3

ಸೈಕ್ಲಿಂಗ್‌ ಪ್ರಿಯರಿಗಾಗಿ ‘ಚೀಕ್ಲೊ ಕೆಫೆ’

Published:
Updated:
ಸೈಕ್ಲಿಂಗ್‌ ಪ್ರಿಯರಿಗಾಗಿ ‘ಚೀಕ್ಲೊ ಕೆಫೆ’

ಹೊರಗೆ ನೋಡಿದರೆ ರೆಸ್ಟೋರೆಂಟ್‌ ನೋಟ. ಒಳ ಹೊಕ್ಕಾಗ ಗೋಡೆಗೆ ಹೊಂದಿಕೊಂಡಂತೆ ಜೋಡಿಸಿಟ್ಟ ಸೈಕಲ್‌ಗಳು, ಸೈಕ್ಲಿಂಗ್‌ನವರ ಶರ್ಟ್‌, ಬಾಟಲಿ, ಸೈಕಲಿನ ವಿವಿಧ ಭಾಗಗಳ ಮಾರಾಟ ವಿಭಾಗವನ್ನು ಕಂಡಾಗ ಸೈಕಲ್‌ ಅಂಗಡಿಗೆ ಬಂದೆವೆನೋ ಎಂಬ ಗೊಂದಲ ಮೂಡುತ್ತದೆ. ಅಷ್ಟರಲ್ಲಿಯೇ ಕಾಣಿಸುವ ವಿಶಾಲವಾದ ಒಳಾಂಗಣದಲ್ಲಿ ಜೋಡಿಸಿಟ್ಟ ಟೇಬಲ್‌ಗಳು, ತಟ್ಟೆ, ನೀರಿನ ಹೂಜಿ, ಅಡುಗೆ ಕೋಣೆಯನ್ನು ಕಂಡಾಗ ‘ನಾವು ಬಂದಿರುವುದು ಹೋಟೆಲ್‌ಗೆ’ ಎಂಬ ಸಮಾಧಾನವಾಗುತ್ತದೆ.

ಹೀಗೊಂದು ಸೈಕಲ್‌ ಪರಿಕಲ್ಪನೆಯ ‘ಚೀಕ್ಲೊ ಕೆಫೆ ರೆಸ್ಟೊರೆಂಟ್‌’ ಇರುವುದು ಇಂದಿರಾನಗರದಲ್ಲಿ.  ಸೈಕಲ್‌ ಸವಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರಾರಂಭವಾಗಿದೆ ಈ ಹೋಟೆಲ್‌.

ಸಾಮಾನ್ಯವಾಗಿ ರೆಸ್ಟೊರೆಂಟ್‌ ಎಂದರೆ ಖಾದ್ಯಗಳನ್ನು ಸವಿಯಲಷ್ಟೇ ಎಂಬ ಕಲ್ಪನೆ ಇದೆ. ಆದರೆ ಇಲ್ಲಿ ಹೊಟ್ಟೆ ತುಂಬ ತಿಂದು ಸೈಕಲನ್ನು ಕೊಂಡು ಬರಬಹುದು. ಜೊತೆಗೆ ಸೈಕಲಿಗೆ ಸಂಬಂಧಿಸಿದ ಹಲವು ಮಾಹಿತಿಗಳು ಸಿಗುತ್ತದೆ.

‘ಈ ರೆಸ್ಟೊರೆಂಟ್‌ನಲ್ಲಿ ಸೈಕ್ಲಿಂಗ್‌ನವರಿಗಾಗಿ ಹಾಗೂ ಸೈಕ್ಲಿಸ್ಟ್‌ಗಳ ಆಹಾರ ವಿಧಾನವನ್ನು ಇತರರಿಗೂ ಪರಿಚಯಿಸಬೇಕು ಎಂಬ ಉದ್ದೇಶದಿಂದ ಆರಂಭವಾಗಿದೆ. ಸೈಕ್ಲಿಂಗ್‌ನವರ ಆಹಾರದಲ್ಲಿ ಪ್ರೊಟೀನ್‌ ಜಾಸ್ತಿ ಇರಬೇಕು. ಕೊಬ್ಬಿನಂಶ ಕಡಿಮೆ ಇರಬೇಕು. ಹೀಗಾಗಿ ಆಹಾರದ ಆಯ್ಕೆಯಲ್ಲಿ ಹೆಚ್ಚು ಮುತುವರ್ಜಿ ಇರುತ್ತದೆ. ಇಂಥಹ ಆಹಾರದಲ್ಲಿಯೂ ವಿಭಿನ್ನ ರುಚಿಯ ಆಹಾರ ಖಾದ್ಯಗಳು ನಮ್ಮ ವಿಶೇಷ’ ಎನ್ನುತ್ತಾರೆ ರೆಸ್ಟೊರೆಂಟ್‌ ಶೆಫ್‌ ಮೋಹಿತ್‌.

ಒಳಾಂಗಣ ನೋಡುತ್ತಲೇ ಮೈಮರೆತ ನಾನು, ಮೊದಲು ಖರಾನಿ ರುಮಾಲಿ ಆರ್ಡರ್‌ ಮಾಡಿದೆ. ಇದು ಮಸಾಲ ಹಪ್ಪಳ. ರುಮಾಲಿ ರೋಟಿಯಂತೆ ಅಗಲವಾಗಿ ನೋಡಲು ಪುಟ್ಟ ಬಾವಿಯ ರೀತಿಯಾಗಿದೆ. ಒಂದು ಬದಿಯನ್ನು ಮುರಿದು ತಿನ್ನುತ್ತಿದ್ದಂತೆ ಮೊಟ್ಟೆಯ ಘಮ ಮೂಗು ತಟ್ಟುತ್ತದೆ. ಇದರ ಜೊತೆಗೆ ಬಾಯಿಗೆ ಸಿಗುವ ಮಸಾಲ ಸವಿ ರುಚಿಯೆನ್ನಿಸುತ್ತದೆ. ಕಾಕ್‌ಟೇಲ್‌ನೊಂದಿಗೆ ಊಟ ಆರಂಭಿಸುವವರಿಗೆ ಬೋನ್‌ಲೆಸ್‌ ಚಿಕನ್‌ ವಿಂಗ್ಸ್‌, ತಂದೂರಿ ಚಿಕನ್‌ ಚಾರ್ಮೋಲಾ, ಗ್ರಿಲ್ಡ್‌ ಚಿಜುನಾ ಚಿಕನ್‌ ಉತ್ತಮ ಆಯ್ಕೆಯಾಗಬಲ್ಲದು.  ಮೆನುವಿನಲ್ಲಿ ಕೊಕೊನೆಟ್‌ ಕ್ರಶ್ಡ್‌ ಪ್ರಾನ್ಸ್‌ ರುಚಿಯನ್ನು ತಪ್ಪದೇ ಸವಿಯಿರಿ. ಇದು ಈ ರೆಸ್ಟೊರೆಂಟ್‌ನ ಸಿಗ್ನೇಚರ್‌ ತಿನಿಸೂ ಕೂಡ. ಸ್ಪೀನಚ್‌ ಅಂಡ್‌ ಕಾರ್ನ್‌ ಕಬಾಬ್‌, ಬಟರ್‌ ಪೋಚ್ಡ್‌ ಪ್ರಾನ್ಸ್‌, ಮಶ್ರೂಮ್‌ ಆನಿಯನ್ಸ್‌ ರಿಂಗ್, ಸಲಾಡ್‌ ಚಿಕನ್‌ ರುಚಿ ಇಷ್ಟವಾಗುತ್ತದೆ.

ಸೈಕ್ಲಿಂಗ್‌ನವರಿಗಾಗಿಯೇ ಪ್ರೊಟೀನ್‌ ಜ್ಯೂಸ್‌ಗಳು ಇಲ್ಲಿವೆ. ಹಸಿ ಶೇಂಗಾ, ಹಾಲು, ಬಾಳೆಹಣ್ಣು, ಜೇನುತುಪ್ಪ, ಸ್ಪೀನಚ್‌ ಮಿಶ್ರ ಮಾಡಿದ  ‘ಪೀನಟ್‌ ಬಟರ್‌ ಪ್ರೋಟಿನ್‌’ ಜ್ಯೂಸ್‌ ಕುಡಿಯಲು ಪ್ರಾರಂಭಿಸಿದಾಗ ಅಷ್ಟೊಂದು ರುಚಿಯೆನಿಸುವುದಿಲ್ಲ. ಎರಡು, ಮೂರು ಗುಟುಕು ನಾಲಿಗೆಗೆ ತಾಕಿದ ನಂತರದಲ್ಲಿ ಅದರ ಸ್ವಾದವೇ ಬದಲಾದಂತೆ ಅನುಭವವಾಗುತ್ತದೆ. ಸೈಕ್ಲಿಂಗ್‌ನವರಿಗಾಗಿಯೇ ಬೆಳಗಿನ ಉಪಹಾರವೂ ಇಲ್ಲಿ ಲಭ್ಯ.

ಈ ರೆಸ್ಟೊರೆಂಟ್‌ ಆರಂಭಿಸಿದವರು ಚೆನ್ನೈನ ಆಶಿಶ್ ಆರ್. ತಡಾನಿ. ಇವರು ಸೈಕ್ಲಿಸ್ಟ್‌. ‘ಚೀಕ್ಲೊ ಕೆಫೆ ಸೈಕಲ್ ಸವಾರಿಯನ್ನು ಸಕ್ರಿಯ ಜೀವನಶೈಲಿಯ ಆಯ್ಕೆಯಾಗಿ ಭಾರತದ ಎಲ್ಲೆಡೆ ಪ್ರಚುರ ಪಡಿಸುವ ಉದ್ದೇಶ ಹೊಂದಿದ್ದೇವೆ.  ರುಚಿ ಮತ್ತು ಆರೋಗ್ಯಕರ ಆಹಾರ ನೀಡುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಚೀಕ್ಲೊದ ಯುನಿಟ್‌ ಮ್ಯಾನೇಜರ್‌ ಕಮಲೇಶ್‌.

ಹೋಟೆಲ್‌ ಒಳಾಂಗಣ ವಿನ್ಯಾಸದಲ್ಲಿ ಸೈಕ್ಲಿಂಗ್‍ನಿಂದ ಸ್ಫೂರ್ತಿ ಪಡೆದ ಪೀಠೋಪಕರಣಗಳು ಗಮನಸೆಳೆಯುತ್ತವೆ. ಬೈಸಿಕಲ್ ಬಿಡಿಭಾಗಗಳನ್ನು ಅಲಂಕಾರಕ್ಕಾಗಿ ಬಳಸಲಾಗಿದೆ. ಸೈಕಲ್‌ ಚೈನ್‌ಗಳನ್ನು ರೂಫ್‌ನಲ್ಲಿ ವಿದ್ಯುತ್‌ ಬಲ್ಬ್‌ ಸುತ್ತ ಅಲಂಕರಿಸಿದರೆ, ಗೋಡೆ ಮೇಲೆ 10ಕ್ಕೂ ಹೆಚ್ಚು ಸೈಕಲ್‌ ಚಕ್ರಗಳನ್ನು ವಿಭಿನ್ನವಾಗಿ  ‘ಭಾರತದಲ್ಲೇ ತಯಾರಿಸಿ’ ಲೋಗೊದಂತೆ ಜೋಡಿಸಲಾಗಿದೆ. ರಸ್ತೆಗೆ ಕಾಣುವಂತೆ ಸೈಕಲ್‌ಗಳನ್ನು ತೂಗು ಹಾಕಲಾಗಿದೆ. ಗೋಡೆಯ ಮೇಲೆ ಅಂಟಿಸಿರುವ ಸೈಕಲ್‌ ಆಸನ, ಸೈಕಲ್‌ ಕಲಾಕೃತಿಗಳು,  ಸೈಕಲ್‌ ಮಾದರಿಯ ಬಿಲ್‌ ಬಾಕ್ಸಿನ ಆಕರ್ಷಕ ವಿನ್ಯಾಸಗಳು ಮತ್ತೊಮ್ಮೆ ಇಲ್ಲಿ ಅಡಿಯಿಡಬೇಕು ಎನಿಸುವಂತೆ ಮಾಡುತ್ತದೆ.

**

ಸೈಕಲ್‌ ಖರೀದಿಯೂ ಮಾಡಬಹುದು

ಚೀಕ್ಲೊ ಕೆಫೆಯಲ್ಲಿ ಗ್ರಾಹಕರು ಎಂಟು ಪ್ರಮುಖ ಬೈಸಿಕಲ್ ಬ್ರಾಂಡ್‍ಗಳಾದ ಮೊಂಟ್ರಾ, ರಿಡ್ಲಿ, ಕ್ಯಾನನ್‍ಡೇಲ್, ಬಿಯಾಂಚಿ, ಜಿಟಿ, ಮಂಗೂಸಿ, ಶ್ವಿನ್, ಡಾಹೋನ್ ಖರೀದಿಸಬಹುದು. ಇಲ್ಲಿ ಸೈಕಲ್‍ಗಳು  ಬಾಡಿಗೆಗೂ ಲಭ್ಯವಿರುತ್ತದೆ. ಇವುಗಳೊಂದಿಗೆ ಸೈಕ್ಲಿಂಗ್ ಸಂಬಂಧಿಸಿದ ವಸ್ತುಗಳು ಲಭ್ಯವಿವೆ. ಜೊತೆಗೆ ಸೈಕ್ಲಿಂಗ್ ಕುರಿತಂತೆ ಸಲಹೆ ಮತ್ತು ಸೌಲಭ್ಯವನ್ನು ನೀಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry