್ಯೆ ಕಡಿಮೆಯಿದ್ದರೂ ಸಮೃದ್ಧ ಜೀವನಾನುಭವದ ಪ್ರಜ್ಞಾವಂತ ಮಹಿಳೆ ಅದನ್ನೊಂದು ಅಡ್ಡಿಯಾಗಿ ಕಂಡೇ ಇಲ್ಲ. ಮಿಗ್ ವಿಮಾನ ಹಾರಿಸುವ ಮಹಿಳೆ ತಿಂಗಳ ತೊಂದರೆಯಲ್ಲಿದ್ದರೂ ಅದನ್ನು ಹೇಳಿಕೊಂಡು ಕೂರುವುದಿಲ್ಲ.

ಕೂಲಿ ಮಾಡುವ ಅಪರಿಮಿತ ಶ್ರಮದ ಕೆಲಸ ಮಾಡುವ ಮಹಿಳೆಯರಿಂದ ಹಿಡಿದು ದಿನದ ಕೆಲವಾರು ಗಂಟೆಗಳನ್ನು ಅಭ್ಯಾಸದಲ್ಲೇ ಕಳೆಯುವ ಬಾಡ್ಮಿಂಟನ್ ಆಟಗಾರ್ತಿಯರು ಆಗಲಿ, ತಿಂಗಳಾನುಗಟ್ಟಲೆ ಮೊದಲೇ ಕಾರ್ಯಕ್ರಮ ಒಪ್ಪಿಕೊಳ್ಳುವ ಸಂಗೀತ–ನೃತ್ಯಕಲಾವಿದರು, ಗಂಟೆಗಟ್ಟಲೆ ಆಫೀಸಿನ ಜಂಜಾಟದಲ್ಲಿ ಮುಳುಗೇಳುವ ಉದ್ಯೋಗಸ್ಥ ಸ್ತ್ರೀಯರು, ಅಷ್ಟೇ ಅಲ್ಲದೇ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಯಾವುದೇ ಗೌರವ, ಸಂಬಳದ ನಿರೀಕ್ಷೆಯಿಲ್ಲದೇ ಗಾಣದೆತ್ತಿನಂತೆ ದುಡಿಯುವ ಅಮ್ಮಂದಿರು ಇಂತಹ ಬಳಲಿಕೆಯನ್ನು ಮೀರಿ ತಂತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿಕೊಂಡು ಆಕಾಶ ಮುಟ್ಟುತ್ತಿರುವ, ಸಂತೃಪ್ತಿ ಹುಡುಕುತ್ತಿರುವ ಈ ಹೊತ್ತಲ್ಲಿ ‘ದೂರವಿಡುವ ಅಥವಾ ದೂರವುಳಿಯುವ’ ಆಯ್ಕೆಯನ್ನು ಮಹಿಳೆಯೇ ನಿರ್ಧರಿಸುವುದು ಸಮಂಜಸವಾಗಿದೆ.

ಪೂಜೆ, ತಕ್ಕಮಟ್ಟಿನ ಮಡಿಮೈಲಿಗೆಯ ಆಚರಣೆಯಿರುವ ಸ್ನೇಹಿತೆ ಹಿರಿಯ ಸಂಬಂಧಿಯ ಋಷಿಪಂಚಮಿ ಆಚರಣೆಗಾಗಿ ಹೋಗಿದ್ದಾಗಿನ ಘಟನೆ; ನಲವತ್ತೈದರ ಸ್ನೇಹಿತೆಗೆ ತಿಂಗಳ ತೊಂದರೆ ಕಾಲಬದ್ಧ ಕಳೆದ ಪರಿಣಾಮವಾಗಿ ಆಗಾಗ ಆಗುತ್ತಿದ್ದು ಅಲ್ಲಿ ಹೋದಾಗಲೇ ಸ್ರಾವ ಕಾಣಿಸಿತು. ಸ್ವಲ್ಪವೂ ಆತಂಕಕ್ಕೊಳಗಾಗದೇ ಎಂದಿನಂತೆ ಸ್ನಾನ ಮಾಡಿ ಶುಭ್ರವಾಗಿ ಅಲಂಕರಿಸಿಕೊಂಡು ಪೂಜೆಯಲ್ಲೂ ಭಾಗಿಯಾಗಿ ಒತ್ತಾಯಪೂರ್ವಕವಾಗಿ ದೇವಸ್ಥಾನಕ್ಕೆ ಕರೆದಾಗಲೂ ಮುಜುಗರವಿಲ್ಲದೇ ಹೋಗಿ ‘ಶಂಭೋ’ ಎಂದು ಎರಡು ನಮಸ್ಕಾರ ಹೆಚ್ಚೇ ಹಾಕಿ ಬಂದಾಗ ಎಂಥದೋ ಸಮಾಧಾನದ ಅನುಭವವೆಂದಿದ್ದಳು.

ಸಮಾಜ ಅಥವಾ ಮನೆಯವರ ಮನಃಸ್ಥಿತಿಗಳು ಬದಲಾಗಬೇಕೆನ್ನುವ ಜೊತೆಯಲ್ಲಿ ಹೆಣ್ಣಿನಲ್ಲೇ ಇಂತಹ ಆತ್ಮವಿಶ್ವಾಸ ಮೊದಲು ಮೂಡಬೇಕು. ಋತುಚಕ್ರ ಎನ್ನುವುದು ಸ್ತ್ರೀಶರೀರದ ಗುರುತು. ಅದು ಪಾಪವಲ್ಲ, ಇನ್ನೂ ಹೇಳಬೇಕೆಂದರೆ ಅದು ಪುಣ್ಯದ ಕೆಲಸವೇ. ಏಕೆಂದರೆ ಪ್ರಕೃತಿಯ ಸಮತೋಲನ ಕಾಯುವ, ಸೃಷ್ಟಿಯ ನಿರಂತರತೆಯನ್ನು ಕಾಪಿಡುವ ಕೈಂಕರ‍್ಯ ಹೆಣ್ಣಿನ ಋತುಚಕ್ರದ ಮೇಲೆ ಅವಲಂಬಿತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಪೂಜಾಚರಣೆಗಳು ಶ್ರದ್ಧೆಯ ಅಭ್ಯಾಸಗಳು ಮತ್ತು ದೇವಸ್ಥಾನಗಳು ಶ್ರದ್ಧಾಕೇಂದ್ರಗಳು. ಅಲ್ಲಿ ಹೋಗುವವರು ಕಾಯಾ ವಾಚಾ ಮನಸಾ ತ್ರಿಕರಣ ಶುದ್ಧಿ ಹೊಂದಿರಬೇಕು ಎನ್ನುವುದು ದೇವಾಲಯಗಳ ಪ್ರವೇಶಕ್ಕೆ ಇರುವ ನಿಯಮಗಳು. ಹಾಗೇ ನಮ್ಮ ಶಾಸ್ತ್ರಗಳಲ್ಲಿ ಮಾನಸ ಪೂಜೆಗೆ ಮಿಗಿಲಾದ ಪೂಜೆಯೇ ಇಲ್ಲವೆಂದಿದ್ದಾರೆ. ಆದ್ದರಿಂದ ಮನಸ್ಸನ್ನು ತಿಳಿನೀರಿನಂತೆ ಶುದ್ಧವಾಗಿಟ್ಟುಕೊಂಡು ದೇವಾಲಯದ ಪ್ರವೇಶವಾಗಲಿ, ಪೂಜೆಯಲ್ಲಿ ಪಾಲ್ಗೊಳ್ಳುವುದಾಗಲಿ ಮಾಡಿದರೆ ಅಶುಭ ಎನ್ನುವುದೇ ಸುಳಿಯುವುದಿಲ್ಲ. ಅದು ಅಪ್ಪಟವಾಗಿ ಹೆಣ್ಣಿನ ವೈಯಕ್ತಿಕ ಆಯ್ಕೆ. ಇದನ್ನು ನಿರ್ಧರಿಸಬೇಕಾದವಳು ಹೆಣ್ಣು ಮತ್ತವಳ ಪ್ರಜ್ಞೆಯೇ ಹೊರತು ಬೇರಾರೂ ಅಲ್ಲ. ಬಾಲ್ಯದಿಂದಲೇ ಈ ಪ್ರಜ್ಞೆಯೊಂದನ್ನು ಬಿತ್ತಿದರೆ ಸಾಕು, ಅವಳು ಮುಂದೆ ಉಡುಪು, ಆಹಾರ, ಸಂಗಾತಿ, ಉದ್ಯೋಗ ಮತ್ತು ಸ್ನೇಹಿತರ ಆಯ್ಕೆಯಲ್ಲಿ ಅಷ್ಟೇ ಅಲ್ಲದೇ, ಕುಟುಂಬ ನಿರ್ವಹಣೆಯಲ್ಲಿಯೂ ಸಮಂಜಸವಾದ ಮಾರ್ಗವನ್ನು ಹಿಡಿಯಬಲ್ಲಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry