7

ರವಾಭಾತ್ ವೈವಿಧ್ಯ

Published:
Updated:
ರವಾಭಾತ್ ವೈವಿಧ್ಯ

ವಾಂಗೀ ಭಾತ್

ಬೇಕಾಗುವ ಸಾಮಗ್ರಿಗಳು: 2 ಹಸಿರು ಬಣ್ಣದ ಉದ್ದದ ಬದನೆಕಾಯಿ, 1 ಲೋಟ ರವೆ, 1 ಚಮಚ ವಾಂಗೀ ಭಾತ್ ಪೌಡರ್‌, ಎರಡೂವರೆ ಲೋಟ ನೀರು, 3 ಚಮಚ ಹುಣಸೆ ರಸ, ಅರ್ಧ ಚಮಚ ಅರಿಷಿಣ, ಸ್ವಲ್ಪ ಕರಿಬೇವು, ಸ್ವಲ್ಪ ತೆಂಗಿನ ತುರಿ, 5 ಚಮಚ ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಹಸಿರು ಬದನೆಯನ್ನು ಉದ್ದುದ್ದವಾಗಿ ಹೆಚ್ಚಿಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಸಾಸುವೆ ಸೇರಿಸಿ ಒಗ್ಗರಣೆ ಹಾಕಬೇಕು. ಸಾಸುವೆ ಸಿಡಿದ ನಂತರ ಕರಿಬೇವು, ಹೆಚ್ಚಿದ ಬದನೆ ಹಾಗೂ ಹುಣಸೆ ರಸವನ್ನು ಹಾಕಬೇಕು. ಬದನೆಕಾಯಿ ಬೆಂದ ನಂತರ ವಾಂಗೀಭಾತ್ ಪುಡಿ ಹಾಕಿ ಮಗುಚಬೇಕು. ನಂತರ ಎರಡೂವರೆ ಲೋಟ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಕುದಿಯುವಾಗ ರವೆ ಹಾಕಿ ಮಗುಚಿ ಕೊನೆಗೆ ತೆಂಗಿನ ತುರಿ ಹಾಕಿದರೆ ರುಚಿಕರವಾದ ವಾಂಗೀ ಭಾತ್ ಸವಿಯಲು ಸಿದ್ಧ.

**

ಟೋಮೆಟೋ ಭಾತ್

ಬೇಕಾಗುವ ಸಾಮಗ್ರಿಗಳು: 1 ಲೋಟ ರವೆ, 1 ದಪ್ಪ ಟೋಮೆಟೋ, ಸ್ವಲ್ಪ ಕರಿಬೇವು, 2 ಚಮಚ ಸಾಂಬರ್ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ತೆಂಗಿನ ತುರಿ, 1 ಹಸಿ ಮೆಣಸು, ಅರ್ಧ ಚಮಚ ಸಕ್ಕರೆ, 1 ಚಮಚ ತುಪ್ಪ, ಒಗ್ಗರಣೆಗೆ 4 ಚಮಚ ಎಣ್ಣೆ, ಸ್ವಲ್ಪ ಸಾಸುವೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ರವೆಯನ್ನು ಹುರಿದಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸುವೆ ಹಾಕಿ ಒಗ್ಗರಣೆ ಮಾಡಿ, ಸಣ್ಣಗೆ ಹೆಚ್ಚಿಕೊಂಡ ಟೋಮೆಟೋ ಹಾಕಿ ಬಾಡಿಸಬೇಕು. ನಂತರ ಅದೇ ಬಾಣಲೆಗೆ ಎರಡೂವರೆ ಲೋಟ ನೀರು ಹಾಕಿ ಕುದಿಸಬೇಕು. ಈಗ ಒಂದೊಂದೇ ಸಾಮಗ್ರಿಗಳನ್ನು ಹಾಕಿ ಕೊನೆಗೆ ಸ್ವಲ್ಪ ಸ್ವಲ್ಪವೇ ರವೆಯನ್ನು ಹಾಕಿ ಮಗುಚಿದರೆ ಟೋಮೆಟೋ ಭಾತ್ ತಯಾರು. ಮೇಲಿಂದ 1 ಚಮಚ ತುಪ್ಪ ಹಾಕಿ ಮಗುಚಿ ಸವಿದರೆ ಬಲು ರುಚಿ.

**

ಬಟಾಟೆ ಭಾತ್

ಬೇಕಾಗುವ ಸಾಮಗ್ರಿಗಳು: 1 ಲೋಟ ರವೆ, 1 ಸಣ್ಣಗೆ ಹೆಚ್ಚಿದ ಈರುಳ್ಳಿ, 1 ಸಣ್ಣಗೆ ಹೆಚ್ಚಿದ ಆಲೂಗಡ್ಡೆ, 2 ಹಸಿಮೆಣಸು, ಸ್ವಲ್ಪ ಕರಿಬೇವು, 5 ಚಮಚ ಎಣ್ಣೆ, ಸ್ವಲ್ಪ ಕೊತ್ತಂಬರಿ ಸೊಪ್ಪು, ಅರ್ಧ ಕಡಿ ಲಿಂಬೆ ಹಣ್ಣು, ಅರ್ಧ ಚಮಚ ಸಕ್ಕರೆ, ಅರ್ಧ ಚಮಚ ಗರಂ ಮಸಾಲೆ, ಸ್ವಲ್ಪ ಕಾಯಿತುರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸುವೆ, ಉದ್ದಿನ ಬೇಳೆ ಹಾಕಿ ಒಗ್ಗರಣೆ ಮಾಡಿ ಸಾಸುವೆ ಸಿಡಿದ ನಂತರ ಕರಿಬೇವು, ಹೆಚ್ಚಿದ ಈರುಳ್ಳಿ ಹಾಗೂ ಆಲೂಗಡ್ಡೆಯನ್ನು ಹಾಕಿ ಬಾಡಿಸಿ. ನಂತರ ಗರಂ ಮಸಾಲೆ, ಸಕ್ಕರೆ ಹಾಗೂ ಉಪ್ಪು ಹಾಕಿ ಬಾಡಿಸಿ ನಂತರ ಅಳತೆಯ ನೀರನ್ನು ಹಾಕಬೇಕು. ಕುದಿ ಬಂದ ನಂತರ ರವೆಯನ್ನು ಹಾಕಿ ತಿರುಗಿಸಿ. ಕೊನೆಗೆ ಲಿಂಬೆರಸ ಹಾಕಿ ಮಗುಚಿ ಕಾಯಿತುರಿ ಸೇರಿಸಿದರೆ ರುಚಿಕರವಾದ ಬಟಾಟೆ ಭಾತ್ ಸವಿಯಲು ಸಿದ್ಧ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry